ಯೊವಾನ್ನ 11
11
ಲಾಸರನ ಸಾವು
1ಬೆಥಾನಿಯ ಎಂಬ ಊರಿನಲ್ಲಿ ಲಾಸರ್ ಎಂಬವನು ಅಸ್ವಸ್ಥನಾಗಿದ್ದನು. ಮರಿಯ ಮತ್ತು ಅವಳ ಸಹೋದರಿ ಮಾರ್ತ ಎಂಬವರ ಊರು ಅದೇ ಆಗಿತ್ತು. (2ಹಿಂದೊಮ್ಮೆ ಪ್ರಭುವಿನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿ ಅವರ ಪಾದಗಳನ್ನು ತನ್ನ ತಲೆಗೂದಲಿನಿಂದ ಒರಸಿದವಳೇ ಈ ಮರಿಯ. ಅಸ್ವಸ್ಥನಾಗಿದ್ದ ಲಾಸರನು ಇವಳ ಸಹೋದರ.) 3ಈ ಸಹೋದರಿಯರು, ಯೇಸು ಸ್ವಾಮಿಗೆ, “ಪ್ರಭುವೇ, ನಿಮ್ಮ ಆಪ್ತಮಿತ್ರನು ಅಸ್ವಸ್ಥನಾಗಿದ್ದಾನೆ,” ಎಂದು ಹೇಳಿಕಳುಹಿಸಿದರು. 4ಇದನ್ನು ಕೇಳಿದ ಯೇಸು, “ಈ ಕಾಯಿಲೆ ಮರಣಕ್ಕಾಗಿ ಬಂದುದಲ್ಲ, ದೇವರ ಮಹಿಮೆಗೋಸ್ಕರ ಬಂದಿದೆ. ಇದರ ಮೂಲಕ ದೇವರ ಪುತ್ರನಿಗೆ ಮಹಿಮೆ ಉಂಟಾಗಲಿದೆ,” ಎಂದು ನುಡಿದರು. 5ಮಾರ್ತ, ಅವಳ ಸಹೋದರಿ ಮರಿಯ ಮತ್ತು ಲಾಸರ, ಇವರು ಯೇಸುವಿಗೆ ಅಚ್ಚುಮೆಚ್ಚಿನವರು. 6ಲಾಸರನ ಕಾಯಿಲೆಯ ಸುದ್ದಿಯನ್ನು ಕೇಳಿದ ಮೇಲೂ ಯೇಸು ತಾವಿದ್ದಲ್ಲಿಯೇ ಇನ್ನೂ ಎರಡು ದಿನ ಉಳಿದುಕೊಂಡರು. 7ಅನಂತರ ತಮ್ಮ ಶಿಷ್ಯರಿಗೆ, “ಬನ್ನಿ, ಜುದೇಯಕ್ಕೆ ಮರಳಿಹೋಗೋಣ,” ಎಂದರು. 8ಆ ಶಿಷ್ಯರು, “ಗುರುದೇವಾ, ಇತ್ತೀಚೆಗೆ ತಾನೆ ಯೆಹೂದ್ಯರು ನಿಮ್ಮನ್ನು ಕಲ್ಲಿನಿಂದ ಹೊಡೆಯಬೇಕೆಂದಿದ್ದರು. ಪುನಃ ಅಲ್ಲಿಗೇ ಹೋಗಬೇಕೆಂದಿರುವಿರಾ?” ಎಂದು ಕೇಳಿದರು. 9ಅದಕ್ಕೆ ಯೇಸು, “ಹಗಲಿಗೆ ಹನ್ನೆರಡು ತಾಸು ಉಂಟಲ್ಲವೆ? ಹಗಲಿನಲ್ಲಿ ನಡೆಯುವವನು ಎಡವಿಬೀಳುವುದಿಲ್ಲ. ಏಕೆಂದರೆ ಈ ಲೋಕದ ಬೆಳಕು ಅವನಿಗೆ ಕಾಣಿಸುತ್ತದೆ. 10ಆದರೆ ರಾತ್ರಿಯಲ್ಲಿ ನಡೆಯುವವನು ಎಡವಿಬೀಳುತ್ತಾನೆ. ಕಾರಣ, ಅವನಲ್ಲಿ ಬೆಳಕು ಇಲ್ಲ,” ಎಂದರು. 11ಬಳಿಕ ಯೇಸು, “ನಮ್ಮ ಮಿತ್ರನಾದ ಲಾಸರನು ನಿದ್ರೆಮಾಡುತ್ತಿದ್ದಾನೆ, ಅವನನ್ನು ಎಬ್ಬಿಸಲು ನಾನು ಹೋಗಬೇಕು,” ಎಂದು ನುಡಿದರು. 12ಶಿಷ್ಯರು, “ಪ್ರಭುವೇ, ಅವನು ನಿದ್ರೆಮಾಡುತ್ತಿರುವನಾದರೆ ಚೇತರಿಸಿಕೊಳ್ಳುತ್ತಾನೆ,” ಎಂದರು. 