YouVersion
Pictograma căutare

ಲೂಕ. 2

2
ಕ್ರಿಸ್ತೇಸುವಿನ ಜನನ
(ಮತ್ತಾ. 1:18-25)
1ಆ ಕಾಲದಲ್ಲಿ ಚಕ್ರವರ್ತಿ ಔಗುಸ್ತನು ತನ್ನ ಸಾಮ್ರಾಜ್ಯದಲ್ಲೆಲ್ಲಾ ಜನಗಣತಿಯಾಗಬೇಕೆಂದು ಆಜ್ಞೆ ಹೊರಡಿಸಿದನು. 2ಮೊಟ್ಟ ಮೊದಲನೆಯ ಆ ಜನಗಣತಿ, ಕುರೇನ್ಯನು ಸಿರಿಯ ನಾಡಿಗೆ ರಾಜ್ಯಪಾಲನಾಗಿದ್ದಾಗ ನಡೆಯಿತು. 3ಆಗ ಎಲ್ಲರೂ ತಮ್ಮ ಹೆಸರನ್ನು ದಾಖಲೆ ಮಾಡಿಸಿಕೊಳ್ಳಲು ತಮ್ಮ ತಮ್ಮ ಊರುಗಳಿಗೆ ಹೊರಟರು.
4ಜೋಸೆಫನು ದಾವೀದನ ಮನೆತನದವನು ಹಾಗೂ ಗೋತ್ರದವನು. ಆದುದರಿಂದ ಅವನೂ ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಿಂದ ಹೊರಟು ಜುದೇಯ ನಾಡಿನ ಬೆತ್ಲೆಹೇಮೆಂಬ ದಾವೀದನ ಊರಿಗೆಹೋದನು. 5ಆತನ ಸಂಗಡ ಆತನಿಗೆ ನಿಶ್ಚಿತಾರ್ಥಳಾಗಿದ್ದ ಹಾಗೂ ಪೂರ್ಣ ಗರ್ಭವತಿಯಾಗಿದ್ದ ಮರಿಯಳು ಸಹ ಹೋದಳು. 6ಹೀಗೆ ಅವರು ಬೆತ್ಲೆಹೇಮಿನಲ್ಲಿ ಇದ್ದಾಗ, ಮರಿಯಳಿಗೆ ಪ್ರಸವಕಾಲ ಸಮೀಪಿಸಿತು. 7ಆಕೆ ಚೊಚ್ಚಲು ಮಗನಿಗೆ ಜನ್ಮವಿತ್ತು, ಇದ್ದ ಬಟ್ಟೆಯಲ್ಲೇ ಸುತ್ತಿ ಅದನ್ನು ಗೋದಲಿಯಲ್ಲಿ ಮಲಗಿಸಿದಳು. ಕಾರಣ - ಛತ್ರದಲ್ಲಿ ಅವರಿಗೆ ಸ್ಥಳ ಸಿಗಲಿಲ್ಲ.
ದೇವದೂತನು ಕುರುಬರಿಗೆ ತಂದ ಸಂದೇಶ
8ಅದೇ ನಾಡಿನಲ್ಲಿ ಕೆಲವು ಕುರುಬರು ಹೊಲಗಳಲ್ಲಿದ್ದುಕೊಂಡು ರಾತ್ರಿಯಲ್ಲಿ ಕುರಿಮಂದೆಗಳನ್ನು ಕಾಯುತ್ತಿದ್ದರು. 9ಇದ್ದಕ್ಕಿದ್ದಂತೆ ದೇವದೂತನೊಬ್ಬನು ಅವರೆದುರಿಗೆ ಪ್ರತ್ಯಕ್ಷ ಆಗಲು ಸರ್ವೇಶ್ವರನ ಪ್ರಭೆ ಅವರ ಸುತ್ತಲೂ ಪ್ರಕಾಶಿಸಿತು. ಅವರು ಬಹಳವಾಗಿ ಹೆದರಿದರು. 10ಆ ದೂತನು ಅವರಿಗೆ, “ಭಯಪಡಬೇಡಿ, ಇಗೋ, ಜನರೆಲ್ಲರಿಗೂ ಪರಮಾನಂದವನ್ನು ತರುವ ಶುಭಸಂದೇಶವನ್ನು ನಿಮಗೆ ತಿಳಿಸುತ್ತೇನೆ. 11ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಲೋಕೋದ್ಧಾರಕ ಜನಿಸಿದ್ದಾರೆ. ಅವರೇ ಪ್ರಭು ಕ್ರಿಸ್ತ. 12ಇಗೋ, ನಿಮಗೊಂದು ಸೂಚನೆ - ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗೋದಲಿಯೊಂದರಲ್ಲಿ ಮಲಗಿಸಿರುವುದನ್ನು ಕಾಣುವಿರಿ,” ಎಂದನು.
13ತಕ್ಷಣವೇ ಆ ದೂತನ ಸಂಗಡ ಸ್ವರ್ಗದ ದೂತಪರಿವಾರವೊಂದು ಕಾಣಿಸಿಕೊಂಡಿತು. 14“ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿಸಮಾಧಾನ,” ಎಂದು ಸರ್ವೇಶ್ವರನ ಸ್ತುತಿ ಮಾಡಿತು.
15ದೇವದೂತರು ಸ್ವರ್ಗಕ್ಕೆ ಹಿಂದಿರುಗಿದ ಮೇಲೆ ಕುರುಬರು, ‘ಬನ್ನಿ, ಸರ್ವೇಶ್ವರ ನಮಗೆ ತಿಳಿಸಿದ ಘಟನೆಯನ್ನು ನೋಡಲು ಈಗಲೇ ಬೆತ್ಲೆಹೇಮಿಗೆ ಹೋಗೋಣ,’ ಎಂದು ಒಬ್ಬರಿಗೆ ಒಬ್ಬರು ಹೇಳಿಕೊಂಡರು. 16ಅಲ್ಲಿಂದ ತ್ವರೆಯಾಗಿ ಹೋಗಿ, ಮರಿಯಳನ್ನೂ ಜೋಸೇಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು. 