Logótipo YouVersion
Ícone de pesquisa

ಆದಿಕಾಂಡ 29

29
ಲಾಬಾನನ ಮನೆಯಲ್ಲಿ ಯಕೋಬನು
1ಬಳಿಕ ಯಕೋಬನು ಪ್ರಯಾಣವನ್ನು ಮುಂದುವರಿಸುತ್ತಾ ಮೂಡಣದವರ ನಾಡಿಗೆ ಬಂದನು. 2ಕೂಡಲೆ ಅವನಿಗೆ ಆ ಅಡವಿಯಲ್ಲಿ ಬಾವಿಯೊಂದು ಕಾಣಿಸಿತು. ಅದರ ಬಳಿ ಮೂರು ಕುರಿಹಿಂಡು ಮಲಗಿದ್ದವು. ಕುರಿಗಳನ್ನು ನೀರು ಕುಡಿಸುವುದಕ್ಕಾಗಿ ಆ ಬಾವಿಗೆ ಹೊಡೆದುಕೊಂಡು ಬರುವುದು ವಾಡಿಕೆ. ಬಾವಿಯ ಮೇಲೆ ಮುಚ್ಚಿದ್ದ ಕಲ್ಲು ದೊಡ್ಡದಾಗಿತ್ತು. 3ಹಿಂಡುಗಳೆಲ್ಲ ಅಲ್ಲಿ ಕೂಡಿದ್ದಾಗ ಕಾಯುವವರು ಬಾವಿಯ ಮೇಲೆ ಮುಚ್ಚಿದ್ದ ಕಲ್ಲನ್ನು ಸರಿಸಿ ಕುರಿಗಳಿಗೆ ನೀರು ಕುಡಿಸಿ ಮತ್ತೆ ಕಲ್ಲನ್ನು ಬಾವಿಯ ಮೇಲೆ ಮುಚ್ಚುತ್ತಿದ್ದರು.
4ಯಕೋಬನು ಅವರಿಗೆ, “ಏನ್ರಪ್ಪ, ನೀವು ಯಾವ ಊರಿನವರು?” ಎಂದು ವಿಚಾರಿಸಿದನು. ಅವರು, “ನಾವು ಖಾರಾನ್ ಊರಿನವರು,” ಎಂದರು. 5“ನಾಹೋರನ ಮಗ-ಲಾಬಾನರನ್ನು ಬಲ್ಲಿರಾ?’ ಎಂದು ಕೇಳಿದ್ದಕ್ಕೆ “ಬಲ್ಲೆವು” ಎಂದು ಉತ್ತರಕೊಟ್ಟರು. 6“ಅವರು ಆರೋಗ್ಯವೇ?” ಎಂದು ಕೇಳಲು ಅವರು, “ಹೌದು ಆರೋಗ್ಯ; ಅಗೋ, ಅವರ ಮಗಳು ರಾಖೇಲಳು ಕುರಿಗಳ ಸಂಗಡ ಬರುತ್ತಿದ್ದಾಳೆ,” ಎಂದರು.
7ಯಕೋಬನು, “ಇನ್ನೂ ಬಹಳ ಹೊತ್ತು ಇದೆ; ಕುರಿಗಳನ್ನು ಒಟ್ಟುಗೂಡಿಸುವ ಸಮಯ ಆಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಬಾರದೇಕೆ?” ಎಂದನು. 8ಅವರು, “ಇಲ್ಲ, ಕುರಿಗಾಹಿಗಳೆಲ್ಲ ಒಂದುಗೂಡಿ ಬಾವಿಯ ಮೇಲೆ ಮುಚ್ಚಿರುವ ಕಲ್ಲನ್ನು ತೆಗೆಯುವ ತನಕ ಕುಡಿಸಕೂಡದು, ಅನಂತರ ಕುರಿಗಳಿಗೆ ನೀರು ಕುಡಿಸುತ್ತೇವೆ,” ಎಂದರು.
