ಯೋಹಾನ 4
4
ಯೇಸು ಸಮಾರ್ಯದ ಹೆಂಗಸಿನ ಸಂಗಡ ಸಂಭಾಷಣೆ ಮಾಡಿದ್ದು
1ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನಮಾಡಿಸುತ್ತಾನೆಂಬ ಸುದ್ದಿಯನ್ನು ಫರಿಸಾಯರು ಕೇಳಿದರೆಂದು ಕರ್ತನಿಗೆ ತಿಳಿದಾಗ 2-3ಆತನು ಯೂದಾಯವನ್ನು ಬಿಟ್ಟು ಗಲಿಲಾಯಕ್ಕೆ ತಿರಿಗಿ ಹೋದನು. (ಆದರೂ ಸ್ನಾನ ಮಾಡಿಸುತ್ತಿದ್ದವನು ಯೇಸುವಲ್ಲ; ಆತನ ಶಿಷ್ಯರೇ ಮಾಡಿಸುತ್ತಿದ್ದರು.) 4ಆತನು ಸಮಾರ್ಯಸೀಮೆಯನ್ನು ಹಾದು ಹೋಗಬೇಕಾಯಿತು. 5ಹೋಗುವಾಗ ಸಮಾರ್ಯಸೀಮೆಗೆ ಸೇರಿದ ಸುಖರೆಂಬ ಊರಿಗೆ ಬಂದನು. ಅದು ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂವಿುಯ ಹತ್ತಿರದಲ್ಲಿತ್ತು; 6ಅಲ್ಲಿ ಯಾಕೋಬನು ತೆಗೆಸಿದ ಬಾವಿಯಿತ್ತು. ಯೇಸು ದಾರಿನಡೆದು ದಣಿದು ಆ ಬಾವಿಯ ಬಳಿಯಲ್ಲಿ ಹಾಗೆ ಕೂತುಕೊಂಡನು; ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು.#4.6 ಮೂಲ: ಆರು ತಾಸಾಗಿತ್ತು. 7-8ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವದಕ್ಕಾಗಿ ಊರೊಳಗೆ ಹೋಗಿರಲು ಸಮಾರ್ಯದವಳಾದ ಒಬ್ಬ ಹೆಂಗಸು ನೀರು ಸೇದುವದಕ್ಕೆ ಬಂದಳು. ಯೇಸು ಆಕೆಯನ್ನು - ಅಮ್ಮಾ, ನೀರು ಕುಡಿಯುವದಕ್ಕೆ ಕೊಡು ಎಂದು ಕೇಳಿದನು. 9ಯೆಹೂದ್ಯರಿಗೂ ಸಮಾರ್ಯರಿಗೂ ಬಳಕೆಯಿಲ್ಲದಿರಲಾಗಿ ಆ ಸಮಾರ್ಯದವಳು ಆತನಿಗೆ - ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ನೀರು ಬೇಡುವದು ಹೇಗೆ ಎಂದು ಹೇಳಿದಳು. 10ಅದಕ್ಕೆ ಯೇಸು - ದೇವರು ಕೊಡುವ ವರವೇನೆಂಬದೂ ಕುಡಿಯುವದಕ್ಕೆ ನೀರುಕೊಡು ಎಂದು ನಿನಗೆ ಹೇಳಿದವನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಅವನನ್ನು ಬೇಡಿಕೊಳ್ಳುತ್ತಿದ್ದಿ, ಅವನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಅಂದನು. 11ಆ ಹೆಂಗಸು ಆತನಿಗೆ - ಅಯ್ಯಾ, ಸೇದುವದಕ್ಕೆ ನಿನ್ನಲ್ಲಿ ಏನೂ ಇಲ್ಲ, ಬಾವಿ ಆಳವಾಗಿದೆ; ಹೀಗಿರುವಾಗ ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂತು? 12ನಮ್ಮ ಹಿರಿಯನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು; ಅವನೂ ಅವನ ಮಕ್ಕಳೂ ಅವನು ಸಾಕಿದೆಲ್ಲವೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದರು ಅನ್ನಲು 13ಯೇಸು ಆಕೆಗೆ - ಈ ನೀರನ್ನು ಕುಡಿಯುವವರೆಲ್ಲರಿಗೆ ತಿರಿಗಿ ನೀರಡಿಕೆಯಾಗುವದು; 14ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವದು ಎಂದು ಹೇಳಿದನು. 