Uphawu lweYouVersion
Khetha Uphawu

ಪ್ರೇಷಿತರ ಕಾರ್ಯಕಲಾಪಗಳು 4

4
ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೊವಾನ್ನ
1ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರೂ ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬಂದರು. 2ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊಂದುವರು ಎಂದು ಈ ಇಬ್ಬರು ಪ್ರೇಷಿತರು ಬೋಧಿಸುತ್ತಿದ್ದರು. 3ಇದನ್ನು ಕೇಳಿ ಸಿಟ್ಟುಗೊಂಡಿದ್ದ ಅವರು ಪೇತ್ರ ಯೊವಾನ್ನರನ್ನು ಬಂಧಿಸಿದರು. ಆಗಲೇ ಹೊತ್ತು ಮೀರಿದ್ದರಿಂದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. 4ಆದರೆ ಪ್ರೇಷಿತರ ಬೋಧನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಶ್ವಾಸಿಗಳ ಸಂಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು.
5ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆ ಸೇರಿದರು. 6ಪ್ರಧಾನಯಾಜಕ ಅನ್ನಾ ಹಾಗೂ ಕಾಯಫ, ಯೊವಾನ್ನ, ಅಲೆಕ್ಸಾಂಡರ್ ಮತ್ತು ಪ್ರಧಾನಯಾಜಕನ ಕುಟುಂಬದವರು ಆ ಸಭೆಯಲ್ಲಿ ಹಾಜರಿದ್ದರು. 7ಪ್ರೇಷಿತರನ್ನು ಸಭೆಯ ಮುಂದೆ ನಿಲ್ಲಿಸಿ, “ಇದೆಲ್ಲವನ್ನು ನೀವು ಯಾರ ಹೆಸರಿನಲ್ಲಿ ಮತ್ತು ಯಾವ ಅಧಿಕಾರದಿಂದ ಮಾಡಿದಿರಿ?” ಎಂದು ಪ್ರಶ್ನಿಸಿದರು.
8ಪೇತ್ರನು ಪವಿತ್ರಾತ್ಮಭರಿತನಾಗಿ ಹೀಗೆಂದು ಉತ್ತರಕೊಟ್ಟನು: “ಜನರ ಅಧಿಕಾರಿಗಳೇ, ಪ್ರಮುಖರೇ, 9ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ. 10ನಿಮಗೂ ಇಸ್ರಯೇಲಿನ ಎಲ್ಲಾ ಜನರಿಗೂ ಈ ವಿಷಯ ತಿಳಿದಿರಲಿ; ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿಂದಲೇ ಈ ಮನುಷ್ಯನು ಪೂರ್ಣ ಗುಣಹೊಂದಿ ನಿಮ್ಮ ಮುಂದೆ ನಿಂತಿದ್ದಾನೆ. 11ನೀವು ಶಿಲುಬೆಗೇರಿಸಿ ಕೊಂದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ.
‘ಮನೆಕಟ್ಟುವವರಾದ ನೀವು
ಬೇಡವೆಂದು ಮೂಲೆಗೆಸೆದ ಕಲ್ಲೇ
ಪ್ರಮುಖ ಮೂಲೆಗಲ್ಲಾಯಿತು’
ಎಂದು ಬರೆದಿರುವುದು ಇವರನ್ನು ಕುರಿತೇ.
12ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.”
