ಲೂಕನ ಸುವಾರ್ತೆ 23

23
ರಾಜ್ಯಪಾಲ ಪಿಲಾತನಿಂದ ಯೇಸುವಿನ ವಿಚಾರಣೆ
(ಮತ್ತಾಯ 27:1-2,11-14; ಮಾರ್ಕ 15:1-5; ಯೋಹಾನ 18:28-38)
1ಬಳಿಕ ಅಲ್ಲಿ ಸೇರಿಬಂದಿದ್ದವರೆಲ್ಲ ಎದ್ದು ಯೇಸುವನ್ನು ಪಿಲಾತನ ಬಳಿಗೆ ಕರೆದುಕೊಂಡು ಹೋದರು. 2ಅವರು ಯೇಸುವಿನ ಮೇಲೆ ದೋಷಾರೋಪಣೆ ಮಾಡತೊಡಗಿದರು. ಅವರು ಪಿಲಾತನಿಗೆ, “ಈ ಮನುಷ್ಯನು ನಮ್ಮ ಜನರನ್ನು ತಪ್ಪುದಾರಿಗೆ ನಡೆಸುವ ಸಂಗತಿಗಳನ್ನು ಹೇಳುತ್ತಿದ್ದನು. ನಾವು ಸೀಸರನಿಗೆ ತೆರಿಗೆ ಕೊಡಬಾರದೆಂದೂ ಇವನು ಹೇಳುತ್ತಿದ್ದನು. ಅಲ್ಲದೆ ಇವನು ತನ್ನನ್ನು ಕ್ರಿಸ್ತನೆಂಬ ಅರಸನೆಂದು ಹೇಳಿಕೊಳ್ಳುತ್ತಾನೆ. ಆದ್ದರಿಂದ ನಾವು ಇವನನ್ನು ಬಂಧಿಸಿದೆವು” ಎಂದು ಹೇಳಿದರು.
3ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.
ಯೇಸು, “ನೀನೇ ಹೇಳಿರುವೆ!” ಎಂದು ಉತ್ತರಿಸಿದನು.
4ಪಿಲಾತನು ಮಹಾಯಾಜಕರಿಗೆ ಮತ್ತು ಜನರಿಗೆ, “ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ” ಎಂದು ಹೇಳಿದನು.
5ಅದಕ್ಕೆ ಅವರು, “ಇವನು ಜುದೇಯ ಪ್ರಾಂತ್ಯದಲ್ಲೆಲ್ಲಾ ಉಪದೇಶಿಸಿ ಕ್ರಾಂತಿ ಎಬ್ಬಿಸಿದ್ದಾನೆ. ಗಲಿಲಾಯದಲ್ಲಿ ಪ್ರಾರಂಭಿಸಿದ ಇವನು ಈಗ ಇಲ್ಲಿಗೂ ಬಂದಿದ್ದಾನೆ” ಎಂದು ಪದೇಪದೇ ಹೇಳಿದರು.
ಹೆರೋದನ ಮುಂದೆ ಯೇಸು
6ಪಿಲಾತನು ಇದನ್ನು ಕೇಳಿ, “ಇವನು ಗಲಿಲಾಯದವನೋ?” ಎಂದು ಕೇಳಿದನು. 7ಯೇಸು ಹೆರೋದನ ಅಧಿಕಾರಕ್ಕೊಳಪಟ್ಟವನೆಂದು ಪಿಲಾತನಿಗೆ ತಿಳಿಯಿತು. ಆ ಸಮಯದಲ್ಲಿ ಹೆರೋದನು ಜೆರುಸಲೇಮಿನಲ್ಲಿದ್ದನು. ಆದ್ದರಿಂದ ಪಿಲಾತನು ಯೇಸುವನ್ನು ಅವನ ಬಳಿಗೆ ಕಳುಹಿಸಿದನು.
