YouVersion 標識
搜索圖示

ಆದಿಕಾಂಡ 23

23
ಸಾರಳ ಮರಣ ಮತ್ತು ಸಮಾಧಿ
1ಸಾರಳು ನೂರಿಪ್ಪತ್ತೇಳು ವರುಷ ಬದುಕಿದ್ದಳು. 2ಇಷ್ಟು ವರ್ಷಗಳಾದ ಮೇಲೆ ಆಕೆ ಕಾನಾನ್ ನಾಡಿನ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಕಾಲವಾದಳು. ಅಬ್ರಹಾಮನು ಅಲ್ಲಿಗೆ ಬಂದು ಅವಳಿಗಾಗಿ ಕಣ್ಣೀರಿಟ್ಟು ಗೋಳಾಡಿದನು.
3ಅನಂತರ ಅವನು ಶವದ ಬಳಿಯಿಂದ ಎದ್ದು ಹಿತ್ತಿಯರ ಬಳಿಗೆ ಬಂದು, 4“ನಿಮ್ಮ ಮಧ್ಯೆ ನಾನೊಬ್ಬ ಹೊರನಾಡಿಗ, ಒಬ್ಬ ಪ್ರವಾಸಿ, ಮೃತಳಾಗಿರುವ ನನ್ನ ಪತ್ನಿಯನ್ನು ಸಮಾಧಿ ಮಾಡಲು ಸ್ವಲ್ಪ ಜಮೀನನ್ನು ನನ್ನ ಸ್ವಂತಕ್ಕೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ,” ಎಂದನು. 5-6ಆ ಹಿತ್ತಿಯರು, “ಒಡೆಯಾ, ಇತ್ತ ಕೇಳಿ, ನೀವು ನಮಗೆ ಒಬ್ಬ ಮಹಾರಾಜರಂತೆ ಇದ್ದೀರಿ. ಮೃತಳಾದ ನಿಮ್ಮ ಪತ್ನಿಯ ಶವವನ್ನು ನಮ್ಮಲ್ಲಿರುವ ಶ್ರೇಷ್ಠ ಸಮಾಧಿಗಳೊಂದರಲ್ಲಿ ಭೂಸ್ಥಾಪನೆ ಮಾಡಬಹುದು. ನಮ್ಮಲ್ಲಿ ಸ್ಮಶಾನ ಭೂಮಿಯಿರುವ ಯಾರೂ ನಿಮಗೆ ಕೊಡುವುದಕ್ಕೆ ಹಿಂಜರಿಯುವುದಿಲ್ಲ,” ಎಂದು ಉತ್ತರಕೊಟ್ಟರು. 7ಅಬ್ರಹಾಮನು ಎದ್ದುನಿಂತು ಆ ಹಿತ್ತಿಯ ನಾಡಿಗರಿಗೆ ಬಾಗಿ ನಮಸ್ಕರಿಸಿದನು. 8ಅವರೊಡನೆ ಮಾತನ್ನು ಮುಂದುವರಿಸುತ್ತಾ ಅವನು, “ನನ್ನ ಪತ್ನಿಯ ಶವವನ್ನು ಇಲ್ಲಿ ಸಮಾಧಿಮಾಡುವುದು ನಿಮಗೆ ಒಪ್ಪಿಗೆಯಾದರೆ ನನ್ನ ವಿಜ್ಞಾಪನೆ ಇದು: ನೀವು ಜೋಹರನ ಮಗನಾದ ಎಫ್ರೋನನ ಸಂಗಡ ನನ್ನ ಪರವಾಗಿ ಮಾತಾಡಿ, 9ಅವನ ಜಮೀನಿನ ಅಂಚಿನಲ್ಲಿರುವ ಮಕ್ಪೇಲದ ಗವಿಯನ್ನು ನನಗೆ ಕೊಡಿಸಬೇಕೆಂದು ವಿನಂತಿಸುತ್ತೇನೆ. ಅವನು ಆ ಸಮಾಧಿಯ ಸ್ಥಳವನ್ನು ನನ್ನ ಸ್ವಂತಕ್ಕೆ ನಿಮ್ಮ ಎದುರಿಗೇ ಬಿಟ್ಟುಕೊಟ್ಟರೆ ಪೂರ್ಣಕ್ರಯವನ್ನು ಕೊಟ್ಟುಬಿಡುತ್ತೇನೆ,” ಎಂದನು.
