Logo de YouVersion
Ícono Búsqueda

ಯೊವಾನ್ನ 14

14
ನಾನೇ ಮಾರ್ಗ
1ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ. 2ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ. ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ. 3ಅಣಿಗೊಳಿಸಿದ ಬಳಿಕ ಹಿಂದಿರುಗಿ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. 4ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ,” ಎಂದು ಹೇಳಿದರು. 5ಆಗ ತೋಮನು, “ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಿದನು. 6ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. 7ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ,” ಎಂದು ನುಡಿದರು. 8ಆಗ ಫಿಲಿಪ್ಪನು, “ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು,” ಎಂದನು. 9ಅದಕ್ಕೆ ಉತ್ತರವಾಗಿ ಯೇಸು, “ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, ‘ನಮಗೆ ಪಿತನನ್ನು ತೋರಿಸಿ’ ಎಂದು ಹೇಗೆ ಕೇಳುತ್ತೀ? 10ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ. 11‘ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ,’ ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ; ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ. 12ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ. 13ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವುದನ್ನೆಲ್ಲಾ ಮಾಡುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು. 14ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು.
ಪೋಷಕರಾದ ಪವಿತ್ರಾತ್ಮ
15ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ. 16ನಾನೂ ಪಿತನನ್ನು ಕೇಳಿಕೊಳ್ಳುವೆನು; ಅವರು ನಿಮಗೆ ಬೇರೊಬ್ಬ ಪೋಷಕರನ್ನು#14:16 ಅಥವಾ : ‘ವಕೀಲ’, ಶಾಂತಿದಾತ, ಆಶ್ರಯದಾತ. ಕೊಡುವರು. ಇವರು ನಿಮ್ಮೊಡನೆ ಯಾವಾಗಲೂ ಇರುವರು. 17ಸತ್ಯಸ್ವರೂಪಿಯಾದ ಪವಿತ್ರಾತ್ಮನೇ ಈ ಪೋಷಕ. ಲೋಕವು ಇವರನ್ನು ಬರಮಾಡಿಕೊಳ್ಳದು. ಏಕೆಂದರೆ ಲೋಕ ಇವರನ್ನು ಕಾಣುವುದೂ ಇಲ್ಲ, ಅರಿತುಕೊಳ್ಳುವುದೂ ಇಲ್ಲ. ಆದರೆ ನೀವು ಇವರನ್ನು ಅರಿಯುವಿರಿ. ಕಾರಣ, ಇವರು ನಿಮ್ಮೊಂದಿಗೂ ನಿಮ್ಮಲ್ಲಿಯೂ ನೆಲಸಿರುವರು. 18ನಾನು ನಿಮ್ಮನ್ನು ಅನಾಥರನ್ನಾಗಿ ಬಿಟ್ಟುಹೋಗುವುದಿಲ್ಲ. ನಿಮ್ಮ ಬಳಿಗೆ ಪುನಃ ಬರುತ್ತೇನೆ. 19ಇನ್ನು ತುಸುಕಾಲವಾದ ನಂತರ ಲೋಕವು ನನ್ನನ್ನು ಕಾಣದು. ಆದರೆ ನೀವು ನನ್ನನ್ನು ಕಾಣುವಿರಿ. ನಾನು ಜೀವಿಸುವವನಾಗಿರುವುದರಿಂದ ನೀವೂ ಜೀವಿಸುವಿರಿ. 20ನಾನು ನನ್ನ ಪಿತನಲ್ಲಿ ಇರುವೆನು; ನೀವು ನನ್ನಲ್ಲಿ ಇರುವಿರಿ ಮತ್ತು ನಾನು ನಿಮ್ಮಲ್ಲಿ ಇರುವೆನು. ಇದನ್ನು ಆ ದಿನದಂದು ನೀವು ಅರಿತುಕೊಳ್ಳುವಿರಿ. 21ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿಕೊಡುವೆನು.”
22ಆಗ ಯೂದನು, (ಈತ ಇಸ್ಕರಿಯೋತಿನ ಯೂದನಲ್ಲ) “ಪ್ರಭೂ, ನೀವು ಈ ಲೋಕಕ್ಕೆ ನಿಮ್ಮನ್ನು ಸಾಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲಾ, ಏಕೆ?” ಎಂದು ಕೇಳಿದನು. 23ಆಗ ಯೇಸು, “ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲೆಸುವೆವು. 24ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ಪಿತನದೇ. 25ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 26ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು. 27ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟುಹೋಗುತ್ತೇನೆ; ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ. ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ಭಯಪಡಬೇಡಿ. 28ನಾನು ಹೊರಟುಹೋಗುತ್ತೇನೆಂದೂ ಮತ್ತೆ ನಿಮ್ಮ ಬಳಿಗೆ ಬರುತ್ತೇನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು. 29ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ. 30ಇಹದ ಲೋಕಾಧಿಪತಿ ಬರುವ ಸಮಯವಾಯಿತು. ಇನ್ನು ಬಹಳ ಹೊತ್ತು ನಾನು ನಿಮ್ಮೊಡನೆ ಮಾತನಾಡಲು ಕಾಲಾವಕಾಶವಿಲ್ಲ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ. 31ಆದರೆ ನಾನು ಪಿತನನ್ನು ಪ್ರೀತಿಸುತ್ತೇನೆಂಬುದನ್ನೂ ಅವರು ವಿಧಿಸಿದಂತೆಯೇ ಮಾಡುತ್ತೇನೆ ಎಂಬುದನ್ನೂ ಲೋಕವು ತಿಳಿಯಬೇಕು. ಏಳಿ, ಇಲ್ಲಿಂದ ಹೋಗೋಣ,” ಎಂದರು.

Actualmente seleccionado:

ಯೊವಾನ್ನ 14: KANCLBSI

Destacar

Compartir

Copiar

None

¿Quieres guardar tus resaltados en todos tus dispositivos? Regístrate o Inicia sesión