8ಹೆರೋದನು ಯೇಸುವನ್ನು ನೋಡಿದಾಗ ಬಹಳ ಸಂತೋಷಪಟ್ಟನು. ಏಕೆಂದರೆ ಅವನು ಯೇಸುವಿನ ಬಗ್ಗೆ ಎಲ್ಲವನ್ನೂ ಕೇಳಿದ್ದನು ಮತ್ತು ಬಹಳ ಕಾಲದಿಂದ ಆತನಿಂದ ಒಂದು ಅದ್ಭುತಕಾರ್ಯವನ್ನು ನೋಡಬೇಕೆಂದಿದ್ದನು. 9ಹೆರೋದನು ಯೇಸುವಿಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. ಆದರೆ ಯೇಸು ಒಂದಕ್ಕೂ ಉತ್ತರ ನೀಡಲಿಲ್ಲ. 10ಮಹಾಯಾಜಕರು ಮತ್ತು ಧರ್ಮೋಪದೇಶಕರು ಅಲ್ಲಿ ನಿಂತುಕೊಂಡಿದ್ದರು. ಅವರು ಯೇಸುವಿಗೆ ವಿರುದ್ಧವಾಗಿ ಕೂಗುತ್ತಿದ್ದರು. 11ಆಗ ಹೆರೋದನು ಮತ್ತು ಅವನ ಸೈನಿಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು ಯೇಸುವಿಗೆ ರಾಜನ ಬಟ್ಟೆ ಉಡಿಸಿ ಹಾಸ್ಯ ಮಾಡಿದರು. ಬಳಿಕ ಹೆರೋದನು ಯೇಸುವನ್ನು ಪಿಲಾತನ ಬಳಿಗೆ ತಿರುಗಿ ಕಳುಹಿಸಿಕೊಟ್ಟನು. 12ಮೊದಲು ಪಿಲಾತನು ಮತ್ತು ಹೆರೋದನು ವೈರಿಗಳಾಗಿದ್ದರು. ಆದರೆ ಅಂದು ಹೆರೋದನು ಮತ್ತು ಪಿಲಾತನು ಮತ್ತೆ ಸ್ನೇಹಿತರಾದರು.
ಯೇಸುವಿಗೆ ಮರಣದಂಡನೆ
(ಮತ್ತಾಯ 27:15-26; ಮಾರ್ಕ 15:6-15; ಯೋಹಾನ 18:39–19:16)
13ಪಿಲಾತನು ಮಹಾಯಾಜಕರನ್ನೂ ಯೆಹೂದ್ಯನಾಯಕರನ್ನೂ ಇತರ ಜನರನ್ನೂ ಒಟ್ಟಾಗಿ ಕರೆಸಿ, 14ಅವರಿಗೆ, “ನೀವು ಈ ಮನುಷ್ಯನನ್ನು (ಯೇಸುವನ್ನು) ನನ್ನ ಬಳಿಗೆ ಕರೆದುಕೊಂಡು ಬಂದಿರಿ. ಇವನು ಜನರನ್ನು ತಪ್ಪುದಾರಿಗೆ ನಡೆಸುತ್ತಿದ್ದಾನೆ ಎಂದು ಹೇಳಿದಿರಿ. ಆದರೆ ನಾನು ನಿಮ್ಮೆಲ್ಲರ ಮುಂದೆ ಇವನನ್ನು ವಿಚಾರಣೆ ಮಾಡಿದೆನು. ಆದರೆ ನಾನು ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ನಿಮ್ಮ ದೋಷಾರೋಪಣೆಗಳು ಇವನಿಗೆ ಅನ್ವಯಿಸುವುದಿಲ್ಲ. 15ಇದಲ್ಲದೆ ಹೆರೋದನು ಸಹ ಇವನಲ್ಲಿ ಯಾವ ತಪ್ಪನ್ನೂ ಕಾಣಲಿಲ್ಲ. ಹೆರೋದನು ಯೇಸುವನ್ನು ನಮ್ಮ ಬಳಿಗೆ ಮತ್ತೆ ಕಳುಹಿಸಿದನು. ನೋಡಿರಿ, ಯೇಸು ಯಾವ ತಪ್ಪನ್ನೂ ಮಾಡಿಲ್ಲ. ಅವನಿಗೆ ಮರಣದಂಡನೆ ಆಗಬಾರದು. 16ಆದ್ದರಿಂದ ನಾನು ಇವನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು. 17#23:17 ಕೆಲವು ಗ್ರೀಕ್ ಪ್ರತಿಗಳಲ್ಲಿ 17ನೇ ವಚನವನ್ನು ಸೇರಿಸಲಾಗಿದೆ. ಅದರಲ್ಲಿ, “ಪ್ರತಿವರ್ಷ ಪಸ್ಕಹಬ್ಬದ ಸಮಯದಲ್ಲಿ ಪಿಲಾತನು ಜನರಿಗೆ ಒಬ್ಬ ಕೈದಿಯನ್ನು ಬಿಡುಗಡೆ ಮಾಡಬೇಕಾಗಿತ್ತು” ಎಂದು ಬರೆದದೆ.
