Logo YouVersion
Ikona vyhledávání

ಅಪೊಸ್ತಲರ ಕೃತ್ಯಗಳು 1

1
ಯೇಸು ಪರಲೋಕಕ್ಕೆ ಏರಿಹೋದದ್ದು
(ಮಾರ್ಕ. 16.19; ಲೂಕ. 24.50-53)
1ಥೆಯೊಫಿಲನೇ, ನಾನು ಮೊದಲು ಬರೆದ ಚರಿತ್ರೆಯಲ್ಲಿ ಯೇಸು ಮಾಡುವದಕ್ಕೂ ಉಪದೇಶಿಸುವದಕ್ಕೂ ಪ್ರಾರಂಭಿಸಿದ್ದೆಲ್ಲವನ್ನು ಹೇಳಿ 2ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಪವಿತ್ರಾತ್ಮನ ಮೂಲಕ ಆಜ್ಞೆಕೊಟ್ಟು ಮೇಲಣ ಲೋಕವನ್ನೇರಿದ ದಿನದವರೆಗೆ ವಿವರಿಸಿದೆನಷ್ಟೆ. 3ಆತನು ಬಾಧೆಪಟ್ಟು ಸತ್ತ ಮೇಲೆ ತನ್ನನ್ನು ಜೀವಂತನೆಂದು ಅನೇಕ ಪ್ರಮಾಣಗಳಿಂದ ಅಪೊಸ್ತಲರಿಗೆ ತೋರಿಸಿಕೊಂಡನು. ನಾಲ್ವತ್ತು ದಿವಸಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವಾದ ಸಂಗತಿಗಳನ್ನು ಹೇಳುತ್ತಾ ಇದ್ದನು.
4-5ಹೀಗಿರಲಾಗಿ ಆತನು ಅವರೊಂದಿಗೆ ಕೂಡಿದ್ದಾಗ್ಗೆ ಅವರಿಗೆ - ಯೋಹಾನನಂತೂ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ನಿಮಗಾದರೋ ಇನ್ನು ಸ್ವಲ್ಪ ದಿವಸಗಳೊಳಗಾಗಿ ಪವಿತ್ರಾತ್ಮದಲ್ಲಿ ಸ್ನಾನವಾಗುವದು. ಆದಕಾರಣ ನೀವು ಯೆರೂಸಲೇಮನ್ನು ಬಿಟ್ಟು ಹೋಗದೆ ತಂದೆ ಮಾಡಿದಂಥ ನೀವು ನನ್ನಿಂದ ಕೇಳಿದಂಥ ವಾಗ್ದಾನಕ್ಕೆ ಕಾದುಕೊಂಡಿರ್ರಿ ಎಂದು ಅಪ್ಪಣೆಕೊಟ್ಟನು. 6ಕೂಡಿ ಬಂದವರು ಆತನನ್ನು - ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ ಎಂದು ಕೇಳಲು 7ಆತನು ಅವರಿಗೆ - ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ. 8ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇವಿುನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು ಅಂದನು. 9ಈ ಮಾತುಗಳನ್ನು ಹೇಳಿದ ಬಳಿಕ ಅವರು ನೋಡುತ್ತಾ ಇದ್ದ ಹಾಗೆ ಆತನು ಏರಿಸಲ್ಪಟ್ಟನು; ಮೋಡವು ಆತನನ್ನು ಕವಿದುಕೊಂಡದ್ದರಿಂದ ಅವರ ಕಣ್ಣಿಗೆ ಮರೆಯಾದನು. 10ಆತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇರಲಾಗಿ ಶುಭ್ರವಸ್ತ್ರಧಾರಿಗಳಾದ ಇಬ್ಬರು ಪುರುಷರು ಫಕ್ಕನೆ ಅವರ ಹತ್ತರ ನಿಂತುಕೊಂಡು - 11ಗಲಿಲಾಯದವರೇ, ನೀವು ಯಾಕೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದೀರಿ? ನಿಮ್ಮ ಬಳಿಯಿಂದ ಆಕಾಶದೊಳಕ್ಕೆ ಸೇರಿಸಲ್ಪಟ್ಟಿರುವ ಈ ಯೇಸು ಯಾವ ರೀತಿಯಲ್ಲಿ ಆಕಾಶದೊಳಕ್ಕೆ ಹೋಗಿರುವದನ್ನು ನೀವು ಕಂಡಿರೋ ಅದೇ ರೀತಿಯಲ್ಲಿ ಬರುವನು ಎಂದು ಹೇಳಿದರು.
12ಆಗ ಅವರು ಎಣ್ಣೇಮರಗಳ ತೋಪು ಎನಿಸಿಕೊಳ್ಳುವ ಗುಡ್ಡದಿಂದ ಯೆರೂಸಲೇವಿುಗೆ ಹಿಂತಿರುಗಿ ಬಂದರು. ಆ ಗುಡ್ಡಕ್ಕೂ ಯೆರೂಸಲೇವಿುಗೂ ಸಬ್ಬತ್‍ದಿನದಲ್ಲಿ#1.12 ಅಂದರೆ, ಹೆಚ್ಚುಕಡಿಮೆ ಮುಕ್ಕಾಲು ಮೈಲಿ. ಪ್ರಯಾಣಮಾಡುವಷ್ಟು ದೂರ. 13ಅವರು ಅಲ್ಲಿಗೆ ಬಂದು ತಾವು ಇರುತ್ತಿದ್ದ ಮೇಲಂತಸ್ತಿಗೆ ಹೋದರು; ಯಾರಾರಂದರೆ - ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾಯನ ಯಾಕೋಬ, ಮತಾಭಿಮಾನಿ ಅನ್ನಿಸಿಕೊಂಡ ಸೀಮೋನ, ಯಾಕೋಬನ ಯೂದ, ಇವರೇ. 14ಇವರೆಲ್ಲರು ಏಕಮನಸ್ಸಾಗಿ ದೇವರ ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಕೆಲವು ಮಂದಿ ಹೆಂಗಸರೂ ಯೇಸುವಿನ ತಾಯಿಯಾದ ಮರಿಯಳೂ ಆತನ ತಮ್ಮಂದಿರೂ ಅವರ ಸಂಗಡ ಇದ್ದರು.
ಯೂದನಿಗೆ ಬದಲಾಗಿ ಬೇರೊಬ್ಬನನ್ನು ಅಪೊಸ್ತಲನಾಗಿ ಆದುಕೊಂಡದ್ದು
15ಆ ದಿವಸಗಳಲ್ಲಿ ಸುಮಾರು ನೂರಿಪ್ಪತ್ತು ಮಂದಿ ಸಹೋದರರು ಕೂಡಿಬಂದಿರಲಾಗಿ ಪೇತ್ರನು ಅವರ ಮಧ್ಯದಲ್ಲಿ ಎದ್ದು ನಿಂತು ಹೀಗಂದನು - 16ಸಹೋದರರೇ, ಯೇಸುವನ್ನು ಹಿಡಿದುಕೊಂಡವರಿಗೆ ದಾರೀತೋರಿಸಿದ ಯೂದನ ವಿಷಯವಾಗಿ ಪವಿತ್ರಾತ್ಮನು ದಾವೀದನ ಬಾಯಿಂದ ಮೊದಲೇ ಹೇಳಿಸಿದ ಶಾಸ್ತ್ರವಚನವು ನೆರವೇರುವದು ಅವಶ್ಯವಾಗಿತ್ತು. 17ಯೂದನು ನಮ್ಮ ಲೆಕ್ಕದಲ್ಲಿ ಸೇರಿ ಈ ಸೇವೆಯಲ್ಲಿ ಪಾಲು ಹೊಂದಿದವನಾಗಿದ್ದನು. 