10ಸದ್ಯಕ್ಕೆ ಎಫ್ರೋನನೇ ಅಲ್ಲಿ ಆ ಹಿತ್ತಿಯರ ನಡುವೆ ಕುಳಿತಿದ್ದನು. ಅವನೂ ಒಬ್ಬ ಹಿತ್ತಿಯನಾಗಿದ್ದನು. ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ಅವನು ಅಬ್ರಹಾಮನಿಗೆ, 11“ಒಡೆಯಾ, ನನ್ನ ಮಾತಿಗೆ ಸ್ವಲ್ಪ ಕಿವಿಗೊಡಿ; ಆ ಜಮೀನನ್ನೂ ಅದರಲ್ಲಿರುವ ಗವಿಯನ್ನೂ ನಿಮಗೆ ದಾನಮಾಡಿಬಿಡುತ್ತೇನೆ; ನನ್ನ ಈ ಜನರ ಮುಂದೆಯೇ ದಾನಕೊಡುತ್ತೇನೆ; ಮೃತಳಾದ ನಿಮ್ಮ ಪತ್ನಿಯನ್ನು ಅದರಲ್ಲಿ ಸಮಾಧಿ ಮಾಡಬಹುದು,” ಎಂದು ಹೇಳಿದನು. 12ಅಬ್ರಹಾಮನು ಆ ನಾಡಿಗರಿಗೆ ಬಾಗಿ ವಂದಿಸಿದನು. 13ಅವರೆಲ್ಲರ ಮುಂದೆ ಎಫ್ರೋನನನ್ನು ಉದ್ದೇಶಿಸಿ, “ಕೊಡಲು ಇಷ್ಟವಿದ್ದರೆ ದಯವಿಟ್ಟು ನಾನು ಅರಿಕೆ ಮಾಡುವುದನ್ನು ಕೇಳು; ಆ ಜಮೀನಿಗೆ ಕ್ರಯ ಕೊಡುತ್ತೇನೆ; ಆ ಕ್ರಯವನ್ನು ತೆಗೆದುಕೊಳ್ಳಲು ಸಮ್ಮತಿಸಿದರೆ ನನ್ನ ಪತ್ನಿಯನ್ನು ಅಲ್ಲಿ ಸಮಾಧಿ ಮಾಡುತ್ತೇನೆ,” ಎಂದು ಹೇಳಿದನು. 14-15ಅದಕ್ಕೆ ಎಫ್ರೋನನು, “ಒಡೆಯಾ, ನನ್ನ ಮಾತನ್ನು ಆಲಿಸು; ಕೇವಲ ನಾನೂರು ಬೆಳ್ಳಿ ನಾಣ್ಯ ಬಾಳುವ ಆ ಜಮೀನಿನ ವಿಷಯದಲ್ಲಿ ನಿಮಗೂ ನನಗೂ ವಾದವೇತಕ್ಕೆ? ಸಮಾಧಿ ಮಾಡಬಹುದು,” ಎಂದನು. 16ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿ, ಅವನು ಆ ಹಿತ್ತಿಯರ ಮುಂದೆ ಸೂಚಿಸಿದ ನಾನೂರು ಬೆಳ್ಳಿ ನಾಣ್ಯಗಳನ್ನು, ವ್ಯಾಪಾರಿಗಳಲ್ಲಿ ಪ್ರಚಲಿತವಾಗಿದ್ದ ಬೆಳ್ಳಿಯಿಂದ ತೂಕಮಾಡಿ ಕೊಟ್ಟನು.
17ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲಕ್ಕೆ ಸೇರಿದ ಎಫ್ರೋನನ ಜಮೀನು, ಅದಕ್ಕೆ ಸೇರಿದ ಗವಿ, ಅದರಲ್ಲಿ ಮತ್ತು ಅದರ ಸುತ್ತಣ ಅಂಚಿನಲ್ಲಿದ್ದ ಮರಗಳು, ಇವೆಲ್ಲವೂ 18ಅಬ್ರಹಾಮನಿಗೆ ಸ್ವಂತವೆಂದು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆಯೇ ತೀರ್ಮಾನವಾಯಿತು. 19ಇದಾದ ಮೇಲೆ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಜಮೀನಿನಲ್ಲಿರುವ ಗವಿಯೊಳಗೆ ಸಮಾಧಿಮಾಡಿದನು. 20ಆ ಜಮೀನನ್ನೂ ಅದರಲ್ಲಿರುವ ಗವಿಯನ್ನೂ ಅಬ್ರಹಾಮನಿಗೆ ಸ್ವಂತ ಸ್ಮಶಾನಭೂಮಿಯಾಗಲೆಂದು ಸ್ವಾಧೀನಗೊಳಿಸಿದವರು ಆ ಹಿತ್ತಿಯರೇ.

醒目顯示

分享

複製

None

想要在所有設備上保存你的醒目顯示嗎? 註冊或登入