18ಆದರೆ ಜನರೆಲ್ಲರೂ, “ಅವನನ್ನು ಕೊಲ್ಲಿಸು! ಬರಬ್ಬನನ್ನು ಬಿಟ್ಟುಕೊಡು” ಎಂದು ಕೂಗಿದರು. 19(ಬರಬ್ಬನು ಪಟ್ಟಣದಲ್ಲಿ ದಂಗೆ ಎಬ್ಬಿಸಿದ್ದರಿಂದ ಸೆರೆಮನೆಯಲ್ಲಿದ್ದನು. ಅವನು ಕೆಲವು ಜನರನ್ನು ಕೊಂದಿದ್ದನು.)
20ಪಿಲಾತನು ಯೇಸುವನ್ನು ಬಿಡಿಸಬೇಕೆಂದಿದ್ದನು. ಆದ್ದರಿಂದ ಯೇಸುವನ್ನು ಬಿಟ್ಟುಬಿಡೋಣ ಎಂದು ಪಿಲಾತನು ಮತ್ತೆ ಅವರಿಗೆ ಹೇಳಿದನು. 21ಆದರೆ ಅವರು ಮತ್ತೆ, “ಅವನನ್ನು ಕೊಲ್ಲಿಸು! ಅವನನ್ನು ಶಿಲುಬೆಗೇರಿಸು!” ಎಂದು ಕೂಗಿದರು.
22ಮೂರನೇ ಸಲ ಪಿಲಾತನು ಜನರಿಗೆ, “ಏಕೆ? ಆತನು ಏನು ತಪ್ಪುಮಾಡಿದನು? ಆತನು ತಪ್ಪಿತಸ್ಥನಲ್ಲ. ಆತನನ್ನು ಕೊಲ್ಲಿಸುವುದಕ್ಕೆ ನನಗೆ ಯಾವ ಕಾರಣವೂ ಕಾಣಿಸುವುದಿಲ್ಲ. ಆದ್ದರಿಂದ ಆತನನ್ನು ಸ್ವಲ್ಪ ಶಿಕ್ಷಿಸಿ ಬಿಟ್ಟುಬಿಡುತ್ತೇನೆ” ಎಂದು ಹೇಳಿದನು.
23ಆದರೆ ಅವರು ಕೂಗಾಟವನ್ನು ಮುಂದುವರಿಸಿ ಯೇಸುವನ್ನು ಶಿಲುಬೆಗೆ ಹಾಕಿ ಕೊಲ್ಲಿಸಬೇಕೆಂದು ಬಲವಂತಪಡಿಸಿದರು. ಅವರ ಕೂಗಾಟ ಬಹಳ ಹೆಚ್ಚಾದದ್ದರಿಂದ, 24ಪಿಲಾತನು ಅವರ ಬಯಕೆಯನ್ನು ಈಡೇರಿಸಲು ನಿರ್ಧರಿಸಿದನು. 25ಬರಬ್ಬನನ್ನು ಬಿಡುಗಡೆ ಮಾಡಬೇಕೆಂದು ಜನರು ಕೇಳಿಕೊಂಡರು. ದಂಗೆ ಎಬ್ಬಿಸಿದ್ದರಿಂದ ಮತ್ತು ಕೊಲೆಮಾಡಿದ್ದರಿಂದ ಬರಬ್ಬನು ಸೆರೆಮನೆಯಲ್ಲಿದ್ದನು. ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿ, ಯೇಸುವನ್ನು ಕೊಲ್ಲಿಸುವುದಕ್ಕೆ ಜನರಿಗೆ ಒಪ್ಪಿಸಿದನು. ಜನರ ಬಯಕೆಯೂ ಇದೇ ಆಗಿತ್ತು.
