ಆದಿಕಾಂಡ 18
18
ಅಬ್ರಹಾಮನ ಹೆಂಡತಿಗೆ ವೃದ್ಧಾಪ್ಯದಲ್ಲಿ ಮಗನು ಹುಟ್ಟುವನೆಂದು ದೇವರು ವಾಗ್ದಾನಮಾಡಿದ್ದು
1ಅಬ್ರಹಾಮನು ಮಧ್ಯಾಹ್ನದಲ್ಲಿ ಮಮ್ರೇತೋಪಿನ ತನ್ನ ಗುಡಾರದ ಬಾಗಲಲ್ಲಿ ಕೂತಿರುವಾಗ ಯೆಹೋವನು ಅವನಿಗೆ ದರ್ಶನಕೊಟ್ಟನು. 2ಹೇಗಂದರೆ, ಅಬ್ರಹಾಮನು ಕಣ್ಣೆತ್ತಿ ನೋಡಲು ಅವನ ಎದುರಿನಲ್ಲಿ ಯಾರೋ ಮೂರು ಮಂದಿ ಪುರುಷರು ನಿಂತಿದ್ದರು. ಕೂಡಲೆ ಅವರನ್ನು ಎದುರುಗೊಳ್ಳುವದಕ್ಕೆ ಅವನು ಗುಡಾರದ ಬಾಗಲಿನಿಂದ ಓಡಿ ಹೋಗಿ 3ಬೊಗ್ಗಿ ನಮಸ್ಕರಿಸಿ - ಸ್ವಾವಿು, ದಯವಿರಲಿ; ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿರಿ. ನೀವು ದಾಸನಿರುವ ಸ್ಥಳದ ಹತ್ತಿರ ಹಾದು ಹೋಗುತ್ತೀರಲ್ಲಾ. 4ನೀರು ತರಿಸಿಕೊಡುತ್ತೇನೆ; ನಿಮ್ಮ ಕಾಲುಗಳನ್ನು ತೊಳೆದುಕೊಂಡು ಮರದ ನೆರಳಿನಲ್ಲಿ ವಿಶ್ರವಿುಸಿಕೊಳ್ಳಿರಿ. 5ಸ್ವಲ್ಪ ಆಹಾರ ತರುತ್ತೇನೆ, ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಬೆಳಿಸಬಹುದು ಎನ್ನಲು ಅವರು - ನೀನು ಹೇಳಿದಂತೆ ಮಾಡಬಹುದು ಅಂದರು. 6ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಳ ಬಳಿಗೆ ಓಡಿಹೋಗಿ ಆಕೆಗೆ - ಹಸನಾದ ಮೂರು ಸೇರು ಹಿಟ್ಟನ್ನು ನಾದಿ ಬೇಗ ರೊಟ್ಟಿಗಳನ್ನು ಮಾಡು ಎಂದು ಹೇಳಿದನು. 7ಆಮೇಲೆ ಅವನು ದನಗಳ ಕಡೆಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಆಳಿನ ಕೈಗೆ ಕೊಟ್ಟನು. ಆಳು ಬೇಗನೆ ಅಡಿಗೆ ಮಾಡಿದನು. 8ತರುವಾಯ ಅಬ್ರಹಾಮನು ಹಾಲುಮೊಸರನ್ನೂ ಅಟ್ಟ ಮಾಂಸವನ್ನೂ ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಊಟಮಾಡುವವರೆಗೂ ಅವನು ಹತ್ತಿರ ನಿಂತುಕೊಂಡು ಉಪಚಾರ ಮಾಡಿದನು.
9ಬಳಿಕ ಅವರು ಅವನನ್ನು - ನಿನ್ನ ಪತ್ನಿಯಾದ ಸಾರಳು ಎಲ್ಲಿದ್ದಾಳೆ ಎಂದು ಕೇಳಲು ಅವನು - ಅಗೋ, ಗುಡಾರದಲ್ಲಿದ್ದಾಳೆ ಅಂದನು. 10ಅದಕ್ಕಾತನು - ಬರುವ ವರುಷದ ಇದೇ ಕಾಲದಲ್ಲಿ ನಾನು ತಪ್ಪದೆ ತಿರಿಗಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಪತ್ನಿಯಾದ ಸಾರಳಿಗೆ ಮಗನಿರುವನು ಅಂದನು. ಆ ಮಾತು ಹಿಂದೆ ಗುಡಾರದ ಬಾಗಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿತ್ತು. 11ಅಬ್ರಹಾಮನೂ ಸಾರಳೂ ಬಹು ವೃದ್ಧರಾಗಿದ್ದರು; ಸಾರಳಿಗೆ ಮುಟ್ಟು ನಿಂತು ಹೋಗಿತ್ತು. ಹೀಗಿರಲಾಗಿ ಆಕೆ - 12ನನ್ನಂಥ ಮುದುಕಿಗೆ ಭೋಗವಾದೀತೇ? ನನ್ನ ಯಜಮಾನನೂ ಮುದುಕನಲ್ಲವೇ ಎಂದು ತನ್ನೊಳಗೆ ನಕ್ಕಳು. 13ಯೆಹೋವನು ಅಬ್ರಹಾಮನಿಗೆ - ಸಾರಳು ನಕ್ಕು ಮುದುಕಿಯಾದ ನಾನು ಮಗುವನ್ನು ಹೆರುವದಾದೀತೇ ಎಂದು ಹೇಳಿದ್ದೇನು? 14ಯೆಹೋವನಿಗೆ ಅಸಾಧ್ಯವಾದದ್ದುಂಟೋ? ನಾನು ಹೇಳಿದಂತೆಯೇ ಬರುವ ವರುಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುವನು ಎಂದು ಹೇಳಿದನು. 15ಆಗ ಸಾರಳು ಭಯಪಟ್ಟು - ನಾನು ನಗಲಿಲ್ಲ ಎಂದು ಬೊಂಕಲು ಆತನು- ಹಾಗನ್ನಬೇಡಮ್ಮಾ, ನೀನು ನಕ್ಕದ್ದುಂಟು ಅಂದನು.
