YouVersion Logo
Search Icon

ಲೂಕ 22

22
ಯೂದನು ಯೇಸುವಿಗೆ ದ್ರೋಹ ಬಗೆಯಲು ಒಪ್ಪಿದ್ದು
1ಪಸ್ಕವೆಂಬ, ಹುಳಿಯಿಲ್ಲದ ರೊಟ್ಟಿಯ ಹಬ್ಬವು#22:1 ಪಸ್ಕವೆಂಬ ಹಬ್ಬವು ಸೂರ್ಯನು ಅಸ್ತಮಿಸುವಾಗ ಪ್ರಾರಂಭವಾಗುತ್ತಿತ್ತು. ಆದರೆ, ಹುಳಿಯಿಲ್ಲದ ರೊಟ್ಟಿಯ ಹಬ್ಬವು ಪಸ್ಕಹಬ್ಬದ ಮಾರನೆಯ ದಿನದಿಂದ ಪ್ರಾರಂಭಿಸಿ ಏಳು ದಿನಗಳು ಆಚರಿಸಲಾಗುತ್ತಿತ್ತು. ಇವೆರಡೂ ಬೇರೆಯಾಗಿದ್ದರೂ ಒಂದರ ನಂತರ ಒಂದು ಆಚರಿಸಲಾಗುತ್ತಿತ್ತು. ಇವೆರಡೂ ಪರಸ್ಪರವಾಗಿ ಕರೆಯಲಾಗಿತ್ತು ಸಮೀಪವಾಗಿತ್ತು. 2ಮುಖ್ಯಯಾಜಕರೂ ನಿಯಮ ಬೋಧಕರೂ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು. 3ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಎಂದು ಕರೆಯಲಾಗುವ ಯೂದನಲ್ಲಿ, ಸೈತಾನನು ಪ್ರವೇಶಿಸಿದನು. 4ಅವನು ಮುಖ್ಯಯಾಜಕರ ಬಳಿಗೂ ದೇವಾಲಯದ ಕಾವಲಧಿಕಾರಿಗಳ ಬಳಿಗೂ ಹೋಗಿ ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಅವರ ಕೂಡ ಚರ್ಚಿಸಿದನು. 5ಆಗ ಅವರು ಸಂತೋಷಪಟ್ಟು ಅವನಿಗೆ ಹಣ ಕೊಡುವುದಕ್ಕೆ ವಾಗ್ದಾನ ಮಾಡಿದರು. 6ಅವನೂ ಸಮ್ಮತಿಸಿ, ಜನಸಮೂಹವು ಇಲ್ಲದಿರುವಾಗ ಯೇಸುವನ್ನು ಅವರಿಗೆ ಹಿಡಿದುಕೊಡುವಂತೆ ಸಂದರ್ಭವನ್ನು ಕಾಯುತ್ತಿದ್ದನು.
ಕಡೆಯ ಭೋಜನ
7ಆಗ ಪಸ್ಕದ ಕುರಿಯು ಬಲಿಕೊಡಬೇಕಾಗಿದ್ದ ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನ ಬಂದಿತು. 8ಯೇಸು ಪೇತ್ರ ಯೋಹಾನರನ್ನು ಕರೆದು, “ನೀವು ಹೋಗಿ ನಮಗೋಸ್ಕರ ಪಸ್ಕಭೋಜನವನ್ನು ಸಿದ್ಧಮಾಡಿರಿ,” ಎಂದರು.
9ಅವರು ಯೇಸುವಿಗೆ, “ನಾವು ಎಲ್ಲಿ ಸಿದ್ಧಮಾಡಬೇಕು?” ಎಂದರು.
