ಆದಿಕಾಂಡ 17

17
ಸುನ್ನತಿಯ ಒಡಂಬಡಿಕೆ
1ಅಬ್ರಾಮನು ತೊಂಬತ್ತೊಂಬತ್ತು ವರ್ಷದವನಾದಾಗ, ಯೆಹೋವ ದೇವರು ಅಬ್ರಾಮನಿಗೆ ಕಾಣಿಸಿಕೊಂಡು, “ನಾನೇ ಸರ್ವಶಕ್ತ ದೇವರು. ನೀನು ನನ್ನ ಸನ್ನಿಧಿಯಲ್ಲಿಯೇ ನಡೆಯುತ್ತಾ ದೋಷವಿಲ್ಲದವನಾಗಿರು. 2ನನಗೂ ನಿನಗೂ ಮಧ್ಯದಲ್ಲಿ ನನ್ನ ಒಡಂಬಡಿಕೆಯನ್ನು ಮಾಡುವೆನು. ಇದಲ್ಲದೆ ನಿನ್ನನ್ನು ಅತ್ಯಧಿಕವಾಗಿ ವೃದ್ಧಿಪಡಿಸುವೆನು,” ಎಂದು ಅವನಿಗೆ ಹೇಳಿದರು.
3ಆಗ ಅಬ್ರಾಮನು ಸಾಷ್ಟಾಂಗ ನಮಸ್ಕಾರಮಾಡಿದನು. ದೇವರು ಅವನ ಸಂಗಡ ಮಾತನಾಡಿದ್ದೇನೆಂದರೆ: 4“ನಾನಾದರೋ ಈ ನನ್ನ ಒಡಂಬಡಿಕೆಯನ್ನು ನಿನ್ನ ಸಂಗಡ ಮಾಡಿದ್ದೇನೆ: ನೀನು ಅನೇಕ ರಾಷ್ಟ್ರಗಳಿಗೆ ತಂದೆಯಾಗಿರುವೆ. 5ಇನ್ನು ಮುಂದೆ, ‘ಅಬ್ರಾಮ್’#17:5 ಅಬ್ರಾಮ್ ಅಂದರೆ ಉದಾತ್ತ ತಂದೆ ಎಂದು ನಿನಗೆ ಹೆಸರಿರುವುದಿಲ್ಲ. ನಿನ್ನ ಹೆಸರು, ‘ಅಬ್ರಹಾಮ#17:5 ಅಬ್ರಹಾಮ ಅಂದರೆ ಅನೇಕ ರಾಷ್ಟ್ರಗಳ ತಂದೆ’ ಎಂದು ಇರುವುದು. ಏಕೆಂದರೆ ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆಯನ್ನಾಗಿ ಮಾಡಿದ್ದೇನೆ. 6ನಿನ್ನಿಂದ ಅನೇಕ ಜನಾಂಗಗಳೂ ಅರಸರೂ ಹುಟ್ಟುವರು. 7ಇದಲ್ಲದೆ ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನು. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ತರುವಾಯ ಬರುವ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ನಿತ್ಯವಾದ ಒಡಂಬಡಿಕೆಯಾಗಿ ಸ್ಥಾಪಿಸುವೆನು. 8ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ತರುವಾಯ ನಿನ್ನ ಸಂತತಿಗೂ ಶಾಶ್ವತವಾದ ಸ್ವತ್ತನ್ನಾಗಿ ಕೊಟ್ಟು, ನಾನು ಅವರಿಗೆ ದೇವರಾಗಿರುವೆನು,” ಎಂದರು.
9ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನೂ, ನಿನ್ನ ತರುವಾಯ ಬರುವ ನಿನ್ನ ಸಂತತಿಯವರೂ ತಲತಲಾಂತರಕ್ಕೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. 10ನೀನೂ, ನಿನ್ನ ತರುವಾಯ ನಿನ್ನ ಸಂತತಿಯವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ: ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು. 11ನೀವು ಸುನ್ನತಿ ಮಾಡಿಸಿಕೊಳ್ಳುವುದು, ನಿಮಗೂ ನನಗೂ ಉಂಟಾದ ಒಡಂಬಡಿಕೆಗೆ ಗುರುತಾಗಿ ಇರುವುದು. 12ನಿಮ್ಮ ಸಂತತಿಯವರಲ್ಲಿ ಪ್ರತಿಯೊಂದು ಗಂಡು ಮಗುವಿಗೂ ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು. ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಕ್ರಯಕ್ಕೆ ತೆಗೆದುಕೊಂಡವನಾಗಲಿ, 13ಹೀಗೆ ನಿನ್ನ ಮನೆಯಲ್ಲಿ ಹುಟ್ಟಿದವನಿಗೂ ಕ್ರಯಕ್ಕೆ ತೆಗೆದುಕೊಂಡವನಿಗೂ ಸುನ್ನತಿಯಾಗಬೇಕು. ಈ ನನ್ನ ಒಡಂಬಡಿಕೆಯು ನಿಮ್ಮ ಶರೀರದಲ್ಲಿ ನಿತ್ಯವಾದ ಒಡಂಬಡಿಕೆಯಾಗಿರುವುದನ್ನು ಸೂಚಿಸುವುದು. 14ಸುನ್ನತಿ ಮಾಡಿಸಿಕೊಳ್ಳದವನು ನನ್ನ ಒಡಂಬಡಿಕೆಯನ್ನು ಮೀರಿದ ಕಾರಣ, ಅವನನ್ನು ಜನರೊಳಗಿಂದ ಬಹಿಷ್ಕರಿಸಬೇಕು,” ಎಂದರು.
