ಆದಿಕಾಂಡ 14

14
ಅಬ್ರಾಮನು ಲೋಟನನ್ನು ರಕ್ಷಿಸಿದ್ದು
1ಶಿನಾರಿನ ಅರಸ ಅಮ್ರಾಫೆಲನು ಎಲ್ಲಸಾರಿನ ಅರಸ ಅರಿಯೋಕನು, ಏಲಾಮಿನ ಅರಸ ಕೆದೊರ್ಲಗೋಮರನು, ಗೋಯಿಮದ ಅರಸ ತಿದ್ಗಾಲನು ಇವರ ದಿನಗಳಲ್ಲಿ ಆದದ್ದೇನೆಂದರೆ: 2ಇವರು ಸೊದೋಮಿನ ಅರಸ ಬೆರಗನೂ ಗೊಮೋರದ ಅರಸ ಬಿರ್ಶಗನೂ ಅದ್ಮಾಹದ ಅರಸ ಶಿನಾಬನಿಗೂ ಚೆಬೋಯಿಮಿನ ಅರಸ ಶೆಮೇಬರನಿಗೂ ಬೆಲಗಿನ ಅಂದರೆ, ಚೋಗರದ ಅರಸನಿಗೂ ವಿರೋಧವಾಗಿ ಯುದ್ಧಮಾಡಿದರು. 3ಇವರೆಲ್ಲರು ಉಪ್ಪಿನ ಸಮುದ್ರವಾಗಿರುವ ಸಿದ್ದೀಮ್ ತಗ್ಗಿನಲ್ಲಿ ಒಟ್ಟಾಗಿ ಕೂಡಿಬಂದರು. 4ಅವರು ಹನ್ನೆರಡು ವರ್ಷ ಕೆದೊರ್ಲಗೋಮರನಿಗೆ ಸೇವೆಮಾಡಿ, ಹದಿಮೂರನೆಯ ವರ್ಷದಲ್ಲಿ ತಿರುಗಿಬಿದ್ದರು.
5ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಅವನ ಸಂಗಡ ಇದ್ದ ಅರಸರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ, ಹಾಮಿನಲ್ಲಿ ಜೂಜ್ಯರನ್ನೂ, ಶಾವೆ ಕಿರ್ಯಾತಯಿಮಿನಲ್ಲಿ ಏಮಿಯರನ್ನೂ, 6ಅವರ ಬೆಟ್ಟವಾದ ಸೇಯೀರನಲ್ಲಿ ಹೋರಿಯರನ್ನೂ ಅರಣ್ಯಕ್ಕೆ ಸಮೀಪವಾದ ಏಲ್ಪಾರಾನಿನವರೆಗೂ ಅವರನ್ನು ಸೋಲಿಸಿದರು. 7ಅವರು ಹಿಂದಿರುಗಿ ಕಾದೇಶ್ ಎಂಬ ಎನ್ಮಿಷ್ಪಾಟಿಗೆ ಬಂದು, ಅಮಾಲೇಕ್ಯರ ಎಲ್ಲಾ ಬಯಲನ್ನು ಹಜಜೋನ್ ತಾಮಾರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಜಯಿಸಿದರು.
8ಸೊದೋಮಿನ ಅರಸನೂ ಗೊಮೋರದ ಅರಸನೂ ಅದ್ಮಾಹದ ಅರಸನೂ ಚೆಬೋಯಿಮಿನ ಅರಸನೂ ಚೋಗರೆಂಬ ಬೆಲಗದ ಅರಸನೂ ಹೊರಟು, 9ಏಲಾಮಿನ ಅರಸ ಕೆದೊರ್ಲಗೋಮರನಿಗೂ ಗೋಯಿಮದ ಅರಸನಾದ ತಿದ್ಗಾಲನಿಗೂ ಶಿನಾರಿನ ಅರಸ ಅಮ್ರಾಫೆಲನಿಗೂ ಎಲ್ಲಸಾರಿನ ಅರಸ ಅರಿಯೋಕನಿಗೂ ವಿರೋಧವಾಗಿ ಸಿದ್ದೀಮ್ ತಗ್ಗಿನಲ್ಲಿ ಯುದ್ಧಮಾಡಿದರು. ಹೀಗೆ ನಾಲ್ವರು ಅರಸರಿಗೆ ವಿರೋಧವಾಗಿ ಐದು ಮಂದಿ ಅರಸರು ಎದುರಿಸಿದರು. 