13ಯೇಸು ಹೇಳಿದ್ದು ಅವನ ಮರಣವನ್ನು ಕುರಿತು. ಶಿಷ್ಯರಾದರೋ ಅದು ಸಾಮಾನ್ಯ ನಿದ್ರೆಯೆಂದು ತಿಳಿದುಕೊಂಡರು. 14ಆದುದರಿಂದ ಯೇಸು ಅವರಿಗೆ ಸ್ಪಷ್ಟವಾಗಿ, “ಲಾಸರನು ಸತ್ತುಹೋಗಿದ್ದಾನೆ; 15ನಾನು ಅಲ್ಲಿ ಇಲ್ಲದೆಹೋದದ್ದು ನಿಮಗೆ ಒಳ್ಳೆಯದೇ ಆಯಿತು. ನಿಮಗೆ ನನ್ನಲ್ಲಿ ವಿಶ್ವಾಸ ಮೂಡುವಂತೆ ಇದೆಲ್ಲಾ ನಡೆದಿದೆ. ಬನ್ನಿ, ಅವನ ಬಳಿಗೆ ಹೋಗೋಣ,” ಎಂದರು. 16ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಕೂಡ ಪ್ರಭುವಿನೊಡನೆ ಹೋಗಿ ಸಾಯೋಣ,” ಎಂದು ಹೇಳಿದನು.
‘ನಾನೇ ಪುನರುತ್ಥಾನ; ನಾನೇ ಜೀವ!’
17ಯೇಸು ಸ್ವಾಮಿ ಅಲ್ಲಿಗೆ ಬಂದಾಗ ಲಾಸರನನ್ನು ಸಮಾಧಿಯಲ್ಲಿ ಹೂಳಿಟ್ಟು ಆಗಾಗಲೇ ನಾಲ್ಕು ದಿನಗಳಾಗಿದ್ದುವೆಂದು ತಿಳಿಯಿತು. 18ಬೆಥಾನಿಯ ಜೆರುಸಲೇಮಿನಿಂದ ಸುಮಾರು ಮೂರು ಕಿಲೊಮೀಟರು ದೂರದಲ್ಲಿದೆ. 19ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು. 20ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು. 21ಮಾರ್ತ ಯೇಸುವನ್ನು ಕಂಡು, “ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. 22ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ,” ಎಂದಳು. 23ಯೇಸು, “ನಿನ್ನ ಸಹೋದರನು ಜೀವಂತವಾಗಿ ಏಳುವನು,” ಎಂದರು. 24“ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತನಾಗಿ ಏಳುವನೆಂದು ನನಗೆ ತಿಳಿದಿದೆ,” ಎಂದಳು ಮಾರ್ತ. 25ಯೇಸು, ಅವಳಿಗೆ, “ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. 26ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀವು ವಿಶ್ವಾಸಿಸುತ್ತೀಯಾ?” ಎಂದು ಕೇಳಲು ಅವಳು, 27“ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳಿದಳು.
