ಲೂಕ 21
21
ವಿಧವೆಯ ಕಾಣಿಕೆ
ಮಾರ್ಕ 12:41-44
1ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಕಾಣಿಕೆಯ ಪೆಟ್ಟಿಗೆಯಲ್ಲಿ ಹಾಕುವುದನ್ನು ಕಂಡನು. 2ಆಗ ಒಬ್ಬ ಬಡ ವಿಧವೆಯು ಬಂದು ತಾಮ್ರದ ಚಿಕ್ಕ ನಾಣ್ಯಗಳನ್ನು ಹಾಕುವುದನ್ನು ಯೇಸು ಗಮನಿಸಿ, 3“ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. 4ಹೇಗೆಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದ್ದರಲ್ಲಿ ಕಾಣಿಕೆ ಕೊಟ್ಟರು. ಈಕೆಯೋ ತನ್ನ ಬಡತನದಲ್ಲಿಯೂ ತನ್ನ ಜೀವನಕ್ಕಿದ್ದುದ್ದೆಲ್ಲವನ್ನೂ ಕೊಟ್ಟುಬಿಟ್ಟಳು” ಅಂದನು.
ಯೇಸು ಯೆರೂಸಲೇಮಿನ ದೇವಾಲಯದ ನಾಶನದ ಬಗ್ಗೆ ಹೇಳಿದ್ದು
ಮತ್ತಾ 24:1-14; ಮಾರ್ಕ 13:1-13
5ಕೆಲವರು ದೇವಾಲಯದ ವಿಷಯದಲ್ಲಿ ಅದು ಅಂದವಾದ ಕಲ್ಲುಗಳಿಂದಲೂ ಕಾಣಿಕೆಯ ವಸ್ತುಗಳಿಂದಲೂ ಅಲಂಕಾರವಾಗಿದೆ ಎಂದು ಹೇಳುತ್ತಿರುವಾಗ, 6ಯೇಸು, “ನೀವು ಇವುಗಳನ್ನು ನೋಡುತ್ತಿದ್ದೀರಲ್ಲಾ, ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡವಲ್ಪಡುವ ದಿನಗಳು ಬರುವವು” ಅಂದನು. 7ಅವರು, “ಬೋಧಕನೇ, ಅದು ಯಾವಾಗ ಆಗುವುದು? ಅದು ಸಂಭವಿಸುವಾಗ ಯಾವ ಸೂಚನೆಗಳುಂಟಾಗುವುವು?” ಎಂದು ಆತನನ್ನು ಕೇಳಲು, 8ಯೇಸು ಹೇಳಿದ್ದೇನಂದರೆ, “ನೀವು ಮೋಸಹೋಗದಂತೆ ಎಚ್ಚರವಾಗಿರಿ. ಏಕೆಂದರೆ ಅನೇಕರು ಬಂದು ನನ್ನ ಹೆಸರನ್ನು ಹೇಳಿಕೊಂಡು ‘ನಾನೇ ಕ್ರಿಸ್ತನು, ನಾನೇ ಕ್ರಿಸ್ತನು’ ಎಂತಲೂ ‘ಆ ಕಾಲ ಹತ್ತಿರವಾಯಿತು’ ಎಂತಲೂ ಹೇಳುವರು. ಅವರ ಹಿಂದೆ ಹೋಗಬೇಡಿರಿ. 9ಇದಲ್ಲದೆ ಯುದ್ಧಗಳೂ ಗಲಭೆಗಳೂ ಆಗುವುದನ್ನು ನೀವು ಕೇಳುವಾಗ, ನೋಡುವಾಗ ಭಯಭೀತರಾಗಬೇಡಿರಿ, ಏಕೆಂದರೆ ಇದೆಲ್ಲಾ ಮೊದಲು ಆಗುವುದು ಅಗತ್ಯ. ಆದರೂ ಕೂಡಲೆ ಅಂತ್ಯ ಬರುವುದಿಲ್ಲ” ಅಂದನು.
