ಆದಿಕಾಂಡ 31
31
ಲಾಬಾನನಿಂದ ಯಾಕೋಬನ ಪಲಾಯನ
1ಲಾಬಾನನ ಮಕ್ಕಳು, “ನಮ್ಮ ತಂದೆಗೆ ಇದ್ದವುಗಳನ್ನೆಲ್ಲಾ ಯಾಕೋಬನು ತೆಗೆದುಕೊಂಡು, ನಮ್ಮ ತಂದೆಗಿದ್ದವುಗಳಿಂದ ಈ ಘನತೆಯನ್ನೆಲ್ಲಾ ಪಡೆದಿದ್ದಾನೆ,” ಎಂದು ಹೇಳುವ ಮಾತುಗಳನ್ನು ಯಾಕೋಬನು ಕೇಳಿದನು. 2ಇದಲ್ಲದೆ ಯಾಕೋಬನು ಲಾಬಾನನ ಮುಖವನ್ನು ನೋಡಿದಾಗ, ಅದು ತನ್ನ ಕಡೆಗೆ ಮೊದಲು ಇದ್ದ ಹಾಗೆ ಇರಲಿಲ್ಲ.
3ಆಗ ಯೆಹೋವ ದೇವರು ಯಾಕೋಬನಿಗೆ, “ನಿನ್ನ ತಂದೆಗಳ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ನಾನು ನಿನ್ನ ಸಂಗಡ ಇರುವೆನು,” ಎಂದರು.
4ಯಾಕೋಬನು ರಾಹೇಲಳನ್ನೂ, ಲೇಯಳನ್ನೂ ಹೊಲದಲ್ಲಿದ್ದ ತನ್ನ ಮಂದೆಯ ಬಳಿಗೆ ಕರೆಸಿದನು. 5ಅವರಿಗೆ, “ನಿಮ್ಮ ತಂದೆಯ ಮುಖವು ಮೊದಲು ನನ್ನ ಕಡೆಗೆ ಇದ್ದ ಹಾಗೆ ಈಗ ಇಲ್ಲದಿರುವುದನ್ನು ನಾನು ನೋಡಿದ್ದೇನೆ. ಆದರೆ ನನ್ನ ತಂದೆಯ ದೇವರು ನನ್ನ ಕಡೆಗೆ ಇದ್ದಾರೆ. 6ನಾನು ಪೂರ್ಣಬಲದಿಂದ ನಿಮ್ಮ ತಂದೆಯ ಸೇವೆ ಮಾಡಿದ್ದು ನಿಮಗೆ ತಿಳಿದಿದೆ. 7ಆದರೆ ನಿಮ್ಮ ತಂದೆಯು ನನಗೆ ವಂಚನೆಮಾಡಿ, ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದನು. ಆದಾಗ್ಯೂ ದೇವರು ಅವನಿಂದ ನನಗೆ ಕೇಡು ಮಾಡಗೊಡಿಸಲಿಲ್ಲ. 8ನಿಮ್ಮ ತಂದೆ ನನಗೆ, ‘ಚುಕ್ಕೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಅಂದಾಗ, ಮಂದೆಯೆಲ್ಲಾ ಚುಕ್ಕೆಯುಳ್ಳದ್ದನ್ನೇ ಈಯಿತು. ಅವನು, ‘ರೇಖೆಯುಳ್ಳದ್ದು ನಿನಗೆ ಸಂಬಳವಾಗಿರಲಿ,’ ಎಂದಾಗ, ಮಂದೆಯೆಲ್ಲಾ ರೇಖೆಯುಳ್ಳದ್ದನ್ನೇ ಈಯಿತು. 9ಹೀಗೆ ದೇವರು ನಿಮ್ಮ ತಂದೆಯ ಪಶುಗಳನ್ನು ತೆಗೆದು, ನನಗೆ ಕೊಟ್ಟಿದ್ದಾರೆ.