10ಸಿದ್ದೀಮ್ ತಗ್ಗು ಕಲ್ಲರಗಿನ ಕೆಸರುಕುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ಅರಸರು ಓಡಿಹೋಗಿ ಅದರಲ್ಲಿ ಬಿದ್ದರು. ಉಳಿದವರು ಬೆಟ್ಟಕ್ಕೆ ಓಡಿಹೋದರು. 11ಆಗ ಅವರು ಸೊದೋಮ್, ಗೊಮೋರಗಳ ಎಲ್ಲಾ ಸಂಪತ್ತನ್ನೂ, ಅವರ ಎಲ್ಲಾ ಆಹಾರ ಪದಾರ್ಥಗಳನ್ನೂ ತೆಗೆದುಕೊಂಡು ಹೊರಟು ಹೋದರು. 12ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ಸಹೋದರನ ಮಗ ಲೋಟನನ್ನು ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು.
13ತಪ್ಪಿಸಿಕೊಂಡವನೊಬ್ಬನು ಹೋಗಿ ಹಿಬ್ರಿಯನಾದ ಅಬ್ರಾಮನಿಗೆ ಇದನ್ನು ತಿಳಿಸಿದನು. ಆಗ ಅಬ್ರಾಮನು ಎಷ್ಕೋಲನಿಗೂ ಆನೇರನಿಗೂ ಸಹೋದರನಾಗಿದ್ದ ಅಮೋರಿಯನಾದ ಮಮ್ರೆಯನ ತೋಪಿನಲ್ಲಿ ವಾಸವಾಗಿದ್ದನು. ಇವರು ಅಬ್ರಾಮನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದರು. 14ತನ್ನ ಸಹೋದರನ ಮಗನು ಸೆರೆಯಾಗಿ ಹೋಗಿರುವುದನ್ನು ಕೇಳಿದಾಗ, ಅಬ್ರಾಮನು ತನ್ನ ಮನೆಯಲ್ಲಿ ಹುಟ್ಟಿ, ಶಿಕ್ಷಿತರಾಗಿದ್ದ ಮುನ್ನೂರ ಹದಿನೆಂಟು ಸೇವಕರನ್ನು ಯುದ್ಧಕ್ಕೆ ಸಿದ್ಧಮಾಡಿ, ದಾನಿನವರೆಗೆ ಹಿಂದಟ್ಟಿದನು. 15ಅಬ್ರಾಮನು ರಾತ್ರಿಯಲ್ಲಿ ಅವರಿಗೆ ವಿರೋಧವಾಗಿ ತನ್ನ ಸೇವಕರ ಸೈನ್ಯವನ್ನು ವಿಭಾಗಿಸಿ, ಅವರನ್ನು ಹೊಡೆದು, ದಮಸ್ಕದ ಉತ್ತರದಲ್ಲಿ ಹೋಬಾದವರೆಗೆ ಅವರನ್ನು ಸೋಲಿಸಿದನು. 16ಆಸ್ತಿಯನ್ನೆಲ್ಲಾ ಹಿಂದಕ್ಕೆ ತೆಗೆದುಕೊಂಡು ಬಂದನು. ತನ್ನ ಬಂಧುವಾದ ಲೋಟನನ್ನೂ, ಅವನ ಸಂಪತ್ತನ್ನೂ ಸ್ತ್ರೀಯರನ್ನೂ ಜನರನ್ನೂ ಹಿಂದಕ್ಕೆ ತೆಗೆದುಕೊಂಡು ಬಂದನು.
