ಆದಿ 1
1
ದೇವರು ವಿಶ್ವವನ್ನು ಸೃಷ್ಟಿಸಿದ್ದು
1ಆದಿಯಲ್ಲಿ ದೇವರು ಆಕಾಶವನ್ನು, ಭೂಮಿಯನ್ನು ಸೃಷ್ಟಿಮಾಡಿದನು. 2ಭೂಮಿಯು ಕ್ರಮವಿಲ್ಲದೆಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲಿತ್ತು. #1:2 ಅಥವಾ ದೇವರ ಶಕ್ತಿ ಅಥವಾ ದೇವರಿಂದ ಬಂದ ಗಾಳಿ.ದೇವರಾತ್ಮವು ಸಾಗರದ ಮೇಲೆ ಚಲಿಸುತ್ತಿತ್ತು.
3ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು.
ಸೃಷ್ಟಿಯ ಎರಡನೆಯ ವಿವರಣೆ
4ದೇವರು ಆ ಬೆಳಕನ್ನು ಒಳ್ಳೆಯದೆಂದು ಕಂಡನು. 5ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಹೀಗೆ #1:5 ಯೆಹೂದ್ಯರು ಸಾಯಂಕಾಲದಿಂದ ಸಾಯಂಕಾಲದವರೆಗೆ ದಿನವೆಂದು ಕರೆಯುತ್ತಿದ್ದರು.ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು.
6ಬಳಿಕ ದೇವರು “ಜಲರಾಶಿಗಳ ನಡುವೆ ವಿಸ್ತಾರವಾದ ಗುಮ್ಮಟವು ಉಂಟಾಗಲಿ ಅದು ಕೆಳಗಿನ ನೀರುಗಳನ್ನೂ ಮೇಲಿನ ನೀರುಗಳನ್ನೂ ಬೇರೆ ಬೇರೆ ಮಾಡಲಿ” ಅಂದನು. 7ದೇವರು ವಿಸ್ತಾರವಾದ ಗುಮ್ಮಟವನ್ನು ಮಾಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು. ಅದು ಹಾಗೆಯೇ ಆಯಿತು. 8ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು.
9ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು. 10ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೆಯದೆಂದು ನೋಡಿದನು.
11ತರುವಾಯ ದೇವರು, “ಭೂಮಿಯು ಹುಲ್ಲನ್ನು, ಸಸ್ಯಗಳನ್ನೂ, ಬೀಜಬಿಡುವ ಕಾಯಿಪಲ್ಯದ ಗಿಡಗಳನ್ನೂ ಬೆಳೆಯಿಸಲಿ ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನು ಅವುಗಳ ಜಾತಿಗನುಸಾರವಾಗಿ ಫಲಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು. 12ಭೂಮಿಯಲ್ಲಿ ಸಸ್ಯಗಳು ಬೆಳೆದವು. ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು. ತಮ್ಮ ತಮ್ಮ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳು ಉತ್ಪತ್ತಿಯಾದವು. ದೇವರು ಅದನ್ನು ಒಳ್ಳೆಯದೆಂದು ಕಂಡನು 13ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು.
14ಬಳಿಕ ದೇವರು, “ಆಕಾಶ ಮಂಡಲದಲ್ಲಿ ಬೆಳಕುಗಳು ಉಂಟಾಗಲಿ. ಅವು ಹಗಲಿರುಳುಗಳನ್ನು ಬೇರೆ ಬೇರೆ ಮಾಡಲಿ. ಅವು ಕಾಲಗಳನ್ನೂ, ದಿನಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರಲಿ. 15ಭೂಮಿಯ ಮೇಲೆ ಬೆಳಕು ಕೊಡುವುದಕ್ಕೆ ಅವು ಆಕಾಶಮಂಡಲದಲ್ಲಿ ದೀಪಗಳಂತಿರಲಿ” ಅಂದನು. ಹಾಗೆಯೇ ಆಯಿತು.
16ದೇವರು ಹಗಲನ್ನಾಳುವುದಕ್ಕೆ ದೊಡ್ಡ ದೀಪವನ್ನೂ ಇರುಳನ್ನಾಳುವುದಕ್ಕೆ ಚಿಕ್ಕ ದೀಪವನ್ನೂ ಹೀಗೆ ಎರಡು ದೊಡ್ಡ ದೀಪಗಳನ್ನು ಉಂಟು ಮಾಡಿದನು. ಆತನು ನಕ್ಷತ್ರಗಳನ್ನು ಸಹ ಉಂಟು ಮಾಡಿದನು. 17ದೇವರು ಆ ಬೆಳಕುಗಳನ್ನು ಆಕಾಶದಲ್ಲಿ ನಿಲ್ಲಿಸಿ ಭೂಮಿಯ ಮೇಲೆ ಬೆಳಕು ಕೊಡುವುದಕ್ಕೂ 18ಹಗಲಿರುಳುಗಳನ್ನು ಆಳುವುದಕ್ಕೂ ಬೆಳಕನ್ನು, ಕತ್ತಲನ್ನು ಬೇರೆ ಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದನು. ದೇವರು ಅದನ್ನು ಒಳ್ಳೆಯದೆಂದು ಕಂಡನು. 19ಸಾಯಂಕಾಲವೂ ಉದಯಕಾಲವೂ ಆಗಿ ನಾಲ್ಕನೆಯ ದಿನವಾಯಿತು.
