Logo YouVersion
Îcone de recherche

ಲೂಕ. 23

23
ರಾಜ್ಯಪಾಲ ಪಿಲಾತನ ಮುಂದೆ ಯೇಸು
(ಮತ್ತಾ. 27:1-2; ಮಾರ್ಕ. 15:1-5; ಯೊವಾ. 18:28-38)
1ಬಳಿಕ ಸಭೆಸೇರಿದ್ದವರೆಲ್ಲರೂ ಎದ್ದು ಯೇಸುಸ್ವಾಮಿಯನ್ನು ಪಿಲಾತನ ಬಳಿಗೆ ಕರೆದುತಂದರು. 2ಅಲ್ಲಿ ಆತನ ಮುಂದೆ, “ಇವನು ರೋಮ್ ಚಕ್ರವರ್ತಿಗೆ ತೆರಿಗೆ ಕೊಡುವುದನ್ನು ನಿಷೇಧಿಸುತ್ತಾನೆ. ತಾನೇ ‘ಕ್ರಿಸ್ತ, ಒಬ್ಬ ಅರಸ,’ ಎಂದು ಹೇಳಿಕೊಳ್ಳುತ್ತಾನೆ. ಹೀಗೆ ನಮ್ಮ ಜನತೆ ದಂಗೆಯೇಳುವಂತೆ ಪ್ರಚೋದಿಸುತ್ತಾನೆ. ಇದನ್ನೆಲ್ಲಾ ನಾವು ಕಂಡುಹಿಡಿದಿದ್ದೇವೆ,” ಎಂದು ದೂರತೊಡಗಿದರು. 3ಆಗ ಪಿಲಾತನು, “ನೀನು ಯೆಹೂದ್ಯರ ಅರಸನೋ?” ಎಂದು ಯೇಸುವನ್ನು ಪ್ರಶ್ನಿಸಿದನು. “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಯೇಸು ಮರುನುಡಿದರು. 4ಪಿಲಾತನು ಮುಖ್ಯಯಾಜಕರನ್ನೂ ಜನರ ಗುಂಪನ್ನೂ ನೋಡಿ, “ಈ ಮನುಷ್ಯರಲ್ಲಿ ಶಿಕ್ಷಾರ್ಹದೋಷ ಯಾವುದೂ ನನಗೆ ಕಾಣುವುದಿಲ್ಲ,” ಎಂದನು. 5ಆದರೆ ಅವರು, “ಇವನು ಜುದೇಯ ನಾಡಿನಲ್ಲೆಲ್ಲಾ ಬೋಧನೆಮಾಡುತ್ತಾ ಕ್ರಾಂತಿಗೆ ಕರೆಗೊಡುತ್ತಾನೆ; ಗಲಿಲೇಯದಲ್ಲಿ ಪ್ರಾರಂಭಿಸಿ ಇಲ್ಲಿಯವರೆಗೂ ಬಂದಿದ್ದಾನೆ,” ಎಂದು ಒತ್ತಾಯಪೂರ್ವಕವಾಗಿ ಆರೋಪಿಸಿದರು.
ಹೆರೋದನ ಮುಂದೆ ಯೇಸು
6ಇದನ್ನು ಕೇಳಿದಾಕ್ಷಣವೇ ಪಿಲಾತನು, “ಇವನು ಗಲಿಲೇಯದವನೋ?” ಎಂದು ವಿಚಾರಿಸಿದನು. 7ಯೇಸುಸ್ವಾಮಿ ಹೆರೋದನ ಆಧಿಪತ್ಯಕ್ಕೆ ಒಳಪಟ್ಟವರೆಂದು ತಿಳಿದುಕೊಂಡು ಅವರನ್ನು ಆತನ ಬಳಿಗೆ ಕಳುಹಿಸಿದನು. ಹೆರೋದನು ಅದೇ ಸಮಯಕ್ಕೆ ಜೆರುಸಲೇಮಿಗೆ ಬಂದಿದ್ದನು.
