ಯೋಹಾನ 1
1
ಅನಾದಿಯಿಂದಿದ್ದ ದೇವರ ವಾಕ್ಯವು ನರಾವತಾರ ಎತ್ತಿದ್ದು
1ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು. 2ಆ ವಾಕ್ಯವೆಂಬವನು ಆದಿಯಲ್ಲಿ ದೇವರ ಬಳಿಯಲ್ಲಿದ್ದನು. 3ಆತನ ಮೂಲಕವಾಗಿ ಸಮಸ್ತವು ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ. 4ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು. 5ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ; ಕತ್ತಲು ಅದನ್ನು ಮುಸುಕಲಿಲ್ಲ.#1.5 ಅಥವಾ, ಗ್ರಹಿಸಲಿಲ್ಲ.
6ದೇವರು ಕಳುಹಿಸಿದ ಒಬ್ಬ ಮನುಷ್ಯನು ಬಂದನು; ಅವನ ಹೆಸರು ಯೋಹಾನನು. ಈ ಯೋಹಾನನು ಸಾಕ್ಷಿಗಾಗಿ ಬಂದನು. 7ತನ್ನ ಮೂಲಕವಾಗಿ ಎಲ್ಲರು ನಂಬುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವದಕ್ಕೆ ಬಂದನು. 8ಅವನೇ ಆ ಬೆಳಕಲ್ಲ, ಆ ಬೆಳಕಿನ ವಿಷಯದಲ್ಲಿ ಸಾಕ್ಷಿಕೊಡುವದಕ್ಕಾಗಿ ಬಂದವನು.
9ನಿಜವಾದ ಬೆಳಕು ಲೋಕಕ್ಕೆ ಬರುವದಾಗಿತ್ತು; ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕನ್ನು ಕೊಡುವಂಥದು. 10ಆತನು ಲೋಕದಲ್ಲಿ ಇದ್ದನು; ಮತ್ತು ಲೋಕವು ಆತನ ಮೂಲಕವಾಗಿ ಉಂಟಾಯಿತು; ಆದರೂ ಲೋಕವು ಆತನನ್ನು ಅರಿಯಲಿಲ್ಲ. 11ಆತನು ತನ್ನ ಸ್ವಾಸ್ಥ್ಯಕ್ಕೆ ಬಂದನು; ಆದರೆ ಸ್ವಂತಜನರು ಆತನನ್ನು ಅಂಗೀಕರಿಸಲಿಲ್ಲ. 12ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು. 13ಇವರು ರಕ್ತಸಂಬಂಧದಿಂದಾಗಲಿ ಕಾಮದಿಂದಾಗಲಿ ಪುರುಷಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.
14ಆ ವಾಕ್ಯವೆಂಬವನು ನರಾವತಾರ ಎತ್ತಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.
15ಯೋಹಾನನು ಆತನ ವಿಷಯವಾಗಿ ಸಾಕ್ಷಿಕೊಡುತ್ತಾನೆ; ಹೇಗಂದರೆ - ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದ್ದದರಿಂದ ನನಗೆ ಮುಂದಿನವನಾದನು ಎಂಬದಾಗಿ ನಾನು ಹೇಳಿದವನು ಈತನೇ ಎಂದು ಕೂಗಿ ಹೇಳಿದ್ದಾನೆ.
17ಧರ್ಮಶಾಸ್ತ್ರವು ಮೋಶೆಯ ಮುಖಾಂತರ ಕೊಡಲ್ಪಟ್ಟಿತು; ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮುಖಾಂತರ ಬಂದವು. 16ನಾವೆಲ್ಲರು ಆತನ ಪರಿಪೂರ್ಣತೆಯೊಳಗಿಂದ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು. 18ದೇವರನ್ನು ಯಾರೂ ಎಂದೂ ಕಂಡಿಲ್ಲ; ಯಾವನು ಏಕಪುತ್ರನೂ ಸ್ವತಃ ದೇವರೂ ಆಗಿದ್ದು ತಂದೆಯ ಎದೆಯಲ್ಲಿದ್ದಾನೋ ಆತನೇ ತಿಳಿಯಪಡಿಸಿದನು.