20ತರುವಾಯ ದೇವರು, “ಗುಂಪು ಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಅಂತರಿಕ್ಷದಲ್ಲಿ ಹಾರಾಡಲಿ” ಎಂದು ಹೇಳಿದನು. 21ಹೀಗೆ ದೇವರು ಮಹಾ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲ ವಿಧವಾದ ಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಾದ ಪಕ್ಷಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು.
22ಇದಲ್ಲದೆ ದೇವರು, “ಅವುಗಳಿಗೆ ನೀವು ಅಭಿವೃದ್ಧಿಯಾಗಿ ಹೆಚ್ಚಿರಿ, ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ” ಎಂದು ಹೇಳಿ ಆಶೀರ್ವದಿಸಿದನು. 23ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಐದನೆಯ ದಿನವಾಯಿತು.
24ಬಳಿಕ ದೇವರು, “ಭೂಮಿಯಿಂದ ಜೀವಜಂತುಗಳು ಉಂಟಾಗಲಿ; ಪಶು, ಕ್ರಿಮಿಗಳೂ ಕಾಡುಮೃಗಗಳು, ತಮ್ಮ ತಮ್ಮ ಜಾತಿಗನುಸಾರವಾಗಿ ಹುಟ್ಟಲಿ” ಅಂದನು. ಹಾಗೆಯೇ ಆಯಿತು. 25ದೇವರು ಕಾಡುಮೃಗಗಳನ್ನೂ, ಪಶುಗಳನ್ನೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು.
26ಆಮೇಲೆ ದೇವರು, ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ, ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ, ಪ್ರಾಣಿಗಳ ಮೇಲೆಯೂ, ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ದೊರೆತನಮಾಡಲಿ ಅಂದನು. 27ಹೀಗೆ ದೇವರು;
“ಮನುಷ್ಯನನ್ನು ತನ್ನ ಸ್ವರೂಪದಲ್ಲಿ
ಉಂಟುಮಾಡಿದನು.
ದೇವರ ಸ್ವರೂಪದಲ್ಲಿ ಅವನನ್ನು
ಉಂಟುಮಾಡಿದನು.
ಅವರನ್ನು ಗಂಡುಹೆಣ್ಣಾಗಿ ಸೃಷ್ಟಿ ಮಾಡಿದನು.”
28ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ, “ನೀವು ಬಹು ಸಂತಾನವುಳ್ಳವರಾಗಿ ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನ ಮಾಡಿರಿ” ಎಂದು ಅವರಿಗೆ ಹೇಳಿದನು.
29ಅಲ್ಲದೆ ದೇವರು, “ಇಗೋ, ಸಮಸ್ತ ಭೂಮಿಯ ಮೇಲಿರುವ ಬೀಜವುಳ್ಳ ಎಲ್ಲಾ ಪೈರುಗಳನ್ನೂ, ಬೀಜವುಳ್ಳ ಎಲ್ಲಾ ಹಣ್ಣಿನ ಮರಗಳನ್ನೂ ನಿಮಗೆ ಆಹಾರಕ್ಕಾಗಿ ಕೊಟ್ಟಿದ್ದೇನೆ 30ಇದಲ್ಲದೆ ಭೂಮಿಯ ಮೇಲೆ ತಿರುಗಾಡುವ ಮೃಗಗಳು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳು ಮೊದಲಾದ ಜೀವಿಗಳಿಗೆ ಹಸುರಾದ ಸಸ್ಯಗಳನ್ನೆಲ್ಲಾ ಆಹಾರಕ್ಕಾಗಿ ಕೊಟ್ಟಿದ್ದೇನೆ” ಎಂದು ಹೇಳಿದನು. ಅದು ಹಾಗೆಯೇ ಆಯಿತು. 31ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅವೆಲ್ಲವೂ ಬಹು ಒಳ್ಳೆಯದಾಗಿ ತೋರಿತು. ಸಾಯಂಕಾಲವೂ ಉದಯಕಾಲವೂ ಆಗಿ ಆರನೆಯ ದಿನವಾಯಿತು.
Selectat acum:
ಆದಿ 1: IRVKan
Evidențiere
Partajează
Copiază
Dorești să ai evidențierile salvate pe toate dispozitivele? Înscrie-te sau conectează-te
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.