10ಮತ್ತು ಯೇಸು ಅವರಿಗೆ ಹೇಳಿದ್ದೇನಂದರೆ, “ಜನಕ್ಕೆ ವಿರೋಧವಾಗಿ ಜನರೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. 11ಮತ್ತು ಮಹಾಭೂಕಂಪಗಳಾಗುವವು, ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು, ಭಯಾನಕ ಘಟನೆಗಳೂ ಮಹಾ ಸೂಚನೆಗಳೂ ಆಕಾಶದಲ್ಲಿ ತೋರುವವು. 12ಆದರೆ ಇವೆಲ್ಲಾ ನಡೆಯುವುದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಯ ಅಧಿಕಾರಿಗಳ ವಶಕ್ಕೆ ಕೊಟ್ಟು, ನನ್ನ ಹೆಸರಿನ ನಿಮಿತ್ತವಾಗಿ ಅರಸುಗಳ ಮುಂದೆಯೂ ಅಧಿಪತಿಗಳ ಮುಂದೆಯೂ ಕರೆದುಕೊಂಡುಹೋಗಿ ಹಿಂಸೆಪಡಿಸುವರು. 13ಇದು ಸಾಕ್ಷಿಹೇಳುವುದಕ್ಕೆ ನಿಮಗೆ ಅನುಕೂಲವಾಗುವುದು. 14ಆದುದರಿಂದ ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ನೀವು ಮುಂದಾಗಿ ಯೋಚಿಸುವುದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ. 15ಏಕೆಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರು ನಿಲ್ಲುವುದಕ್ಕೂ ಎದುರು ಮಾತನಾಡುವುದಕ್ಕೂ ಆಗದಂಥ ಬಾಯನ್ನೂ, ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ. 16ಆದರೆ ತಂದೆತಾಯಿಗಳೂ, ಅಣ್ಣತಮ್ಮಂದಿರೂ, ಬಂಧುಬಾಂಧವರೂ. ಸ್ನೇಹಿತರೂ ನಿಮ್ಮನ್ನು ಅವರಿಗೆ ಒಪ್ಪಿಸಿಕೊಡುವರು ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. 17ಇದಲ್ಲದೆ ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. 18ಆದರೂ ನಿಮ್ಮದೊಂದು ತಲೆಕೂದಲಾದರೂ ನಾಶವಾಗುವುದಿಲ್ಲ. 19ನೀವು ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡೆದುಕೊಳ್ಳುವಿರಿ.
ಯೆರೂಸಲೇಮಿನ ನಾಶನದ ಬಗ್ಗೆ ಯೇಸು ಹೇಳಿದ್ದು
ಮತ್ತಾ 24:15-21; ಮಾರ್ಕ 13:14-19
20 “ಆದರೆ ಸೈನಿಕರ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವುದನ್ನು ನೀವು ಕಾಣುವಾಗ ಅದು ನಾಶವಾಗುವ ಕಾಲ ಸಮೀಪವಾಯಿತೆಂದು ತಿಳಿದುಕೊಳ್ಳಿರಿ. 21ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ. ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ. ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ. 22ಏಕೆಂದರೆ ಬರೆದಿರುವುದೆಲ್ಲಾ ನೆರವೇರುವುದಕ್ಕಾಗಿ ಅವು ದಂಡನೆಯ ದಿನಗಳಾಗಿವೆ. 23ಆ ದಿನಗಳಲ್ಲಿ ಗರ್ಭಿಣಿಯರಿಗೂ ಬಾಣಂತಿಯರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರ ಮೇಲೆ ಕ್ರೋಧವು ಉಂಟಾಗುವವು. 24ಅವರು ಕತ್ತಿಯ ಬಾಯಿಗೆ ಗುರಿಯಾಗುವರು. ಅವರು ಸೆರೆಯಾಗಿ ಅನ್ಯದೇಶಗಳಿಗೆಲ್ಲಾ ಹಿಡಿದುಕೊಂಡು ಹೋಗುವರು. ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವುದು.
