ಆದಿಕಾಂಡ 1

1
ಆದಿಕಾಲದ ಚರಿತ್ರೆ
(1.1—11.26)
ದೇವರು ಲೋಕವನ್ನು ಸೃಷ್ಟಿಸಿದ್ದು
1ಆದಿಯಲ್ಲಿ ದೇವರು ಆಕಾಶವನ್ನೂ ಭೂವಿುಯನ್ನೂ ಉಂಟುಮಾಡಿದನು. 2ಭೂವಿುಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು; ಆದಿಸಾಗರದ ಮೇಲೆ ಕತ್ತಲಿತ್ತು; ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.
3ಆಗ ದೇವರು - ಬೆಳಕಾಗಲಿ ಅನ್ನಲು ಬೆಳಕಾಯಿತು. 4ದೇವರು ಆ ಬೆಳಕನ್ನು ಒಳ್ಳೇದೆಂದು ನೋಡಿದನು. ದೇವರು ಬೆಳಕನ್ನೂ ಕತ್ತಲೆಯನ್ನೂ ಬೇರೆ ಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟನು. 5ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು.
6ಬಳಿಕ ದೇವರು - ಜಲಸಮೂಹಗಳ ನಡುವೆ ವಿಸ್ತಾರವಾದ ಗುಮಟವು ಉಂಟಾಗಲಿ; ಅದು ಕೆಳಗಣ ನೀರುಗಳನ್ನೂ ಮೇಲಣ ನೀರುಗಳನ್ನೂ ಬೇರೆ ಬೇರೆ ಮಾಡಲಿ ಅಂದನು. 7ದೇವರು ವಿಸ್ತಾರವಾದ ಗುಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು; ಹಾಗೆಯೇ ಆಯಿತು. 8ದೇವರು ಆ ಗುಮಟಕ್ಕೆ ಆಕಾಶವೆಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಎರಡನೆಯ ದಿನವಾಯಿತು.
9ಅನಂತರ ದೇವರು - ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣನೆಲವು ಕಾಣಿಸಲಿ ಅಂದನು; ಹಾಗೆಯೇ ಆಯಿತು. 10ದೇವರು ಒಣನೆಲಕ್ಕೆ ಭೂವಿುಯೆಂದೂ ಜಲಸಮೂಹಕ್ಕೆ ಸಮುದ್ರವೆಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೇದೆಂದು ನೋಡಿದನು. 11ತರುವಾಯ ದೇವರು - ಭೂವಿುಯು ಹುಲ್ಲನ್ನೂ ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಸಲಿ; ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನೂ ಅವುಗಳ ಜಾತಿಗನುಸಾರವಾಗಿ ಹುಟ್ಟಿಸಲಿ ಎಂದು ಹೇಳಿದನು; ಹಾಗೆಯೇ ಆಯಿತು. 12ಭೂವಿುಯಲ್ಲಿ ಹುಲ್ಲು ಬೆಳೆಯಿತು; ತಮ್ಮತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು; ತಮ್ಮತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಕಾಣಿಸಿದವು. ದೇವರು ಅದನ್ನು ಒಳ್ಳೇದೆಂದು ನೋಡಿದನು. 13ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೂರನೆಯ ದಿನವಾಯಿತು.
14ಬಳಿಕ ದೇವರು - ಆಕಾಶಮಂಡಲದಲ್ಲಿ ಬೆಳಕುಗಳು ಉಂಟಾಗಲಿ; ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ; ಇದಲ್ಲದೆ ಅವು ಗುರುತುಗಳಾಗಿದ್ದು ಸಮಯಗಳನ್ನೂ ದಿನಸಂವತ್ಸರಗಳನ್ನೂ ತೋರಿಸಲಿ; 15ಮತ್ತು ಭೂವಿುಯ ಮೇಲೆ ಬೆಳಕುಕೊಡುವದಕ್ಕೆ ಅವು ಆಕಾಶಮಂಡಲದಲ್ಲಿ ದೀಪಗಳಂತಿರಲಿ ಅಂದನು; ಹಾಗೆಯೇ ಆಯಿತು. 16ದೇವರು ಹಗಲನ್ನಾಳುವದಕ್ಕೆ ದೊಡ್ಡ ಬೆಳಕನ್ನೂ ಇರುಳನ್ನಾಳುವದಕ್ಕೆ ಚಿಕ್ಕ ಬೆಳಕನ್ನೂ, ಈ ಎರಡು ದೊಡ್ಡ ಬೆಳಕುಗಳನ್ನು ಉಂಟುಮಾಡಿದನು. ಆತನು ನಕ್ಷತ್ರಗಳನ್ನು ಸಹ ಉಂಟುಮಾಡಿದನು. 17ದೇವರು ಆ ಬೆಳಕುಗಳನ್ನು ಆಕಾಶದಲ್ಲಿಟ್ಟು ಭೂವಿುಯ ಮೇಲೆ ಬೆಳಕು ಕೊಡುವದಕ್ಕೂ 18ಹಗಲಿರುಳುಗಳನ್ನು ಆಳುವದಕ್ಕೂ ಬೆಳಕನ್ನು ಕತ್ತಲನ್ನು ಬೇರೆ ಬೇರೆ ಮಾಡುವದಕ್ಕೂ ಅವುಗಳನ್ನು ನೇವಿುಸಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು. 19ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು.