17ಕಂಡಮೇಲೆ ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲ ಅವರಿಗೆ ತಿಳಿಯಪಡಿಸಿದರು. 18ಕುರುಬರು ಹೇಳಿದ ವಿಷಯವನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. 19ಮರಿಯಳಾದರೋ ಈ ವಿಷಯಗಳನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಾ ಬಂದಳು. 20ಇತ್ತ, ಕುರುಬರು ತಾವು ಕೇಳಿದ್ದನ್ನು ನೆನೆಯುತ್ತಾ, ದೇವರ ಮಹಿಮೆಯನ್ನು ಸಾರುತ್ತಾ, ಕೊಂಡಾಡುತ್ತಾ ಹಿಂದಿರುಗಿದರು. ದೇವದೂತನು ಅವರಿಗೆ ತಿಳಿಸಿದಂತೆ ಎಲ್ಲವೂ ಸಂಭವಿಸಿತ್ತು.
ಶಿಶು ಯೇಸುವಿನ ನಾಮಕರಣ
21ಎಂಟನೆಯ ದಿನ ಶಿಶುವಿಗೆ ಸುನ್ನತಿ ಮಾಡಬೇಕಾಗಿದ್ದ ಸಂದರ್ಭದಲ್ಲಿ ಅದಕ್ಕೆ ‘ಯೇಸು’ ಎಂಬ ಹೆಸರನ್ನಿಟ್ಟು ನಾಮಕರಣ ಮಾಡಿದರು. ಈ ಹೆಸರನ್ನು ಮರಿಯಳು ಗರ್ಭಿಣಿಯಾಗುವುದಕ್ಕೆ ಮುಂಚೆಯೇ ದೂತನು ಸೂಚಿಸಿದ್ದನು.
ಯೇಸುಬಾಲನ ಸಮರ್ಪಣೆ
22ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು. 23ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು. 24ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು.
25ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು. 26ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ#2:26 ಅಥವಾ : ಕ್ರಿಸ್ತ. ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು. 27ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ, 28ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು:
29“ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು
ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನ್ನು.
30ನೀನಿತ್ತ ಉದ್ಧಾರಕನನು ನಾ ಕಂಡೆ ಕಣ್ಣಾರೆ
31ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ.
32ಈತ ಅನ್ಯಜನರನ್ನು ಬೆಳಗಿಸುವ ಜ್ಯೋತಿ
ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ.”
33ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆತಾಯಿಗಳು ಆಶ್ಚರ್ಯಪಟ್ಟರು. 34ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, “ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು. 35#2:35 ಈ ಕಂಸಗಳಲ್ಲಿ ಬರುವ ವಾಕ್ಯಗಳು ಕೆಲವು ಹಸ್ತಪ್ರತಿಗಳಲ್ಲಿ ಇಲ್ಲ.(ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,)” ಎಂದು ಹೇಳಿದನು.
36ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಫನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು. 37ಅವಳಿಗೆ ಸುಮಾರು ಎಂಬತ್ತನಾಲ್ಕು ವರ್ಷ ವಯಸ್ಸು. ಮಹಾದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು. 38ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು.
ಮರಳಿ ನಜರೇತಿಗೆ
39ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು. 40ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನ ಸಂಪೂರ್ಣರೂ ಆದರು. (ಇದಲ್ಲದೆ) ದೈವಾನುಗ್ರಹ ಅವರ ಮೇಲಿತ್ತು.
ಯೇಸುವಿನ ಹನ್ನೆರಡನೇ ವರ್ಷದಲ್ಲಿ
41ಯೇಸುಸ್ವಾಮಿಯ ತಂದೆತಾಯಿಗಳು ಪ್ರತಿವರ್ಷವೂ ಪಾಸ್ಕಹಬ್ಬಕ್ಕೆ ಜೆರುಸಲೇಮಿಗೆ ಹೋಗುತ್ತಿದ್ದರು. 42ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು. 43ಹಬ್ಬ ಮುಗಿಸಿಕೊಂಡು ಅವರು ಹಿಂದಿರುಗಿ ಬರುವಾಗ ಬಾಲಕಯೇಸು ಜೆರುಸಲೇಮಿನಲ್ಲಿಯೇ ಉಳಿದುಬಿಟ್ಟರು. 44ಇದು ತಂದೆತಾಯಿಗಳಿಗೆ ತಿಳಿಯದು. ಮಗನು ಯಾತ್ರಿಕರ ಗುಂಪಿನಲ್ಲಿ ಬರುತ್ತಿರಬಹುದೆಂದು ಭಾವಿಸಿ ಒಂದು ದಿನದ ಪ್ರಯಾಣ ಬಂದುಬಿಟ್ಟಿದ್ದರು. ನಂತರ ಮಗನನ್ನು ಕಾಣದೆ ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿದರು. 45ಅಲ್ಲೆಲ್ಲೂ ಕಾಣದೆ ಅವರನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬಂದರು. 46ಮೂರು ದಿನಗಳ ಮೇಲೆ ಮಹಾದೇವಾಲಯದಲ್ಲಿ ಅವರನ್ನು ಕಂಡಾಗ ಅಲ್ಲಿ ಯೇಸು, ಬೋಧಕರ ಮಧ್ಯೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಅವರಿಗೆ ಪ್ರಶ್ನೆಹಾಕುತ್ತಾ ಇದ್ದರು. 47ಬಾಲಕನ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದ ಎಲ್ಲರೂ ಆತನ ಜ್ಞಾನವನ್ನು ಕಂಡು ಬೆರಗಾದರು. 48ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು. 49ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆಹೋಯಿತೇ?” ಎಂದರು. 50ಆದರೆ ಅವರ ಮಾತು ತಂದೆತಾಯಿಗಳಿಗೆ ಅರ್ಥವಾಗಲಿಲ್ಲ.
51ಬಳಿಕ ಯೇಸು ತಂದೆತಾಯಿಗಳೊಡನೆ ನಜರೇತಿಗೆ ಬಂದರು. ಅಲ್ಲಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು. ಈ ವಿಷಯಗಳನ್ನೆಲ್ಲಾ ತಾಯಿ ಮರಿಯಳು ತನ್ನ ಮನಸ್ಸಿನಲ್ಲಿ ಸಂಗ್ರಹಿಸಿ ಇಟ್ಟುಕೊಂಡಳು. 52ಯೇಸು ಬೆಳೆದಂತೆ ಜ್ಞಾನದಲ್ಲಿ ಪ್ರವರ್ಧಿಸುತ್ತಾ ದೇವರಿಗೂ ಮಾನವರಿಗೂ ಅಚ್ಚುಮೆಚ್ಚಾಗುತ್ತಾ ಬಂದರು.

Evidențiere

Partajează

Copiază

None

Dorești să ai evidențierile salvate pe toate dispozitivele? Înscrie-te sau conectează-te