ಕಂಬನಿಗರೆದ ಯೇಸು
28ಹೀಗೆ ಹೇಳಿದ ಮೇಲೆ ಅವಳು ತನ್ನ ಸೋದರಿಯನ್ನು ಕರೆಯಲು ಹೋದಳು. ಅವಳನ್ನು ಕಂಡು, “ಬೋಧಕರು ಬಂದಿದ್ದಾರೆ; ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಹೇಳಿದಳು. 29ಇದನ್ನು ಕೇಳಿದ ಮರಿಯಳು ತಟ್ಟನೆ ಎದ್ದು ಯೇಸುವನ್ನು ಕಾಣಹೋದಳು. 30ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ; ಮಾರ್ತ ತಮ್ಮನ್ನು ಎದುರುಗೊಂಡ ಸ್ಥಳದಲ್ಲಿಯೇ ಇದ್ದರು. 31ಇತ್ತ ಮನೆಯಲ್ಲಿ ಮರಿಯಳನ್ನು ಸಂತೈಸಿಕೊಂಡಿದ್ದ ಯೆಹೂದ್ಯರು, ಆಕೆ ಅವಸರವಸರವಾಗಿ ಎದ್ದುಹೋಗುವುದನ್ನು ಕಂಡು ಗೋಳಿಡುವುದಕ್ಕಾಗಿ ಸಮಾಧಿಯ ಕಡೆಗೆ ಹೋಗುತ್ತಿದ್ದಾಳೆಂದು ಎಣಿಸಿ ಆಕೆಯ ಹಿಂದೆಯೇ ಹೋದರು. 32ಮರಿಯಳು ಯೇಸುವಿನ ಬಳಿಗೆ ಬಂದಕೂಡಲೇ ಅವರ ಕಾಲಿಗೆ ಬಿದ್ದು, “ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,” ಎಂದಳು.
33ಆಕೆಯ ಮತ್ತು ಆಕೆಯೊಡನೆ ಬಂದಿದ್ದ ಯೆಹೂದ್ಯರ ಗೋಳಾಟವನ್ನು ಯೇಸು ನೋಡಿದರು. ಅವರ ಮನ ಕರಗಿತು; ದುಃಖ ತುಂಬಿಬಂದಿತು. 34ಯೇಸು ಅವರಿಗೆ, “ಆತನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು. ಅವರು, “ಬಂದು ನೋಡಿ ಸ್ವಾಮೀ,” ಎಂದರು. 35ಯೇಸು ಕಣ್ಣೀರಿಟ್ಟರು. 36ಇದನ್ನು ಕಂಡ ಯೆಹೂದ್ಯರು, “ಅವನ ಮೇಲೆ ಈತನಿಗೆಷ್ಟು ಪ್ರೀತಿಯಿತ್ತು, ನೋಡಿದಿರಾ!” ಎಂದುಕೊಂಡರು. 37ಕೆಲವರಾದರೋ, “ಆ ಕುರುಡನಿಗೆ ಕಣ್ಣುಕೊಟ್ಟ ಈತ ಲಾಸರನು ಸಾಯದಂತೆ ಮಾಡಬಾರದಿತ್ತೆ?” ಎಂದರು.