17ಅವನು ಕೆದೊರ್ಲಗೋಮರನನ್ನೂ, ಅವನ ಸಂಗಡ ಇದ್ದ ರಾಜರನ್ನೂ ಸೋಲಿಸಿ, ಹಿಂದಿರುಗಿ ಬಂದಾಗ, ಸೊದೋಮಿನ ಅರಸನು ಹೊರಟು ಶಾವೆ ತಗ್ಗು ಎಂಬ ಅರಸನ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಳ್ಳುವುದಕ್ಕಾಗಿ ಬಂದನು.
18ಸಾಲೇಮಿನ ಅರಸ ಮೆಲ್ಕಿಜೆದೇಕನು ರೊಟ್ಟಿ ಮತ್ತು ದ್ರಾಕ್ಷಾರಸವನ್ನು ತಂದನು. ಇವನು ಮಹೋನ್ನತರಾದ ದೇವರ ಯಾಜಕನೂ ಆಗಿದ್ದನು. 19ಇವನು ಅಬ್ರಾಮನನ್ನು ಹೀಗೆ ಆಶೀರ್ವದಿಸಿದನು:
“ಅಬ್ರಾಮನು ಭೂಮಿ, ಆಕಾಶವನ್ನು ಸೃಷ್ಟಿಸಿದ
ಮಹೋನ್ನತ ದೇವರಿಂದ ಆಶೀರ್ವಾದ ಹೊಂದಲಿ.
20ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ
ಮಹೋನ್ನತ ದೇವರು ಸ್ತುತಿಹೊಂದಲಿ.”
ಅಬ್ರಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನು.
21ಸೊದೋಮಿನ ಅರಸನು ಅಬ್ರಾಮನಿಗೆ, “ನೀನು ಬಿಡಿಸಿಕೊಂಡು ಬಂದ ಜನರನ್ನು ನನಗೆ ಕೊಡು. ಸಂಪತ್ತನ್ನು ನೀನು ತೆಗೆದುಕೋ,” ಎಂದನು.
22ಅದಕ್ಕೆ ಅಬ್ರಾಮನು ಸೊದೋಮಿನ ಅರಸನಿಗೆ, “ಭೂಮಿ ಆಕಾಶವನ್ನು ಸ್ವಾಧೀನ ಪಡಿಸಿಕೊಂಡಿರುವ ಮಹೋನ್ನತ ದೇವರಾಗಿರುವ ಯೆಹೋವ ದೇವರ ಕಡೆಗೆ ನನ್ನ ಕೈ ಎತ್ತಿ ಪ್ರಮಾಣ ಮಾಡುತ್ತೇನೆ. 23ನಿನಗೆ ಸೇರಿದ ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಾನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ‘ನಾನು ಅಬ್ರಾಮನನ್ನು ಐಶ್ವರ್ಯವಂತನನ್ನಾಗಿ ಮಾಡಿದ್ದೇನೆ’ ಎಂದು ನೀನು ಹೇಳಬಾರದು. 24ನನ್ನ ಆಳುಗಳು ಊಟಮಾಡಿದ್ದು ಸಾಕು. ನನ್ನ ಸಂಗಡ ಬಂದ ಆನೇರ, ಎಷ್ಕೋಲ್ ಮತ್ತು ಮಮ್ರೆ ಎಂಬ ಈ ಜನರ ಪಾಲನ್ನು ಬಿಟ್ಟು ನಾನು ಏನನ್ನೂ ತೆಗೆದುಕೊಳ್ಳುವುದಿಲ್ಲ. ಇವರು ತಮ್ಮ ಪಾಲನ್ನು ತೆಗೆದುಕೊಳ್ಳಲಿ,” ಎಂದನು.

הדגשה

שתף

העתק

None

רוצים לשמור את ההדגשות שלכם בכל המכשירים שלכם? הירשמו או היכנסו