ಆದಿಕಾಂಡ 8

8
ಜಲಪ್ರಳಯದ ಮುಗಿವು
1ದೇವರಿಗೆ ನೋಹನ ಮತ್ತು ಅವನ ಸಂಗಡ ನಾವೆಯಲ್ಲಿದ್ದ ಎಲ್ಲ ಪ್ರಾಣಿಪಕ್ಷಿಗಳ ನೆನಪಿತ್ತು. ಅವರು ಭೂಮಿಯ ಮೇಲೆ ಗಾಳಿ ಬೀಸುವಂತೆ ಮಾಡಲು ನೀರು ತಗ್ಗಿತು. 2ಭೂಮಿಯ ಅಡಿಸಾಗರದ ಸೆಲೆಗಳು ಹಾಗೂ ಆಕಾಶದ ತೂಬುಗಳು ಮುಚ್ಚಿಹೋದವು; ಸುರಿಯುತ್ತಿದ್ದ ಮಳೆ ನಿಂತುಹೋಯಿತು. 3ಭೂಮಿಯ ಮೇಲಿದ್ದ ನೀರು ಸ್ವಲ್ಪ ಸ್ವಲ್ಪವಾಗಿ ತಗ್ಗುತ್ತಾ ನೂರೈವತ್ತು ದಿನಗಳಾದ ಮೇಲೆ ಕಡಿಮೆಯಾಯಿತು. 4ಏಳನೆಯ ತಿಂಗಳಿನ ಹದಿನೇಳನೆಯ ದಿನ ನಾವೆಯು ಅರಾರಾಟ್ ನಾಡಿನ ಬೆಟ್ಟದ ಸಾಲಿನಲ್ಲಿ ನಿಂತಿತು. 5ಹತ್ತನೆಯ ತಿಂಗಳಿನವರೆಗೂ ನೀರು ಕ್ರಮೇಣ ಕಡಿಮೆಯಾಗುತ್ತ ಬಂದು ಹತ್ತನೆಯ ತಿಂಗಳಿನ ಮೊದಲನೆಯ ದಿನ ಬೆಟ್ಟಗಳ ಶಿಖರಗಳು ಕಾಣಿಸಿಕೊಂಡವು.
6ನಲವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು. 7ಅದು ಭೂಮಿಯ ಮೇಲಿದ್ದ ನೀರು ಒಣಗುವ ತನಕ ಹೋಗುತ್ತಾ ಬರುತ್ತಾ ಇತ್ತು. 8ನೀರು ಇಳಿಯಿತೋ ಇಲ್ಲವೋ ಎಂದು ತಿಳಿದುಕೊಳ್ಳಲು ನೋಹನು ಅನಂತರ ಪಾರಿವಾಳವೊಂದನ್ನು ಹೊರಕ್ಕೆ ಬಿಟ್ಟನು. 9ಭೂಮಿಯ ಮೇಲೆಲ್ಲ ನೀರು ಇದ್ದುದರಿಂದ, ಕಾಲಿಡುವುದಕ್ಕೆ ಸ್ಥಳ ಕಾಣದೆ ಈ ಪಾರಿವಾಳ ನಾವೆಗೆ ಹಿಂತಿರುಗಿತು. ನೋಹನು ಕೈ ಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಹಾಕಿಕೊಂಡನು. 10ಇನ್ನೂ ಏಳು ದಿವಸ ಕಾದು, ಪಾರಿವಾಳವನ್ನು ಹೊರಕ್ಕೆಬಿಟ್ಟನು. 11ಸಂಜೆ ವೇಳೆಗೆ ಆ ಪಾರಿವಾಳ ಅವನ ಬಳಿಗೆ ಮರಳಿತು; ಆಗ ಇಗೋ! ಅದರ ಬಾಯಲ್ಲಿ ಎಣ್ಣೇಮರದ ಹೊಸ ಚಿಗುರಿತ್ತು. ಇದನ್ನು ನೋಡಿ ನೋಹನು ಭೂಮಿಯ ಮೇಲಿಂದ ನೀರು ಇಳಿದುಹೋಗಿದೆಯೆಂದು ತಿಳಿದುಕೊಂಡನು. 12ಮತ್ತೆ ಏಳುದಿನಗಳಾದ ಮೇಲೆ ಇನ್ನೊಮ್ಮೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಈ ಸಾರಿ ಅದು ಹಿಂತಿರುಗಿ ಬರಲೇ ಇಲ್ಲ.