9ಯಕೋಬನು ಅವರೊಂದಿಗೆ ಮಾತಾಡುತ್ತ ಇರುವಾಗಲೆ ಕುರಿಗಾಹಿ ರಾಖೇಲಳು ತನ್ನ ತಂದೆಯ ಕುರಿಗಳನ್ನು ಹೊಡೆದುಕೊಂಡು ಅಲ್ಲಿಗೆ ಬಂದಳು. 10ತನ್ನ ಸೋದರಮಾವ ಲಾಬಾನನ ಮಗಳಾದ ಆ ರಾಖೇಲಳನ್ನೂ ಅವನ ಕುರಿಗಳನ್ನೂ ಕಂಡ ಕೂಡಲೆ ಯಕೋಬನು ಬಾವಿಯ ಹತ್ತಿರಕ್ಕೆ ಹೋಗಿ ಅದರ ಮೇಲಿದ್ದ ಕಲ್ಲನ್ನು ಸರಿಸಿ ಸೋದರಮಾವನ ಆ ಕುರಿಗಳಿಗೆ ನೀರು ಕುಡಿಸಿದನು. 11ಅನಂತರ ರಾಖೇಲಳಿಗೆ ಮುದ್ದಿಟ್ಟನು; ಸಂತೋಷ ಉಕ್ಕಿಬಂದು ಗಟ್ಟಿಯಾಗಿ ಅತ್ತನು. 12ತಾನು ಆಕೆಯ ತಂದೆಗೆ ಸೋದರಳಿಯ, ರೆಬೆಕ್ಕಳ ಮಗ ಎಂದು ತಿಳಿಸಿದನು. ರಾಖೇಲಳು ಕೂಡಲೆ ಓಡಿಹೋಗಿ ತನ್ನ ತಂದೆಗೆ ಸಮಾಚಾರ ಮುಟ್ಟಿಸಿದಳು. 13ಲಾಬಾನನು ತನ್ನ ಸೋದರಳಿಯ ಬಂದ ಸುದ್ದಿಯನ್ನು ಕೇಳಿ ಅವನನ್ನು ಎದುರುಗೊಳ್ಳಲು ಓಡಿಬಂದನು. ಯಕೋಬನನ್ನು ಅಪ್ಪಿಕೊಂಡು ಮುದ್ದಿಟ್ಟು, ಮನೆಗೆ ಕರೆದುಕೊಂಡು ಹೋದನು. ನಡೆದ ಸಂಗತಿಗಳನ್ನೆಲ್ಲ ಯಕೋಬನು ಲಾಬಾನನಿಗೆ ತಿಳಿಸಿದನು. 14ಲಾಬಾನನು, “ನಿಜವಾಗಿಯೂ ನೀನು ನನ್ನ ರಕ್ತಸಂಬಂಧಿ,” ಎಂದನು. ಅವನೊಂದಿಗೆ ಯಕೋಬನು ಒಂದು ತಿಂಗಳವರೆಗೂ ವಾಸಮಾಡಿದನು.
ಯಕೋಬನ ವಿವಾಹ
15ಆ ಬಳಿಕ ಲಾಬಾನನು ಯಕೋಬನಿಗೆ, “ನೀನು ನನ್ನ ಸಂಬಂಧಿಯೆಂದ ಮಾತ್ರಕ್ಕೆ ಬಿಟ್ಟಿ ಸೇವೆ ಮಾಡಿಸಿಕೊಳ್ಳುವುದು ಸರಿಯಲ್ಲ; ನಿನ್ನ ಕೆಲಸಕ್ಕೆ ಏನು ಸಂಬಳ ಕೊಡಲಿ, ಹೇಳು?” ಎಂದು ಕೇಳಿದನು. 16ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ದೊಡ್ಡವಳ ಹೆಸರು ಲೇಯಾ, ಚಿಕ್ಕವಳ ಹೆಸರು ರಾಖೇಲ್. 17ಲೇಯಾ ಹೊಳಪಿನ ಕಣ್ಣಿನವಳು. ರಾಖೇಲಳಾದರೋ ರೂಪವತಿ, ಲಾವಣ್ಯವತಿ.
18ಯಕೋಬನಿಗೆ ರಾಖೇಲಳ ಮೇಲೆ ಪ್ರೀತಿ. ಎಂತಲೇ, “ನಿಮ್ಮ ಕಿರಿಯ ಮಗಳು ರಾಖೇಲಳಿಗೋಸ್ಕರ ನಿಮ್ಮಲ್ಲಿ ಏಳು ವರುಷ ಸೇವೆಮಾಡುತ್ತೇನೆ,” ಎಂದು ಹೇಳಿದನು.