10ಆಗ ಯೇಸು ಅವರಿಗೆ, “ನೀವು ಪಟ್ಟಣವನ್ನು ಪ್ರವೇಶಿಸಿದಾಗ, ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡಿರುವ ಒಬ್ಬನು ನಿಮ್ಮನ್ನು ಸಂಧಿಸುವನು. ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ. 11ನೀವು ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರೊಂದಿಗೆ ಪಸ್ಕಭೋಜನ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ? ಎಂದು ಬೋಧಕರು ನಿನ್ನನ್ನು ಕೇಳುತ್ತಾರೆ’ ಎಂದು ಹೇಳಿರಿ. 12ಅವನು ಕ್ರಮಪಡಿಸಿದ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು, ಅಲ್ಲಿಯೇ ಪಸ್ಕಭೋಜನ ಸಿದ್ಧಪಡಿಸಿರಿ,” ಎಂದರು.
13ಅವರು ಹೊರಟುಹೋಗಿ ಯೇಸು ತಮಗೆ ಹೇಳಿದಂತೆಯೇ ಕಂಡು, ಪಸ್ಕವನ್ನು ಸಿದ್ಧಮಾಡಿದರು.
14ನಿಶ್ಚಿತ ಸಮಯ ಬಂದಾಗ ಯೇಸು ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಕುಳಿತುಕೊಂಡರು. 15ಆಗ ಯೇಸು ಅವರಿಗೆ, “ನಾನು ಬಾಧೆಯನ್ನು ಅನುಭವಿಸುವುದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕಭೋಜನ ಮಾಡುವುದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ. 16ದೇವರ ರಾಜ್ಯದಲ್ಲಿ ಇದು ನೆರವೇರುವ ತನಕ ನಾನು ಇನ್ನು ಮೇಲೆ ಪಸ್ಕಭೋಜನ ಮಾಡುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
17ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು, ಸ್ತೋತ್ರಮಾಡಿ, “ಇದನ್ನು ತೆಗೆದುಕೊಳ್ಳಿರಿ ಮತ್ತು ನಿಮ್ಮೊಳಗೆ ಹಂಚಿಕೊಳ್ಳಿರಿ. 18ದೇವರ ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ಹೇಳುತ್ತೇನೆ,” ಎಂದರು.
19ಆಮೇಲೆ ಯೇಸು ರೊಟ್ಟಿಯನ್ನು ತೆಗೆದುಕೊಂಡು, ಸ್ತೋತ್ರಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ,” ಎಂದರು.
20ಅದೇ ಪ್ರಕಾರ, ಭೋಜನವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲಾಗುವ, ನನ್ನ ರಕ್ತದಿಂದಾದ ಹೊಸ ಒಡಂಬಡಿಕೆಯಾಗಿದೆ.#22:20 ಪುರಾತನ ಕಾಲದಲ್ಲಿ ಒಡಂಬಡಿಕೆಯನ್ನು ದೃಢೀಕರಿಸಲು ಬಲಿ ಅರ್ಪಣೆಯಿಂದ ರಕ್ತಸುರಿಸುವ ಪದ್ಧತಿ ಇತ್ತು. 21ಆದರೂ ಇಗೋ, ನನಗೆ ದ್ರೋಹಬಗೆಯುವವನ ಕೈ ನನ್ನ ಕೈಯೊಂದಿಗೆ ಮೇಜಿನ ಮೇಲೆ ಇದೆ. 22ನೇಮಕವಾದ ಪ್ರಕಾರ ಮನುಷ್ಯಪುತ್ರನಾದ ನಾನು ಹೊರಟುಹೋಗುತ್ತೇನೆ; ಆದರೆ ನನಗೆ ದ್ರೋಹಬಗೆಯುವವನಿಗೋ ಎಷ್ಟೋ ಕಷ್ಟ!” ಎಂದು ಹೇಳಿದರು. 23ಆಗ ಇದನ್ನು ದ್ರೋಹಬಗೆಯುವವನು ಯಾವನು ಎಂದು ಶಿಷ್ಯರು ತಮ್ಮೊಳಗೆ ಪ್ರಶ್ನೆ ಮಾಡಲಾರಂಭಿಸಿದರು.