15ಆ ಹೆಂಗಸು - ಅಯ್ಯಾ, ನನಗೆ ಆ ನೀರನ್ನು ಕೊಡು; ಕೊಟ್ಟರೆ ಇನ್ನು ಮೇಲೆ ನನಗೆ ನೀರಡಿಕೆಯಾಗಲಿಕ್ಕಿಲ್ಲ; ನೀರು ಸೇದುವದಕ್ಕೆ ಇಷ್ಟು ದೂರ ಬರಬೇಕಾದದ್ದೂ ಇರುವದಿಲ್ಲ ಅನ್ನಲು 16ಯೇಸು ಅವಳಿಗೆ - ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರಕೊಂಡು ಬಾ ಎಂದು ಹೇಳಿದನು. 17ಅದಕ್ಕೆ ಆ ಹೆಂಗಸು - ನನಗೆ ಗಂಡನಿಲ್ಲ ಅಂದಳು. ಯೇಸು ಆಕೆಗೆ - ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯಾದ ಮಾತು; 18ನಿನಗೆ ಐದುಮಂದಿ ಗಂಡಂದಿರಿದ್ದರು, ಈಗ ಇರುವವನು ನಿನಗೆ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ ಅಂದನು. 19ಆ ಹೆಂಗಸು ಆತನಿಗೆ - ಅಯ್ಯಾ, ನೀನು ಪ್ರವಾದಿಯೆಂದು ನನಗೆ ಕಾಣುತ್ತದೆ. 20ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆ ಮಾಡುತ್ತಿದ್ದರು; ಆದರೆ ನೀವು ಆರಾಧನೆಮಾಡತಕ್ಕ ಸ್ಥಳವು ಯೆರೂಸಲೇವಿುನಲ್ಲಿ ಅದೆ ಅನ್ನುತ್ತೀರಿ ಎಂದು ಹೇಳಿದಾಗ 21ಯೇಸು ಆಕೆಗೆ - ಅಮ್ಮಾ, ನಾನು ಹೇಳುವ ಮಾತನ್ನು ನಂಬು; ಒಂದು ಕಾಲ ಬರುತ್ತದೆ, ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ ಈ ಬೆಟ್ಟಕ್ಕೂ ಹೋಗುವದಿಲ್ಲ, ಯೆರೂಸಲೇವಿುಗೂ ಹೋಗುವದಿಲ್ಲ. 22ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ. ಆದದರಿಂದ ನಾವು ಅರಿತಿರುವದನ್ನೇ ಆರಾಧಿಸುವವರಾಗಿದ್ದೇವೆ; ನೀವು ಅರಿಯದೆ ಇರುವಂಥದನ್ನು ಆರಾಧಿಸುವವರು. 23ಅದಿರಲಿ; ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. 24ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು ಅಂದನು. 25ಆ ಹೆಂಗಸು ಆತನಿಗೆ - ಮೆಸ್ಸೀಯನು ಅಂದರೆ ಕ್ರಿಸ್ತನು ಬರುತ್ತಾನೆಂದು ಬಲ್ಲೆನು; ಆತನು ಬಂದ ಮೇಲೆ ನಮಗೆ ಎಲ್ಲಾ ತಿಳಿಸುವನು ಎಂದು ಹೇಳಲು 26ಯೇಸು ಆಕೆಗೆ - ನಿನ್ನ ಸಂಗಡ ಮಾತಾಡುತ್ತಿರುವ ನಾನೇ ಆ ಮೆಸ್ಸೀಯನು ಎಂದು ಹೇಳಿದನು.
27ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಒಬ್ಬ ಹೆಂಗಸಿನ ಸಂಗಡ ಮಾತಾಡುತ್ತಿರುವದನ್ನು ಕಂಡು ಆಶ್ಚರ್ಯಪಟ್ಟರು. ಆದರೂ - ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತಾಡುತ್ತೀ? ಎಂದು ಒಬ್ಬರೂ ಕೇಳಲಿಲ್ಲ. 28ಆಗ ಆ ಹೆಂಗಸು ತನ್ನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ - 29ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ಹೇಳಿದನು; ಬಂದು ಅವನನ್ನು ನೋಡಿರಿ; ಬರತಕ್ಕ ಕ್ರಿಸ್ತನು ಅವನೇ ಏನೋ? ಎಂದು ಹೇಳಲು 30ಆತನ ಬಳಿಗೆ ಬರುವದಕ್ಕೆ ಊರೊಳಗಿಂದ ಹೊರಟರು.
