ಆದಿಕಾಂಡ 11

11
ಭಾಷಾಭೇದವುಂಟಾದದ್ದು
1ಲೋಕದವರೆಲ್ಲರಿಗೂ ಒಂದೇ ಭಾಷೆ ಇತ್ತು. ಭಾಷಾಭೇದವೇನೂ ಇರಲಿಲ್ಲ. 2ಅವರು ಪೂರ್ವದಿಕ್ಕಿಗೆ ಮುಂದೆ ಮುಂದೆ ಪ್ರಯಾಣ ಮಾಡುತ್ತಿರುವಾಗ ಶಿನಾರ್ ದೇಶದಲ್ಲಿ ಬೈಲುಸೀಮೆ ಸಿಕ್ಕಲು ಅಲ್ಲೇ ವಾಸಮಾಡಿಕೊಂಡು ತಮ್ಮ ತಮ್ಮೊಳಗೆ - 3ಬನ್ನಿ, ಒಳ್ಳೊಳ್ಳೇ ಸುಟ್ಟ ಇಟ್ಟಿಗೆಗಳನ್ನು ಮಾಡೋಣ; 4ಒಂದು ಪಟ್ಟಣವನ್ನೂ ಆಕಾಶವನ್ನು ಮುಟ್ಟುವ ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಪಡೆಯೋಣ; ಹೀಗೆ ಮಾಡಿದರೆ ಭೂವಿುಯ ಮೇಲೆಲ್ಲಾ ಚದರುವದಕ್ಕೆ ಆಸ್ಪದವಾಗುವದಿಲ್ಲ ಅಂದುಕೊಂಡರು. ಕಟ್ಟುವಾಗ ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನೂ ಸುಣ್ಣಕ್ಕೆ ಬದಲಾಗಿ ಕಲ್ಲರಗನ್ನೂ ಉಪಯೋಗಿಸಿದರು.
5ನರಪುತ್ರರು ಕಟ್ಟುತ್ತಿದ್ದ ಆ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಯೆಹೋವನು ಇಳಿದು ಬಂದನು. 6ನೋಡಿದ ಮೇಲೆ ಆತನು - ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಪ್ರಾರಂಭದಲ್ಲೇ ಇಷ್ಟು ದೊಡ್ಡ ಕೆಲಸ ಮಾಡುವವರಾಗಿರಲು ಮುಂದೆ ಏನು ಆಲೋಚಿಸಿದರೂ ಇವರಿಗೆ ಅಸಾಧ್ಯವಲ್ಲ. 7ನಾವು ಇಳಿದು ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ತಾರುಮಾರುಮಾಡೋಣ ಬನ್ನಿ ಅಂದನು. 8ಹಾಗೆಯೇ ಮಾಡಿ ಯೆಹೋವನು ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದನು. ಅವರು ಆ ಪಟ್ಟಣ ಕಟ್ಟುವದನ್ನು ನಿಲ್ಲಿಸಿಬಿಟ್ಟರು. 9ಸಮಸ್ತಲೋಕದ ಭಾಷೆಯನ್ನು ಯೆಹೋವನು ಅಲ್ಲಿ ತಾರುಮಾರುಮಾಡಿ ಅವರನ್ನು ಅಲ್ಲಿಂದ ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ ಬಾಬೆಲ್#11.9 ತಾರುಮಾರು ಎಂಬರ್ಥವಿದ್ದಂತೆ. ಎಂಬ ಹೆಸರಾಯಿತು.
ಅಬ್ರಾಮನ ತನಕ ಶೇಮನ ವಂಶದವರ ಚರಿತ್ರೆ
10ಶೇಮನ ವಂಶದವರ ಚರಿತ್ರೆಯು.
ಜಲಪ್ರಳಯವು ಕಳೆದು ಎರಡು ವರುಷಗಳಾದ ಮೇಲೆ ಶೇಮನು ನೂರು ವರುಷದವನಾಗಿ ಅರ್ಪಕ್ಷದನನ್ನು ಪಡೆದನು. 11ಅವನು ಅರ್ಪಕ್ಷದನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ಐನೂರು ವರುಷ ಬದುಕಿದನು.
12ಅರ್ಪಕ್ಷದನು ಮೂವತ್ತೈದು ವರುಷದವನಾಗಿ ಶೆಲಹನನ್ನು ಪಡೆದನು. 13ಅವನು ಶೆಲಹನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರುಷ ಬದುಕಿದನು.
14ಶೆಲಹನು ಮೂವತ್ತು ವರುಷದವನಾಗಿ ಎಬರನನ್ನು ಪಡೆದನು. 15ಅವನು ಎಬರನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರುಷ ಬದುಕಿದನು.