10“ಇದಲ್ಲದೆ ಕುರಿಗಳು ಸಂಗಮ ಮಾಡುವಾಗ, ಸ್ವಪ್ನದಲ್ಲಿ ನಾನು ನನ್ನ ಕಣ್ಣುಗಳನ್ನೆತ್ತಿ ನೋಡಲಾಗಿ, ಕುರಿಗಳ ಮೇಲೆ ಏರುವ ಟಗರುಗಳು ಚುಕ್ಕೆ, ಮಚ್ಚೆ, ರೇಖೆಗಳುಳ್ಳವುಗಳಾಗಿದ್ದವು. 11ದೇವದೂತನು ಸ್ವಪ್ನದಲ್ಲಿ ನನಗೆ, ‘ಯಾಕೋಬನೇ’ ಎಂದನು. ಅದಕ್ಕೆ ನಾನು, ‘ಇಲ್ಲಿ ಇದ್ದೇನೆ,’ ಎಂದೆನು. 12ಅವನು ನನಗೆ, ‘ನಿನ್ನ ಕಣ್ಣುಗಳನ್ನೆತ್ತಿ ಕುರಿಗಳನ್ನೇರುವ ಎಲ್ಲಾ ಟಗರುಗಳನ್ನು ನೋಡು. ಅವು ಚುಕ್ಕೆ, ಮಚ್ಚೆ, ರೇಖೆಯೂ ಉಳ್ಳವುಗಳಾಗಿವೆ. ಏಕೆಂದರೆ ಲಾಬಾನನು ನಿನಗೆ ಮಾಡಿದ್ದನ್ನೆಲ್ಲಾ ಕಂಡಿದ್ದೇನೆ. 13ನೀನು ಸ್ತಂಭವನ್ನು ಅಭಿಷೇಕಿಸಿ, ನನಗೆ ಪ್ರಮಾಣ ಮಾಡಿದ ಬೇತೇಲಿನ ದೇವರು ನಾನೇ. ಈಗ ಎದ್ದು ಈ ದೇಶದಿಂದ ಹೊರಟು, ನಿನ್ನ ಬಂಧುಗಳ ದೇಶಕ್ಕೆ ಹಿಂದಿರುಗಿ ಹೋಗು,’ ಎಂದು ಹೇಳಿದ್ದಾರೆ,” ಎಂದನು.
14ಆಗ ರಾಹೇಲಳು, ಲೇಯಳು ಅವನಿಗೆ, “ನಮ್ಮ ತಂದೆಯ ಮನೆಯಲ್ಲಿ ಇನ್ನೇನಾದರೂ ಭಾಗವೂ, ಬಾಧ್ಯತೆಯೂ ಇದೆಯೋ? 15ಅವನು ನಮ್ಮನ್ನು ಹೊರಗಿನವರಂತೆ ಎಣಿಸಿದ್ದಾನಲ್ಲಾ. ಅವನು ನಮ್ಮನ್ನು ಮಾರಿ, ನಮ್ಮ ಹಣವನ್ನೂ ನುಂಗೇ ಬಿಟ್ಟನಲ್ಲಾ. 16ಆದ್ದರಿಂದ ದೇವರು ನಮ್ಮ ತಂದೆಯಿಂದ ತೆಗೆದುಕೊಂಡ ಐಶ್ವರ್ಯವೆಲ್ಲಾ ನಮ್ಮದು, ನಮ್ಮ ಮಕ್ಕಳದು. ಹಾಗಾದರೆ ಈಗ ದೇವರು ನಿನಗೆ ಹೇಳಿದ್ದನ್ನೆಲ್ಲಾ ಮಾಡು,” ಎಂದರು.
17ಆಗ ಯಾಕೋಬನು ಎದ್ದು ತನ್ನ ಮಕ್ಕಳನ್ನೂ, ತನ್ನ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ, 18ತನ್ನ ಎಲ್ಲಾ ಪಶುಗಳನ್ನೂ, ತಾನು ಸಂಪಾದಿಸಿದ ಎಲ್ಲಾ ಸಂಪತ್ತನ್ನೂ, ಪದ್ದನ್ ಅರಾಮಿನಲ್ಲಿ ತಾನು ಸಂಪಾದಿಸಿದ ಪಶುಗಳನ್ನೂ ಕಾನಾನ್ ದೇಶದಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ತೆಗೆದುಕೊಂಡು ಹೊರಟನು.
