ಯೊವಾನ್ನ ಮುನ್ನುಡಿ

ಮುನ್ನುಡಿ
ಯೇಸು ಸ್ವಾಮಿ ದೇವರ ‘ದಿವ್ಯವಾಣಿ’. ಈ ವಾಣಿ ಒಬ್ಬ ನರಮಾನವನಾಗಿ ನಮ್ಮ ನಡುವೆ ವಾಸಮಾಡಿದರು. ಹೀಗೆಂದು ಆರಂಭವಾಗುವ ಈ ನಾಲ್ಕನೆಯ ಶುಭಸಂದೇಶ ತನ್ನ ಉದ್ದೇಶವನ್ನು ತಾನೇ ಹೇಳಿಕೊಳ್ಳುತ್ತದೆ: “ಇದರಲ್ಲಿ ಬರೆದವುಗಳ ಉದ್ದೇಶ ಇಷ್ಟೆ - ಯೇಸು ಸ್ವಾಮಿ ದೇವರ ಪುತ್ರ ಹಾಗೂ ಲೋಕೋದ್ಧಾರಕ ಎಂದು ನೀವು ನಂಬಿ ವಿಶ್ವಾಸಿಸಬೇಕು. ಹೀಗೆ ವಿಶ್ವಾಸಿಸಿ ಅವರ ಹೆಸರಿನಲ್ಲಿ ಸಜೀವವನ್ನು ಪಡೆಯಬೇಕು” (20:31).
ಅಮರವಾದ ಈ ದಿವ್ಯವಾಣಿ ಮಾಡಿದ ನಾನಾ ಸೂಚಕಕಾರ್ಯಗಳಲ್ಲಿ ಕೆಲವೇ ಕೆಲವು ಯೊವಾನ್ನನು ಬರೆದ ಈ ಪುಸ್ತಕದಲ್ಲಿ ವರದಿಯಾಗಿವೆ. ಯೇಸು ಸ್ವಾಮಿ ದೇವರ ಏಕೈಕ ಪುತ್ರ ಹಾಗೂ ಪುರಾತನ ಕಾಲದಿಂದಲೂ ದೇವರು ವಾಗ್ದಾನ ಮಾಡಿದ ಲೋಕೋದ್ಧಾರಕ ಎಂಬ ಸತ್ಯವನ್ನು ಸಾದೃಶ್ಯಪಡಿಸುವುದೇ ಈ ಸೂಚಕಕಾರ್ಯಗಳ ಗುರಿ ಹಾಗು ಧ್ಯೇಯ.
ಅನಂತರ ಬೋಧನಾಭಾಗ ಆರಂಭವಾಗುತ್ತದೆ. ಸ್ವಾಮಿಯ ಈ ಅಮೋಘ ಬೋಧನೆಯನ್ನು ಕೇಳಿದ ಕೆಲವರು ಅವರಲ್ಲಿ ವಿಶ್ವಾಸವಿಟ್ಟು ಅವರಿಗೆ ಶರಣಾಗುತ್ತಾರೆ: ಮಿಕ್ಕವರು ಅಂಥ ವಿಶ್ವಾಸವನ್ನು ನಿರಾಕರಿಸುತ್ತಾರೆ. ಯೇಸು ಸ್ವಾಮಿಗೂ ಅವರ ಆಪ್ತಶಿಷ್ಯರಿಗೂ ಇದ್ದ ನಿಕಟ ಬಾಂಧವ್ಯವನ್ನು ಅಧ್ಯಾಯ 13ರಿಂದ 17ರವರೆಗೆ ಓದುಗನ ಮನಮುಟ್ಟುವಂತೆ ವರ್ಣಿಸಲಾಗಿದೆ. ಶತ್ರುಗಳು ಸ್ವಾಮಿಯನ್ನು ಬಂಧಿಸಿದ ರಾತ್ರಿ, ಅವರನ್ನು ಶಿಲುಬೆಗೇರಿಸಿದ ಹಿಂದಿನ ದಿನ, ಅವರು ಶಿಷ್ಯರಿಗೆ ಕೊಟ್ಟ ಬುದ್ಧಿವಾದ ಓದಲು ಮಾತ್ರವಲ್ಲ, ಧ್ಯಾನಿಸಲೂ ಯೋಗ್ಯವಾದುದು. ಅನಂತರದ ಅಧ್ಯಾಯಗಳಲ್ಲಿ ಯೇಸುವಿನ ಬಂಧನ, ನ್ಯಾಯವಿಚಾರಣೆ, ಶಿಲುಬೆಮರಣ, ಪುನರುತ್ಥಾನ, ಶಿಷ್ಯರಿಗಿತ್ತ ದಿವ್ಯದರ್ಶನಗಳು - ಇವುಗಳನ್ನು ವಿವರಿಸಲಾಗಿದೆ.