24ಇದಲ್ಲದೆ ತಮ್ಮೊಳಗೆ ಯಾರು ಅತಿ ದೊಡ್ಡವನೆಂಬುದಾಗಿ ಶಿಷ್ಯರಲ್ಲಿ ವಿವಾದವು ಪ್ರಾರಂಭವಾಯಿತು. 25ಆಗ ಯೇಸು ಅವರಿಗೆ, “ಯೆಹೂದ್ಯರಲ್ಲದವರ ಅರಸರು ತಮ್ಮ ಜನರ ಮೇಲೆ ದೊರೆತನ ಮಾಡುತ್ತಾರೆ; ಅವರ ಮೇಲೆ ಅಧಿಕಾರವನ್ನು ನಡೆಸುವವರು ಉಪಕಾರಿಗಳು ಎಂದು ಎಣಿಸಿಕೊಳ್ಳುತ್ತಾರೆ. 26ಆದರೆ ನೀವು ಹಾಗಿರಬಾರದು. ನಿಮ್ಮೊಳಗೆ ಅತಿ ದೊಡ್ಡವನಾಗಿರುವವನು ಅತಿ ಚಿಕ್ಕವನಂತೆ ಇರಲಿ ಮತ್ತು ಆಳ್ವಿಕೆ ಮಾಡುವವನು ಸೇವೆ ಮಾಡುವವನಂತೆ ಇರಲಿ. 27ಯಾರು ದೊಡ್ಡವನು? ಊಟಕ್ಕೆ ಕುಳಿತುಕೊಂಡಿರುವವನೋ ಅಥವಾ ಸೇವೆ ಮಾಡುವವನೋ? ಊಟಕ್ಕೆ ಕುಳಿತುಕೊಂಡವನಲ್ಲವೋ? ಆದರೆ ನಾನು ನಿಮ್ಮೊಳಗೆ ಸೇವೆ ಮಾಡುವವನಂತಿದ್ದೇನೆ. 28ನೀವೇ, ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ನಿಂತವರು. 29ನನ್ನ ತಂದೆ ನನಗೆ ರಾಜ್ಯವನ್ನು ನೇಮಕ ಮಾಡಿದ ಹಾಗೆಯೇ, ನಾನೂ ನಿಮಗೆ ರಾಜ್ಯವನ್ನು ನೇಮಕ ಮಾಡುತ್ತೇನೆ. 30ಹೀಗೆ ನೀವು ನನ್ನ ರಾಜ್ಯದಲ್ಲಿ ನನ್ನ ಮೇಜಿನ ಬಳಿಯಲ್ಲಿ ಊಟಮಾಡಿ ಪಾನೀಯವನ್ನು ಸೇವಿಸುವಿರಿ ಮತ್ತು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.
31“ಸೀಮೋನನೇ, ಸೀಮೋನನೇ, ಇಗೋ, ಸೈತಾನನು ನಿಮ್ಮೆಲ್ಲರನ್ನೂ ಗೋಧಿಯಂತೆ ತೂರಬೇಕೆಂದು ಅಪ್ಪಣೆ ಕೇಳಿದ್ದಾನೆ. 32ಆದರೆ ನಿನ್ನ ನಂಬಿಕೆಯು ಕುಂದದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ. ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು,” ಎಂದು ಹೇಳಿದರು.
33ಆದರೆ ಅವನು ಯೇಸುವಿಗೆ, “ಕರ್ತದೇವರೇ, ನಾನು ನಿಮ್ಮ ಜೊತೆಯಲ್ಲಿ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಾಗಿದ್ದೇನೆ,” ಎಂದನು.