ಯೇಸುವನ್ನು ಶಿಲುಬೆಗೇರಿಸಿದರು
(ಮತ್ತಾಯ 27:32-44; ಮಾರ್ಕ 15:21-32; ಯೋಹಾನ 19:17-19)
26ಸೈನಿಕರು ಯೇಸುವನ್ನು ಕೊಲ್ಲಲು ಕರೆದೊಯ್ಯುವಾಗ ಹೊಲದಿಂದ ಪಟ್ಟಣದೊಳಗೆ ಬರುತ್ತಿದ್ದ ಸೀಮೋನ ಎಂಬವನನ್ನು ಕಂಡರು. ಸೀಮೋನನು ಸಿರೇನ್ ಪಟ್ಟಣದವನು. ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ಯೇಸುವಿನ ಹಿಂದೆ ಬರುವಂತೆ ಸೈನಿಕರು ಸೀಮೋನನನ್ನು ಬಲವಂತ ಮಾಡಿದರು.
27ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ದೊಡ್ಡಗುಂಪಾಗಿ ಸೇರಿದ್ದ ಸ್ತ್ರೀಯರು ಯೇಸುವಿಗಾಗಿ ದುಃಖಪಟ್ಟು ಎದೆ ಬಡಿದುಕೊಂಡು ಗೋಳಾಡುತ್ತಿದ್ದರು. 28ಆದರೆ ಯೇಸು, ಆ ಸ್ತ್ರೀಯರಿಗೆ, “ಜೆರುಸಲೇಮಿನ ಸ್ತ್ರೀಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ! 29‘ಬಂಜೆಯರೇ ಭಾಗ್ಯವಂತರು! ಹೆರದವಳೇ ಹಾಲುಕುಡಿಸದವಳೇ ಭಾಗ್ಯವಂತಳು’ ಎಂದು ಜನರು ಹೇಳುವ ಸಮಯ ಬರುತ್ತದೆ. 30ಆಗ ಜನರು ಬೆಟ್ಟಕ್ಕೆ, ‘ನಮ್ಮ ಮೇಲೆ ಬೀಳು!’ ಎಂತಲೂ ಗುಡ್ಡಗಳಿಗೆ, ‘ನಮ್ಮನ್ನು ಮುಚ್ಚಿಕೊಳ್ಳಿರಿ!’#ಹೋಶೇ 10:8. ಎಂತಲೂ ಕೂಗಿಕೊಳ್ಳುವರು. 31ಜೀವನ ಸುಖಕರವಾಗಿರುವಾಗ ಜನರು ಈ ರೀತಿ ವರ್ತಿಸಿದರೆ, ಜೀವನ ಕಷ್ಟಕರವಾದಾಗ ಏನು ಮಾಡುವರು?”#23:31 ಜೀವನ … ಮಾಡುವರು ಅಕ್ಷರಶಃ, “ನೀವು ಇದನ್ನು ಮರ ಹಸಿರಾಗಿರುವಾಗ ಮಾಡಿದರೆ, ಒಣಗಿದಲ್ಲಿ ಏನಾಗುವುದು.” ಎಂದು ಹೇಳಿದನು.