19ಲಾಬಾನನು, “ಆಕೆಯನ್ನು ಬೇರೆ ಒಬ್ಬನಿಗೆ ಕೊಡುವುದಕ್ಕಿಂತ ನಿನಗೆ ಕೊಡುವುದೇ ಲೇಸು, ನನ್ನಲ್ಲೇ ತಂಗಿರು,” ಎಂದನು. 20ಅಂತೆಯೇ ಯಕೋಬನು ರಾಖೇಲಳಿಗಾಗಿ ಏಳು ‌ವರ್ಷ‌ಕಾಲ ಸೇವೆಮಾಡಿದನು. ಆಕೆಯ ಮೇಲೆ ಅವನಿಗೆ ಬಹಳ ಪ್ರೀತಿಯಿದ್ದುದರಿಂದ ಅದು ಅವನಿಗೆ ಕೇವಲ ಕೆಲವೇ ದಿನಗಳಂತೆ ಕಾಣಿಸಿತು.
21ತರುವಾಯ ಯಕೋಬನು ಲಾಬಾನನಿಗೆ, “ನನ್ನ ಸೇವಾವಧಿ ಮುಗಿಯಿತು. ಆಕೆ ನನ್ನ ಹೆಂಡತಿಯಾಗುವಂತೆ ನನ್ನ ಸ್ವಾಧೀನಕ್ಕೆ ಕೊಡಿ,” ಎಂದು ಕೇಳಿದನು. 22ಆಗ ಲಾಬಾನನು ಊರಿನವರನ್ನೆಲ್ಲ ಕರೆಯಿಸಿ ಔತಣವನ್ನು ಏರ್ಪಡಿಸಿದನು. 23ರಾತ್ರಿಯಾದಾಗ ತನ್ನ ಹಿರಿಯ ಮಗಳು ಲೇಯಳನ್ನೇ ಯಕೋಬನ ಬಳಿಗೆ ಕರೆತಂದನು. ಯಕೋಬನು ಆಕೆಯನ್ನು ಕೂಡಿದನು. (24ಲಾಬಾನನು ತನ್ನ ಮಗಳು ಲೇಯಳಿಗೆ ಜಿಲ್ಪಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು.) 25ಆ ಹೆಣ್ಣು ಲೇಯಳೆಂದು ಯಕೋಬನಿಗೆ ಬೆಳಿಗ್ಗೆ ತಿಳಿಯಿತು. ಅವನು ಲಾಬಾನನಿಗೆ, “ನೀವು ನನಗೇಕೆ ಹೀಗೆ ಮಾಡಿದಿರಿ? ರಾಖೇಲಳಿಗಾಗಿ ಅಲ್ಲವೆ ನಾನು ನಿಮಗೆ ಸೇವೆಮಾಡಿದ್ದು? ನನಗೆ ಮೋಸಮಾಡಿದ್ದೇಕೆ?” ಎಂದು ಕೇಳಿದನು.
26ಅದಕ್ಕೆ ಲಾಬಾನನು, “ಹಿರಿಯ ಮಗಳನ್ನು ಇರಿಸಿಕೊಂಡು ಕಿರಿಯ ಮಗಳನ್ನು ಮದುವೆಮಾಡಿಕೊಡುವುದು ನಮ್ಮ ನಾಡಿನ ಪದ್ಧತಿಯಲ್ಲ. 27ಹಿರಿಯಳೊಡನೆ ಮದುವೆಯ ವಾರವನ್ನು ಕಳೆದುಬಿಡು; ಅನಂತರ ಕಿರಿಯ ಮಗಳನ್ನೂ ನಿನಗೆ ಕೊಡುತ್ತೇನೆ. ಅವಳಿಗೋಸ್ಕರ ನೀನು ಇನ್ನೂ ಏಳು ವರ್ಷ ಸೇವೆಮಾಡುವೆಯಂತೆ,” ಎಂದನು.
28ಯಕೋಬನು ಅದಕ್ಕೆ ಒಪ್ಪಿ ಹಿರಿಯವಳೊಂದಿಗೆ ಮದುವೆಯ ವಾರವನ್ನು ಕಳೆದನು. ಬಳಿಕ ಲಾಬಾನನು ತನ್ನ ಮಗಳು ರಾಖೇಲಳನ್ನು#29:28 ಅಥವಾ: ರಾಹೇಲಳನ್ನೂ. ಯಕೋಬನಿಗೆ ಹೆಂಡತಿಯಾಗಿ ಕೊಟ್ಟನು. 29(ಆಕೆಗೆ ಬಿಲ್ಹಾ ಎಂಬ ಒಬ್ಬ ದಾಸಿಯನ್ನು ಕೊಟ್ಟನು.) 30ಯಕೋಬನು ರಾಖೇಲಳನ್ನು ಕೂಡಿದನು. ಆಕೆಯನ್ನು ಲೇಯಳಿಗಿಂತ ಹೆಚ್ಚಾಗಿ ಪ್ರೀತಿಸಿದನು. ಆಕೆಗೋಸ್ಕರ ಲಾಬಾನನ ಬಳಿ ಇನ್ನೂ ಏಳು ವರ್ಷ ಸೇವೆಮಾಡಿದನು.