8ಯೇಸುಸ್ವಾಮಿಯನ್ನು ಕಂಡೊಡನೆ ಹೆರೋದನಿಗೆ ತುಂಬ ಸಂತೋಷವಾಯಿತು. ಆತನು ಅವರನ್ನು ಕಾಣಲು ಬಹಳ ದಿನಗಳಿಂದ ಕಾತರನಾಗಿದ್ದನು. ಏಕೆಂದರೆ ಅವರ ವಿಷಯವಾಗಿ ಈಗಾಗಲೇ ಎಷ್ಟೋ ಕೇಳಿದ್ದನು. ಅವರು ಯಾವುದಾದರೊಂದು ಪವಾಡಕಾರ್ಯ ಮಾಡುವುದನ್ನು ನೋಡಬೇಕೆಂಬ ಅಪೇಕ್ಷೆ ಆತನಿಗಿತ್ತು. 9ಆದುದರಿಂದ ಆತನು ಯೇಸುವನ್ನು ಅನೇಕ ವಿಧವಾಗಿ ಪ್ರಶ್ನಿಸಿದನು. ಆದರೆ ಅವರು ಒಂದಕ್ಕೂ ಉತ್ತರಕೊಡಲಿಲ್ಲ. 10ಇತ್ತ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಮುಂದೆಬಂದು ಅವರ ಮೇಲೆ ಪ್ರಬಲವಾಗಿ ದೋಷಾರೋಪಣೆ ಮಾಡತೊಡಗಿದರು. 11ಕಡೆಗೆ ಹೆರೋದನು ತನ್ನ ಸೈನಿಕರೊಡನೆ ಸೇರಿ ಯೇಸುವನ್ನು ಅಣಕಿಸಿ ಅವಮಾನಪಡಿಸಿದನು. ರಾಜವಸ್ತ್ರವನ್ನು ವೇಷಭೂಷಣವಾಗಿ ಅವರಿಗೆ ತೊಡಿಸಿ ಪಿಲಾತನ ಬಳಿಗೆ ಮರಳಿ ಕಳುಹಿಸಿಕೊಟ್ಟನು. 12ಅದುವರೆಗೂ ಪರಸ್ಪರ ವೈರಿಗಳಾಗಿದ್ದ ಹೆರೋದನು ಮತ್ತು ಪಿಲಾತನು ಅಂದೇ ಮಿತ್ರರಾದರು.
ಪಿಲಾತನಿಂದ ಮರು ವಿಚಾರಣೆ
(ಮತ್ತಾ. 27:15-26; ಮಾರ್ಕ. 15:6-15; ಯೊವಾ. 18:39—19:16)
13ಪಿಲಾತನು ಮುಖ್ಯಯಾಜಕರನ್ನೂ ಮುಖಂಡರನ್ನೂ ಜನರನ್ನೂ ಒಟ್ಟಾಗಿ ಕರೆಯಿಸಿ, 14“ಜನರು ದಂಗೆಯೇಳುವಂತೆ ಈ ಮನುಷ್ಯ ಪ್ರೇರೇಪಿಸುತ್ತಾನೆಂದು ಇವನನ್ನು ನನ್ನ ಬಳಿಗೆ ಕರೆತಂದಿರಲ್ಲವೇ? ಇಗೋ, ನಿಮ್ಮ ಎದುರಿಗೇ ವಿಚಾರಣೆ ಮಾಡಿದ್ದೇನೆ; ಇವನಲ್ಲಿ ನೀವು ಆರೋಪಿಸುವಂಥ ದೋಷಗಳೊಂದೂ ನಮಗೆ ಕಾಣಲಿಲ್ಲ; 15ಹೆರೋದ ಅರಸನಿಗೂ ಕಾಣಲಿಲ್ಲ; ಎಂದೇ ಇವನನ್ನು ಮರಳಿ ನನ್ನ ಬಳಿಗೆ ಕಳುಹಿಸಿಬಿಟ್ಟಿದ್ದಾರೆ. ಮರಣದಂಡನೆಗೆ ಗುರಿಯಾಗಿಸುವ ಯಾವುದನ್ನೂ ಇವನು ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ. 16ಆದ್ದರಿಂದ ಇವನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
17(ಪಾಸ್ಕಹಬ್ಬದ ಸಂದರ್ಭದಲ್ಲಿ ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಪಿಲಾತನು ಬಿಡುಗಡೆ ಮಾಡಬೇಕಾಗಿತ್ತು). 18ಆದರೆ ಅವರೆಲ್ಲರೂ, “ಇವನನ್ನು ಮುಗಿಸಿಬಿಡಿ, ಬರಬ್ಬನನ್ನು ನಮಗೆ ಬಿಡುಗಡೆಮಾಡಿ,” ಎಂದು ಒಕ್ಕೊರಲಿನಿಂದ ಬೊಬ್ಬೆಹಾಕಿದರು. 19ನಗರದಲ್ಲಿ ದಂಗೆ ಎಬ್ಬಿಸಿದ ಹಾಗೂ ಕೊಲೆಮಾಡಿದ ಕಾರಣ ಸೆರೆಯಲ್ಲಿ ಹಾಕಲಾಗಿದ್ದ ಬರಬ್ಬನೇ ಅವನು.