31ಅಷ್ಟರೊಳಗೆ ಶಿಷ್ಯರು - ಗುರುವೇ, ಊಟಮಾಡು ಎಂದು ಆತನನ್ನು ಬೇಡಿಕೊಂಡರು. 32ಆದರೆ ಆತನು ಅವರಿಗೆ - ನಿಮಗೆ ತಿಳಿಯದಂಥ ಆಹಾರವು ನನಗುಂಟು ಎಂದು ಹೇಳಲು 33ಶಿಷ್ಯರು - ಆತನಿಗೆ ಯಾರಾದರೂ ಊಟಕ್ಕೆ ತಂದುಕೊಟ್ಟರೋ ಏನೋ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಂಡರು. 34ಯೇಸು ಅವರಿಗೆ - ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು. 35ಇನ್ನು ನಾಲ್ಕು ತಿಂಗಳಿಗೆ ಸುಗ್ಗಿಬರುವದೆಂದು ನೀವು ಹೇಳುವದುಂಟಷ್ಟೆ. ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಬೆಳ್ಳಗಾಗಿ ಕೊಯ್ಲಿಗೆ ಬಂದವೆಂದು ನಿಮಗೆ ಹೇಳುತ್ತೇನೆ. 36ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ; ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ; ಹೀಗೆ ಬಿತ್ತುವವನಿಗೂ ಕೊಯ್ಯುವವನಿಗೂ ಕೂಡ ಸಂತೋಷವಾಗುವದು. 37ಬಿತ್ತುವವನೊಬ್ಬ, ಕೊಯ್ಯುವವನೊಬ್ಬ ಎಂಬ ಗಾದೆಯಂತೆ ಆಯಿತು. 38ನೀವು ಕಷ್ಟಮಾಡದಂಥ ಬೆಳೆಯನ್ನು ಕೊಯ್ಯುವದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು; ಬೇರೊಬ್ಬರು ಕಷ್ಟಮಾಡಿದ್ದಾರೆ; ನೀವು ನಡುವೆ ಅವರ ಕಷ್ಟದಲ್ಲಿ ಸೇರಿದ್ದೀರಿ ಎಂದು ಹೇಳಿದನು.
39ನಾನು ಮಾಡಿದ್ದನ್ನೆಲ್ಲಾ ಆತನು ನನಗೆ ಹೇಳಿದನೆಂಬದಾಗಿ ಸಾಕ್ಷಿಕೊಡುತ್ತಿರುವ ಆ ಹೆಂಗಸಿನ ಮಾತಿನ ಮೇಲೆ ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು. 40ಆದ್ದರಿಂದ ಆ ಸಮಾರ್ಯರು ಆತನ ಬಳಿಗೆ ಬಂದು - ನೀನು ನಮ್ಮಲ್ಲಿ ಇರಬೇಕೆಂದು ಆತನನ್ನು ಬೇಡಿಕೊಳ್ಳಲು ಆತನು ಎರಡು ದಿವಸ ಅವರಲ್ಲೇ ಇದ್ದನು. 41ಹೆಚ್ಚು ಜನರು ಆತನ ವಾಕ್ಯವನ್ನು ಕೇಳಿ ನಂಬಿ 42ಆ ಹೆಂಗಸಿಗೆ - ನಾವು ಆತನನ್ನು ನಂಬಿರುವದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ; ನಾವು ಕಿವಿಯಾರೆ ಕೇಳಿ ಈತನು ಲೋಕರಕ್ಷಕನೇ ಹೌದೆಂದು ತಿಳುಕೊಂಡಿದ್ದೇವೆ ಎಂದು ಹೇಳಿದರು.