19ಲಾಬಾನನು ತನ್ನ ಕುರಿಗಳ ಉಣ್ಣೆ ಕತ್ತರಿಸುವುದಕ್ಕೆ ಹೋಗಿದ್ದನು. ಆಗ ರಾಹೇಲಳು ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು. 20ಆದರೆ ಯಾಕೋಬನು ತಾನು ಹೋಗುವುದನ್ನು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ವಂಚಿಸಿ ಓಡಿಹೋದನು. 21ಅವನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಓಡಿಹೋದನು. ಅವನು ಎದ್ದು ಗಿಲ್ಯಾದ್ ಪರ್ವತಕ್ಕೆ ಅಭಿಮುಖವಾಗಿ ಯೂಫ್ರೇಟೀಸ್ ನದಿಯನ್ನು ದಾಟಿದನು.
ಲಾಬಾನನು ಯಾಕೋಬನ ಬೆನ್ನಟ್ಟಿ ಬಂದದ್ದು
22ಯಾಕೋಬನು ಓಡಿಹೋದನೆಂದು ಮೂರನೆಯ ದಿವಸದಲ್ಲಿ ಲಾಬಾನನಿಗೆ ತಿಳಿಯಿತು. 23ಆಗ ಅವನು ತನ್ನ ಬಂಧುಗಳನ್ನು ಕರೆದುಕೊಂಡು, ಅವನನ್ನು ಬೆನ್ನಟ್ಟಿ, ಏಳು ದಿನ ಪ್ರಯಾಣಮಾಡಿ, ಗಿಲ್ಯಾದ್ ಪರ್ವತದಲ್ಲಿ ಅವನನ್ನು ಸಂಧಿಸಿದನು. 24ಆ ರಾತ್ರಿ ದೇವರು ಸ್ವಪ್ನದಲ್ಲಿ ಅರಾಮಿನವನಾದ ಲಾಬಾನನ ಬಳಿಗೆ ಬಂದು ಅವನಿಗೆ, “ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಮಾತನಾಡದಂತೆ ಎಚ್ಚರಿಕೆಯಾಗಿರು,” ಎಂದರು.
25ತರುವಾಯ ಲಾಬಾನನು ಯಾಕೋಬನನ್ನು ಸಂಧಿಸಿದಾಗ, ಯಾಕೋಬನು ಗಿಲ್ಯಾದ್ ಪರ್ವತದಲ್ಲಿ ತನ್ನ ಗುಡಾರವನ್ನು ಹಾಕಿಕೊಂಡಿದ್ದನು. ಲಾಬಾನನು ಸಹ ಅಲ್ಲಿಯೇ ಗುಡಾರವನ್ನು ಹಾಕಿಸಿದ್ದನು. 26ಲಾಬಾನನು ಯಾಕೋಬನಿಗೆ, “ನೀನು ಏನು ಮಾಡಿದೆ? ನನಗೆ ತಿಳಿಸದೆ ಮೋಸಮಾಡಿದ್ದೀಯೆ ಮತ್ತು ನನ್ನ ಪುತ್ರಿಯರನ್ನು ಯುದ್ಧದಲ್ಲಿ ಸೆರೆಹಿಡಿದವರ ಹಾಗೆ ತೆಗೆದುಕೊಂಡು ಹೋದೆಯಲ್ಲಾ. 27ಯಾಕೆ ನೀನು ಗುಪ್ತವಾಗಿ ಕಳ್ಳತನದಿಂದ ಓಡಿ ಹೋದೆ? ಏಕೆ ಮೋಸಮಾಡಿದೆ? ನನಗೆ ತಿಳಿಸಿದ್ದರೆ ಸಂತೋಷದಿಂದ ಹಾಡು, ತಾಳ, ವೀಣೆಗಳ ಸಂಗೀತದೊಂದಿಗೆ ನಿನ್ನನ್ನು ಕಳುಹಿಸುತ್ತಿದ್ದೆನು. 