34ಆಗ ಯೇಸು, “ಪೇತ್ರನೇ, ನೀನು ನನ್ನನ್ನು ಅರಿಯೆನೆಂದು ಮೂರು ಸಾರಿ ಅಲ್ಲಗಳೆಯುವುದಕ್ಕಿಂತ ಮುಂಚೆ, ಈ ದಿವಸ ಹುಂಜ ಕೂಗುವುದಿಲ್ಲ ಎಂದು ನಿನಗೆ ಹೇಳುತ್ತೇನೆ,” ಎಂದರು.
35ನಂತರ ಯೇಸು ಅವರಿಗೆ, “ನಾನು ನಿಮ್ಮನ್ನು ಹಣದ ಚೀಲ, ಪ್ರಯಾಣದ ಚೀಲ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದಾಗ ನೀವು ಏನಾದರೂ ಕೊರತೆಪಟ್ಟಿರೋ?” ಎಂದು ಕೇಳಲು,
ಶಿಷ್ಯರು, “ಏನೂ ಇಲ್ಲ,” ಎಂದರು.
36ಆಗ ಯೇಸು ಅವರಿಗೆ, “ಆದರೆ ಈಗ ಹಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಅದರಂತೆಯೇ ಪ್ರಯಾಣದ ಚೀಲ ಇದ್ದವನು ಅದನ್ನು ತೆಗೆದುಕೊಳ್ಳಲಿ. ಖಡ್ಗಯಿಲ್ಲದವನು ತನ್ನ ಬಟ್ಟೆಯನ್ನು ಮಾರಿ ಅದನ್ನು ಕೊಂಡುಕೊಳ್ಳಲಿ. 37ಏಕೆಂದರೆ, ‘ಆತನು ಪಾತಕರಲ್ಲಿ ಒಬ್ಬನಂತೆ ಎಣಿಸಿಕೊಂಡನು,’#22:37 ಯೆಶಾಯ 53:12 ಎಂಬುದಾಗಿ ಪವಿತ್ರ ವೇದದಲ್ಲಿ ಬರೆದಿರುವುದೆಲ್ಲವೂ ನೆರವೇರಬೇಕು ಎಂದು ನಾನು ನಿಮಗೆ ಹೇಳುತ್ತೇನೆ. ಹೌದು, ನನ್ನ ವಿಷಯವಾಗಿ ಬರೆದದ್ದು ನೆರವೇರಲಿದೆ,” ಎಂದರು.
38ಶಿಷ್ಯರು, “ಕರ್ತದೇವರೇ, ಇಗೋ ಇಲ್ಲಿ ಎರಡು ಖಡ್ಗಗಳಿವೆ,” ಎಂದರು.
ಅದಕ್ಕೆ ಯೇಸು ಅವರಿಗೆ, “ಅಷ್ಟು ಸಾಕು,” ಎಂದರು.
ಓಲಿವ್ ಬೆಟ್ಟದ ಮೇಲೆ ಯೇಸು ಪ್ರಾರ್ಥಿಸಿದ್ದು
39ಯೇಸು ಹೊರಗೆ ಬಂದು ತಮ್ಮ ವಾಡಿಕೆಯಂತೆ ಓಲಿವ್ ಗುಡ್ಡಕ್ಕೆ ಹೋದರು. ಯೇಸುವಿನ ಶಿಷ್ಯರೂ ಅವರನ್ನು ಹಿಂಬಾಲಿಸಿದರು. 40ಯೇಸು ಆ ಸ್ಥಳದಲ್ಲಿದ್ದಾಗ ಅವರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ,” ಎಂದರು. 41ಯೇಸು ಅವರಿಂದ ಒಂದು ಕಲ್ಲೆಸೆಯುವಷ್ಟು ದೂರಹೋಗಿ ಮೊಣಕಾಲೂರಿ, 42“ತಂದೆಯೇ, ನಿಮ್ಮ ಚಿತ್ತವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸಿ. ಆದರೂ ನನ್ನ ಚಿತ್ತವಲ್ಲ ನಿಮ್ಮ ಚಿತ್ತದಂತೆಯೇ ಆಗಲಿ,” ಎಂದು ಪ್ರಾರ್ಥಿಸಿದರು. 43ಆಗ ಪರಲೋಕದಿಂದ ಒಬ್ಬ ದೇವದೂತನು ಯೇಸುವಿಗೆ ಕಾಣಿಸಿಕೊಂಡು, ಅವರನ್ನು ಬಲಪಡಿಸುತ್ತಾ ಇದ್ದನು. 44ಯೇಸು ವೇದನೆಯಲ್ಲಿದ್ದು ಬಹಳ ಆಸಕ್ತಿಯಿಂದ ಪ್ರಾರ್ಥಿಸಿದರು. ಯೇಸುವಿನ ಬೆವರು ನೆಲಕ್ಕೆ ಬೀಳುತ್ತಿರುವ ರಕ್ತದ ದೊಡ್ಡ ಹನಿಗಳಂತಿದ್ದವು.