ಲಾಸರನ ಪುನರುಜ್ಜೀವನ
38ಯೇಸು ಸ್ವಾಮಿ ಮತ್ತೊಮ್ಮೆ ಮನಮರುಗಿ, ಸಮಾಧಿಯ ಬಳಿಗೆ ಬಂದರು. ಅದು ಒಂದು ಗವಿಯಾಗಿತ್ತು; ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು. 39ಯೇಸು, “ಆ ಕಲ್ಲನ್ನು ತೆಗೆಯಿರಿ,” ಎಂದು ಆಜ್ಞಾಪಿಸಿದರು.ಮೃತನ ಸಹೋದರಿಯಾದ ಮಾರ್ತಳು, “ಪ್ರಭುವೇ, ಅವನು ಸತ್ತು ನಾಲ್ಕು ದಿನಗಳಾದವು; ಈಗಾಗಲೇ ಅವನ ದೇಹ ಕೊಳೆತು ನಾರುತ್ತಿರಬೇಕು,” ಎಂದಳು. 40“ನಿನಗೆ ವಿಶ್ವಾಸವಿದ್ದಲ್ಲಿ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ಹೇಳಲಿಲ್ಲವೇ?” ಎಂದು ಮರು ನುಡಿದರು ಯೇಸು. 41ಆಗ ಕಲ್ಲನ್ನು ತೆಗೆದುಹಾಕಲಾಯಿತು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ಪಿತನೇ , ನನ್ನ ಪ್ರಾರ್ಥನೆಗೆ ನೀವು ಕಿವಿಗೊಡುತ್ತೀರಿ; ಆದುದರಿಂದ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 42ನನ್ನ ಪ್ರಾರ್ಥನೆಗೆ ನೀವು ಯಾವಾಗಲೂ ಕಿವಿಗೊಡುತ್ತೀರಿ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ನನ್ನನ್ನು ಕಳುಹಿಸಿದಾತ ನೀವೇ ಎಂದು ಸುತ್ತಲೂ ನೆರೆದಿರುವವರು ನಂಬುವಂತೆ ನಾನು ಹೀಗೆ ಹೇಳಿದೆನು,” ಎಂದು ನುಡಿದರು. 43ಅನಂತರ ಗಟ್ಟಿಯಾದ ಧ್ವನಿಯಿಂದ, “ಲಾಸರನೇ, ಹೊರಗೆ ಬಾ,” ಎಂದು ಕೂಗಿದರು. 44ಸತ್ತಿದ್ದವನು ಕೂಡಲೇ ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಸುತ್ತಿದ್ದವು; ಮುಖವು ಬಟ್ಟೆಯಿಂದ ಮುಚ್ಚಿತ್ತು. ಆಗ ಯೇಸು, “ಕಟ್ಟುಗಳನ್ನು ಬಿಚ್ಚಿ ಅವನನ್ನು ಹೋಗಲು ಬಿಡಿ,” ಎಂದು ಅಲ್ಲಿದ್ದವರಿಗೆ ಹೇಳಿದರು.
ಯೇಸುವಿನ ವಿರುದ್ಧ ಹಂಚಿಕೆ
(ಮತ್ತಾ. 26:1-5; ಮಾರ್ಕ. 14:1-2; ಲೂಕ. 22:1-2)
45ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು. 46ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು. 47ಮುಖ್ಯಯಾಜಕರೂ ಫರಿಸಾಯರೂ ‘ನ್ಯಾಯಸಭೆ’ಯನ್ನು ಕರೆದರು. “ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; 48ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು, ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನೂ ನೆಲಸಮಮಾಡುವರು,” ಎಂದು ವಾದಿಸಿದರು. 49ಆ ವರ್ಷ ಪ್ರಧಾನಯಾಜಕನಾಗಿದ್ದ ಕಾಯಫನು, 50“ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ನುಡಿದನು. 51ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು. 52ಆ ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಆ ಮಾತಿನ ಇಂಗಿತ. 53ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು. 54ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು.
55ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ಧೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು. 56ಯೇಸುವನ್ನು ನೋಡಬೇಕೆಂಬ ಆಶೆ ಅವರಿಗಿತ್ತು. “ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?” ಎಂದು ಮಹಾದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು. 57ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.
Tällä hetkellä valittuna:
ಯೊವಾನ್ನ 11: KANCLBSI
Korostus
Jaa
Kopioi
Haluatko, että korostuksesi tallennetaan kaikille laitteillesi? Rekisteröidy tai kirjaudu sisään
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.