32ಯೇಸುವಿನ ಸಂಗಡ ಇಬ್ಬರು ದುಷ್ಕರ್ಮಿಗಳನ್ನು ಕೊಲ್ಲಬೇಕೆಂದು ಅವರು ನಿರ್ಧರಿಸಿದರು. 33ಯೇಸುವನ್ನು ಮತ್ತು ಇಬ್ಬರು ದುಷ್ಕರ್ಮಿಗಳನ್ನು ಅವರು “ಕಪಾಲ”ವೆಂಬ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸೈನಿಕರು ಯೇಸುವನ್ನೂ ಆ ದುಷ್ಕರ್ಮಿಗಳನ್ನೂ ಶಿಲುಬೆಗಳಿಗೆ ಜಡಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದರು.
34ಯೇಸು, “ತಂದೆಯೇ, ಇವರನ್ನು ಕ್ಷಮಿಸು. ಇವರಿಗೆ ತಾವು ಮಾಡುತ್ತಿರುವುದು ತಿಳಿದಿಲ್ಲ” ಎಂದು ಪ್ರಾರ್ಥಿಸಿದನು.
ಸೈನಿಕರು ಚೀಟುಹಾಕಿ ಯೇಸುವಿನ ಬಟ್ಟೆಗಳು ಯಾರಿಗೆ ಸೇರಬೇಕೆಂದು ತೀರ್ಮಾನಿಸಿದರು. 35ಜನರು ನೋಡುತ್ತಾ ಅಲ್ಲಿ ನಿಂತಿದ್ದರು. ಯೆಹೂದ್ಯನಾಯಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು, “ಇವನು ದೇವರಿಂದ ಆರಿಸಲ್ಪಟ್ಟ ಕ್ರಿಸ್ತನಾಗಿದ್ದರೆ ತನ್ನನ್ನು ರಕ್ಷಿಸಿಕೊಳ್ಳಲಿ. ಇವನು ಬೇರೆಯವರನ್ನು ರಕ್ಷಿಸಿದನಲ್ಲವೇ?” ಅಂದರು.
36ಸೈನಿಕರೂ ಯೇಸುವನ್ನು ಗೇಲಿಮಾಡಿದರು. ಅವರು ಯೇಸುವಿನ ಬಳಿಗೆ ಬಂದು, ಸ್ವಲ್ಪ ಹುಳಿದ್ರಾಕ್ಷಾರಸವನ್ನು ನೀಡಿ, 37“ನೀನು ಯೆಹೂದ್ಯರ ಅರಸನಾಗಿದ್ದರೆ, ನಿನ್ನನ್ನು ರಕ್ಷಿಸಿಕೊ!” ಎಂದು ಹೇಳಿದರು. 38(ಶಿಲುಬೆಯ ಮೇಲ್ಭಾಗದಲ್ಲಿ, “ಈತನು ಯೆಹೂದ್ಯರ ಅರಸನು” ಎಂದು ಬರೆಯಲಾಗಿತ್ತು.)
39ದುಷ್ಕರ್ಮಿಗಳಲ್ಲೊಬ್ಬನು ಯೇಸುವನ್ನು ದೂಷಿಸಿ, “ನೀನು ಕ್ರಿಸ್ತನಲ್ಲವೋ? ಹಾಗಾದರೆ ನಿನ್ನನ್ನು ರಕ್ಷಿಸಿಕೊ! ನಮ್ಮನ್ನೂ ರಕ್ಷಿಸು!” ಅಂದನು.
40ಆದರೆ ಇನ್ನೊಬ್ಬ ದುಷ್ಕರ್ಮಿಯು ಅವನನ್ನು ಗದರಿಸಿ, “ನೀನು ದೇವರಿಗೆ ಹೆದರಬೇಕು! ನಾವೆಲ್ಲರೂ ಬೇಗನೆ ಸಾಯುವೆವು! 41ನೀನೂ ನಾನೂ ಅಪರಾಧಿಗಳಾಗಿದ್ದೇವೆ. ನಾವು ತಪ್ಪು ಮಾಡಿದ್ದರಿಂದ ಶಿಕ್ಷಿಸಲ್ಪಡಬೇಕು. ಆದರೆ ಈ ಮನುಷ್ಯನು (ಯೇಸು) ಯಾವ ತಪ್ಪನ್ನೂ ಮಾಡಲಿಲ್ಲ!” ಎಂದು ಹೇಳಿದನು. 42ಬಳಿಕ ಆ ದುಷ್ಕರ್ಮಿಯು ಆತನಿಗೆ, “ಯೇಸುವೇ ನೀನು ನಿನ್ನ ರಾಜ್ಯವನ್ನು ಸ್ಥಾಪಿಸುವಾಗ ನನ್ನನ್ನು ನೆನಸಿಕೊ!” ಎಂದು ಹೇಳಿದನು.