ಸೊದೋಮ್ ಪಟ್ಟಣವನ್ನು ನಾಶಮಾಡಬೇಡವೆಂದು ಅಬ್ರಹಾಮನು ದೇವರನ್ನು ಬೇಡಿಕೊಂಡದ್ದು
16ಆ ಮನುಷ್ಯರು ಅಲ್ಲಿಂದ ಹೊರಟು ಸೊದೋವಿುನ ಕಡೆಗೆ ನೋಡಿದರು; ಅಬ್ರಹಾಮನು ಅವರನ್ನು ಸಾಗಕಳುಹಿಸುತ್ತಾ ಅವರ ಜೊತೆಯಲ್ಲೇ ಬಂದಿದ್ದನು.
17ಆಗ ಯೆಹೋವನು ತನ್ನೊಳಗೆ - ನಾನು ಮಾಡಬೇಕೆಂದಿರುವ ಕಾರ್ಯವನ್ನು ಅಬ್ರಹಾಮನಿಗೆ ಮರೆಮಾಡುವದು ಸರಿಯೋ? 18ಅವನಿಂದ ಬಲಿಷ್ಠವಾದ ಮಹಾಜನಾಂಗವು ಹುಟ್ಟಬೇಕಲ್ಲಾ; ಅವನ#18.18 ಅಥವಾ: ಭೂವಿುಯ ಎಲ್ಲಾ ಜನಾಂಗಗಳವರೂ ಅವನಿಗಿರುವಂಥ ಆಶೀರ್ವಾದವೇ ತಮಗೂ ಆಗಬೇಕೆಂದು ಕೋರುವರಲ್ಲಾ. ಮೂಲಕ ಭೂವಿುಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವದಲ್ಲಾ; 19ಅವನು ತನ್ನ ಪುತ್ರಪೌತ್ರರಿಗೆ - ನೀವು ನ್ಯಾಯನೀತಿಗಳನ್ನು ನಡಿಸಿ ಯೆಹೋವನ ಮಾರ್ಗವನ್ನು ಅನುಸರಿಸಬೇಕೆಂದು ಬೋಧಿಸುವಂತೆ ಅವನನ್ನು ನಾನು ಆದುಕೊಂಡೆನಲ್ಲಾ; ಅವನು ಹೀಗೆ ಮಾಡುವದರಿಂದ ಯೆಹೋವನಾದ ನನ್ನ ವಾಗ್ದಾನವು ನೆರವೇರುವದು ಅಂದುಕೊಂಡನು. 20ಇದಲ್ಲದೆ ಯೆಹೋವನು - ಸೊದೋಮ್ ಗೊಮೋರಗಳ ವಿಷಯವಾಗಿ ಎಷ್ಟೋ ದೊಡ್ಡ ಮೊರೆ ನನಗೆ ಮುಟ್ಟಿತು; ಆ ಊರಿನವರ ಮೇಲೆ ಹೊರಿಸಿರುವ ಪಾಪವು ಎಷ್ಟೋ ಘೋರವಾದದ್ದು; 21ನಾನು ಇಳಿದು ಹೋಗಿ ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ ಅಂದನು.
22ಆ ಮನುಷ್ಯರು ಅಲ್ಲಿಂದ ಸೊದೋವಿುನ ಕಡೆಗೆ ಹೋದರು; ಆದರೆ ಅಬ್ರಹಾಮನು ಯೆಹೋವನ ಎದುರಾಗಿ ಇನ್ನೂ ನಿಂತನು.