13ಅವಿದ್ಯಾವಂತರು ಹಾಗೂ ಜನಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತು ಹಚ್ಚಿದರು. 14ಗುಣಹೊಂದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿಂತಿರುವುದನ್ನು ಕಂಡು ನಿರುತ್ತರರಾದರು. 15ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ ಚರ್ಚಿಸಲಾರಂಭಿಸಿದರು; 16“ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಭುತ ಜೆರುಸಲೇಮಿನ ಸರ್ವರಿಗೂ ತಿಳಿದುಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ. 17ಆದರೂ, ಈ ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ,” ಎಂದುಕೊಂಡರು.
18ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, “ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು,” ಎಂದು ಕಟ್ಟಪ್ಪಣೆ ಮಾಡಿದರು. 19ಆಗ ಪೇತ್ರ ಮತ್ತು ಯೊವಾನ್ನರು, “ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ. 20ನಾವಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ವಿಷಯನ್ನು ಕುರಿತು ಮೌನದಿಂದಿರಲಾಗದು,” ಎಂದು ಬದಲು ನುಡಿದರು. 21ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು. 22ಈ ಅದ್ಭುತದಿಂದ ಗುಣಹೊಂದಿದ ಆ ವ್ಯಕ್ತಿಗೆ ನಲವತ್ತು ವರ್ಷ ಮೀರಿತ್ತು.
ಧೈರ್ಯಸ್ಥೈರ್ಯಕ್ಕಾಗಿ ಭಕ್ತರ ಪ್ರಾರ್ಥನೆ
23ಪೇತ್ರ ಮತ್ತು ಯೊವಾನ್ನ ಬಂಧನದಿಂದ ಬಿಡುಗಡೆ ಹೊಂದಿದ ಮೇಲೆ ವಿಶ್ವಾಸಿಗಳಿಗೆ ಭೇಟಿಯಿತ್ತರು. ಮುಖ್ಯಯಾಜಕರು ಹಾಗೂ ಪ್ರಜಾಪ್ರಮುಖರು ತಮಗೆ ಹೇಳಿದ್ದನ್ನು ಅವರಿಗೆ ವರದಿಮಾಡಿದರು. 24ಈ ಸಮಾಚಾರವನ್ನು ಕೇಳಿದಕೂಡಲೇ ಭಕ್ತಾದಿಗಳು ಏಕಕಂಠದಿಂದ ದೇವರನ್ನು ಪ್ರಾರ್ಥಿಸುತ್ತಾ ಹೀಗೆಂದರು:
“ಪ್ರಭುವೇ, ಇಹಪರಗಳನ್ನೂ ಸಮುದ್ರಸಾಗರಗಳನ್ನೂ
ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದವರು ನೀವೇ.
25-26ಸರ್ವೇಶ್ವರನಿಗೂ ಆತ ಅಭಿಷೇಕಿಸಿದವನಿಗೂ ವಿರುದ್ಧ
‘ಅನ್ಯಧರ್ಮಿಯರೇಕೆ ರೋಷಭರಿತರಾದರು?
ಜನರೇಕೆ ವ್ಯರ್ಥ ಒಳಸಂಚು ಹೂಡಿದರು?
ಲೋಕಾಧಿಪತಿಗಳೇಕೆ ಸನ್ನದ್ಧರಾದರು?
ಜನನಾಯಕರೇಕೆ ಸಮಾಲೋಚಿಸಿದರು?’
ಎಂದು ನಮ್ಮ ಪಿತಾಮಹ ಹಾಗೂ ನಿಮ್ಮ ದಾಸನಾದ ದಾವೀದನ ಬಾಯಿಂದ ನುಡಿಸಿದಿರಿ.
