ಆದಿಕಾಂಡ 13

13
1ಹೀಗೆ ಅಬ್ರಾಮನು ತನ್ನದನ್ನೆಲ್ಲಾ ತೆಗೆದುಕೊಂಡು ಹೆಂಡತಿಯನ್ನೂ ಲೋಟನನ್ನೂ ಸಂಗಡ ಕರಕೊಂಡು ಐಗುಪ್ತ ದೇಶವನ್ನು ಬಿಟ್ಟು ಕಾನಾನ್‍ದೇಶದ ದಕ್ಷಿಣ ಪ್ರಾಂತ್ಯಕ್ಕೆ ಏರಿ ಬಂದನು.
ಅಬ್ರಾಮನೂ ಲೋಟನೂ ಅಗಲಿದ್ದು
2ಅಬ್ರಾಮನು ಬಹು ಐಶ್ವರ್ಯವಂತನಾಗಿದ್ದನು; ಅವನಿಗೆ ಪಶುಗಳೂ ಬೆಳ್ಳಿಬಂಗಾರವೂ ಇದ್ದವು. 3ಅವನು ದಕ್ಷಿಣ ದೇಶವನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣ ಮಾಡುತ್ತಾ ಬೇತೇಲಿನವರೆಗೆ ಅಂದರೆ 4ಬೇತೇಲಿಗೂ ಆಯಿ ಎಂಬ ಊರಿಗೂ ನಡುವೆ ತಾನು ಪೂರ್ವದಲ್ಲಿ ಗುಡಾರಹಾಕಿಸಿ ಯಜ್ಞವೇದಿಯನ್ನು ಕಟ್ಟಿದ್ದ ಕ್ಷೇತ್ರಕ್ಕೆ ತಿರಿಗಿ ಬಂದು ಅಲ್ಲಿ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿದನು. 5ಅವನ ಜೊತೆಯಲ್ಲಿದ್ದ ಲೋಟನಿಗೂ ಕುರಿದನ ಗುಡಾರಗಳಿದ್ದವು. 6ಆ ಸ್ಥಳವು ಅವರಿಬ್ಬರ ಜೀವನಕ್ಕೆ ಸಾಲದೆಹೋಯಿತು. ಅವರಿಬ್ಬರ ಆಸ್ತಿ ಬಹಳವಾದದರಿಂದ ಒಂದೇ ಸ್ಥಳದಲ್ಲಿ ವಾಸವಾಗಿರುವದು ಅಸಾಧ್ಯವಾಯಿತು. 7ಇದರಿಂದ ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳ ಹುಟ್ಟಿತು. ಇದಲ್ಲದೆ ಕಾನಾನ್ಯರೂ ಪೆರಿಜೀಯರೂ ಆ ಕಾಲದಲ್ಲಿ ದೇಶದೊಳಗೆ ಇದ್ದರು. 8ಹೀಗಿರಲು ಅಬ್ರಾಮನು ಲೋಟನಿಗೆ - ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರಲ್ಲವೇ. 9ದೇಶವೆಲ್ಲಾ ನಿನ್ನೆದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು ಎಂದು ಹೇಳಿದನು. 10ಲೋಟನು ಕಣ್ಣೆತ್ತಿ ನೋಡಲಾಗಿ ಯೊರ್ದನ್ ಹೊಳೆಯ ಸುತ್ತಲಿನ ಪ್ರದೇಶವು ಚೋಗರೂರಿನ ತನಕ ಎಲ್ಲಾ ಕಡೆಯಲ್ಲಿಯೂ ನೀರಾವರಿಯ ಸ್ಥಳವೆಂದು ತಿಳುಕೊಂಡನು. ಯೆಹೋವನು ಸೊದೋಮ್‍ಗೊಮೋರ ಪಟ್ಟಣಗಳನ್ನು ನಾಶಮಾಡುವದಕ್ಕಿಂತ ಮುಂಚೆ ಆ ಸೀಮೆಯು ಯೆಹೋವನ ವನದಂತೆಯೂ ಐಗುಪ್ತದೇಶದಂತೆಯೂ ನೀರಾವರಿಯಾಗಿತ್ತು. 11ಆದದರಿಂದ ಲೋಟನು ಯೊರ್ದನ್ ಹೊಳೆಯ ಸುತ್ತಣ ಪ್ರದೇಶವನ್ನು ಆದುಕೊಂಡು ಮೂಡಣ ಕಡೆಗೆ ಹೊರಟನು. ಹೀಗೆ ಅವರಿಬ್ಬರೂ ಪ್ರತ್ಯೇಕವಾದರು; 12ಅಬ್ರಾಮನು ಕಾನಾನ್‍ದೇಶದಲ್ಲಿ ವಾಸಮಾಡಿದನು; ಲೋಟನು ಯೊರ್ದನ್ ಹೊಳೆಯ ಸುತ್ತಣ ಊರುಗಳಲ್ಲಿ ಗುಡಾರ ಹಾಕಿಸಿ ವಸತಿ ಮಾಡುತ್ತಾ ಸೊದೋವಿುಗೆ ಬಂದನು. 13ಆದರೆ ಸೊದೋಮ್ ಪಟ್ಟಣದವರು ದುಷ್ಟರೂ ಯೆಹೋವನಿಗೆ ಮಹಾಪರಾಧಿಗಳೂ ಆಗಿದ್ದರು.
ದೇವರು ಅಬ್ರಾಮನ ಸಂತತಿಯವರಿಗೆ ಕಾನಾನ್‍ದೇಶವನ್ನು ವಾಗ್ದಾನಮಾಡಿದ್ದು
14ಲೋಟನು ಅಬ್ರಾಮನನ್ನು ಬಿಟ್ಟು ಬೇರೆಯಾದ ನಂತರ ಯೆಹೋವನು ಅಬ್ರಾಮನಿಗೆ - ನೀನಿರುವ ಸ್ಥಳದಿಂದ ದಕ್ಷಿಣೋತ್ತರಪೂರ್ವಪಶ್ಚಿಮಗಳಿಗೆ ಕಣ್ಣೆತ್ತಿ ನೋಡು. 15ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು. 16ನಿನ್ನ ಸಂತಾನದವರನ್ನು ಭೂವಿುಯ ಧೂಳಿನಷ್ಟು ಅಸಂಖ್ಯವಾಗಿ ಮಾಡುವೆನು. ಭೂವಿುಯಲ್ಲಿರುವ ಧೂಳನ್ನು ಲೆಕ್ಕಮಾಡುವದಾದರೆ ನಿನ್ನ ಸಂತಾನವನ್ನೂ ಲೆಕ್ಕಿಸಲಾದೀತು. 17ನೀನೆದ್ದು ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು; ಇದನ್ನು ನಿನಗೆ ಕೊಡುವೆನು ಎಂದು ಹೇಳಿದನು.
18ತರುವಾಯ ಅಬ್ರಾಮನು ಅಲ್ಲಿಂದ ಹೊರಟು ಅಲ್ಲಲ್ಲಿ ಗುಡಾರಹಾಕಿಸಿಕೊಳ್ಳುತ್ತಾ ಹೆಬ್ರೋನಿನಲ್ಲಿರುವ ಮಮ್ರೆ ತೋಪಿಗೆ ಬಂದು ಅಲ್ಲೇ ವಾಸಮಾಡಿಕೊಂಡು ಯೆಹೋವನಿಗೆ ಯಜ್ಞವೇದಿಯನ್ನು ಕಟ್ಟಿಸಿದನು.

Märk

Dela

Kopiera

None

Vill du ha dina höjdpunkter sparade på alla dina enheter? Registrera dig eller logga in