Logoja YouVersion
Ikona e kërkimit

ಲೂಕ 20

20
ಶಾಸ್ತ್ರಿಗಳು ಯೇಸುವಿನ ಅಧಿಕಾರವನ್ನು ವಿಚಾರಿಸಿದ್ದು
ಮತ್ತಾ 21:23-27; ಮಾರ್ಕ 11:27-33
1ಆ ದಿನಗಳಲ್ಲಿ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಉಪದೇಶಮಾಡುತ್ತಾ ಸುವಾರ್ತೆಯನ್ನು ಸಾರುತ್ತಿರಲಾಗಿ ಮುಖ್ಯಯಾಜಕರೂ ಶಾಸ್ತ್ರಿಗಳೂ ಸಭೆಯ ಹಿರಿಯರನ್ನು ಕೂಡಿಸಿಕೊಂಡು ಫಕ್ಕನೆ ಬಂದು, 2“ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ನಮಗೆ ಹೇಳು” ಎಂದು ಆತನನ್ನು ಕೇಳಲು, 3ಯೇಸು ಅವರಿಗೆ, “ನಾನು ಸಹ ನಿಮ್ಮನ್ನು ಒಂದು ಮಾತು ಕೇಳುತ್ತೇನೆ, ನನಗೆ ಹೇಳಿರಿ. 4ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಎಂದು ಅವರನ್ನು ಕೇಳಿದನು.
5ಆಗ ಅವರು, “‘ಪರಲೋಕದಿಂದ ಬಂದಿತೆಂದು ನಾವು ಹೇಳಿದರೆ ಮತ್ತೆ ನೀವು ಅವನನ್ನು ಯಾಕೆ ನಂಬಲಿಲ್ಲ ಅಂದಾನು, 6ಮನುಷ್ಯರಿಂದ ಬಂದಿತೆಂದು ಹೇಳಿದರೆ ಜನರೆಲ್ಲರೂ ಯೋಹಾನನನ್ನು ಪ್ರವಾದಿಯೆಂದು ನಂಬಿರುವುದರಿಂದ ಅವರು ನಮ್ಮನ್ನು ಕಲ್ಲೆಸೆದು ಕೊಂದಾರು’” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡು, 7ಅದು ಎಲ್ಲಿಂದ ಬಂದಿತೋ ನಾವರಿಯೆವು ಎಂದು ಉತ್ತರಕೊಟ್ಟರು. 8ಆಗ ಯೇಸು ಅವರಿಗೆ, “ಇದನ್ನೆಲ್ಲಾ ಯಾವ ಅಧಿಕಾರದಿಂದ ಮಾಡುತ್ತೇನೋ ಅದನ್ನು ನಾನೂ ನಿಮಗೆ ಹೇಳುವುದಿಲ್ಲ” ಎಂದು ಹೇಳಿದನು.
ದ್ರಾಕ್ಷಿಯ ತೋಟದ ಒಕ್ಕಲಿಗರ ಸಾಮ್ಯ
ಮತ್ತಾ 21:33-46; ಮಾರ್ಕ 12:1-12
9ಆಗ ಆತನು ಜನರಿಗೆ ಒಂದು ಸಾಮ್ಯವನ್ನು ಹೇಳುವುದಕ್ಕೆ ತೊಡಗಿದನು. ಅದೇನೆಂದರೆ, “ಒಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ, ಆದನ್ನು ಒಕ್ಕಲಿಗರಿಗೆ ಗುತ್ತಿಗೆಗೆ ಕೊಟ್ಟು, ಬೇರೊಂದು ದೇಶಕ್ಕೆ ಹೋಗಿ ಅಲ್ಲಿ ಬಹುಕಾಲ ಇದ್ದನು. 10ಫಲಕಾಲ ಬಂದಾಗ ದ್ರಾಕ್ಷಿಯ ತೋಟದ ಪಾಲನ್ನು ತೆಗೆದುಕೊಳ್ಳುವುದಕ್ಕಾಗಿ ಒಬ್ಬ ಆಳನ್ನು ಒಕ್ಕಲಿಗರ ಬಳಿಗೆ ಕಳುಹಿಸಿದನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿಗೈಯಲ್ಲಿ ಕಳುಹಿಸಿಬಿಟ್ಟರು. 11ಆ ಧಣಿಯು ಬೇರೊಬ್ಬ ಆಳನ್ನು ಕಳುಹಿಸಲಾಗಿ ಅವರು ಅವನನ್ನೂ ಹೊಡೆದು ಅವಮಾನಪಡಿಸಿ ಬರಿಗೈಯಲ್ಲಿ ಕಳುಹಿಸಿಬಿಟ್ಟರು. 