ಆದಿಕಾಂಡ 21
21
ಇಸಾಕನ ಜನನ
1ಯೆಹೋವ ದೇವರು ಸಾರಳಿಗೆ ವಾಗ್ದಾನ ಮಾಡಿದಂತೆ ಆಕೆಗೆ ದಯೆತೋರಿಸಿದರು. 2ದೇವರು ಅಬ್ರಹಾಮನಿಗೆ ಹೇಳಿದ ಸಮಯದಲ್ಲಿ ಅವನು ಮುದುಕನಾಗಿದ್ದಾಗ, ಸಾರಳು ಗರ್ಭಿಣಿಯಾಗಿ ಅವನಿಗೆ ಮಗನನ್ನು ಹೆತ್ತಳು. 3ಅಬ್ರಹಾಮನು ತನಗೆ ಸಾರಳಲ್ಲಿ ಹುಟ್ಟಿದ ಮಗನಿಗೆ, ಇಸಾಕ, ಎಂದು ಹೆಸರಿಟ್ಟನು. 4ದೇವರು ತನಗೆ ಅಪ್ಪಣೆಕೊಟ್ಟ ಹಾಗೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಎಂಟನೆಯ ದಿನದಲ್ಲಿ ಸುನ್ನತಿ ಮಾಡಿದನು. 5ಅಬ್ರಹಾಮನ ಮಗ ಇಸಾಕನು ಜನಿಸಿದಾಗ ಅವನು ನೂರು ವರ್ಷದವನಾಗಿದ್ದನು.
6ಆಗ ಸಾರಳು, “ದೇವರು ನನ್ನನ್ನು ನಗುವಂತೆ ಮಾಡಿದ್ದಾರೆ. ಹೀಗೆ ಕೇಳುವವರೆಲ್ಲರೂ ನನ್ನೊಂದಿಗೆ ನಗುವರು. 7ಸಾರಳು ಮಕ್ಕಳಿಗೆ ಹಾಲು ಕುಡಿಸುವಳೆಂದು ಅಬ್ರಹಾಮನಿಗೆ ಯಾರು ಹೇಳುತ್ತಿದ್ದರು? ನಾನು ಅವನಿಗೆ ಮುದಿಪ್ರಾಯದಲ್ಲಿ ಮಗನನ್ನು ಹೆತ್ತೆನು,” ಎಂದಳು.
ಹಾಗರ್ ಮತ್ತು ಇಷ್ಮಾಯೇಲರನ್ನು ಹೊರಹಾಕಿದ್ದು
8ಇಸಾಕನು ಬೆಳೆದು ಬಾಲಕನಾಗಿ ತಾಯಿಯ ಹಾಲು ಕುಡಿಯುವುದನ್ನು ಬಿಟ್ಟನು. ಆ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣ ಮಾಡಿಸಿದನು. 9ಈಜಿಪ್ಟಿನವಳಾದ ಹಾಗರಳಿಗೆ ಅಬ್ರಹಾಮನಿಂದ ಜನಿಸಿದ ಮಗನು ಹಾಸ್ಯ ಮಾಡುವುದನ್ನು ಸಾರಳು ನೋಡಿ, 10ಅಬ್ರಹಾಮನಿಗೆ, “ಈ ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಈ ದಾಸಿಯ ಮಗನು ನನ್ನ ಮಗ ಇಸಾಕನ ಸಂಗಡ ಬಾಧ್ಯನಾಗಬಾರದು,” ಎಂದಳು.
11ಅಬ್ರಹಾಮನಿಗೆ ತನ್ನ ಮಗನ ದೆಸೆಯಿಂದ ಬಹು ದುಃಖವಾಯಿತು. 12ಆಗ ದೇವರು ಅಬ್ರಹಾಮನಿಗೆ, “ಹುಡುಗನಿಗಾಗಿಯೂ, ನಿನ್ನ ದಾಸಿಗಾಗಿಯೂ ನೀನು ಚಿಂತಿಸಬೇಡ. ಸಾರಳು ನಿನಗೆ ಹೇಳಿದ್ದೆಲ್ಲವನ್ನು ಕೇಳು. ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು. 13ದಾಸಿಯ ಮಗನೂ ನಿನ್ನ ಸಂತಾನವಾಗಿರುವುದರಿಂದ, ಅವನನ್ನೂ ನಾನು ಜನಾಂಗವಾಗಿ ಮಾಡುವೆನು,” ಎಂದರು.