27“ಅಂತೆಯೇ, ನಿಮ್ಮ ಪರಮಪೂಜ್ಯದಾಸ ಯೇಸುವಿನ ವಿರುದ್ಧ ಹೆರೋದನು ಮತ್ತು ಪೊಂತ್ಸಿಯುಸ್ ಪಿಲಾತನು ಅನ್ಯಧರ್ಮದವರೊಡನೆ ಹಾಗೂ ಇಸ್ರಯೇಲಿನ ಜನರೊಡನೆ ಸೇರಿ ಈ ಪಟ್ಟಣದಲ್ಲೇ ಸಮಾಲೋಚನೆ ಮಾಡಿದರು. 28ನೀವು ಸಂಯೋಜಿಸಿದ್ದು ಹಾಗೂ ಸಂಕಲ್ಪಿಸಿದ್ದು ಈಡೇರುವಂತೆ ಅವರು ಹೀಗೆ ವರ್ತಿಸಿದರು. 29ಪ್ರಭುವೇ, ಇಗೋ, ಇವರು ನಮ್ಮನ್ನು ಬೆದರಿಸುತ್ತಿದ್ದಾರೆ; ನಿಮ್ಮ ಸಂದೇಶವನ್ನು ಧೈರ್ಯವಾಗಿ ಸಾರಲು ಶರಣರಾದ ನಮಗೆ ನೆರವು ನೀಡಿರಿ. 30ಸ್ವಸ್ಥಪಡಿಸುವ ನಿಮ್ಮ ಅಮೃತಹಸ್ತವನ್ನು ಚಾಚಿರಿ; ನಿಮ್ಮ ಪರಮಪೂಜ್ಯ ದಾಸ ಯೇಸುವಿನ ನಾಮದಲ್ಲಿ ಅದ್ಭುತಗಳೂ ಸೂಚಕಕಾರ್ಯಗಳೂ ಜರುಗುವಂತಾಗಲಿ.”
31ಹೀಗೆ ಪ್ರಾರ್ಥನೆಮಾಡಿದಾಗ ಅವರು ನೆರೆದಿದ್ದ ಸ್ಥಳ ಕಂಪಿಸಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು; ದೇವರ ಶುಭಸಂದೇಶವನ್ನು ಧೈರ್ಯವಾಗಿ ಸಾರತೊಡಗಿದರು.
ಭಕ್ತರ ಅನ್ಯೋನ್ಯ ಜೀವನ
32ಭಕ್ತವಿಶ್ವಾಸಿಗಳು ಒಗ್ಗಟ್ಟಿನಿಂದಲೂ ಒಮ್ಮನಸ್ಸಿನಿಂದಲೂ ಬಾಳುತ್ತಿದ್ದರು. ಯಾರೂ ತಮ್ಮ ಸೊತ್ತನ್ನು ತನ್ನದೇ ಎಂದು ಭಾವಿಸದೆ ಹುದುವಾಗಿ ಹಂಚಿಕೊಳ್ಳುತ್ತಿದ್ದರು. 33ಪ್ರೇಷಿತರು ಪ್ರಭು ಯೇಸುವಿನ ಪುನರುತ್ಥಾನಕ್ಕೆ ಬಹುಸಾಮರ್ಥ್ಯದಿಂದ ಸಾಕ್ಷಿಕೊಡುತ್ತಿದ್ದರು. ಜನರು ಅವರೆಲ್ಲರನ್ನು ಗೌರವದಿಂದ ಕಾಣುತ್ತಿದ್ದರು. 34ಅವರಲ್ಲಿ ಕೊರತೆಯಿದ್ದವರು ಒಬ್ಬರೂ ಇರಲಿಲ್ಲ. 35ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ, ಬಂದ ಹಣವನ್ನು ತಂದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿ ಒಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕಂತೆ ಹಂಚುತ್ತಿದ್ದರು.
36ಜೋಸೆಫ್ ಎಂಬ ಲೇವಿಯನು ಅವರ ಸಂಗಡ ಇದ್ದನು. ಇವನ ಹುಟ್ಟೂರು ಸೈಪ್ರಸ್. ಇವನಿಗೆ ‘ಬಾರ್ನಬ’ (ಎಂದರೆ ಪ್ರೋತ್ಸಾಹಪುತ್ರ) ಎಂದು ಪ್ರೇಷಿತರು ಹೆಸರಿಟ್ಟಿದ್ದರು. 37ಇವನು ತನ್ನ ಜಮೀನನ್ನು ಮಾರಿ ಬಂದ ಹಣವನ್ನು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸಿದನು.

Qaqambisa

Share

Copy

None

Ufuna ukuba iimbalasane zakho zigcinwe kuzo zonke izixhobo zakho? Bhalisela okanye ngena