13ನೋಹನ 601 ನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಂದು ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಸಣಿಗೆಯನ್ನು ತೆಗೆದು ನೋಡಿದನು. ಇಗೋ, ಭೂಮಿಯ ತೇವ ಆರುತ್ತಿತ್ತು. 14ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಂದು ನೆಲವು ಪೂರ್ತಿಯಾಗಿ ಒಣಗಿತ್ತು.
15-16ಆಗ ದೇವರು ನೋಹನಿಗೆ, “ನೀನು, ನಿನ್ನ ಹೆಂಡತಿ, ಮಕ್ಕಳು ಮತ್ತು ಅವರ ಮಡದಿಯರು ನಾವೆಯನ್ನು ಬಿಟ್ಟು ಹೊರಗೆ ಬನ್ನಿ. 17ನಿನ್ನ ಬಳಿಯಿರುವ ಪ್ರಾಣಿಪಕ್ಷಿ, ಕ್ರಿಮಿಕೀಟ ಮುಂತಾದ ಎಲ್ಲ ಜೀವಿಗಳೂ ಹೊರಗೆ ಬರಲಿ; ಅವುಗಳ ಸಂಖ್ಯೆ ಭೂಮಿಯಲ್ಲಿ ಬೆಳೆಯಲಿ; ಅವು ಹೆಚ್ಚಿ ವೃದ್ಧಿಯಾಗಲಿ,” ಎಂದರು.
18ಅಂತೆಯೇ ನೋಹನು, ಮಡದಿ, ಮಕ್ಕಳು, ಸೊಸೆಯರ ಸಮೇತ ಹೊರಗೆ ಬಂದನು. 19ಪ್ರಾಣಿ, ಪಶು, ಪಕ್ಷಿ, ಕ್ರಿಮಿ ಇವುಗಳೆಲ್ಲವೂ ತಮ್ಮ ತಮ್ಮ ಜಾತಿಗನುಸಾರ ನಾವೆಯಿಂದ ಹೊರಗೆ ಬಂದವು.
ಬಲಿಯ ಅರ್ಪಣೆ
20ನೋಹನು ಸರ್ವೇಶ್ವರ ಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿದನು. ಶುದ್ಧವಾದ ಎಲ್ಲ ಪ್ರಾಣಿಪಕ್ಷಿಗಳಿಂದ ಆಯ್ದು ಆ ಪೀಠದ ಮೇಲೆ ದಹನಬಲಿಯನ್ನು ಅರ್ಪಿಸಿದನು. 21ಗಮಗಮಿಸುವ ಅದರ ಸುಗಂಧವು ಸ್ವಾಮಿಯನ್ನು ಮುಟ್ಟಿತು. ಅವರು ಮನದಲ್ಲೆ ಹೀಗೆಂದುಕೊಂಡರು: “ಇನ್ನು ಮೇಲೆ ನಾನು ಮನುಷ್ಯರ ನಿಮಿತ್ತ ಭೂಮಿಯನ್ನು ಶಪಿಸುವುದಿಲ್ಲ. ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದು. ಈಗ ಮಾಡಿದಂತೆ ಇನ್ನು ಮೇಲೆ ಎಲ್ಲ ಜೀವಿಗಳನ್ನು ನಾನು ಸಂಹರಿಸುವುದಿಲ್ಲ.
22ಬಿತ್ತನೆ - ಕೊಯಿಲು
ಚಳಿ - ಬಿಸಿಲು
ಗ್ರೀಷ್ಮ - ಹೇಮಂತ
ಹಗಲು - ಇರುಳು
ಈ ಕ್ರಮಕ್ಕೆ ಇರದು ಅಂತ್ಯ
ಜಗವಿರುವವರೆಗು.”

하이라이트

공유

복사

None

모든 기기에 하이라이트를 저장하고 싶으신가요? 회원가입 혹은 로그인하세요