14ಅಬ್ರಹಾಮನು ಬೆಳಿಗ್ಗೆ ಎದ್ದು ರೊಟ್ಟಿಯನ್ನೂ, ನೀರಿನ ತಿತ್ತಿಯನ್ನೂ ತೆಗೆದುಕೊಂಡು ಹಾಗರಳಿಗೆ ಕೊಟ್ಟು, ಅವುಗಳನ್ನು ಆಕೆಯ ಹೆಗಲಿನ ಮೇಲೆ ಇರಿಸಿ, ಆ ಹುಡುಗನ ಸಂಗಡ ಅವಳನ್ನು ಕಳುಹಿಸಿಬಿಟ್ಟನು. ಆಕೆಯು ಹೋಗಿ ಬೇರ್ಷೆಬದ ಮರುಭೂಮಿಯಲ್ಲಿ ಅಲೆದಾಡುತ್ತಿದ್ದಳು.
15ತಿತ್ತಿಯೊಳಗಿನ ನೀರು ಮುಗಿದಾಗ, ಆಕೆ ಮಗುವನ್ನು ಒಂದು ಮರದ ಕೆಳಗೆ ಮಲಗಿಸಿ, 16ಬಾಣವನ್ನೆಸೆಯುವಷ್ಟು ದೂರಹೋಗಿ ಕುಳಿತುಕೊಂಡು, “ಮಗುವಿನ ಸಾವನ್ನು ನಾನು ನೋಡಲಾರೆನು,” ಎಂದು ಹೇಳಿ ಸ್ವರವೆತ್ತಿ ಅತ್ತಳು.
17ದೇವರು ಆ ಹುಡುಗನ ಅಳುವ ಸ್ವರವನ್ನು ಕೇಳಿದರು. ಆಗ ದೇವದೂತನು ಆಕಾಶದೊಳಗಿಂದ ಹಾಗರಳನ್ನು ಕರೆದು, ಆಕೆಗೆ, “ಹಾಗರಳೇ, ವ್ಯಥೆಪಡುವುದೇಕೆ? ಅಂಜಬೇಡ ದೇವರು ಹುಡುಗನ ಸ್ವರವನ್ನು ಕೇಳಿದ್ದಾರೆ. 18ಎದ್ದು ಹುಡುಗನನ್ನು ಎತ್ತಿಕೊಂಡು ನಿನ್ನ ಕೈಯಲ್ಲಿ ತೆಗೆದುಕೋ. ನಾನು ಅವನನ್ನು ದೊಡ್ಡ ಜನಾಂಗದವನನ್ನಾಗಿ ಮಾಡುವೆನು,” ಎಂದನು.
19ದೇವರು ಆಕೆಯ ಕಣ್ಣುಗಳನ್ನು ತೆರೆಯಲು, ಆಕೆಯು ನೀರಿನ ಬಾವಿಯನ್ನು ನೋಡಿದಳು. ಅಲ್ಲಿಗೆ ಹೋಗಿ ತಿತ್ತಿಯಲ್ಲಿ ನೀರನ್ನು ತುಂಬಿಸಿ, ಹುಡುಗನಿಗೆ ಕುಡಿಯಲು ಕೊಟ್ಟಳು.
20ದೇವರು ಆ ಹುಡುಗನ ಸಂಗಡ ಇದ್ದರು. ಹುಡುಗನು ಬೆಳೆದು ಮರುಭೂಮಿಯಲ್ಲಿ ವಾಸಮಾಡಿ ಬಿಲ್ಲುಗಾರನಾದನು. 21ಇಷ್ಮಾಯೇಲನು ಪಾರಾನಿನ ಮರುಭೂಮಿಯಲ್ಲಿ ವಾಸಮಾಡುತ್ತಿದ್ದಾಗ, ಅವನ ತಾಯಿಯು ಅವನಿಗೋಸ್ಕರ ಈಜಿಪ್ಟ್ ದೇಶದ ಒಬ್ಬ ಹೆಣ್ಣನ್ನು ತರಿಸಿ ಮದುವೆಮಾಡಿಸಿದಳು.
ಬೇರ್ಷೆಬದಲ್ಲಿ ಒಡಂಬಡಿಕೆ
22ಆ ಕಾಲದಲ್ಲಿ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿಯಾದ ಫೀಕೋಲನೂ ಅಬ್ರಹಾಮನಿಗೆ, “ನೀನು ಮಾಡುವ ಎಲ್ಲಾ ಕೆಲಸಕಾರ್ಯಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾರೆ. 23ಆದ್ದರಿಂದ ನೀನು ನನಗೂ, ನನ್ನ ಮಗನಿಗೂ, ನನ್ನ ಮೊಮ್ಮಗನಿಗೂ ವಂಚನೆ ಮಾಡುವುದಿಲ್ಲವೆಂದು ದೇವರ ಮೇಲೆ ಆಣೆ ಇಟ್ಟು ಪ್ರಮಾಣಮಾಡು. ನಾನು ನಿನಗೆ ಒಳ್ಳೆಯದನ್ನೇ ಮಾಡಿದ ಪ್ರಕಾರ, ನೀನು ನನಗೂ, ನೀನು ವಾಸಮಾಡುತ್ತಿರುವ ಈ ದೇಶಕ್ಕೂ ಒಳ್ಳೆಯದನ್ನೇ ಮಾಡಬೇಕು,” ಎಂದನು.