ಸ್ನಾನಿಕನಾದ ಯೋಹಾನನು ಯೇಸುವಿನ ವಿಷಯವಾಗಿ ಸಾಕ್ಷಿ ಹೇಳಿದ್ದು
19ಯೋಹಾನನು ಕೊಟ್ಟ ಸಾಕ್ಷಿ ಏನಂದರೆ - ಯೆಹೂದ್ಯರು ಯೆರೂಸಲೇವಿುನಿಂದ ಯಾಜಕರನ್ನೂ ಲೇವಿಯರನ್ನೂ ಅವನ ಬಳಿಗೆ ಕಳುಹಿಸಿ - ನೀನು ಯಾರೆಂದು ಕೇಳಿದ್ದಕ್ಕೆ 20ಅವನು ಮರೆಮಾಜದೆ - ನಾನು ಕ್ರಿಸ್ತನಲ್ಲವೆಂದು ಎಲ್ಲರ ಮುಂದೆ ಹೇಳಿದನು. 21ಹಾಗಾದರೆ ನೀನು ಯಾರು? ಎಲೀಯನೋ? ಎಂದು ಅವರು ಕೇಳಲು ಅಲ್ಲವೆಂದನು. ನೀನು ಬರಬೇಕಾದ ಆ ಪ್ರವಾದಿಯೋ? ಅಂದದ್ದಕ್ಕೂ ಅಲ್ಲವೆಂದನು. 22ಆಗ ಅವರು - ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಹೇಳಬೇಕಲ್ಲಾ; ನಿನ್ನ ವಿಷಯವಾಗಿ ಏನು ಹೇಳುತ್ತೀ? ಎಂದು ಕೇಳಲು ಅವನು -
23ಕರ್ತನ ದಾರಿಯನ್ನು ನೆಟ್ಟಗೆ ಮಾಡಿರಿ ಎಂದು
ಅಡವಿಯಲ್ಲಿ ಕೂಗುವವನ ಶಬ್ದವದೆ
ಎಂಬದಾಗಿ ಯೆಶಾಯಪ್ರವಾದಿಯು ಹೇಳಿದನಷ್ಟೆ; ಆ ಶಬ್ದವೇ ನಾನು ಎಂದು ಉತ್ತರಕೊಟ್ಟನು. 24ಬಂದಿದ್ದವರು ಫರಿಸಾಯರ ಕಡೆಯವರಾಗಿದ್ದು - 25ನೀನು ಕ್ರಿಸ್ತನೂ ಎಲೀಯನೂ ಆ ಪ್ರವಾದಿಯೂ ಅಲ್ಲವಾದರೆ ಸ್ನಾನಮಾಡಿಸುವದೇನು? ಎಂದು ಅವನನ್ನು ಕೇಳಿದರು. 26ಅದಕ್ಕೆ ಯೋಹಾನನು - ನಾನು ನೀರಿನಿಂದ ಸ್ನಾನಮಾಡಿಸುವವನು; ಆದರೆ ನೀವು ಅರಿಯದೆ ಇರುವ ಒಬ್ಬಾತನು ನಿಮ್ಮ ಮಧ್ಯದಲ್ಲಿ ನಿಂತಿದ್ದಾನೆ; 27ಆತನೇ ನನ್ನ ಹಿಂದೆ ಬರತಕ್ಕವನು; ಆತನ ಕೆರದ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ ಅಂದನು. 28ಇದೆಲ್ಲಾ ಯೊರ್ದನ್ ಹೊಳೆಯ ಆಚೇಕಡೆಯಲ್ಲಿರುವ ಬೇಥಾನ್ಯದಲ್ಲಿ ನಡೆಯಿತು. ಅಲ್ಲಿ ಯೋಹಾನನು ಸ್ನಾನ ಕೊಡುತ್ತಿದ್ದನು.
29ಮರುದಿನ ಯೋಹಾನನು ತನ್ನ ಕಡೆಗೆ ಬರುವ ಯೇಸುವನ್ನು ನೋಡಿ - ಅಗೋ [ಯಜ್ಞಕ್ಕೆ] ದೇವರು ನೇವಿುಸಿದ ಕುರಿ,#1.29 ಅಥವಾ, ಕುರಿಮರಿ. ಯೋಹಾ. 1.36; ಆದಿ. 22.8; ವಿಮೋ. 12.3; ಯೆಶಾ. 53.4-12 ನೋಡಿರಿ. ಲೋಕದ ಪಾಪವನ್ನು ನಿವಾರಣೆ ಮಾಡುವವನು. 30ನನ್ನ ಹಿಂದೆ ಬರುವವನು ನನಗಿಂತ ಮೊದಲೇ ಇದ್ದದರಿಂದ ನನಗೆ ಮುಂದಿನವನಾದನು ಎಂದು ನಾನು ಹೇಳಿದ ಮಾತು ಈತನ ವಿಷಯವಾಗಿಯೇ. 31ನನಗೂ ಆತನ ಗುರುತಿರಲಿಲ್ಲ; ಆದರೆ ಆತನನ್ನು ಇಸ್ರಾಯೇಲ್ಯರಿಗೆ ತಿಳಿಯಪಡಿಸುವದಕ್ಕೋಸ್ಕರವೇ ನಾನು ನೀರಿನ ಸ್ನಾನವನ್ನು ಮಾಡಿಸುವವನಾಗಿ ಬಂದೆನು ಅಂದನು. 32ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನಂದರೆ - ದೇವರಾತ್ಮವು ಪಾರಿವಾಳದಂತೆ ಆಕಾಶದಿಂದ ಇಳಿಯುವದನ್ನು ನೋಡಿದೆನು. ಅದು ಆತನ ಮೇಲೆ ನೆಲೆಗೊಂಡಿತು. 33ನನಗೂ ಆತನ ಗುರುತಿರಲಿಲ್ಲ; ಆದರೆ ನೀರಿನ ಸ್ನಾನವನ್ನು ಮಾಡಿಸುವದಕ್ಕೆ ನನ್ನನ್ನು ಕಳುಹಿಸಿದಾತನು - ಯಾವನ ಮೇಲೆ ಆತ್ಮವು ಇಳಿದುಬಂದು ಇರುವದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮದ ಸ್ನಾನವನ್ನು ಕೊಡುವವನು ಎಂದು ತಾನೇ ನನಗೆ ಹೇಳಿದನು. 34ನಾನು ಅದನ್ನು ನೋಡಿ ಈತನೇ ದೇವಕುಮಾರನೆಂದು ಸಾಕ್ಷಿಕೊಟ್ಟಿದ್ದೇನೆ ಅಂದನು.