45ಯೇಸು ಪ್ರಾರ್ಥನೆಮಾಡಿ ಎದ್ದ ಮೇಲೆ ತಮ್ಮ ಶಿಷ್ಯರ ಕಡೆಗೆ ಬಂದು, ಅವರು ದುಃಖದಿಂದ ಬಳಲಿ ನಿದ್ರೆ ಮಾಡುತ್ತಿರುವುದನ್ನು ಕಂಡು ಅವರಿಗೆ, 46“ನೀವು ನಿದ್ರೆ ಮಾಡುವುದು ಏಕೆ? ಶೋಧನೆಗೆ ಒಳಗಾಗದಂತೆ ಎದ್ದು ಪ್ರಾರ್ಥಿಸಿರಿ,” ಎಂದರು.
ಯೇಸುವಿನ ಬಂಧನ
47ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಜನರ ಗುಂಪು ಕಾಣಿಸಿತು. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದ ಯೂದನು ಅವರಿಗೆ ಮುಂದಾಳಾಗಿ ಬಂದು, ಮುದ್ದಿಡುವುದಕ್ಕಾಗಿ ಯೇಸುವನ್ನು ಸಮೀಪಿಸಿದನು. 48ಆಗ ಯೇಸು ಅವನಿಗೆ, “ಯೂದಾ, ಮುದ್ದಿನಿಂದ ಮನುಷ್ಯಪುತ್ರನಾದ ನನಗೆ ದ್ರೋಹಮಾಡುತ್ತೀಯೋ?” ಎಂದರು.
49ಯೇಸುವಿನ ಸುತ್ತಲಿದ್ದ ಶಿಷ್ಯರು ಮುಂದೆ ಸಂಭವಿಸುವುದನ್ನು ಅರಿತು ಯೇಸುವಿಗೆ, “ಕರ್ತದೇವರೇ, ನಾವು ಖಡ್ಗದಿಂದ ಹೊಡೆಯೋಣವೋ?” ಎಂದು ಕೇಳಿದರು. 50ಅವರಲ್ಲಿ ಒಬ್ಬನು ಮಹಾಯಾಜಕನ ಆಳನ್ನು ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು.
51ಆದರೆ ಯೇಸು, “ಸಾಕು ಇಂಥದ್ದು ಬೇಡ!” ಎಂದು ಹೇಳಿ, ಅವನ ಕಿವಿಯನ್ನು ಮುಟ್ಟಿ ಸ್ವಸ್ಥಮಾಡಿದರು.