43ಆಗ ಯೇಸು ಅವನಿಗೆ, “ಕೇಳು! ನಾನು ಸತ್ಯವನ್ನೇ ಹೇಳುತ್ತೇನೆ. ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ” ಎಂದು ಹೇಳಿದನು.
ಯೇಸುವಿನ ಮರಣ
(ಮತ್ತಾಯ 27:45-56; ಮಾರ್ಕ 15:33-41; ಯೋಹಾನ 19:28-30)
44ಇಷ್ಟರಲ್ಲಿ ಹೆಚ್ಚುಕಡಿಮೆ ಮಧ್ಯಾಹ್ನವಾಗಿತ್ತು. ಆದರೆ ಇಡೀ ಪ್ರದೇಶವು ಮಧ್ಯಾಹ್ನ ಮೂರು ಗಂಟೆಯ ತನಕ ಕತ್ತಲಾಯಿತು. 45ಸೂರ್ಯನ ಬೆಳಕೇ ಇರಲಿಲ್ಲ! ದೇವಾಲಯದ ಪರದೆಯು ಎರಡು ಭಾಗವಾಗಿ ಹರಿದುಹೋಯಿತು. 46ಆಮೇಲೆ ಯೇಸು, “ತಂದೆಯೇ, ನನ್ನ ಆತ್ಮವನ್ನು ನಿನಗೆ ಒಪ್ಪಿಸುತ್ತೇನೆ”#23:46 ತಂದೆಯೇ … ಒಪ್ಪಿಸುತ್ತೇನೆ ಅಕ್ಷರಶಃ, “ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ.” ಉಲ್ಲೇಖನ: ಕೀರ್ತನೆ 31:5. ಎಂದು ಮಹಾಧ್ವನಿಯಿಂದ ಕೂಗಿ ಪ್ರಾಣಬಿಟ್ಟನು.
47ಅಲ್ಲಿದ್ದ ಶತಾಧಿಪತಿ ನಡೆದದ್ದನ್ನು ನೋಡಿ, “ಈ ಮನುಷ್ಯನು ಒಳ್ಳೆಯವನೆಂದು ನನಗೆ ಗೊತ್ತಿತ್ತು” ಎಂದು ಹೇಳಿ ದೇವರನ್ನು ಸ್ತುತಿಸಿದನು.
48ಈ ಸಂಗತಿಯನ್ನು ನೋಡುವುದಕ್ಕೆ ಅನೇಕ ಜನರು ಪಟ್ಟಣದ ಹೊರಗೆ ಬಂದಿದ್ದರು. ಜನರು ಇದ್ದನ್ನು ನೋಡಿ, ಬಹಳ ದುಃಖದಿಂದ ಹೊರಟುಹೋದರು. 49ಯೇಸುವಿನ ಆತ್ಮೀಯ ಸ್ನೇಹಿತರೂ ಅಲ್ಲಿದ್ದರು. ಗಲಿಲಾಯದಿಂದ ಯೇಸುವನ್ನು ಹಿಂಬಾಲಿಸಿದ ಕೆಲವು ಸ್ತ್ರೀಯರೂ ಅಲ್ಲಿದ್ದರು. ಅವರೆಲ್ಲರೂ ಶಿಲುಬೆಯಿಂದ ದೂರದಲ್ಲಿ ನಿಂತುಕೊಂಡು ಈ ಸಂಗತಿಗಳನ್ನು ನೋಡಿದರು.