ಯೇಸು ಒಬ್ಬ ಪ್ರಧಾನನ ಮಗನನ್ನು ಮಾತಿನಿಂದಲೇ ಸ್ವಸ್ಥಮಾಡಿದ್ದು
43ಎರಡು ದಿವಸಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು. 44ಯಾಕಂದರೆ ಪ್ರವಾದಿಗೆ ಸ್ವದೇಶದಲ್ಲಿ ಮರ್ಯಾದೆಯಿಲ್ಲವೆಂದು ಯೇಸು ತಾನೇ ಹೇಳಿದನು. 45ಗಲಿಲಾಯದವರು ತಾವೂ ಯೆರೂಸಲೇವಿುನ ಜಾತ್ರೆಗೆ ಹೋಗಿ ಆತನು ಅಲ್ಲಿ ಮಾಡಿದ್ದನ್ನೆಲ್ಲಾ ನೋಡಿದ್ದರಿಂದ ಆತನು ಗಲಿಲಾಯಕ್ಕೆ ಬಂದಾಗ ಆತನನ್ನು ಆದರದಿಂದ ಅಂಗೀಕರಿಸಿದರು.
46ಹೀಗಿರಲಾಗಿ ಯೇಸು, ತಾನು ನೀರನ್ನು ದ್ರಾಕ್ಷಾರಸವಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಬಂದನು. ಅಲ್ಲಿದ್ದಾಗ ಅರಮನೆಯ ಒಬ್ಬ ಪ್ರಧಾನನ ಮಗನು ಕಪೆರ್ನೌವಿುನಲ್ಲಿ ಅಸ್ವಸ್ಥನಾಗಿದ್ದನು. 47ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಪ್ರಧಾನನು ಕೇಳಿದಾಗ ತನ್ನ ಮಗನು ಸಾಯುವ ಹಾಗಿದ್ದದರಿಂದ ಯೇಸುವಿನ ಬಳಿಗೆ ಹೋಗಿ - ನೀನು ಇಳಿದು ಬಂದು ನನ್ನ ಮಗನನ್ನು ಸ್ವಸ್ಥಮಾಡಬೇಕೆಂದು ಬೇಡಿಕೊಂಡನು; 48ಯೇಸು ಅವನಿಗೆ - ನೀವು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದಿದ್ದರೆ ನಂಬುವದೇ ಇಲ್ಲವೆಂದು ಹೇಳಿದನು. 49ಆ ಪ್ರಧಾನನು - ಸ್ವಾಮೀ, ನನ್ನ ಮಗನು ಸಾಯುವದಕ್ಕೆ ಮುಂಚೆ ನೀನು ಬರಬೇಕು ಅನ್ನಲು 50ಯೇಸು ಅವನಿಗೆ - ನಿನ್ನ ಮಗನು ಬದುಕುತ್ತಾನೆ ಹೋಗು ಎಂದು ಉತ್ತರ ಕೊಟ್ಟನು. ಆ ಗೃಹಸ್ಥನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟುಹೋದನು. 51ಅವನು ಇನ್ನೂ ಘಟ್ಟಾಯಿಳಿದು ಹೋಗುತ್ತಿರುವಲ್ಲಿ ಅವನ ಆಳುಗಳು ಅವನೆದುರಿಗೆ ಬಂದು - ನಿನ್ನ ಮಗನು ಬದುಕಿಕೊಂಡನು ಅಂದರು. 52ಎಷ್ಟು ಘಂಟೆಗೆ ಅವನಿಗೆ ರೋಗವು ಇಳಿತರವಾಯಿತೆಂದು ಅವನು ಅವರನ್ನು ಕೇಳಿದಾಗ ಅವರು - ನಿನ್ನೆ ಮಧ್ಯಾಹ್ನದ#4.52 ಮೂಲ: ಏಳು ತಾಸಿಗೆ. ಒಂದು ಗಂಟೆಗೆ ಜ್ವರವು ಅವನನ್ನು ಬಿಟ್ಟಿತು ಅಂದರು. 53ಆಗ ನಿನ್ನ ಮಗನು ಬದುಕುತ್ತಾನೆಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಅದಾಯಿತೆಂದು ತಂದೆಯು ತಿಳುಕೊಂಡದರಿಂದ ಅವನೂ ಅವನ ಮನೆಯವರೆಲ್ಲರೂ ಆತನನ್ನು ನಂಬಿದರು. 54ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಈ ಎರಡನೆಯ ಸೂಚಕಕಾರ್ಯವನ್ನು ಮಾಡಿದನು.
Zur Zeit ausgewählt:
ಯೋಹಾನ 4: KANJV-BSI
Markierung
Teilen
Kopieren
Möchtest du deine gespeicherten Markierungen auf allen deinen Geräten sehen? Erstelle ein kostenloses Konto oder melde dich an.
Kannada J.V. Bible © The Bible Society of India, 2016.
Used by permission. All rights reserved worldwide.