Logo YouVersion
Eicon Chwilio

ಆದಿಕಾಂಡ 6

6
ಜನರ ದುಷ್ಟತನ
1ಭೂಮಿಯಲ್ಲಿ ಜನಸಂಖ್ಯೆಯು ಹೆಚ್ಚುತ್ತಲೇ ಇತ್ತು. ಅವರಿಗೆ ಸುಂದರವಾದ ಹೆಣ್ಣುಮಕ್ಕಳು ಹುಟ್ಟಿದರು. 2-4ಈ ಹೆಣ್ಣುಮಕ್ಕಳ ಸೌಂದರ್ಯವನ್ನು ಕಂಡ ದೇವಪುತ್ರರು ತಮಗೆ ಬೇಕಾದ ಸ್ತ್ರೀಯರನ್ನು ಆರಿಸಿಕೊಂಡು ಮದುವೆಯಾದರು.
ಈ ಸ್ತ್ರೀಯರು ಮಕ್ಕಳನ್ನು ಹೆತ್ತರು. ಆ ಕಾಲದಲ್ಲಿ ಮತ್ತು ಆ ಕಾಲದ ನಂತರ ನೆಫೇಲಿಯರು ಆ ನಾಡಿನಲ್ಲಿ ವಾಸವಾಗಿದ್ದರು. ಅವರು ಪ್ರಸಿದ್ಧರಾದ ಪರಾಕ್ರಮಶಾಲಿಗಳಾಗಿದ್ದರು.#6:2-4 ಈ ಸ್ತ್ರೀಯರು … ಪರಾಕ್ರಮಶಾಲಿಗಳಾಗಿದ್ದರು ಅಥವಾ “ದೇವಪುತ್ರರು ಮಾನವರ ಪುತ್ರಿಯರನ್ನು ಮದುವೆಮಾಡಿಕೊಂಡ ಆ ದಿನಗಳಲ್ಲಿಯೂ ಅನಂತರವೂ ನೆಫೇಲಿಯರು ನಾಡಿನಲ್ಲಿ ವಾಸವಾಗಿದ್ದರು. ಈ ಸ್ತ್ರೀಯರೇ ಪುರಾತನ ಕಾಲದಿಂದಲೂ ಪ್ರಖ್ಯಾತರಾದ ವೀರರಿಗೆ ಜನ್ಮಕೊಟ್ಟವರು.”
ಬಳಿಕ ಯೆಹೋವನು, “ಜನರು ಕೇವಲ ಮಾನವರಷ್ಟೆ; ನನ್ನ ಆತ್ಮವು ಅವರಿಂದ ಯಾವಾಗಲೂ ತೊಂದರೆಗೆ ಗುರಿಯಾಗಕೂಡದು. ಅವರು 120 ವರ್ಷ ಬದುಕುವಂತೆ ಮಾಡುವೆನು” ಅಂದುಕೊಂಡನು.
5ಭೂಮಿಯ ಮೇಲಿರುವ ಜನರು ತುಂಬ ದುಷ್ಟರಾಗಿದ್ದು ಯಾವಾಗಲೂ ಕೆಟ್ಟವಿಷಯಗಳ ಬಗ್ಗೆ ಆಲೋಚಿಸುತ್ತಿರುವುದನ್ನು ಯೆಹೋವನು ನೋಡಿದನು. 6ಭೂಮಿಯ ಮೇಲೆ ತಾನು ಮನುಷ್ಯರನ್ನು ಸೃಷ್ಟಿಸಿದ್ದಕ್ಕಾಗಿ ಯೆಹೋವನು ದುಃಖಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
7ಆದ್ದರಿಂದ ಯೆಹೋವನು, “ನಾನು ಸೃಷ್ಟಿಸಿದ ಜನರನ್ನೆಲ್ಲ ಭೂಮುಖದಿಂದ ನಾಶಮಾಡುವೆನು. ಪ್ರತಿಯೊಬ್ಬ ಮನುಷ್ಯನನ್ನೂ ಪ್ರತಿಯೊಂದು ಪ್ರಾಣಿಯನ್ನೂ ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಜಂತುವನ್ನೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೂ ನಾಶಮಾಡುವೆನು. ಇವುಗಳನ್ನೆಲ್ಲಾ ಸೃಷ್ಟಿಸಿದ್ದರಿಂದ ನನಗೆ ದುಃಖವಾಯಿತು” ಅಂದುಕೊಂಡನು.
8ಆದರೆ ಯೆಹೋವನಿಗೆ ಮೆಚ್ಚಿಕೆಯಾಗುವಂತೆ ನಡೆದುಕೊಂಡ ಒಬ್ಬ ಮನುಷ್ಯನಿದ್ದನು. ಅವನೇ ನೋಹ.
ನೋಹ ಮತ್ತು ಮಹಾ ಜಲಪ್ರಳಯ
9ಇದು ನೋಹನ ಚರಿತ್ರೆ. ಅವನು ತನ್ನ ಜೀವಮಾನವೆಲ್ಲಾ ನೀತಿವಂತನಾಗಿದ್ದನು; ಯಾವಾಗಲೂ ದೇವರನ್ನೇ ಅನುಸರಿಸುತ್ತಿದ್ದನು. 10ಅವನಿಗೆ ಮೂವರು ಗಂಡುಮಕ್ಕಳಿದ್ದರು: ಶೇಮ್, ಹಾಮ್, ಯೆಫೆತ್.
11-12ದೇವರು ಭೂಮಿಯ ಕಡೆಗೆ ನೋಡಿದಾಗ ಜನರಿಂದ ಅದು ಕೆಟ್ಟುಹೋಗಿರುವುದನ್ನು ಕಂಡನು. ಎಲ್ಲೆಲ್ಲೂ ಹಿಂಸೆ ತುಂಬಿಕೊಂಡಿತ್ತು; ಜನರು ದುಷ್ಟರಾಗಿಯೂ ಕ್ರೂರಿಗಳಾಗಿಯೂ ತಮ್ಮ ಜೀವಿತವನ್ನು ಕೆಡಿಸಿಕೊಂಡಿದ್ದರು.