52ಆಗ ಯೇಸು ತಮ್ಮ ಬಳಿಗೆ ಬಂದಿದ್ದ ಮುಖ್ಯಯಾಜಕರಿಗೂ ದೇವಾಲಯದ ಕಾವಲಾಧಿಕಾರಿಗಳಿಗೂ ಹಿರಿಯರಿಗೂ, “ದಂಗೆಗಾರನನ್ನು ಹಿಡಿಯುವುದಕ್ಕಾಗಿ ಬಂದ ಹಾಗೆ ಖಡ್ಗಗಳಿಂದಲೂ ದೊಣ್ಣೆಗಳಿಂದಲೂ ನೀವು ಹೊರಟು ಬಂದಿರುವಿರೋ? 53ನಾನು ನಿಮ್ಮ ಸಂಗಡ ಪ್ರತಿದಿನವೂ ದೇವಾಲಯದಲ್ಲಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ. ಆದರೆ ಇದು ನಿಮ್ಮ ಸಮಯ, ಅಂಧಕಾರ ದೊರೆತನ ಮಾಡುವ ಕಾಲ,” ಎಂದರು.
ಪೇತ್ರನು ಯೇಸುವನ್ನು ಅಲ್ಲಗಳೆದದ್ದು
54ಆಗ ಅವರು ಯೇಸುವನ್ನು ಬಂಧಿಸಿ, ಮಹಾಯಾಜಕನ ಭವನಕ್ಕೆ ಕರೆದುಕೊಂಡು ಬಂದರು. ಪೇತ್ರನೋ ದೂರದಿಂದ ಹಿಂಬಾಲಿಸಿದನು. 55ಅವರು ಭವನದ ಹೊರಾಂಗಣದ ನಡುವೆ ಬೆಂಕಿಮಾಡಿ, ಅದರ ಸುತ್ತಲೂ ಒಟ್ಟಾಗಿ ಕುಳಿತುಕೊಂಡಾಗ ಪೇತ್ರನೂ ಅವರ ಸಂಗಡ ಸೇರಿ ಕುಳಿತುಕೊಂಡನು. 56ಆದರೆ ಒಬ್ಬ ದಾಸಿಯು ಬೆಂಕಿಯ ಬಳಿಯಲ್ಲಿ ಕುಳಿತುಕೊಂಡಿದ್ದ ಪೇತ್ರನನ್ನು ದೃಷ್ಟಿಸಿ ನೋಡಿ, “ಈ ಮನುಷ್ಯನು ಸಹ ಯೇಸುವಿನ ಸಂಗಡ ಇದ್ದವನು,” ಎಂದಳು.
57ಆದರೆ ಪೇತ್ರನು ಅಲ್ಲಗಳೆದು, “ಅಮ್ಮಾ, ನಾನು ಯೇಸುವನ್ನು ಅರಿಯೆನು,” ಎಂದನು.
58ಸ್ವಲ್ಪ ಸಮಯದ ಮೇಲೆ ಮತ್ತೊಬ್ಬನು ಪೇತ್ರನನ್ನು ಕಂಡು, “ನೀನು ಸಹ ಅವರಲ್ಲಿ ಒಬ್ಬನು,” ಎಂದನು. ಅದಕ್ಕೆ ಪೇತ್ರನು,
“ಇಲ್ಲಪ್ಪ, ನಾನಲ್ಲ,” ಎಂದನು.
59ಹೆಚ್ಚು ಕಡಿಮೆ ಒಂದು ತಾಸು ಕಳೆದನಂತರ ಮತ್ತೊಬ್ಬನು, “ನಿಜವಾಗಿಯೂ ಇವನು ಸಹ ಯೇಸುವಿನೊಂದಿಗೆ ಇದ್ದವನು. ಏಕೆಂದರೆ ಇವನು ಗಲಿಲಾಯದವನೇ,” ಎಂದನು.