18(ಈ ಮನುಷ್ಯನು ತನ್ನ ದ್ರೋಹದಿಂದ ಸಂಪಾದಿಸಿದ ಹಣಕ್ಕೆ ಒಂದು ಹೊಲವನ್ನು ಕೊಂಡುಕೊಂಡನು; ಮತ್ತು ತಲೆಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳುಗಳೆಲ್ಲಾ ಹೊರಗೆ ಸುರಿದವು. 19ಇದು ಯೆರೂಸಲೇಮ್ ಪಟ್ಟಣದ ನಿವಾಸಿಗಳಿಗೆಲ್ಲಾ ತಿಳಿದುಬಂದದರಿಂದ ಆ ಹೊಲಕ್ಕೆ ಅವರ ಮಾತಿನಲ್ಲಿ ಅಕೆಲ್ದಮಾ, ಅಂದರೆ ಜೀವಹತ್ಯದ ಹೊಲ ಎಂಬ ಹೆಸರು ಬಂತು.) 20ಅವನ ವಿಷಯವಾಗಿ - ಅವನ ಮನೆ ಹಾಳುಬೀಳಲಿ, ಅದು ಜನಶೂನ್ಯವಾಗಲಿ ಎಂತಲೂ ಅವನ ಉದ್ಯೋಗವು ಮತ್ತೊಬ್ಬನಿಗಾಗಲಿ ಎಂತಲೂ ಕೀರ್ತನೆಗಳ ಗ್ರಂಥದಲ್ಲಿ ಬರೆದದೆ. 21-22ಆದದರಿಂದ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದ ಕಾಲವೆಲ್ಲಾ, ಅಂದರೆ ಯೋಹಾನನು ದೀಕ್ಷಾಸ್ನಾನಮಾಡಿಸಿದ್ದು ಮೊದಲುಗೊಂಡು ಯೇಸು ನಮ್ಮ ಬಳಿಯಿಂದ ಮೇಲಣ ಲೋಕವನ್ನೇರಿದ ದಿನದವರೆಗೂ ನಮ್ಮ ಜೊತೆಯಲ್ಲಿದ್ದವರೊಳಗೆ ಒಬ್ಬನು ನಮ್ಮೊಂದಿಗೆ ಆತನ ಪುನರುತ್ಥಾನದ ವಿಷಯದಲ್ಲಿ ಸಾಕ್ಷಿ ಹೇಳುವವನಾಗಬೇಕು ಅಂದನು. 23ಈ ಮಾತುಗಳನ್ನು ಕೇಳಿ ಅವರು ಯೂಸ್ತನೆನಿಸಿಕೊಳ್ಳುವ ಬಾರ್ಸಬನೆಂಬ ಯೋಸೇಫನನ್ನೂ 24-25ಮತ್ತೀಯನನ್ನೂ ನಿಲ್ಲಿಸಿ ಪ್ರಾರ್ಥನೆ ಮಾಡುತ್ತಾ - ಕರ್ತನೇ, ಎಲ್ಲರ ಹೃದಯವನ್ನು ಬಲ್ಲಾತನೇ, ಯೂದನು ಅಪೊಸ್ತಲತನವೆಂಬ ಈ ಸೇವಾಸ್ಥಾನದಿಂದ ಭ್ರಷ್ಟನಾಗಿ ತನಗೆ ತಕ್ಕ ಸ್ಥಳಕ್ಕೆ ಹೋಗಿರುವದರಿಂದ ಆ ಸ್ಥಾನವನ್ನು ಹೊಂದುವದಕ್ಕೆ ಈ ಇಬ್ಬರಲ್ಲಿ ನೀನು ಆರಿಸಿಕೊಂಡವನನ್ನು ತೋರಿಸಿಕೊಡು ಎಂದು ಹೇಳಿದರು. 26ಆಮೇಲೆ ಅವರಿಗೋಸ್ಕರ ಚೀಟುಹಾಕಿದರು. ಚೀಟು ಮತ್ತೀಯನಿಗೆ ಬಂದದರಿಂದ ಅವನು ಹನ್ನೊಂದು ಮಂದಿ ಅಪೊಸ್ತಲರ ಸಂಗಡ ಸೇರಿ ಎಣಿಸಲ್ಪಟ್ಟನು.

Zvýraznění

Sdílet

Kopírovat

None

Chceš mít své zvýrazněné verše uložené na všech zařízeních? Zaregistruj se nebo se přihlas