ಮನುಷ್ಯಕುಮಾರನು ಪುನರಾಗಮನ
ಮತ್ತಾ 24:29-31; ಮಾರ್ಕ 13:24-27
25 “ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೋರ್ಗರೆಯುವ ಸಮುದ್ರ ಮತ್ತು ಅಲೆಗಳ ಘೋಷದ ನಿಮಿತ್ತವಾಗಿ ಭೂಮಿಯ ಮೇಲೆ ಜನಗಳಿಗೆ ದಿಕ್ಕುಕಾಣದೆ ಸಂಕಟವು ಉಂಟಾಗುವುದು. 26ಆಕಾಶದ ಶಕ್ತಿಗಳು ಕದಲುವುದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವುದೋ ಎಂದು ಎದುರು ನೋಡುತ್ತಾ ಪ್ರಾಣಹೋದಂತಾಗುವರು. 27ಆಗ ಮನುಷ್ಯಕುಮಾರನು ಬಲದಿಂದಲೂ ಬಹು ಮಹಿಮೆಯಿಂದಲೂ ಮೇಘದಲ್ಲಿ ಬರುವುದನ್ನು ಕಾಣುವರು. 28ಆದರೆ ಇವು ಸಂಭವಿಸುವುದಕ್ಕೆ ತೊಡಗುವಾಗ, ನಿಮ್ಮ ತಲೆಯೆತ್ತಿರಿ, ಏಕೆಂದರೆ ನಿಮ್ಮ ಬಿಡುಗಡೆಯು ಸಮೀಪವಾಗಿದೆ” ಅಂದನು.
ಅಂಜೂರ ಮರದ ಸಾಮ್ಯ
ಮತ್ತಾ 24:32-35; ಮಾರ್ಕ 13:28-31
29ಯೇಸು ಅವರಿಗೆ ಒಂದು ಸಾಮ್ಯವಾಗಿ ಹೇಳಿದ್ದೇನಂದರೆ, “ಅಂಜೂರ ಮುಂತಾದ ಮರಗಳನ್ನೂ ನೋಡಿರಿ. 30ಅವು ಚಿಗುರಿದ ಕೂಡಲೆ ನೀವು ಅವನ್ನು ಕಂಡು ಈಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿ ತಿಳಿದುಕೊಳ್ಳುತ್ತೀರಲ್ಲಾ. 31ಹಾಗೆಯೇ ಇವುಗಳಾಗುವುದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳಿರಿ.
32 “ಇವೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 33ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.
34 “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರಿ. ಅತಿ ಭೋಜನದ ಮದದಿಂದಲೂ, ಅಮಲಿನಿಂದಲೂ, ಪ್ರಾಪಂಚಿಕವಾದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿನವು ನಿಮ್ಮ ಮೇಲೆ ಉರುಲಿನಂತೆ ಫಕ್ಕನೆ ಬಂದೀತು. 35ಆ ದಿನವು ಭೂನಿವಾಸಿಗಳೆಲ್ಲರ ಮೇಲೆ ಬರುವುದು. 36ಆದರೆ ಅಂದು ಬರುವುದಕ್ಕಿರುವ ಇವೆಲ್ಲವುಗಳಿಂದ ತಪ್ಪಿಸಿಕೊಳ್ಳುವುದಕ್ಕೂ, ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವುದಕ್ಕೂ, ನೀವು ಪೂರ್ಣ ಶಕ್ತರಾಗುವಂತೆ, ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಎಚ್ಚರವಾಗಿರಿ” ಅಂದನು.
ಅಧಿಕಾರಿಗಳು ಯೇಸುವನ್ನು ಕೊಲ್ಲುವುದಕ್ಕೆ ಉಪಾಯಮಾಡಿದ್ದು
37ಯೇಸು ಹಗಲಿನಲ್ಲಿ ದೇವಾಲಯದಲ್ಲಿ ಉಪದೇಶಮಾಡುತ್ತಾ, ರಾತ್ರಿ ಪಟ್ಟಣದ ಹೊರಗೆ ಹೋಗಿ ಎಣ್ಣೆ ಮರಗಳ ತೋಪು ಎನಿಸಿಕೊಳ್ಳುವ ಗುಡ್ಡದಲ್ಲಿ ರಾತ್ರಿಯನ್ನು ಕಳೆಯುತ್ತಾ ಇದ್ದನು. 38ಜನರೆಲ್ಲರು ಆತನ ಉಪದೇಶವನ್ನು ಕೇಳಬೇಕೆಂದು ಬೆಳಗ್ಗೆ ಬೇಗನೆ ಎದ್ದು ದೇವಾಲಯಕ್ಕೆ ಆತನ ಬಳಿಗೆ ಬರುತ್ತಿದ್ದರು.
Aktualisht i përzgjedhur:
ಲೂಕ 21: IRVKan
Thekso
Ndaje
Copy
A doni që theksimet tuaja të jenë të ruajtura në të gjitha pajisjet që keni? Regjistrohu ose hyr
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.