20ಪಿಲಾತನು ಯೇಸುಸ್ವಾಮಿಯನ್ನು ಬಿಡುಗಡೆ ಮಾಡಬಯಸಿ ಮತ್ತೊಮ್ಮೆ ಜನರೊಡನೆ ಮಾತನಾಡಿ ನೋಡಿದನು. 21ಅವರಾದರೋ, “ಇವನನ್ನು ಶಿಲುಬೆಗೇರಿಸಿ, ಇವನನ್ನು ಶಿಲುಬೆಗೇರಿಸಿ,” ಎಂದು ಆರ್ಭಟಿಸತೊಡಗಿದರು.
22ಮೂರನೆಯ ಸಾರಿ ಪಿಲಾತನು, “ಏಕೆ? ಇವನೇನು ಕೇಡುಮಾಡಿದ್ದಾನೆ? ಇವನನ್ನು ಮರಣದಂಡನೆಗೆ ಗುರಿಪಡಿಸುವಂಥ ಅಪರಾಧ ಯಾವುದೂ ನನಗೆ ಕಂಡುಬರುವುದಿಲ್ಲ. ಆದ್ದರಿಂದ ಇವನನ್ನು ದಂಡಿಸಿ ಬಿಟ್ಟುಬಿಡುತ್ತೇನೆ,” ಎಂದನು.
23ಆದರೂ ಅವರು ಅಧಿಕಾಧಿಕವಾಗಿ ಆರ್ಭಟಿಸುತ್ತಾ ಯೇಸುವನ್ನು ಶಿಲುಬೆಗೆ ಏರಿಸಲೇ ಬೇಕೆಂದು ಕೂಗಾಡಿದರು. ಕಟ್ಟಕಡೆಗೆ ಕೂಗಾಟಕ್ಕೇ ಗೆಲುವಾಯಿತು! 24ಆ ಜನರ ಕೋರಿಕೆಯಂತೆಯೇ ಆಗಲೆಂದು ಪಿಲಾತನು ತೀರ್ಮಾನಿಸಿದನು. 25ಅವರು ಕೇಳಿಕೊಂಡ ಪ್ರಕಾರ ಕೊಲೆಕಲಹಗಳ ನಿಮಿತ್ತ ಸೆರೆಯಲ್ಲಿದ್ದ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನಾದರೋ ಅವರ ಇಚ್ಛಾನುಸಾರಕ್ಕೆ ಬಿಟ್ಟುಬಿಟ್ಟನು.
ಶಿಲುಬೆಯ ಹಾದಿ
(ಮತ್ತಾ. 27:32-44; ಮಾರ್ಕ. 15:21-32; ಯೊವಾ. 19:17-27)
26ಸೈನಿಕರು ಯೇಸುಸ್ವಾಮಿಯನ್ನು ಕರೆದೊಯ್ಯುವಾಗ ಸಿರೇನ್ ಪಟ್ಟಣದ ಸಿಮೋನ ಎಂಬಾತ ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಅವನನ್ನು ಹಿಡಿದು ಶಿಲುಬೆಯನ್ನು ಹೊತ್ತು ಯೇಸುವಿನ ಹಿಂದೆ ಬರುವಂತೆ ಮಾಡಿದರು.