15ದೇವರು ಅಬ್ರಹಾಮನಿಗೆ, “ನಿನ್ನ ಹೆಂಡತಿ ಸಾರಯಳ ವಿಷಯದಲ್ಲಾದರೋ, ಆಕೆಯನ್ನು ಸಾರಯಳೆಂದು ಕರೆಯಬೇಡ, ಅವಳ ಹೆಸರು, ‘ಸಾರಾ.’ 16ಆಕೆಯನ್ನು ನಾನು ಆಶೀರ್ವದಿಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಆಕೆಯು ಜನಾಂಗಗಳ ತಾಯಿಯಾಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ರಾಷ್ಟ್ರಗಳೂ ಅರಸರೂ ಹುಟ್ಟುವರು,” ಎಂದರು.
17ಅಬ್ರಹಾಮನು ಅಡ್ಡಬಿದ್ದು ನಕ್ಕು, “ನೂರು ವರ್ಷದವನಿಗೆ ಮಗುವು ಹುಟ್ಟುವುದುಂಟೇ? ತೊಂಬತ್ತು ವರ್ಷದವಳಾದ ಸಾರಳು ಹೆರುವುದುಂಟೋ?” ಎಂದು ತನ್ನ ಹೃದಯದಲ್ಲಿ ಅಂದುಕೊಂಡನು. 18ಅಬ್ರಹಾಮನು ದೇವರಿಗೆ, “ಇಷ್ಮಾಯೇಲನು ನಿನ್ನ ಆಶೀರ್ವಾದದಲ್ಲಿ ಬದುಕಲಿ,” ಎಂದನು.
19ಅದಕ್ಕೆ ದೇವರು, “ನಿಶ್ಚಯವಾಗಿ ನಿನ್ನ ಹೆಂಡತಿ ಸಾರಳು ಮಗನನ್ನು ಹೆರುವಳು. ಅವನಿಗೆ, ‘ಇಸಾಕ್#17:19 ಇಸಾಕ್ ಅಂದರೆ ಅವನು ನಗುವನು’ ಎಂದು ಹೆಸರಿಡಬೇಕು. ಅವನ ಸಂಗಡವೂ ಅವನ ತರುವಾಯ ಹುಟ್ಟುವ ಅವನ ಸಂತತಿಯವರ ಸಂಗಡವೂ ನಾನು ನನ್ನ ಶಾಶ್ವತವಾದ ಒಡಂಬಡಿಕೆಯನ್ನು ಸ್ಥಾಪಿಸುವೆನು. 20ಇಷ್ಮಾಯೇಲನ ವಿಷಯದಲ್ಲಿ ನೀನು ಬೇಡಿದ್ದನ್ನು ಕೇಳಿದ್ದೇನೆ. ನಾನು ಅವನನ್ನು ಸಹ ಆಶೀರ್ವದಿಸುವೆನು. ಅವನನ್ನು ಅಭಿವೃದ್ಧಿ ಮಾಡಿ, ಅತ್ಯಧಿಕವಾಗಿ ಹೆಚ್ಚಿಸುವೆನು. ಅವನಿಂದ ಹನ್ನೆರಡು ಪ್ರಭುಗಳು ಹುಟ್ಟುವರು. ನಾನು ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು. 21ಆದರೆ ಬರುವ ವರ್ಷ ಈ ಕಾಲದಲ್ಲಿ ಸಾರಳು ನಿನ್ನಿಂದ ಹೆರುವ ಇಸಾಕನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸವೆನು,” ಎಂದು ಹೇಳಿದರು. 22ಆಗ ದೇವರು ಅವನ ಸಂಗಡ ಮಾತನಾಡುವುದನ್ನು ಮುಗಿಸಿ, ಅಬ್ರಹಾಮನ ಬಳಿಯಿಂದ ಹೊರಟು ಹೋದರು.
23ಅಬ್ರಹಾಮನು ತನ್ನ ಮಗ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿ ಹುಟ್ಟಿದವರೆಲ್ಲರಿಗೂ ತಾನು ಕ್ರಯಕ್ಕೆ ತೆಗೆದುಕೊಂಡವರೆಲ್ಲರಿಗೂ ಹೀಗೆ ತನ್ನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ದೇವರು ತನಗೆ ಹೇಳಿದ ಹಾಗೆ, ಆ ದಿನವೇ ಸುನ್ನತಿ ಮಾಡಿಸಿದನು. 24ಅಬ್ರಹಾಮನಿಗೆ ಸುನ್ನತಿಯಾದಾಗ ಅವನು ತೊಂಬತ್ತೊಂಬತ್ತು ವರ್ಷದವನಾಗಿದ್ದನು. 25ಅವನ ಮಗ ಇಷ್ಮಾಯೇಲನಿಗೆ ಸುನ್ನತಿಯಾದಾಗ, ಅವನು ಹದಿಮೂರು ವರ್ಷದವನಾಗಿದ್ದನು. 26ಅಬ್ರಹಾಮನೂ ಅವನ ಮಗ ಇಷ್ಮಾಯೇಲನೂ ಅದೇ ದಿನದಲ್ಲಿ ಸುನ್ನತಿ ಮಾಡಿಸಿಕೊಂಡರು. 27ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಮನೆಯಲ್ಲಿ ಹುಟ್ಟಿದವರಿಗೂ ಪರರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನ ಸಂಗಡವೇ ಸುನ್ನತಿ ಆಯಿತು.

Subratllat

Comparteix

Copia

None

Vols que els teus subratllats es desin a tots els teus dispositius? Registra't o inicia sessió