28ಆದರೆ ನೀನು ನನ್ನ ಮೊಮ್ಮಕ್ಕಳಿಗೂ, ನನ್ನ ಹೆಣ್ಣು ಮಕ್ಕಳಿಗೂ ಮುದ್ದು ಕೊಡುವುದಕ್ಕೂ ಬಿಡಲಿಲ್ಲ. ನೀನು ಮಾಡಿದ್ದು ಬುದ್ಧಿಹೀನ ಕೆಲಸವೇ ಸರಿ. 29ನಿನಗೆ ಕೇಡು ಮಾಡುವುದಕ್ಕೆ ನನ್ನ ಕೈಯಲ್ಲಿ ಸಾಮರ್ಥ್ಯ ಇದೆ. ಆದರೆ ನಿನ್ನ ತಂದೆಯ ದೇವರು ನಿನ್ನೆ ರಾತ್ರಿ ನನ್ನ ಸಂಗಡ ಮಾತನಾಡಿ, ‘ನೀನು ಯಾಕೋಬನ ಸಂಗಡ ಒಳ್ಳೆಯದನ್ನಾಗಲಿ, ಕೆಟ್ಟದ್ದನ್ನಾಗಲಿ ಹೇಳದಂತೆ ಎಚ್ಚರವಾಗಿರು,’ ಎಂದು ಹೇಳಿದರು. 30ಈಗ ನೀನು ನಿನ್ನ ತಂದೆಯ ಮನೆಯನ್ನು ಬಹಳವಾಗಿ ಹಾರೈಸಿದ್ದರಿಂದ ಹೋಗಬೇಕಾಯಿತು. ಆದರೆ ನೀನು ನನ್ನ ದೇವರುಗಳನ್ನು ಕದ್ದದ್ದು ಯಾಕೆ?” ಎಂದನು.
31ಅದಕ್ಕೆ ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನಿನ್ನ ಪುತ್ರಿಯರನ್ನು ನನ್ನಿಂದ ಬಲಾತ್ಕಾರದಿಂದ ಹಿಂದಕ್ಕೆ ತೆಗೆದುಕೊಳ್ಳುವೆ ಎಂದು ಭಯಪಟ್ಟೆನು. 32ಆದರೆ ಯಾರ ಬಳಿಯಲ್ಲಿ ನಿನ್ನ ದೇವರುಗಳು ಸಿಕ್ಕುವುವೋ ಅವರು ಸಾಯಲಿ. ನನ್ನ ಬಳಿಯಲ್ಲಿ ನಿನ್ನದೇನಾದರೂ ಇದ್ದರೆ, ನಮ್ಮ ಬಂಧುಗಳ ಮುಂದೆ ವಿಚಾರಿಸಿ ಅದನ್ನು ತೆಗೆದುಕೋ,” ಎಂದನು. ಆದರೆ ರಾಹೇಲಳು ಅವುಗಳನ್ನು ಕದ್ದುಕೊಂಡದ್ದು ಯಾಕೋಬನಿಗೆ ತಿಳಿದಿರಲಿಲ್ಲ.
33ಆಗ ಲಾಬಾನನು ಯಾಕೋಬನ ಗುಡಾರದಲ್ಲಿಯೂ, ಲೇಯಳ ಗುಡಾರದಲ್ಲಿಯೂ, ಆ ಇಬ್ಬರು ದಾಸಿಯರ ಗುಡಾರಗಳಲ್ಲಿಯೂ ಹೋಗಿ ಹುಡುಕಿದರೂ, ಅವುಗಳನ್ನು ಕಾಣಲಿಲ್ಲ. ಲೇಯಳ ಗುಡಾರದಿಂದ ಹೊರಟು ರಾಹೇಲಳ ಗುಡಾರದೊಳಗೆ ಹೋದನು. 34ಆದರೆ ರಾಹೇಲಳು ವಿಗ್ರಹಗಳನ್ನು ತೆಗೆದುಕೊಂಡು ಒಂಟೆಯ ಸಾಮಗ್ರಿಯಲ್ಲಿಟ್ಟು, ಅದರ ಮೇಲೆ ಕುಳಿತುಕೊಂಡಳು. ಲಾಬಾನನು ಗುಡಾರವನ್ನೆಲ್ಲಾ ಹುಡುಕಿದರೂ, ಅವನು ಅವುಗಳನ್ನು ಕಾಣಲಿಲ್ಲ.