20ತರುವಾಯ ದೇವರು - ಗುಂಪುಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂವಿುಯ ಮೇಲೆ ಅಂತರಿಕ್ಷದೊಳಗೆ ಹಾರಾಡಲಿ ಎಂದು ಹೇಳಿದನು. 21ಹೀಗೆ ದೇವರು ಮಹಾಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು. 22ಇದಲ್ಲದೆ ದೇವರು ಅವುಗಳಿಗೆ - ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ; ಪಕ್ಷಿಗಳು ಭೂವಿುಯ ಮೇಲೆ ಹೆಚ್ಚಲಿ ಎಂದು ಹೇಳಿ ಆಶೀರ್ವದಿಸಿದನು. 23ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಐದನೆಯ ದಿನವಾಯಿತು.
24ಮತ್ತು ದೇವರು - ಭೂವಿುಯಿಂದ ಜೀವಜಂತುಗಳು ಉಂಟಾಗಲಿ; ಪಶುಕ್ರಿವಿುಗಳೂ ಕಾಡುಮೃಗಗಳೂ ತಮ್ಮ ತಮ್ಮ ಜಾತಿಗನುಸಾರವಾಗಿ ಹುಟ್ಟಲಿ ಅಂದನು; ಹಾಗೆಯೇ ಆಯಿತು. 25ದೇವರು ಕಾಡುಮೃಗಗಳನ್ನೂ ಪಶುಗಳನ್ನೂ ನೆಲದ ಮೇಲೆ ಹರಿದಾಡುವ ಕ್ರಿವಿುಕೀಟಗಳನ್ನೂ ಅವುಗಳ ಜಾತಿಗನುಸಾರ ಉಂಟುಮಾಡಿದನು. ಆತನು ಅದನ್ನು ಒಳ್ಳೇದೆಂದು ನೋಡಿದನು.
26ಆಮೇಲೆ ದೇವರು - ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ; ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿವಿುಕೀಟಗಳ ಮೇಲೆಯೂ ಎಲ್ಲಾ ಭೂವಿುಯ ಮೇಲೆಯೂ ದೊರೆತನಮಾಡಲಿ ಅಂದನು.
27ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು;
ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು;
ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.
28ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ - ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂವಿುಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂವಿುಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ ಅಂದನು.
29ಮತ್ತು ದೇವರು - ಇಗೋ, ಸಮಸ್ತಭೂವಿುಯ ಮೇಲೆ ಬೀಜವುಳ್ಳ ಎಲ್ಲಾ ಪೈರುಗಳನ್ನೂ ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ. 30ಇದಲ್ಲದೆ ಭೂವಿುಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಹರಿದಾಡುವ ಕ್ರಿವಿುಕೀಟಗಳು ಎಂಬ ಜೀವಿಗಳಿಗೆ ಎಲ್ಲಾ ಹುಲ್ಲುಸೊಪ್ಪುಗಳನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಎಂದು ಹೇಳಿದನು; ಅದು ಹಾಗೆಯೇ ಆಯಿತು. 31ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು. ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು.

Markierung

Teilen

Kopieren

None

Möchtest du deine gespeicherten Markierungen auf allen deinen Geräten sehen? Erstelle ein kostenloses Konto oder melde dich an.