ಕೆಲವು ಮೂಲಪ್ರತಿಗಳಲ್ಲಿ, ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಸ್ತ್ರೀಯ ವೃತ್ತಾಂತವಿಲ್ಲ. ಮತ್ತೆ ಕೆಲವು ಪ್ರತಿಗಳಲ್ಲಿ ಅದು ಬೇರೆ ಬೇರೆ ಅಧ್ಯಾಯಗಳಡಿ ಕಾಣಿಸಿಕೊಳ್ಳುತ್ತದೆ. ಈ ಕಾರಣ, ಈ ವೃತ್ತಾಂತವನ್ನು (8:1-11) ಆವರಣಗಳೊಳಗೆ ಕೊಡಲಾಗಿದೆ.
ಕ್ರಿಸ್ತ ಯೇಸು ಅನುಗ್ರಹಿಸುವ ಜೀವ ಸತ್ಯವಾದುದು, ನಿತ್ಯವಾದುದು. ಅದೊಂದು ಪರಮೋನ್ನತ ಕೊಡುಗೆ. ‘ಮಾರ್ಗವೂ ಸತ್ಯವೂ ಜೀವವೂ ನಾನೇ’ ಎಂದ ಸ್ವಾಮಿ ಈ ಅಮರ ಜೀವವನ್ನು ತನ್ನ ಕರೆಗೆ ಓಗೊಡುವ ಭಕ್ತಾದಿಗಳಿಗೆ ಇಹದಲ್ಲೇ ನೀಡುತ್ತಾರೆಂದು ಲೇಖಕ ಯೊವಾನ್ನನು ಹಲವಾರು ವಿಧದಲ್ಲಿ ನಿರೂಪಿಸುತ್ತಾನೆ.
ದಿನನಿತ್ಯದ ಬಳಕೆಗಾಗುವ ನೀರು, ರೊಟ್ಟಿ, ಬೆಳಕು, ದ್ರಾಕ್ಷಾರಸ ಮುಂತಾದ ಪದಾರ್ಥಗಳ ಮೂಲಕ, ಕುರಿ, ಕುರಿಗಾಹಿ ಇಂಥ ಸಾಮಾನ್ಯ ಉದಾಹರಣೆಗಳ ಮೂಲಕ ಆಳವಾದ ಆಧ್ಯಾತ್ಮಿಕ ಸತ್ಯಗಳನ್ನು ವ್ಯಕ್ತಪಡಿಸುವುದು ಯೊವಾನ್ನನ ವೈಶಿಷ್ಟ್ಯವೆನ್ನಬಹುದು.
ಪರಿವಿಡಿ
ದಿವ್ಯವಾಣಿ 1:1-18
ಯೊವಾನ್ನನ ಶಿಷ್ಯರು ಮತ್ತು ಯೇಸುವಿನ ಪ್ರಥಮ ಶಿಷ್ಯರು 1:19-51
ಯೇಸುವಿನ ಸಾರ್ವಜನಿಕ ಸೇವೆ 2:1—12:50
ಜೆರುಸಲೇಮಿನಲ್ಲೂ ಅದರ ಪರಿಸರದಲ್ಲೂ ಅಂತಿಮ ದಿನಗಳು 13:1—19:42
ಪುನರುತ್ಥಾನ ಮತ್ತು ದಿವ್ಯದರ್ಶನಗಳು 20:1-31
ಗಲಿಲೇಯದಲ್ಲಿ ಅಂತಿಮ ದರ್ಶನ 21:1-25

Markering

Del

Kopiér

None

Vil du have dine markeringer gemt på tværs af alle dine enheder? Tilmeld dig eller log ind