Logótipo YouVersion
Ícone de pesquisa

ಆದಿಕಾಂಡ 22

22
ಅಬ್ರಹಾಮನ ಅಗ್ನಿಪರೀಕ್ಷೆ
1ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೋಸ್ಕರ, “ಅಬ್ರಹಾಮನೇ,” ಎಂದು ಕರೆದರು. ಅವನು “ಇಗೋ, ಸಿದ್ಧನಿದ್ದೇನೆ” ಎಂದನು. 2ಆಗ ದೇವರು, “ನಿನಗೆ ಒಬ್ಬನೇ ಒಬ್ಬನೂ ಮುದ್ದುಮಗನೂ ಆದ ಇಸಾಕನನ್ನು ಕರೆದುಕೊಂಡು ಮೊರೀಯ ಪ್ರಾಂತಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನಬಲಿಯಾಗಿ ಅರ್ಪಿಸು” ಎಂದರು.
3ಅಬ್ರಹಾಮನು ಮುಂಜಾನೆಯೇ ಎದ್ದು ತನ್ನ ಹೇಸರಗತ್ತೆಗೆ ತಡಿಹಾಕಿಸಿ ಹೋಮಬಲಿಗೆ ಬೇಕಾದ ಕಟ್ಟಿಗೆಯನ್ನು ಸಿಗಿದು ಸಿದ್ಧಮಾಡಿಕೊಂಡು ಸೇವಕರಿಬ್ಬರನ್ನು ಹಾಗೂ ತನ್ನ ಮಗ ಇಸಾಕನನ್ನು ಕರೆದುಕೊಂಡು ದೇವರು ಹೇಳಿದ ಸ್ಥಳಕ್ಕೆ ಹೊರಟನು. 4ಮೂರನೆಯ ದಿನ ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ದೂರದಲ್ಲಿ ಆ ಸ್ಥಳ ಕಾಣಿಸಿತು. 5ಅವನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯನ್ನು ನೋಡಿಕೊಂಡಿರಿ; ನಾನೂ ನನ್ನ ಮಗನೂ ಅಲ್ಲಿಗೆ ಹೋಗಿ ದೇವಾರಾಧನೆ ಮಾಡಿಕೊಂಡು ಪುನಃ ಇಲ್ಲಗೆ ಬರುತ್ತೇವೆ,” ಎಂದು ಹೇಳಿದನು.
6ಅಬ್ರಹಾಮನು ದಹನಬಲಿಗೆ ಬೇಕಾದ ಕಟ್ಟಿಗೆಯನ್ನು ತನ್ನ ಮಗ ಇಸಾಕನ ಮೇಲೆ ಹೊರಿಸಿದನು; ಬೆಂಕಿಯನ್ನು ಹಾಗೂ ಕತ್ತಿಯನ್ನು ತನ್ನ ಕೈಯಲ್ಲೇ ತೆಗೆದುಕೊಂಡನು. ಇಬ್ಬರೂ ಅಲ್ಲಿಂದ ಮುಂದಕ್ಕೆ ಹೊರಟರು. 7ಹೋಗುತ್ತಾ ಇದ್ದಾಗ ಇಸಾಕನು ತಂದೆ ಅಬ್ರಹಾಮನನ್ನು, “ಅಪ್ಪಾ” ಎಂದು ಕರೆದ; “ಏನು ಮಗನೇ?” ಎಂದ ಅಬ್ರಹಾಮ. ಇಸಾಕನು, “ಬೆಂಕಿ-ಕಟ್ಟಿಗೆಯೇನೋ ಇದೆ; ಆದರೆ ದಹನಬಲಿಗೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದ. 8ಅದಕ್ಕೆ ಅಬ್ರಹಾಮನು, “ಬಲಿಗೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುತ್ತಾರೆ, ಮಗನೇ,” ಎಂದು ಉತ್ತರಕೊಟ್ಟ. ಅವರಿಬ್ಬರೂ ಹಾಗೇ ಮುಂದಕ್ಕೆ ಸಾಗಿದರು.
9ದೇವರು ಹೇಳಿದ ಸ್ಥಳಕ್ಕೆ ಬಂದು ಸೇರಿದಾಗ ಅಬ್ರಹಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ, ಮಗ ಇಸಾಕನ ಕೈಕಾಲುಗಳನ್ನು ಬಿಗಿದು, ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. 10ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. 11ಆದರೆ ಸರ್ವೇಶ್ವರನ ದೂತನು ಆಕಾಶದಿಂದ, "ಅಬ್ರಹಾಮನೇ, ಹೇ ಅಬ್ರಹಾಮನೇ" ಎಂದು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ ಸಿದ್ಧನಿದ್ದೇನೆ” ಎಂದ. 12ದೂತನು ಅವನಿಗೆ, "ಹುಡುಗನ ಮೇಲೆ ಕೈಯೆತ್ತಬೇಡ; ಅವನಿಗೆ ಯಾವ ಹಾನಿಯನ್ನೂ ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿಂತೆಗೆಯಲಿಲ್ಲ; ಎಂತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ನನಗೆ ಚೆನ್ನಾಗಿ ಗೊತ್ತಾಯಿತು,” ಎಂದು ಹೇಳಿದನು.