23ಆಗ ಅಬ್ರಹಾಮನು ಹತ್ತಿರಕ್ಕೆ ಬಂದು - ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ? 24ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ನೀತಿವಂತರಿದ್ದಾರು; ಅದರಲ್ಲಿ ಐವತ್ತು ಮಂದಿ ನೀತಿವಂತರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿಯಾ? 25ಆ ರೀತಿಯಾಗಿ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ನೀತಿವಂತರನ್ನೂ ಸಂಹರಿಸುವದು ನಿನ್ನಿಂದ ಎಂದಿಗೂ ಆಗಬಾರದು; ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವನಲ್ಲವೇ ಎಂದು ಹೇಳಲು ಯೆಹೋವನು - 26ಸೊದೋವಿುನಲ್ಲಿ ಐವತ್ತು ಮಂದಿ ನೀತಿವಂತರು ನನಗೆ ಸಿಕ್ಕಿದರೆ ಅವರ ನಿವಿುತ್ತ ಊರನ್ನೆಲ್ಲಾ ಉಳಿಸುವೆನು ಅಂದನು. 27ಅದಕ್ಕೆ ಅಬ್ರಹಾಮನು - ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಸ್ವಾವಿುಯ ಸಂಗಡ ವಾದಿಸುವದಕ್ಕೆ ಧೈರ್ಯಗೊಂಡಿದ್ದೇನೆ; 28ಒಂದು ವೇಳೆ ಐವತ್ತು ಮಂದಿ ನೀತಿವಂತರಿಗೆ ಐದು ಮಂದಿ ಕಡಿಮೆಯಾಗಿದ್ದಾರು; ಐದು ಮಂದಿ ಕಡಿಮೆಯಾದದ್ದಕ್ಕೆ ಪಟ್ಟಣವನ್ನೆಲ್ಲಾ ನಾಶಮಾಡುವಿಯಾ ಎಂದು ಹೇಳಲು ಯೆಹೋವನು - ಅಲ್ಲಿ ನಾಲ್ವತ್ತೈದು ಮಂದಿ ಸಿಕ್ಕಿದರೆ ಅದನ್ನು ನಾಶಮಾಡುವದಿಲ್ಲ ಅಂದನು. 29ಅಬ್ರಹಾಮನು ಆತನ ಸಂಗಡ ಇನ್ನೂ ಮಾತಾಡಿ - ಒಂದು ವೇಳೆ ಅಲ್ಲಿ ನಾಲ್ವತ್ತು ಮಂದಿ ಸಿಕ್ಕಾರು ಎನ್ನಲು ಆತನು - ನಾಲ್ವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶಮಾಡುವದಿಲ್ಲ ಅಂದನು. 30ಅಬ್ರಹಾಮನು - ಸ್ವಾಮೀ, ಕೋಪಮಾಡಬಾರದು; ಇನ್ನೂ ಮಾತಾಡುತ್ತೇನೆ; ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು ಎನ್ನಲು ಆತನು - ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ ಅದನ್ನು ನಾಶಮಾಡುವದಿಲ್ಲ ಅಂದನು. 31ಅವನು - ಇಗೋ, ಸ್ವಾವಿುಯ ಸಂಗಡ ಮಾತಾಡುವದಕ್ಕೆ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತು ಮಂದಿ ಅಲ್ಲಿ ಸಿಕ್ಕಾರು ಎನ್ನಲು ಆತನು - ಇಪ್ಪತ್ತು ಮಂದಿಯಿದ್ದರೆ ಅವರ ನಿವಿುತ್ತ ಅದನ್ನು ಉಳಿಸುವೆನು, ನಾಶಮಾಡುವದಿಲ್ಲ ಅಂದನು. 32ಅಬ್ರಹಾಮನು - ಸ್ವಾಮೀ, ನಿನಗೆ ಸಿಟ್ಟಾಗಬಾರದು; ಇನ್ನು ಒಂದೇ ಸಾರಿ ಮಾತಾಡುತ್ತೇನೆ; ಒಂದು ವೇಳೆ ಹತ್ತು ಮಂದಿ ಸಿಕ್ಕಾರು ಎನ್ನಲು ಆತನು - ಹತ್ತು ಮಂದಿಯ ನಿವಿುತ್ತವೂ ಅದನ್ನು ಉಳಿಸುವೆನು, ನಾಶಮಾಡುವದಿಲ್ಲ ಅಂದನು. 33ಯೆಹೋವನು ಅಬ್ರಹಾಮನ ಸಂಗಡ ಮಾತಾಡುವದನ್ನು ಮುಗಿಸಿ ಹೊರಟುಹೋದನು; ಅಬ್ರಹಾಮನು ತನ್ನ ಸ್ಥಳಕ್ಕೆ ಹಿಂದಿರುಗಿ ಹೋದನು.
Nu markerat:
ಆದಿಕಾಂಡ 18: KANJV-BSI
Märk
Dela
Kopiera
Vill du ha dina höjdpunkter sparade på alla dina enheter? Registrera dig eller logga in
Kannada J.V. Bible © The Bible Society of India, 2016.
Used by permission. All rights reserved worldwide.