16ಎಬರನು ಮೂವತ್ತು ನಾಲ್ಕು ವರುಷದವನಾಗಿ ಪೆಲೆಗನನ್ನು ಪಡೆದನು. 17ಅವನು ಪೆಲೆಗನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂವತ್ತು ವರುಷ ಬದುಕಿದನು.
18ಪೆಲೆಗನು ಮೂವತ್ತು ವರುಷದವನಾಗಿ ರೆಗೂವನನ್ನು ಪಡೆದನು. 19ಅವನು ರೆಗೂವನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಒಂಭತ್ತು ವರುಷ ಬದುಕಿದನು.
20ರೆಗೂವನು ಮೂವತ್ತೆರಡು ವರುಷದವನಾಗಿ ಸೆರೂಗನನ್ನು ಪಡೆದನು. 21ಅವನು ಸೆರಗೂನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಏಳು ವರುಷ ಬದುಕಿದನು.
22ಸೆರೂಗನು ಮೂವತ್ತು ವರುಷದವನಾಗಿ ನಾಹೋರನನ್ನು ಪಡೆದನು. 23ಅವನು ನಾಹೋರನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರು ವರುಷ ಬದುಕಿದನು.
24ನಾಹೋರನು ಇಪ್ಪತ್ತೊಂಭತ್ತು ವರುಷದವನಾಗಿ ತೆರಹನನ್ನು ಪಡೆದನು. 25ಅವನು ತೆರಹನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನೂರ ಹತ್ತೊಂಭತ್ತು ವರುಷ ಬದುಕಿದನು.
26ತೆರಹನು ಎಪ್ಪತ್ತು ವರುಷದವನಾಗಿ ಅಬ್ರಾಮ, ನಾಹೋರ, ಹಾರಾನ ಎಂಬ ಮಕ್ಕಳನ್ನು ಪಡೆದನು.
ಅಬ್ರಹಾಮನ ಚರಿತ್ರೆ
(11.27—25.18)
ಅಬ್ರಾಮನ ತಂದೆಯನ್ನು ಕುರಿತದ್ದು
27ತೆರಹನ ವಂಶದವರ ಚರಿತ್ರೆ.
ತೆರಹನು ಅಬ್ರಾಮ ನಾಹೋರ ಹಾರಾನರನ್ನು ಪಡೆದನು. 28ಹಾರಾನನು ಲೋಟನನ್ನು ಪಡೆದನು. ಹಾರಾನನು ತಾನು ಹುಟ್ಟಿದ ದೇಶದೊಳಗೆ ಕಲ್ದೀಯರ#11.28 ಅಥವಾ: ಕಸ್ದೀಯರ. ಊರ್ ಎಂಬ ಪಟ್ಟಣದಲ್ಲಿ ತನ್ನ ತಂದೆಯಾದ ತೆರಹನ ಹತ್ತಿರವೇ ಸತ್ತನು. 29ಅಬ್ರಾಮನೂ ನಾಹೋರನೂ ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ವಿುಲ್ಕಾ; ಈಕೆಯು ಹಾರಾನನ ಮಗಳು; ಹಾರಾನನು ವಿುಲ್ಕಳಿಗೂ ಇಸ್ಕಳಿಗೂ ತಂದೆ. 30ಸಾರಯಳು ಬಂಜೆಯಾಗಿದ್ದದರಿಂದ ಆಕೆಗೆ ಮಕ್ಕಳಿರಲಿಲ್ಲ.
31ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನಗೆ ಮೊಮ್ಮಗನೂ ಹಾರಾನನಿಗೂ ಮಗನೂ ಆಗಿರುವ ಲೋಟನನ್ನೂ ತನಗೆ ಸೊಸೆಯೂ ಅಬ್ರಾಮನಿಗೆ ಹೆಂಡತಿಯೂ ಆಗಿರುವ ಸಾರಯಳನ್ನೂ ಕರಕೊಂಡು ಕಾನಾನ್‍ದೇಶಕ್ಕೆ ಹೋಗಬೇಕೆಂದು ಕಲ್ದೀಯರ ಊರ್ ಎಂಬ ಪಟ್ಟಣವನ್ನು ಬಿಟ್ಟನು. ಅವರು ಹಾರಾನ್ ಪಟ್ಟಣಕ್ಕೆ ಬಂದು ಅಲ್ಲೇ ವಾಸಮಾಡಿಕೊಂಡರು. 32ತೆರಹನು ಇನ್ನೂರ ಐದು ವರುಷದವನಾಗಿ ಖಾರಾನಿನಲ್ಲಿ ಸತ್ತನು.

Subratllat

Comparteix

Copia

None

Vols que els teus subratllats es desin a tots els teus dispositius? Registra't o inicia sessió