ಯೇಸು ಪ್ರಥಮ ಶಿಷ್ಯರನ್ನು ಮಾಡಿಕೊಂಡದ್ದು
35ಮರುದಿನ ತಿರಿಗಿ ಯೋಹಾನನೂ ಅವನ ಶಿಷ್ಯರಲ್ಲಿ ಇಬ್ಬರೂ ನಿಂತುಕೊಂಡಿದ್ದಾಗ ಯೋಹಾನನು ಅಲ್ಲಿ ತಿರುಗಾಡುತ್ತಿರುವ ಯೇಸುವನ್ನು ನೋಡಿ - 36ಅಗೋ ಯಜ್ಞಕ್ಕೆ ದೇವರು ನೇವಿುಸಿದ ಕುರಿ#1.36 ಅಥವಾ, ಕುರಿಮರಿ. ಯೋಹಾ. 1.36; ಆದಿ. 22.8; ವಿಮೋ. 12.3; ಯೆಶಾ. 53.4-12 ನೋಡಿರಿ. ಅಂದನು. 37ಆ ಇಬ್ಬರು ಶಿಷ್ಯರು ಅದನ್ನು ಕೇಳಿ ಯೇಸುವಿನ ಹಿಂದೆ ಹೋದರು. 38ಯೇಸು ಹಿಂತಿರುಗಿ ಅವರು ತನ್ನ ಹಿಂದೆ ಬರುವದನ್ನು ಕಂಡು - ನಿಮಗೆ ಏನು ಬೇಕಾಗಿದೆ ಎಂದು ಕೇಳಲು ಅವರು - ರಬ್ಬಿಯೇ, ನೀನು ಇಳುಕೊಂಡಿರುವದು ಎಲ್ಲಿ? ಅಂದರು. (ರಬ್ಬಿ ಅಂದರೆ ಗುರು). 39ಆತನು - ಬಂದು ನೋಡಿರಿ ಅಂದಾಗ ಅವರು ಬಂದು ಆತನು ಇಳುಕೊಂಡಿದ್ದ ಸ್ಥಳವನ್ನು ನೋಡಿ ಆ ದಿವಸ ಆತನ ಸಂಗಡ ಇದ್ದರು. ಆಗ ಹೆಚ್ಚುಕಡಿಮೆ ಸಾಯಂಕಾಲ#1.39 ಮೂಲ: ಹತ್ತು ತಾಸಾಗಿತ್ತು. ನಾಲ್ಕು ಘಂಟೆಯಾಗಿತ್ತು. 40ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಆ ಇಬ್ಬರಲ್ಲಿ ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಒಬ್ಬನು. 41ಇವನು ಮೊದಲು ತನ್ನ ಅಣ್ಣನಾದ ಸೀಮೋನನನ್ನು ಕಂಡುಕೊಂಡು ಅವನಿಗೆ - ಮೆಸ್ಸೀಯನು ನಮಗೆ ಸಿಕ್ಕಿದನು ಎಂದು ಹೇಳಿ 42ಅವನನ್ನು ಯೇಸುವಿನ ಬಳಿಗೆ ಕರಕೊಂಡು ಬಂದನು. (ಮೆಸ್ಸೀಯನು ಅಂದರೆ ಕ್ರಿಸ್ತನು.#1.42 ಕ್ರಿಸ್ತನು ಅಂದರೆ ಪಟ್ಟಾಭಿಷೇಕ ಹೊಂದಿದವನು, ಬರಬೇಕಾದ ರಕ್ಷಕನು. ) ಯೇಸು ಅವನನ್ನು ನೋಡಿ - ನೀನು ಯೋಹಾನನ ಮಗನಾದ ಸೀಮೋನನು; ಇನ್ನು ಮೇಲೆ ಕೇಫನೆನಿಸಿಕೊಳ್ಳುವಿ ಅಂದನು (ಕೇಫನಂದರೆ ಪೇತ್ರ.#1.42 ಪೇತ್ರ ಅಂದರೆ ಗುಂಡು ಅಥವಾ ಬಂಡೆಗಲ್ಲು. ಮತ್ತಾ. 16.18 ನೋಡಿರಿ. )