27ಜನರ ದೊಡ್ಡ ಗುಂಪು ಯೇಸುವಿನ ಹಿಂದೆ ಹೊರಟಿತು. ಕೆಲವು ಮಹಿಳೆಯರು ಯೇಸುವಿಗಾಗಿ ದುಃಖಪಟ್ಟು, ಎದೆಬಡಿದುಕೊಂಡು ಗೋಳಾಡುತ್ತಾ, ಹಿಂಬಾಲಿಸುತ್ತಿದ್ದರು. 28ಯೇಸು ಅವರ ಕಡೆ ತಿರುಗಿ, “ಜೆರುಸಲೇಮಿನ ಕುವರಿಯರೇ, ನನಗಾಗಿ ಅಳಬೇಡಿ; ನಿಮಗಾಗಿ, ನಿಮ್ಮ ಮಕ್ಕಳಿಗಾಗಿ ದುಃಖಿಸಿರಿ. 29ಕಾಲವೊಂದು ಬರುವುದು; ಆಗ ಜನರು, ‘ಬಂಜೆಯರೇ ಭಾಗ್ಯವಂತರು! ಹೆರದವಳೇ, ಹಾಲೂಡಿಸದವಳೇ ಧನ್ಯಳು!’ ಎನ್ನುವರು. 30ಅದೇ ಸಮಯದಲ್ಲಿ ‘ಪರ್ವತಗಳೇ, ನಮ್ಮನ್ನು ತುಳಿದುಬಿಡಿ; ಗುಡ್ಡಗಳೇ, ನಮ್ಮನ್ನು ನುಂಗಿಬಿಡಿ,’ ಎಂದು ಕೂಗಿಕೊಳ್ಳುವರು. 31ಹಸಿಮರಕ್ಕೇ ಇಷ್ಟೆಲ್ಲಾ ಮಾಡಿದರೆ ಒಣಮರಕ್ಕಾಗುವ ಗತಿಯಾದರೂ ಏನು!” ಎಂದರು.
32ಯೇಸುವಿನ ಸಂಗಡ ಕೊಲ್ಲುವುದಕ್ಕಾಗಿ ಇಬ್ಬರು ಅಪರಾಧಿಗಳನ್ನೂ ಕೊಂಡೊಯ್ಯುತ್ತಿದ್ದರು.
‘ಕ್ಷಮಿಸಿವರನೆಲೆ ತಂದೆ!’
33‘ಕಪಾಲ’ ಎಂಬ ಸ್ಥಳಕ್ಕೆ ಬಂದು ಸೇರಿದ ಮೇಲೆ ಯೇಸುಸ್ವಾಮಿಯನ್ನು ಶಿಲುಬೆಗೆ ಏರಿಸಿದರು. ಆ ಇಬ್ಬರು ಅಪರಾಧಿಗಳಲ್ಲಿ ಒಬ್ಬನನ್ನು ಅವರ ಬಲಗಡೆಯಲ್ಲೂ ಮತ್ತೊಬ್ಬನನ್ನು ಎಡಗಡೆಯಲ್ಲೂ ಶಿಲುಬೆಗೇರಿಸಿದರು. 34ಆಗ ಯೇಸು, “ಪಿತನೇ, ಇವರನ್ನು ಕ್ಷಮಿಸಿ; ತಾವೇನು ಮಾಡುತ್ತಿರುವರೆಂದು ಇವರು ಅರಿಯರು,” ಎಂದರು. ಸೈನಿಕರಾದರೋ ಯೇಸುವಿನ ಬಟ್ಟೆಗಳನ್ನು ಚೀಟುಹಾಕಿ ಹಂಚಿಕೊಂಡರು. 35ಜನರು ನೋಡುತ್ತಾ ನಿಂತಿದ್ದರು. ಅಲ್ಲಿದ್ದ ಮುಖಂಡರು ಯೇಸುವನ್ನು ಮೂದಲಿಸುತ್ತಾ, “ಇವನು ಇತರರನ್ನು ರಕ್ಷಿಸಿದ; ಇವನು ದೇವರಿಂದಲೇ ಅಭಿಷಿಕ್ತನಾದ ಲೋಕೋದ್ಧಾರಕನು ಮತ್ತು ಅವರಿಂದಲೇ ಆಯ್ಕೆಯಾದವನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ,” ಎಂದರು. 36ಸೈನಿಕರು ಮುಂದೆ ಬಂದು ಹುಳಿರಸವನ್ನು ಅವರತ್ತ ಒಡ್ಡಿ, 37“ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೊ,” ಎಂದು ಅಣಕಿಸುತ್ತಿದ್ದರು. 