13ಅಬ್ರಹಾಮನು ಕಣ್ಣೆತ್ತಿ ನೋಡಿದ. ತನ್ನ ಹಿಂದುಗಡೆ ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿಕೊಂಡಿತ್ತು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಅದನ್ನು ದಹನಬಲಿಯನ್ನಾಗಿ ಅರ್ಪಿಸಿದ. 14ಆ ಸ್ಥಳಕ್ಕೆ “ಯೆಹೋವ ಯೀರೆ"#22:14 ಅಂದರೆ, "ಒದಗಿಸುವ ಒಡೆಯ". ಎಂದು ಹೆಸರಿಟ್ಟ. 15“ಬೆಟ್ಟದ ಮೇಲೆ ಸರ್ವೇಶ್ವರ ಸ್ವಾಮಿಯೇ ಒದಗಿಸುತ್ತಾರೆ” ಎಂಬ ಹೇಳಿಕೆ ಇಂದಿಗೂ ರೂಢಿಯಲ್ಲಿದೆ. ಸರ್ವೇಶ್ವರ ಸ್ವಾಮಿಯ ದೂತನು ಆಕಾಶದಿಂದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, 16“ಸರ್ವೇಶ್ವರನ ವಾಕ್ಯವನ್ನು ಕೇಳು; ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿಂತೆಗೆಯದೆ ಹೋದುದರಿಂದ ನಾನು ನಿನ್ನನ್ನು ತಪ್ಪದೆ ಆಶೀರ್ವದಿಸುತ್ತೇನೆ; 17ನಿನ್ನ ಸಂತತಿಯನ್ನು ಹೆಚ್ಚಿಸಿಯೇ ಹೆಚ್ಚಿಸುತ್ತೇನೆ; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದ ಮರಳಿನಂತೆಯೂ ಅಸಂಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನಪಡಿಸಿಕೊಳ್ಳುವರು. 18ನೀನು ನನ್ನ ಮಾತನ್ನು ಕೇಳಿದ್ದರಿಂದ ವಿಶ್ವದ ಎಲ್ಲ ರಾಷ್ಟ್ರಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ,” ಎಂದನು.
19ತರುವಾಯ ಅಬ್ರಹಾಮನು ತನ್ನ ಸೇವಕರ ಬಳಿಗೆ ಮರಳಿ ಬಂದನು. ಅವರೆಲ್ಲರೂ ಜೊತೆಯಾಗಿ ಬೇರ್ಷೆಬಕ್ಕೆ ಹೋದರು. ಅಲ್ಲೇ ಅಬ್ರಹಾಮನು ವಾಸಮಾಡುತ್ತಿದ್ದನು.
ನಾಹೋರನ ಸಂತಾನ
20ಕೆಲವು ಕಾಲವಾದ ಮೇಲೆ ಅಬ್ರಹಾಮನಿಗೆ ತನ್ನ ತಮ್ಮನಾದ ನಾಹೋರನಿಗೆ ಮಿಲ್ಕಳಿಂದ ಮಕ್ಕಳಾದುವೆಂಬ ಸಮಾಚಾರ ಮುಟ್ಟಿತು. 21ಅವರುಗಳ ಹೆಸರು ಇವು - ಚೊಚ್ಚಲವಾದ ಊಚ್, ಇವನ ತಮ್ಮ ಬೂಚ್, (ಆರಾಮನ ತಂದೆಯಾದ) ಕೆಮೂವೇಲ್, 22ಕೆಸೆದ್, ಹಜೋ, ಪಿಲ್ದಾಷ್, ಇದ್ಲಾಫ್ ಮತ್ತು ಬೆತೂವೇಲ್. 23ಬೆತೂವೇಲನು ರೆಬೆಕ್ಕಳ ತಂದೆ. ಈ ಎಂಟುಮಂದಿಯನ್ನು ಮಿಲ್ಕಳು ಅಬ್ರಹಾಮನ ತಮ್ಮನಾದ ನಾಹೋರನಿಗೆ ಹೆತ್ತಳು. 24ಇದೂ ಅಲ್ಲದೆ ಅವನ ಉಪಪತ್ನಿಯಾದ ರೂಮಳೆಂಬವಳು ಟೆಬಹ, ಗಹಮ್, ತಹಷ್, ಮಾಕಾ ಎಂಬುವರನ್ನು ಹೆತ್ತಳು.

Atualmente selecionado:

ಆದಿಕಾಂಡ 22: KANCLBSI

Destaque

Partilhar

Copiar

None

Quer salvar os seus destaques em todos os seus dispositivos? Faça o seu registo ou inicie sessão