43ಮರುದಿನ ಯೇಸು ಗಲಿಲಾಯಕ್ಕೆ ಹೊರಟುಹೋಗಬೇಕೆಂದಿರುವಾಗ ಫಿಲಿಪ್ಪನನ್ನು ಕಂಡುಕೊಂಡು - ನನ್ನನ್ನು ಹಿಂಬಾಲಿಸು ಅಂದನು. 44ಈ ಫಿಲಿಪ್ಪನು ಬೇತ್ಸಾಯಿದದವನು, ಅಂದರೆ ಅಂದ್ರೆಯ ಪೇತ್ರರ ಊರಿನವನು. 45ಫಿಲಿಪ್ಪನು ನತಾನಯೇಲನನ್ನು ಕಂಡುಕೊಂಡು ಅವನಿಗೆ - ಯಾವನ ವಿಷಯವಾಗಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನು ನಮಗೆ ಸಿಕ್ಕಿದನು; ಆತನು ಯಾರಂದರೆ ಯೋಸೇಫನ ಮಗನಾದ ನಜರೇತಿನ ಯೇಸು ಎಂದು ಹೇಳಿದನು. 46ನತಾನಯೇಲನು - ಒಳ್ಳೇದೇನಾದರೂ ನಜರೇತಿನಿಂದ ಬರುವದುಂಟೇ? ಅಂದಾಗ ಫಿಲಿಪ್ಪನು - ಬಂದು ನೋಡು ಅಂದನು. 47ಯೇಸು ತನ್ನ ಕಡೆಗೆ ಬರುವ ನತಾನಯೇಲನನ್ನು ಕಂಡು ಅವನ ವಿಷಯವಾಗಿ - ಇಗೋ ಇವನು ನಿಜವಾದ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ ಅಂದನು. 48ನತಾನಯೇಲನು - ನನ್ನನ್ನು ನೀನು ಹೇಗೆ ಬಲ್ಲೆ? ಎಂದು ಯೇಸುವನ್ನು ಕೇಳಿದ್ದಕ್ಕೆ ಆತನು - ಫಿಲಿಪ್ಪನು ನಿನ್ನನ್ನು ಕರೆಯುವದಕ್ಕಿಂತ ಮುಂಚೆ ನೀನು ಆ ಅಂಜೂರದ ಮರದ ಕೆಳಗೆ ಇದ್ದಾಗ ನಿನ್ನನ್ನು ನೋಡಿದೆನು ಅಂದನು. 49ಅದಕ್ಕೆ ನತಾನಯೇಲನು - ಗುರುವೇ, ನೀನು ದೇವಕುಮಾರನು ಸರಿ; ನೀನೇ ಇಸ್ರಾಯೇಲಿನ ಅರಸನು ಅಂದನು. 50ಅದಕ್ಕೆ ಯೇಸು - ಆ ಅಂಜೂರದ ಮರದ ಕೆಳಗೆ ನಿನ್ನನ್ನು ನೋಡಿದೆನೆಂದು ನಾನು ನಿನಗೆ ಹೇಳಿದ ಮಾತ್ರದಿಂದ ನಂಬುತ್ತೀಯೋ? ಇದಕ್ಕಿಂತ ಹೆಚ್ಚಿನ ಕಾರ್ಯಗಳನ್ನು ನೋಡುವಿ ಅಂದನು. 51ಇದಲ್ಲದೆ ಅವನಿಗೆ - ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪರಲೋಕವು ತೆರೆದಿರುವದನ್ನೂ ಮನುಷ್ಯಕುಮಾರನ ಮೇಲೆ ದೇವದೂತರು ಏರಿಹೋಗುತ್ತಾ ಇಳಿದುಬರುತ್ತಾ ಇರುವದನ್ನೂ ನೋಡುವಿರಿ ಎಂದು ಹೇಳಿದನು.
Tällä hetkellä valittuna:
ಯೋಹಾನ 1: KANJV-BSI
Korostus
Jaa
Kopioi
Haluatko, että korostuksesi tallennetaan kaikille laitteillesi? Rekisteröidy tai kirjaudu sisään
Kannada J.V. Bible © The Bible Society of India, 2016.
Used by permission. All rights reserved worldwide.