38ಯೇಸುವಿನ ಶಿಲುಬೆಯ ಮೇಲ್ಗಡೆ, “ಇವನು ಯೆಹೂದ್ಯರ ಅರಸ” ಎಂಬ ಲಿಖಿತವಿತ್ತು. 39ತೂಗುಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, “ನೀನು ಕ್ರಿಸ್ತ, ಅಲ್ಲವೆ? ಹಾಗಾದರೆ ನಿನ್ನನ್ನು ನೀನೇ ರಕ್ಷಿಸಿಕೋ, ನಮ್ಮನ್ನೂ ರಕ್ಷಿಸು,” ಎಂದು ಹಂಗಿಸಿದನು. 40ಆದರೆ ಮತ್ತೊಬ್ಬ ಅಪರಾಧಿ ಅವನನ್ನು ಖಂಡಿಸುತ್ತಾ, “ನಿನಗೆ ದೇವರ ಭಯಬೇಡವೇ? ನೀನು ಸಹ ಇದೇ ಶಿಕ್ಷೆಗೆ ಗುರಿಯಾಗಿರುವೆ; 41ನಮಗೇನೋ ಶಿಕ್ಷೆ ನ್ಯಾಯವಾಗಿದೆ, ನಮ್ಮ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿದೆ; ಇವರಾದರೋ, ನಿರಪರಾಧಿ!” ಎಂದನು. 42ಬಳಿಕ ಅವನು, “ಸ್ವಾಮಿ ಯೇಸುವೇ, ನೀವು ರಾಜ್ಯಾಧಿಕಾರದೊಡನೆ ಬರುವಾಗ ನನ್ನನ್ನು ಜ್ಞಾಪಿಸಿಕೊಳ್ಳಿ,” ಎಂದು ಬೇಡಿಕೊಂಡನು. 43ಅವನಿಗೆ ಯೇಸು, “ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ ಎಂದು ನಿಶ್ಚಯವಾಗಿ ಹೇಳುತ್ತೇನೆ,” ಎಂದರು.
ಪ್ರಾಣಾರ್ಪಣೆ
(ಮತ್ತಾ. 27:45-56; ಮಾರ್ಕ. 15:33-41; ಯೊವಾ. 19:28-30)
44ಆಗ ಸುಮಾರು ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ಸೂರ್ಯನು ಕಾಂತಿಹೀನನಾದನು; ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. 45ಮಹಾದೇವಾಲಯದ ತೆರೆಯು ಇಬ್ಭಾಗವಾಗಿ ಸೀಳಿಹೋಯಿತು. 46ಯೇಸುಸ್ವಾಮಿ, “ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
47ನಡೆದುದನ್ನು ಕಂಡ ಶತಾಧಿಪತಿ ದೇವರನ್ನು ಹೊಗಳುತ್ತಾ, “ಈ ಮನುಷ್ಯ ಖಂಡಿತವಾಗಿ ಸತ್ಪುರುಷನೇ ಸರಿ,” ಎಂದನು.
48ಈ ದೃಶ್ಯವನ್ನು ನೋಡಲು ಕೂಡಿದ್ದ ಜನರೆಲ್ಲರು ಅಲ್ಲಿ ನಡೆದುದನ್ನು ನೋಡಿ ದುಃಖದಿಂದ ಎದೆಬಡಿದುಕೊಳ್ಳುತ್ತಾ ಹಿಂದಿರುಗಿದರು.