12ಆ ಮೇಲೆ ಮೂರನೆಯವನನ್ನು ಕಳುಹಿಸಲು ಅವರು ಅವನನ್ನೂ ಗಾಯಗೊಳಿಸಿ ಹೊರಕ್ಕೆ ಅಟ್ಟಿದರು. 13ಆಗ ಆ ದ್ರಾಕ್ಷಿಯ ತೋಟದ ಧಣಿಯು, ‘ನಾನೇನು ಮಾಡಲಿ? ನನ್ನ ಮುದ್ದುಮಗನನ್ನು ಕಳುಹಿಸುತ್ತೇನೆ, ಒಂದು ವೇಳೆ ಅವನಿಗಾದರೂ ಮರ್ಯಾದೆ ತೋರಿಸಾರು’ ಅಂದುಕೊಂಡನು. 14ಆದರೆ ಆ ಒಕ್ಕಲಿಗರು ದ್ರಾಕ್ಷಿಯ ತೋಟದ ಯಜಮಾನನ ಮಗನನ್ನು ಕಂಡು, ‘ಇವನೇ ಬಾಧ್ಯಸ್ಥನು; ಇವನನ್ನು ಕೊಂದು ಹಾಕೋಣ, ಇವನ ಪಿತ್ರಾರ್ಜಿತವೆಲ್ಲಾ ನಮ್ಮದಾಗುವುದು’ ಎಂದು ಒಬ್ಬರ ಸಂಗಡಲೊಬ್ಬರು ಮಾತನಾಡಿಕೊಂಡು, 15ಅವನನ್ನು ದ್ರಾಕ್ಷಿಯ ತೋಟದಿಂದ ಹೊರಕ್ಕೆ ದೊಬ್ಬಿ, ಕೊಂದು ಹಾಕಿದರು. ಹಾಗಾದರೆ ದ್ರಾಕ್ಷಿಯ ತೋಟದ ಧಣಿಯು ಅವರಿಗೆ ಏನು ಮಾಡಿಯಾನು? 16ಅವನು ಬಂದು ಆ ಒಕ್ಕಲಿಗರನ್ನು ಸಂಹರಿಸಿ ತನ್ನ ತೋಟವನ್ನು ಬೇರೆ ಜನರಿಗೆ ಮಾಡುವುದಕ್ಕೆ ಕೊಡುವನು” ಅಂದನು. ಇದನ್ನು ಜನರು ಕೇಳಿ, “ಹಾಗಾಗಬಾರದು” ಅಂದರು.
17ಆದರೆ ಯೇಸು ಅವರನ್ನು ದೃಷ್ಟಿಸಿ ನೋಡಿ, ಹಾಗಾದರೆ
“‘ಮನೆ ಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು’
ಎಂದು ಬರೆದಿರುವ ಮಾತೇನು?
18 “ಈ ಕಲ್ಲಿನ ಮೇಲೆ ಬೀಳುವ ಪ್ರತಿಯೊಬ್ಬನು ತುಂಡುತುಂಡಾಗುವನು. ಆ ಕಲ್ಲು ಯಾರ ಮೇಲೆ ಬೀಳುವುದೋ ಅದು ಅವನನ್ನು ಪುಡಿಪುಡಿ ಮಾಡುವುದು” ಅಂದನು.
ಸುಂಕದ ಕುರಿತು ವಿರೋಧಿಗಳ ಪ್ರಶ್ನೆ
ಮತ್ತಾ 22:15-22; ಮಾರ್ಕ 12:13-17
19ಶಾಸ್ತ್ರಿಗಳೂ ಮುಖ್ಯಯಾಜಕರೂ ಈ ಮಾತುಗಳನ್ನು ಕೇಳಿ ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದನು ಎಂದು ತಿಳಿದುಕೊಂಡು ಅದೇ ಗಳಿಗೆಯಲ್ಲಿ ಆತನನ್ನು ಹಿಡಿಯುವುದಕ್ಕೆ ಸಂದರ್ಭನೋಡಿದರು. ಆದರೆ ಜನರಿಗೆ ಭಯಪಟ್ಟರು. 20ಆಮೇಲೆ ಅವರು ಯೇಸುವನ್ನು ಅಧಿಪತಿಯ ವಶಕ್ಕೂ ಅಧಿಕಾರಿಗಳಿಗೂ ಒಪ್ಪಿಸಬೇಕೆಂದು ಹೊಂಚು ಹಾಕುತ್ತಾ, ನೀತಿವಂತರಂತೆ ನಟಿಸುತ್ತಿರುವ ಗೂಢಚಾರರನ್ನು ಆತನ ಮಾತಿನಲ್ಲಿ ಏನನ್ನಾದರೂ ತಪ್ಪುಗಳನ್ನು ಕಂಡುಹಿಡಿಯುವುದಕ್ಕೆ (ಆತನ ಬಳಿಗೆ) ಕಳುಹಿಸಿದರು. 21ಗೂಢಚಾರರು, “ಬೋಧಕನೇ, ನೀನು ಸರಿಯಾಗಿ ಮಾತನಾಡುತ್ತಾ ಉಪದೇಶಮಾಡುತ್ತೀ, ನೀನು ಮುಖದಾಕ್ಷಿಣ್ಯವಿಲ್ಲದೆ ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನಾಗಿದ್ದೀ ಎಂದು ಬಲ್ಲೆವು. 22ಕೈಸರನಿಗೆ ಕಂದಾಯ ಕೊಡುವುದು ಸರಿಯೋ ಸರಿಯಲ್ಲವೋ?” ಎಂದು ಆತನನ್ನು ಕೇಳಿದರು.