35ರಾಹೇಲಳು ತನ್ನ ತಂದೆಗೆ, “ಅಪ್ಪಾ, ನಾನು ನಿನ್ನ ಮುಂದೆ ಎದ್ದು ನಿಂತುಕೊಳ್ಳದೇ ಇರುವುದರಿಂದ, ನನ್ನ ಮೇಲೆ ಕೋಪಬಾರದೆ ಇರಲಿ. ಏಕೆಂದರೆ ನಾನು ಮುಟ್ಟಾಗಿದ್ದೇನೆ,” ಎಂದಳು. ಅವನು ಹುಡುಕಿ ಆ ವಿಗ್ರಹಗಳನ್ನು ಕಂಡುಕೊಳ್ಳದೆ ಹೋದನು.
36ಆಗ ಯಾಕೋಬನು ಕೋಪಗೊಂಡು ಲಾಬಾನನೊಂದಿಗೆ ವಾದಿಸಿದನು. ಯಾಕೋಬನು ಉತ್ತರವಾಗಿ ಲಾಬಾನನಿಗೆ, “ನೀನು ನನ್ನನ್ನು ಬೆನ್ನಟ್ಟಿ ಬರುವುದಕ್ಕೆ ನನ್ನ ಅಪರಾಧವೇನು?” ನನ್ನ ಪಾಪವೇನು? 37ನೀನು ನನ್ನ ಸಲಕರಣೆಗಳನ್ನೆಲ್ಲಾ ಹುಡುಕಿದ ಮೇಲೆ ನಿನ್ನ ಮನೆಯ ಯಾವ ವಸ್ತುಗಳನ್ನು ಕಂಡುಕೊಂಡೆ? ನನಗೂ, ನಿನಗೂ ಬಂಧುಗಳಾಗಿರುವವರ ಮುಂದೆ ಅದನ್ನು ಇಲ್ಲಿ ಇಡು. ಅವರೇ ನಮ್ಮಿಬ್ಬರ ಮಧ್ಯೆ ನ್ಯಾಯತೀರಿಸಲಿ.
38“ಈ ಇಪ್ಪತ್ತು ವರ್ಷ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಕುರಿಗಳೂ, ಮೇಕೆಗಳೂ ಮರಿ ಹಾಕಲಿಲ್ಲ. ನಿನ್ನ ಕುರಿ ಹೋತಗಳನ್ನು ನಾನು ತಿನ್ನಲಿಲ್ಲ. 39ಮೃಗಗಳಿಂದ ಘಾಯವಾದವುಗಳನ್ನು ನಿನ್ನ ಬಳಿಗೆ ತಾರದೆ, ಅವುಗಳ ನಷ್ಟವನ್ನು ನಾನೇ ಹೊತ್ತೆನು. ಹಗಲಲ್ಲಿ ಕದ್ದದ್ದನ್ನೂ, ರಾತ್ರಿಯಲ್ಲಿ ಕದ್ದದ್ದನ್ನೂ ನನ್ನಿಂದಲೇ ತೆಗೆದುಕೊಂಡೆ. 40ನನ್ನ ಸ್ಥಿತಿ ಹೀಗೆ ಇತ್ತು: ಹಗಲಲ್ಲಿ ಬಿಸಿಲಿನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು. ನನ್ನ ಕಣ್ಣುಗಳಿಗೆ ನಿದ್ರೆ ತಪ್ಪಿಹೋಯಿತು. 41ನಿನ್ನ ಇಬ್ಬರು ಪುತ್ರಿಯರಿಗಾಗಿ ಹದಿನಾಲ್ಕು ವರ್ಷ, ನಿನ್ನ ಮಂದೆಗಳಿಗೋಸ್ಕರ ಆರು ವರ್ಷ, ಈ ಪ್ರಕಾರ ಇಪ್ಪತ್ತು ವರ್ಷ ನಿನ್ನ ಮನೆಯಲ್ಲಿದ್ದು, ನಿನ್ನ ಸೇವೆ ಮಾಡಿದೆನು. ಆದರೆ ನೀನು ನನ್ನ ಸಂಬಳವನ್ನು ಹತ್ತು ಸಾರಿ ಬದಲಾಯಿಸಿದೆ. 