ಅರಿಮಥಾಯದ ಯೋಸೇಫನು
(ಮತ್ತಾಯ 27:57-61; ಮಾರ್ಕ 15:42-47; ಯೋಹಾನ 19:38-42)
50-51ಅರಿಮಥಾಯ ಎಂಬುದು ಯೆಹೂದ್ಯರ ಒಂದು ಊರು. ಯೋಸೇಫನು ಇದರ ನಿವಾಸಿ. ಇವನು ಒಳ್ಳೆಯ ಧಾರ್ಮಿಕ ವ್ಯಕ್ತಿಯಾಗಿದ್ದನು. ದೇವರ ರಾಜ್ಯದ ಆಗಮನವನ್ನು ಇವನು ನಿರೀಕ್ಷಿಸಿದ್ದನು. ಯೋಸೇಫನು ಯೆಹೂದ್ಯರ ಹಿರಿಸಭೆಯ ಸದಸ್ಯನಾಗಿದ್ದನು. ಆದರೆ ಬೇರೆ ಯೆಹೂದ್ಯ ನಾಯಕರು ಯೇಸುವನ್ನು ಕೊಲ್ಲಲು ತೀರ್ಮಾನಿಸಿದಾಗ ಇವನು ಅದಕ್ಕೆ ಒಪ್ಪಲಿಲ್ಲ. 52ಯೇಸುವಿನ ದೇಹವನ್ನು ತನಗೆ ಕೊಡಬೇಕೆಂದು ಯೋಸೇಫನು ಪಿಲಾತನನ್ನು ಕೇಳಿಕೊಂಡನು. 53ಬಳಿಕ ಇವನು ಯೇಸುವಿನ ದೇಹವನ್ನು ಶಿಲುಬೆಯಿಂದ ಇಳಿಸಿ ಬಟ್ಟೆಯಲ್ಲಿ ಸುತ್ತಿ, ಬಂಡೆಯಲ್ಲಿ ತೋಡಿದ್ದ ಸಮಾಧಿಯಲ್ಲಿ ಇಟ್ಟನು. ಈ ಸಮಾಧಿಯಲ್ಲಿ ಬೇರೆ ಯಾರನ್ನೂ ಎಂದೂ ಹೂಳಿರಲಿಲ್ಲ. 54ಅದು ಸಿದ್ಧತೆಯ ದಿನದ#23:54 ಸಿದ್ಧತೆಯ ದಿನ ಶುಕ್ರವಾರ ಸಬ್ಬತ್‌ದಿನದ ಹಿಂದಿನ ದಿನ. ಸಾಯಂಕಾಲವಾಗಿತ್ತು. ಸೂರ್ಯನು ಮುಳುಗಿದಾಗ, ಸಬ್ಬತ್‌ದಿನ ಪ್ರಾರಂಭವಾಗಲಿಕ್ಕಿತ್ತು.
55ಗಲಿಲಾಯದಿಂದ ಯೇಸುವಿನ ಸಂಗಡ ಬಂದಿದ್ದ ಸ್ತ್ರೀಯರು ಯೋಸೇಫನನ್ನು ಹಿಂಬಾಲಿಸಿದರು. ಅವರು ಸಮಾಧಿಯನ್ನೂ ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳವನ್ನೂ ನೋಡಿದರು. 56ಬಳಿಕ ಆ ಸ್ತ್ರೀಯರು ಯೇಸುವಿನ ದೇಹಕ್ಕೆ ಹಚ್ಚಲು ಪರಿಮಳದ್ರವ್ಯಗಳನ್ನು ಸಿದ್ಧಮಾಡುವುದಕ್ಕಾಗಿ ಹೊರಟುಹೋದರು.
ಸಬ್ಬತ್ ದಿನದಲ್ಲಿ ಅವರು ವಿಶ್ರಮಿಸಿಕೊಂಡರು. ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಸಬ್ಬತ್‌ದಿನದಂದು ಜನರೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳಬೇಕಿತ್ತು.

הדגשה

שתף

העתק

None

רוצים לשמור את ההדגשות שלכם בכל המכשירים שלכם? הירשמו או היכנסו