24ಅದಕ್ಕೆ ಅಬ್ರಹಾಮನು, “ನಾನು ಹಾಗೆಯೇ ಪ್ರಮಾಣ ಮಾಡುತ್ತೇನೆ,” ಎಂದನು.
25ಅಬೀಮೆಲೆಕನ ಸೇವಕರು ಬಲಾತ್ಕಾರದಿಂದ ತೆಗೆದುಕೊಂಡ ನೀರಿನ ಬಾವಿಗಾಗಿ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಿದನು. 26ಅದಕ್ಕೆ ಅಬೀಮೆಲೆಕನು, “ಈ ಕೆಲಸವನ್ನು ಯಾರು ಮಾಡಿದರೆಂದು ನಾನು ಅರಿಯೆ. ನೀನೂ ನನಗೆ ತಿಳಿಸಲಿಲ್ಲ. ನಾನು ಇಂದಿನವರೆಗೂ ಅದನ್ನು ಕೇಳಲೂ ಇಲ್ಲ,” ಎಂದನು.
27ಆಗ ಅಬ್ರಹಾಮನು ಕುರಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅಬೀಮೆಲೆಕನಿಗೆ ಕೊಟ್ಟನು. ಆಗ ಅವರಿಬ್ಬರೂ ಒಡಂಬಡಿಕೆಯನ್ನು ಮಾಡಿಕೊಂಡರು. 28ಅಬ್ರಹಾಮನು ಹಿಂಡಿನಿಂದ ಏಳು ಹೆಣ್ಣು ಕುರಿಮರಿಗಳನ್ನು ಬೇರೆ ಮಾಡಿ ನಿಲ್ಲಿಸಿದನು. 29ಅಬೀಮೆಲೆಕನು ಅಬ್ರಹಾಮನಿಗೆ, “ನೀನು ಆ ಏಳು ಹೆಣ್ಣು ಕುರಿಮರಿಗಳನ್ನು ಬೇರೆಯಾಗಿ ನಿಲ್ಲಿಸಿದ ಅರ್ಥ ಏನು?” ಎಂದನು.
30ಅದಕ್ಕೆ ಅಬ್ರಹಾಮನು, “ನಾನೇ ಆ ಬಾವಿಯನ್ನು ಅಗೆದಿದ್ದೇನೆಂಬುದಕ್ಕೆ ಸಾಕ್ಷಿಯಾಗಿ ಆ ಏಳು ಹೆಣ್ಣು ಕುರಿಮರಿಗಳನ್ನು ನೀನು ನನ್ನ ಕೈಯಿಂದ ತೆಗೆದುಕೊಳ್ಳಬೇಕು,” ಎಂದನು.
31ಹೀಗೆ ಅವರಿಬ್ಬರೂ ಅಲ್ಲಿ ಪ್ರಮಾಣ ಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ#21:31 ಬೇರ್ಷೆಬ ಅರ್ಥ ಏಳು ಬಾವಿಗಳು ಮತ್ತು ಬಾವಿಯ ಪ್ರಮಾಣ. ಎಂದು ಅಬ್ರಹಾಮನು ಹೆಸರಿಟ್ಟನು.
32ಹೀಗೆ ಅವರು ಬೇರ್ಷೆಬದಲ್ಲಿ ಒಡಂಬಡಿಕೆಯನ್ನು ಮಾಡಿಕೊಂಡರು. ತರುವಾಯ ಅಬೀಮೆಲೆಕನೂ, ಅವನ ಮುಖ್ಯ ಸೈನ್ಯಾಧಿಪತಿ ಫೀಕೋಲನೂ ಎದ್ದು ಫಿಲಿಷ್ಟಿಯರ ದೇಶಕ್ಕೆ ಹಿಂದಿರುಗಿದರು. 33ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲ ವೃಕ್ಷವನ್ನು ನೆಟ್ಟು, ಅಲ್ಲಿ ನಿತ್ಯ ದೇವರಾಗಿರುವ ಯೆಹೋವ ದೇವರ ಹೆಸರನ್ನು ಹೇಳಿ ಆರಾಧಿಸಿದನು. 34ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹುಕಾಲ ತಂಗಿದ್ದನು.
S'ha seleccionat:
ಆದಿಕಾಂಡ 21: KSB
Subratllat
Comparteix
Copia
Vols que els teus subratllats es desin a tots els teus dispositius? Registra't o inicia sessió
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.