42ನನ್ನ ತಂದೆ ದೇವರೂ, ಅಬ್ರಹಾಮನ ದೇವರೂ, ಇಸಾಕನ ಭಯವೂ ನನ್ನೊಂದಿಗೆ ಇಲ್ಲದೆ ಹೋಗಿದ್ದರೆ, ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಿಂದ ಕಳುಹಿಸುತ್ತಿದ್ದೆ. ನನ್ನ ಬಾಧೆಯನ್ನೂ, ನನ್ನ ಕಷ್ಟವನ್ನೂ ದೇವರು ಕಂಡು, ನಿನ್ನೆ ರಾತ್ರಿ ನಿನ್ನನ್ನು ಗದರಿಸಿದ್ದಾರೆ,” ಎಂದನು.
43ಲಾಬಾನನು ಅದಕ್ಕೆ ಉತ್ತರವಾಗಿ ಯಾಕೋಬನಿಗೆ, “ಈ ಪುತ್ರಿಯರು ನನ್ನ ಪುತ್ರಿಯರೇ, ಈ ಮಕ್ಕಳು ನನ್ನ ಮಕ್ಕಳೇ, ಈ ಮಂದೆಯು ನನ್ನ ಮಂದೆಯೇ, ಅಂತು ನೀನು ಕಾಣುವುದೆಲ್ಲಾ ನನ್ನದೇ. ಹಾಗಾದರೆ ನನ್ನ ಪುತ್ರಿಯರಿಗಾಗಲಿ, ಅವರು ಹೆತ್ತ ಮಕ್ಕಳಿಗಾಗಲಿ ನಾನು ಈ ಹೊತ್ತು ಏನು ಮಾಡಲಿ? 44ಆದ್ದರಿಂದ ನೀನು ಇಲ್ಲಿ ಬಾ, ನಾನೂ ನೀನೂ ಒಡಂಬಡಿಕೆಯನ್ನು ಮಾಡೋಣ, ಅದು ನನಗೂ ನಿನಗೂ ಮಧ್ಯದಲ್ಲಿ ಸಾಕ್ಷಿಯಾಗಿರಲಿ,” ಎಂದನು.
45ಆಗ ಯಾಕೋಬನು ಒಂದು ಕಲ್ಲನ್ನು ತೆಗೆದುಕೊಂಡು ಸ್ತಂಭವಾಗಿ ನಿಲ್ಲಿಸಿದನು. 46ಯಾಕೋಬನು ತನ್ನ ಕಡೆಯವರಿಗೆ, “ಕಲ್ಲುಗಳನ್ನು ಕೂಡಿಸಿರಿ,” ಎಂದನು. ಅವರು ಕಲ್ಲುಗಳನ್ನು ತೆಗೆದುಕೊಂಡು ಒಂದು ಕುಪ್ಪೆ ಮಾಡಿದರು. ಅವರು ಆ ಕುಪ್ಪೆಯ ಬಳಿಯಲ್ಲಿ ಕುಳಿತುಕೊಂಡು ಊಟಮಾಡಿದರು. 47ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು. ಯಾಕೋಬನು ಗಲೇದ್#31:47 ಒಂದು ಅರಮೀಯ ಭಾಷೆಯಲ್ಲಿ ಯಗರಸಾಹದೂತ ಇನ್ನೊಂದು ಗ್ರೀಕ್ ಭಾಷೆಯಲ್ಲಿ ಗಲೇದ್ ಎರಡರದೂ ಅರ್ಥ ಸಾಕ್ಷಿಯ ಕುಪ್ಪೆ ಎಂದು ಹೆಸರಿಟ್ಟನು.