60ಆದರೆ ಪೇತ್ರನು, “ಅಯ್ಯಾ, ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುತ್ತಾಯಿಲ್ಲ,” ಎಂದನು. ಹೀಗೆ ಅವನು ಇನ್ನೂ ಮಾತನಾಡುತ್ತಿರುವಾಗಲೇ ಹುಂಜ ಕೂಗಿತು. 61ಆಗ ಕರ್ತದೇವರು ಹಿಂದಿರುಗಿ ಪೇತ್ರನ ಕಡೆಗೆ ದಿಟ್ಟಿಸಿ ನೋಡಿದರು. “ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ,” ಎಂದು ಕರ್ತದೇವರು ತನಗೆ ಹೇಳಿದ್ದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು 62ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
ಕಾವಲುಗಾರರು ಯೇಸುವನ್ನು ಹಾಸ್ಯಮಾಡಿದ್ದು
63ಯೇಸುವನ್ನು ಕಾಯುತ್ತಿದ್ದ ಜನರು, ಹಾಸ್ಯಮಾಡಿ ಅವರನ್ನು ಹೊಡೆದರು. 64ಇದಲ್ಲದೆ ಅವರು ಯೇಸುವಿನ ಕಣ್ಣಿಗೆ ಬಟ್ಟೆ ಕಟ್ಟಿ, ಅವರ ಮುಖದ ಮೇಲೆ ಹೊಡೆದು ಯೇಸುವಿಗೆ, “ನಿನ್ನನ್ನು ಹೊಡೆದವರು ಯಾರು? ಪ್ರವಾದನೆ ಹೇಳು,” ಎಂದರು. 65ಅವರು ಯೇಸುವಿಗೆ ವಿರೋಧವಾಗಿ ಅನೇಕ ದೂಷಣೆಯ ಮಾತುಗಳನ್ನಾಡಿದರು.
ಯೇಸು ಪಿಲಾತನ ಹಾಗೂ ಹೆರೋದನ ಮುಂದೆ
66ಬೆಳಗಾದ ಕೂಡಲೇ ಜನರ ಹಿರಿಯರೂ ಮುಖ್ಯಯಾಜಕರೂ ನಿಯಮ ಬೋಧಕರೂ ಒಟ್ಟಾಗಿ ಬಂದು ಯೇಸುವನ್ನು ತಮ್ಮ ಆಲೋಚನಾ ಸಭೆಗೆ ಸಾಗಿಸಿಕೊಂಡು ಹೋಗಿ, 67“ನೀನು ಆ ಕ್ರಿಸ್ತನೋ? ನಮಗೆ ಹೇಳು,” ಎಂದರು.
ಯೇಸು ಅವರಿಗೆ, “ನಾನು ನಿಮಗೆ ಹೇಳಿದರೂ ನೀವು ನಂಬುವುದಿಲ್ಲ. 68ನಾನು ನಿಮ್ಮನ್ನು ಕೇಳಿದರೂ ನೀವು ಉತ್ತರ ಕೊಡುವುದಿಲ್ಲ. 69ಆದರೆ ಇಂದಿನಿಂದ ಮನುಷ್ಯಪುತ್ರನಾದ ನಾನು ಸರ್ವಶಕ್ತರಾದ ದೇವರ ಬಲಗಡೆಯಲ್ಲಿ ಕುಳಿತುಕೊಂಡಿರುವೆನು,” ಎಂದರು.
70ಆಗ ಅವರೆಲ್ಲರೂ, “ಹಾಗಾದರೆ ನೀನು ದೇವರ ಪುತ್ರನೋ?” ಎಂದು ಕೇಳಿದರು. ಅದಕ್ಕೆ ಯೇಸು ಅವರಿಗೆ,
“ನಾನೇ ಆತನು ಎಂದು ನೀವೇ ಹೇಳುತ್ತಿದ್ದೀರಿ,” ಎಂದು ಉತ್ತರಕೊಟ್ಟರು.
71ಆಗ ಅವರು, “ನಮಗೆ ಇನ್ನೇನು ಸಾಕ್ಷಿ ಬೇಕು? ನಾವೇ ಈತನ ಬಾಯಿಂದ ಕೇಳಿದ್ದೇವಲ್ಲಾ?” ಎಂದರು.

Currently Selected:

ಲೂಕ 22: KSB

Highlight

Share

Copy

None

Want to have your highlights saved across all your devices? Sign up or sign in