23ಯೇಸು ಅವರ ಕುಯುಕ್ತಿಯನ್ನು ಅರಿತುಕೊಂಡು, 24ಅವರಿಗೆ, “ನನಗೆ ಒಂದು ಬೆಳ್ಳಿನಾಣ್ಯವನ್ನು ತೋರಿಸಿರಿ. ಇದರಲ್ಲಿ ಯಾರ ತಲೆ ಹಾಗು ಮುದ್ರೆಯದೆ?” ಎಂದು ಕೇಳಿದ್ದಕ್ಕೆ ಅವರು, “ಕೈಸರನದು” ಅಂದರು. 25ಆತನು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು. 26ಯೇಸು ಜನರ ಮುಂದೆ ಹೇಳಿದ ಮಾತಿನಲ್ಲಿ ಅವರು ಯಾವ ತಪ್ಪನ್ನೂ ಹಿಡಿಯಲಾಗದೆ, ಆತನು ಕೊಟ್ಟ ಉತ್ತರಕ್ಕೆ ಆಶ್ಚರ್ಯಪಟ್ಟು ಸುಮ್ಮನಾದರು.
ಪುನರುತ್ಥಾನದ ಕುರಿತು ಸದ್ದುಕಾಯರ ಪ್ರಶ್ನೆ
ಮತ್ತಾ 22:23-33; ಮಾರ್ಕ 12:18-27
27ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವವರಾದ ಸದ್ದುಕಾಯರಲ್ಲಿ ಕೆಲವರು ಬಂದು ಆತನಿಗೆ ಪ್ರಶ್ನೆಮಾಡಿದ್ದೇನಂದರೆ, 28“ಬೋಧಕನೇ, ಅಣ್ಣನಾದವನು ಹೆಂಡತಿಯುಳ್ಳವನಾಗಿದ್ದು ಮಕ್ಕಳಿಲ್ಲದೆ ಸತ್ತರೆ ಅವನ ತಮ್ಮನು ಆಕೆಯನ್ನು ಮದುವೆಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದಿಟ್ಟನಷ್ಟೆ. 29ಒಳ್ಳೆಯದು, ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು. 30-31ಎರಡನೆಯವನೂ ಅವನ ತರುವಾಯ ಮೂರನೆಯವನೂ ಆಕೆಯನ್ನು ಮದುವೆಮಾಡಿಕೊಂಡರು. ಇದೇ ರೀತಿಯಾಗಿ ಏಳು ಮಂದಿಯೂ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು. 32ಕಡೆಯಲ್ಲಿ ಆ ಹೆಂಗಸೂ ಸತ್ತಳು. 33ಹಾಗಾದರೆ ಪುನರುತ್ಥಾನದಲ್ಲಿ ಆ ಸ್ತ್ರೀಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಏಳು ಮಂದಿಯೂ ಮದುವೆ ಮಾಡಿಕೊಂಡಿದ್ದರಲ್ಲಾ” ಅಂದರು.
34ಯೇಸು ಅವರಿಗೆ, “ಈ ಲೋಕದ ಜನರು ಮದುವೆಮಾಡಿಕೊಳ್ಳುತ್ತಾರೆ ಹಾಗೂ ಮದುವೆಮಾಡಿಕೊಡುತ್ತಾರೆ. 35ಆದರೆ ಮುಂಬರುವ ಲೋಕವನ್ನೂ, ಸತ್ತವರೊಳಗಿಂದ ಪುನರುತ್ಥಾನವನ್ನೂ ಪಡೆಯುವುದಕ್ಕೆ ಯೋಗ್ಯರೆನಿಸಿಕೊಂಡಿರುವವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮಾಡಿಕೊಡುವುದೂ ಇಲ್ಲ. 36ಅವರು ಇನ್ನು ಮರಣಕ್ಕೆ ಗುರಿಯಾಗುವುದೇ ಇಲ್ಲ. ಏಕೆಂದರೆ ಅವರು ದೇವದೂತರಿಗೆ ಸರಿಸಮಾನರೂ, ಪುನರುತ್ಥಾನವನ್ನು ಹೊಂದಿದವರಾಗಿವುದ್ದರಿಂದ ಅವರು ದೇವರ ಮಕ್ಕಳೂ ಆಗಿರುತ್ತಾರೆ. 