ಯಕೋಬನಿಗೆ ಹುಟ್ಟಿದ ಮಕ್ಕಳು
31ಹೀಗಿರಲು ಲೇಯಳ ಬಗ್ಗೆ ಯಕೋಬನಿಗೆ ಉದಾಸೀನ ಉಂಟಾಯಿತು. ಇದನ್ನು ಕಂಡು ಸರ್ವೇಶ್ವರಸ್ವಾಮಿ ಆಕೆಗೆ ತಾಯ್ತನವನ್ನು ಅನುಗ್ರಹಿಸಿದರು; ರಾಖೇಲಳು ಬಂಜೆಯಾಗೇ ಉಳಿದಳು. 32ಲೇಯಳು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು. “ಸರ್ವೇಶ್ವರ ನನ್ನ ದೀನ ಸ್ಥಿತಿಯನ್ನು ನೋಡಿದ್ದಾರೆ, ಇನ್ನು ಮುಂದೆ ಗಂಡ ನನ್ನನ್ನು ಪ್ರೀತಿಸುತ್ತಾನೆ,” ಎಂದುಕೊಂಡು ಆ ಮಗುವಿಗೆ ‘ರೂಬೇನ್’ ಎಂದು ಹೆಸರಿಟ್ಟಳು. 33ಆಕೆ, ಇನ್ನೊಮ್ಮೆ ಗರ್ಭಿಣಿಯಾಗಿ ಗಂಡು ಮಗುವನ್ನೇ ಹೆತ್ತಳು. “ನಾನು ಗಂಡನ ಅಲಕ್ಷ್ಯಕ್ಕೆ ಗುರಿಯಾದೆ, ಇದನ್ನು ತಿಳಿದೇ ಸರ್ವೇಶ್ವರ ನನಗೆ ಈ ಮಗನನ್ನು ದಯಪಾಲಿಸಿದರು,” ಎಂದು ಹೇಳಿ ಆ ಮಗನಿಗೆ ‘ಸಿಮೆಯೋನ್’ ಎಂದು ಹೆಸರಿಟ್ಟಳು. 34ಮತ್ತೊಮ್ಮೆ ಗರ್ಭಧರಿಸಿ ಗಂಡು ಮಗುವನ್ನೇ ಹೆತ್ತಳು. “ಈಗಲಾದರೂ ನನ್ನ ಗಂಡನೂ ನಾನೂ ಒಂದಾಗುತ್ತೇವೆ. ಅವರಿಗೆ ಮೂರು ಮಂದಿ ಗಂಡುಮಕ್ಕಳನ್ನು ಹೆತ್ತಿದ್ದೇನಲ್ಲವೆ,” ಎಂದುಕೊಂಡು ಆ ಮಗುವಿಗೆ ‘ಲೇವಿ’ ಎಂದು ಹೆಸರಿಟ್ಟಳು. 35ಮಗದೊಮ್ಮೆ ಗರ್ಭಧರಿಸಿ ಈ ಸಾರಿಯೂ ಗಂಡು ಮಗುವನ್ನೇ ಹೆತ್ತಳು. "ಈಗ ಸರ್ವೇಶ್ವರಸ್ವಾಮಿಯ ಸ್ತುತಿಮಾಡುತ್ತೇನೆ,“ ಎಂದು ಹೇಳಿ ಆ ಮಗುವಿಗೆ “ಯೆಹೂದ"#29:35 ಎಂದರೆ, “ಸ್ತುತಿ". ಎಂದು ನಾಮಕರಣ ಮಾಡಿದಳು. ಆ ಮೇಲೆ ಆಕೆಗೆ ಗರ್ಭಧಾರಣೆ ಆಗುವುದು ನಿಂತುಹೋಯಿತು.

Atualmente selecionado:

ಆದಿಕಾಂಡ 29: KANCLBSI

Destaque

Partilhar

Copiar

None

Quer salvar os seus destaques em todos os seus dispositivos? Faça o seu registo ou inicie sessão