13ಆದ್ದರಿಂದ ದೇವರು ನೋಹನಿಗೆ, “ನಾನು ಎಲ್ಲಾ ಜನರಿಗೂ ಅಂತ್ಯವನ್ನು ಬರಮಾಡಬೇಕೆಂದಿದ್ದೇನೆ; ಯಾಕೆಂದರೆ ಅವರು ಕೋಪ, ಹಿಂಸೆಗಳಿಂದ ಭೂಮಿಯನ್ನು ತುಂಬಿಸಿದ್ದಾರೆ. ಆದಕಾರಣ ನಾನು ಎಲ್ಲಾ ಜೀವಿಗಳನ್ನು ನಾಶಮಾಡುವೆನು. 14ನಿನಗೋಸ್ಕರ ಒಂದು ನಾವೆಯನ್ನು ತುರಾಯಿ ಮರದಿಂದ ತಯಾರಿಸು. ಆ ನಾವೆಯಲ್ಲಿ ಕೋಣೆಗಳನ್ನು ಮಾಡು. ಇಡೀ ನಾವೆಗೆ ಒಳಭಾಗದಲ್ಲೂ ಹೊರಭಾಗದಲ್ಲೂ ರಾಳವನ್ನು ಹಚ್ಚು.
15“ನೀನು ತಯಾರಿಸುವ ನಾವೆಯು ನಾನೂರೈವತ್ತು ಅಡಿ ಉದ್ದವಾಗಿಯೂ ಎಪ್ಪತ್ತೈದು ಅಡಿ ಅಗಲವಾಗಿಯೂ ನಲವತ್ತೈದು ಅಡಿ ಎತ್ತರವಾಗಿಯೂ ಇರಬೇಕು. 16ಕಿಟಕಿಯ ಮೇಲ್ಛಾವಣಿಗೆ ಹದಿನೆಂಟು ಇಂಚು ಕೆಳಗಿರಲಿ. ನಾವೆಯ ಪಾರ್ಶ್ವದಲ್ಲಿ ಬಾಗಿಲಿರಲಿ. ನಾವೆಯಲ್ಲಿ ಮೇಲಂತಸ್ತು ಮಧ್ಯಂತಸ್ತು ಮತ್ತು ಕೆಳಂತಸ್ತು ಎಂಬ ಮೂರು ಅಂತಸ್ತುಗಳಿರಲಿ.
17“ನಾನು ನಿನಗೆ ಹೇಳುತ್ತಿರುವುದನ್ನು ಅರ್ಥಮಾಡಿಕೊ. ನಾನು ಭೂಮಿಯ ಮೇಲೆ ಮಹಾ ಜಲಪ್ರಳಯವನ್ನು ತರುವೆನು. ಆಕಾಶದ ಕೆಳಗಿರುವ ಎಲ್ಲಾ ಜೀವಿಗಳನ್ನು ನಾಶಮಾಡುವೆನು. ಭೂಮಿಯ ಮೇಲಿರುವ ಪ್ರತಿಯೊಂದೂ ಸಾಯುವುದು. 18ನಾನು ನಿನ್ನೊಂದಿಗೆ ವಿಶೇಷ ಒಡಂಬಡಿಕೆಯನ್ನು ಮಾಡಿಕೊಳ್ಳುವೆ. ಅದೇನೆಂದರೆ, ನೀನು ಮತ್ತು ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ಸೊಸೆಯಂದಿರು ನಾವೆಯೊಳಗೆ ಹೋಗುವಿರಿ. 19ಇದಲ್ಲದೆ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿ ಒಂದು ಗಂಡನ್ನೂ ಒಂದು ಹೆಣ್ಣನ್ನೂ ನಾವೆಯೊಳಗೆ ಸೇರಿಸಿಕೊ. ನಿನ್ನೊಡನೆ ಅವುಗಳನ್ನು ಜೀವದಿಂದುಳಿಸಿ ಕಾಪಾಡು. 20ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪಕ್ಷಿಗಳಲ್ಲಿ ಎರಡೆರಡೂ ಪ್ರತಿಯೊಂದು ಪ್ರಾಣಿಗಳಲ್ಲಿ ಎರಡೆರಡೂ ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಜಂತುಗಳಲ್ಲಿ ಎರಡೆರಡೂ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಿನ್ನೊಂದಿಗಿರಲಿ. 21ಭೂಮಿಯ ಮೇಲೆ ದೊರೆಯುವ ಎಲ್ಲಾ ಬಗೆಯ ಆಹಾರವನ್ನು ನಿಮಗಾಗಿಯೂ ಮತ್ತು ಪ್ರಾಣಿಗಳಿಗಾಗಿಯೂ ನಾವೆಯಲ್ಲಿ ತುಂಬಿಸಿಕೊ” ಎಂದು ಹೇಳಿದನು.
22ದೇವರು ಆಜ್ಞಾಪಿಸಿದಂತೆಯೇ ನೋಹನು ಮಾಡಿದನು.

Uwcholeuo

Rhanna

Copi

None

Eisiau i'th uchafbwyntiau gael eu cadw ar draws dy holl ddyfeisiau? Cofrestra neu mewngofnoda