48ಆಗ ಲಾಬಾನನು, “ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ,” ಎಂದನು. ಆದ್ದರಿಂದ ಅದಕ್ಕೆ ಗಲೇದ್ ಎಂದೂ, 49ಮಿಚ್ಪಾ#31:49 ಮಿಚ್ಪಾ ಅಂದರೆ ಕಾವಲು ಗೋಪುರ ಎಂದೂ ಹೆಸರಾಯಿತು. ಏಕೆಂದರೆ, “ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಯೆಹೋವ ದೇವರು ನಮ್ಮನ್ನು ನೋಡಿಕೊಳ್ಳುತ್ತಾ ಇರಲಿ. 50ನೀನು ನನ್ನ ಪುತ್ರಿಯರನ್ನು ಉಪದ್ರವಪಡಿಸಿದರೆ, ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ಪಡೆದರೆ, ಯಾವ ಮನುಷ್ಯನೂ ವಿಚಾರಿಸಲು ಇಲ್ಲದಿದ್ದರೂ ನನಗೂ ನಿನಗೂ ನಡುವೆ ದೇವರೇ ಈ ಒಪ್ಪಂದಕ್ಕೆ ಸಾಕ್ಷಿ,” ಎಂದನು.
51ಲಾಬಾನನು ಯಾಕೋಬನಿಗೆ, “ನಿನಗೂ ನನಗೂ ಮಧ್ಯೆ ನಾನು ಹಾಕಿಸಿರುವ ಈ ಕುಪ್ಪೆಯನ್ನು ನೋಡು, ಈ ಸ್ತಂಭವನ್ನು ನೋಡು, 52ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವುದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವುದಿಲ್ಲವೆಂಬುದಕ್ಕೆ ಈ ಕುಪ್ಪೆಯೂ ಈ ಸ್ತಂಭವೂ ಸಾಕ್ಷಿಯಾಗಿವೆ. 53ಅಬ್ರಹಾಮನ ದೇವರು, ನಾಹೋರನ ದೇವರು, ಅವರ ತಂದೆಯ ದೇವರು ನಮ್ಮ ಮಧ್ಯದಲ್ಲಿ ನ್ಯಾಯತೀರಿಸಲಿ,” ಎಂದನು.
ಆಗ ಯಾಕೋಬನು ತನ್ನ ತಂದೆ ಇಸಾಕನ ಭಯದ ಮೇಲೆ ಪ್ರಮಾಣ ಮಾಡಿದನು. 54ಯಾಕೋಬನು ಆ ಬೆಟ್ಟದಲ್ಲಿ ಬಲಿಯನ್ನು ಅರ್ಪಿಸಿ, ಭೋಜನ ಮಾಡುವುದಕ್ಕೆ ತನ್ನ ಬಂಧುಗಳನ್ನು ಕರೆಕಳುಹಿಸಿದನು. ಅವರು ಭೋಜನ ಮಾಡಿ ಬೆಟ್ಟದಲ್ಲಿಯೇ ರಾತ್ರಿ ಇಳಿದುಕೊಂಡರು.
55ಮುಂಜಾನೆ ಲಾಬಾನನು ಎದ್ದು ತನ್ನ ಪುತ್ರ ಪುತ್ರಿಯರಿಗೆ ಮುದ್ದಿಟ್ಟು ಅವರನ್ನು ಆಶೀರ್ವದಿಸಿದನು. ಲಾಬಾನನು ಹೊರಟು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.
S'ha seleccionat:
ಆದಿಕಾಂಡ 31: KSB
Subratllat
Comparteix
Copia
Vols que els teus subratllats es desin a tots els teus dispositius? Registra't o inicia sessió
ಪವಿತ್ರ ವೇದ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
ಅನುಮತಿಯೊಂದಿಗೆ ಬಳಸಲಾಗಿದೆ
ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
Holy Bible, Kannada Contemporary Version™
Copyright © 1999, 2020, 2022 by Biblica, Inc.
Used with permission. All rights reserved worldwide.