37ಸತ್ತವರು ಬದುಕಿ ಏಳುತ್ತಾರೆಂಬುದನ್ನು ಮೋಶೆಯೂ ಸೂಚಿಸಿದ್ದಾನೆ. ಅವನು ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ#20:37 ವಿಮೋ 3:6 ಕರ್ತನನ್ನು ‘ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು’ ಎಂದು ಹೇಳಿದ್ದಾನೆ. 38ದೇವರು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ. ಆತನಿಗೆ ಎಲ್ಲರೂ ಜೀವಿಸುವವರೇ” ಎಂದು ಹೇಳಿದನು.
39ಶಾಸ್ತ್ರಿಗಳಲ್ಲಿ ಕೆಲವರು, “ಬೋಧಕನೇ, ಚೆನ್ನಾಗಿ ಹೇಳಿದಿ” ಅಂದರು. 40ಆತನನ್ನು ಇನ್ನೇನು ಕೇಳುವುದಕ್ಕೂ ಅವರಿಗೆ ಧೈರ್ಯವಿಲ್ಲದೆ ಹೋಯಿತು.
ಕ್ರಿಸ್ತನ ಕುರಿತಾದ ಪ್ರಶ್ನೆ
ಮತ್ತಾ 22:41-46; ಮಾರ್ಕ 12:35-37
41ಆಗ ಯೇಸು, “ಬರಬೇಕಾದ ಕ್ರಿಸ್ತನು ದಾವೀದನ ಮಗನೆಂದು ಹೇಳುತ್ತಾರಲ್ಲಾ, ಅದು ಹೇಗಾದೀತು?
42-43 # 20:42-43 ನಾನು ನಿನ್ನ ವಿರೋಧಿಗಳನ್ನು ಕೀರ್ತ 110:1 “‘ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳಿಗೆ ಪೀಠವನ್ನಾಗಿ ಮಾಡುವ ತನಕ
ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು ಎಂದು
ಕರ್ತನು ನನ್ನ ಒಡೆಯನಿಗೆ ನುಡಿದನು’
ಎಂಬುದಾಗಿ ಕೀರ್ತನೆಗಳ ಗ್ರಂಥದಲ್ಲಿ ದಾವೀದನೇ ಹೇಳುತ್ತಾನಲ್ಲಾ.
44 “ದಾವೀದನು ಆತನನ್ನು ‘ಒಡೆಯನೆಂದು’ ಹೇಳಿದ ಮೇಲೆ ಆತನು ಅವನಿಗೆ ಮಗನಾಗುವುದು ಹೇಗೆ?” ಎಂದು ಅವರನ್ನು ಕೇಳಿದನು.
ಶಾಸ್ತ್ರಿಗಳ ವಿಷಯದಲ್ಲಿ ಯೇಸು ಎಚ್ಚರಿಸಿದ್ದು
ಮತ್ತಾ 23:1-36; ಮಾರ್ಕ 12:38-40
45ಜನರೆಲ್ಲರು ಕೇಳುತ್ತಿರುವಲ್ಲಿ ಆತನು ತನ್ನ ಶಿಷ್ಯರಿಗೆ ಹೇಳಿದ್ದೇನಂದರೆ, 46“ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವುದರಲ್ಲಿ ಮನಸ್ಸುಳ್ಳವರೂ, ಅಂಗಡಿಬೀದಿಗಳಲ್ಲಿ ನಮಸ್ಕಾರಗಳು, ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳು, ಔತಣಕೂಟಗಳಲ್ಲಿ ಪ್ರಥಮಸ್ಥಾನ, ಇವುಗಳನ್ನು ಬಯಸುವವರೂ ಆಗಿದ್ದಾರೆ. 47ಅವರು ವಿಧವೆಯರ ಮನೆಗಳನ್ನು ನುಂಗಿ, ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು” ಅಂದನು.

Aktualisht i përzgjedhur:

ಲೂಕ 20: IRVKan

Thekso

Ndaje

Copy

None

A doni që theksimet tuaja të jenë të ruajtura në të gjitha pajisjet që keni? Regjistrohu ose hyr