49ಯೇಸುವಿನ ಪರಿಚಿತರೆಲ್ಲರು ಹಾಗೂ ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಮಹಿಳೆಯರು ದೂರದಲ್ಲಿ ನಿಂತುಕೊಂಡು ಇದೆಲ್ಲವನ್ನು ನೋಡುತ್ತಿದ್ದರು.
ಶವ ಸಂಸ್ಕಾರ
(ಮತ್ತಾ. 27:57-61; ಮಾರ್ಕ. 15:42-47; ಯೊವಾ. 19:38-42)
50-51ಅರಿಮತಾಯ ಎಂಬುದು ಜುದೇಯದ ಒಂದು ಪಟ್ಟಣ. ಜೋಸೆಫನು ಇದರ ನಿವಾಸಿ. ಇವನು ಸದ್ಗುಣಶೀಲನು, ಸತ್ಪುರುಷನು ಹಾಗೂ ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದವನು. ಯೆಹೂದ್ಯರ ನ್ಯಾಯಸಭೆಯ ಸದಸ್ಯರಲ್ಲಿ ಇವನೂ ಒಬ್ಬನು. ಆದರೂ ಅವರ ತೀರ್ಪಿಗೂ ಕೃತ್ಯಕ್ಕೂ ಇವನು ಅನುಮತಿಸಿರಲಿಲ್ಲ. 52ಇವನು ಪಿಲಾತನ ಬಳಿಗೆ ಹೋಗಿ ಯೇಸುವಿನ ಪಾರ್ಥಿವ ಶರೀರವನ್ನು ತನಗೆ ಕೊಡಿಸಬೇಕೆಂದು ಕೇಳಿಕೊಂಡನು. 53ತರುವಾಯ ಶರೀರವನ್ನು ಶಿಲುಬೆಯಿಂದ ಇಳಿಸಿ, ನಾರುಮಡಿವಸ್ತ್ರದಲ್ಲಿ ಸುತ್ತಿ ಸಮಾಧಿಯಲ್ಲಿ ಇಟ್ಟನು. ಬಂಡೆಯೊಂದರಲ್ಲಿ ಕೊರೆಯಲಾಗಿದ್ದ ಈ ಸಮಾಧಿಯಲ್ಲಿ ಅದುವರೆಗೆ ಯಾರನ್ನೂ ಭೂಸ್ಥಾಪನೆ ಮಾಡಿರಲಿಲ್ಲ.
54ಅಂದು ಶುಕ್ರವಾರ - ಸಿದ್ಧತೆಯ ದಿನ. ಇನ್ನೇನು ಸಬ್ಬತ್ ಪ್ರಾರಂಭವಾಗುವುದರಲ್ಲಿತ್ತು.
55ಗಲಿಲೇಯದಿಂದ ಯೇಸುವಿನ ಸಂಗಡ ಬಂದಿದ್ದ ಮಹಿಳೆಯರು ಜೋಸೆಫನ ಜೊತೆ ಹೋಗಿ ಸಮಾಧಿಯನ್ನೂ ಯೇಸುವಿನ ಪಾರ್ಥಿವ ಶರೀರವನ್ನು ಅದರಲ್ಲಿಟ್ಟ ರೀತಿಯನ್ನೂ ನೋಡಿಕೊಂಡರು. 56ಅನಂತರ ಅಲ್ಲಿಂದ ಹಿಂದಿರುಗಿ ಶವಲೇಪನಕ್ಕಾಗಿ ಸುಗಂಧದ್ರವ್ಯಗಳನ್ನು ಮತ್ತು ಪರಿಮಳ ತೈಲವನ್ನು ಸಿದ್ಧಮಾಡಿಕೊಂಡರು. ಸಬ್ಬತ್‍ದಿನ, ಧರ್ಮನಿಯಮಾನುಸಾರ ವಿಶ್ರಮಿಸಿಕೊಂಡರು.

Sélection en cours:

ಲೂಕ. 23: KANCLBSI

Surbrillance

Partager

Copier

None

Tu souhaites voir tes moments forts enregistrés sur tous tes appareils? Inscris-toi ou connecte-toi