ಯೋಹಾನ 12
12
1ಪಸ್ಕಹಬ್ಬವು ಇನ್ನು ಆರು ದಿವಸ ಮುಂದೆ ಇರಲಾಗಿ ಯೇಸು ಬೇಥಾನ್ಯಕ್ಕೆ ಬಂದನು. ಯೇಸುವು ಸತ್ತವರೊಳಗಿಂದ ಎಬ್ಬಿಸಿದ ಲಾಜರನು ಅಲ್ಲಿದ್ದನು. 2ಯೇಸುವಿಗೆ ಅಲ್ಲಿ ಔತಣಮಾಡಿಸಲು ಮಾರ್ಥಳು ನೆರವಾಗಿದ್ದಳು; ಲಾಜರನು ಆತನ ಸಂಗಡ ಊಟಕ್ಕೆ ಕೂತವರಲ್ಲಿ ಒಬ್ಬನು. 3ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತು. 4ಆದರೆ ಆತನ ಶಿಷ್ಯರಲ್ಲಿ ಒಬ್ಬನು, ಅಂದರೆ ಆತನನ್ನು ಹಿಡುಕೊಡುವದಕ್ಕಿದ್ದ ಇಸ್ಕರಿಯೋತ ಯೂದನೆಂಬವನು - 5ಯಾಕೆ ಈ ತೈಲವನ್ನು ಮುನ್ನೂರು ಹಣಕ್ಕೆ ಮಾರಿ ಬಡವರಿಗೆ ಕೊಡಲಿಲ್ಲ ಅಂದನು. 6ಅವನು ಬಡವರಿಗೋಸ್ಕರ ಚಿಂತಿಸಿ ಇದನ್ನು ಹೇಳಲಿಲ್ಲ; ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದದರಿಂದಲೇ ಹೇಳಿದನು. 7ಆಗ ಯೇಸು - ಈಕೆಯನ್ನು ಬಿಡು; ನನ್ನನ್ನು ಹೂಣಿಡುವ ದಿವಸಕ್ಕಾಗಿ ಅದನ್ನು ಇಟ್ಟುಕೊಳ್ಳಲಿ. 8ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ, ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ ಅಂದನು.
9ಯೆಹೂದ್ಯರ ಜನಸಮೂಹವು ಆತನು ಅಲ್ಲಿ ಇದ್ದಾನೆಂದು ತಿಳಿದು ಯೇಸುವನ್ನು ನೋಡುವದಕ್ಕಾಗಿ ಮಾತ್ರವಲ್ಲದೆ ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನು ಸಹ ನೋಡಬೇಕೆಂಬದಾಗಿ ಬಂದರು. 10ಆದರೆ ಮಹಾಯಾಜಕರು ಲಾಜರನನ್ನೂ ಕೊಲ್ಲಬೇಕೆಂದು ಆಲೋಚಿಸಿದರು. 11ಯಾಕಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಹೋಗಿ ಯೇಸುವನ್ನು ನಂಬುವವರಾದರು.
ಯೇಸು ಯೆರೂಸಲೇವಿುನಲ್ಲಿ ಅರಸನಂತೆ ಪ್ರವೇಶಮಾಡಿದ್ದು
(ಮತ್ತಾ. 21.4-9; ಮಾರ್ಕ. 11.7-10; ಲೂಕ. 19.35-38)
12ಮರುದಿವಸ ಜಾತ್ರೆಗೆ ಬಂದಿದ್ದ ಜನಸಮೂಹವು ಯೇಸು ಯೆರೂಸಲೇವಿುಗೆ ಬರುತ್ತಾನೆಂದು ಕೇಳಿ ಖರ್ಜೂರದ ಗರಿಗಳನ್ನು ತಕ್ಕೊಂಡು 13ಆತನನ್ನು ಎದುರುಗೊಳ್ಳುವದಕ್ಕೆ ಹೊರಗೆ ಬಂದು -
ಜಯ,#12.13 ಮೂಲ: ಹೊಸನ್ನ, ಅಂದರೆ ಪ್ರಸನ್ನನಾಗು. ಕೀರ್ತ. 118.25, 26. ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ;
ಇಸ್ರಾಯೇಲಿನ ಅರಸನಿಗೆ ಆಶೀರ್ವಾದ
ಎಂದು ಆರ್ಭಟಿಸಿದರು. 14ಮತ್ತು ಯೇಸು ಕತ್ತೆಮರಿಯನ್ನು ತರಿಸಿಕೊಂಡು ಅದರ ಮೇಲೆ ಕೂತುಕೊಂಡನು. ಇದರಿಂದ -
15ಚೀಯೋನ್ ನಗರಿಯೇ, ಹೆದರಬೇಡ;
ಇಗೋ, ನಿನ್ನ ಅರಸನು ಕತ್ತೆಮರಿಯ ಮೇಲೆ ಕೂತುಕೊಂಡು ಬರುತ್ತಾನೆ
ಎಂಬ ಶಾಸ್ತ್ರದ ಮಾತು ನೆರವೇರಿತು. 16ಇದು ಆತನ ಶಿಷ್ಯರಿಗೆ ಮೊದಲು ತಿಳಿದಿರಲಿಲ್ಲ. ಆದರೆ ಯೇಸು ತನ್ನ ಮಹಿಮೆಯ ಪದವಿಗೆ ಬಂದ ಮೇಲೆ ಇದು ಆತನ ವಿಷಯವಾಗಿಯೇ ಬರೆದದೆ ಎಂದೂ ಆತನಿಗೆ ನಾವು ಅದನ್ನೆಲ್ಲಾ ಮಾಡಿದೆವೆಂದೂ ಅವರ ನೆನಪಿಗೆ ಬಂತು. 17ಇದಲ್ಲದೆ ಆತನು ಲಾಜರನನ್ನು ಸಮಾಧಿಯೊಳಗಿಂದ ಕರೆದು ಬದುಕಿಸಿದ ವೇಳೆಯಲ್ಲಿ ಆತನ ಸಂಗಡ ಇದ್ದ ಜನರು ಅದನ್ನು ಸಾರುತ್ತಿದ್ದರು. 18ಆತನು ಈ ಸೂಚಕಕಾರ್ಯವನ್ನು ಮಾಡಿದನೆಂದು ಕೇಳಿದ ಕಾರಣದಿಂದಲೂ ಜನರು ಆತನನ್ನು ಎದುರುಗೊಳ್ಳುವದಕ್ಕೆ ಹೋಗಿದ್ದರು. 19ಹೀಗಿರಲಾಗಿ ಫರಿಸಾಯರು - ನಿಮ್ಮ ಯತ್ನವೇನೂ ಸಾಗಲಿಲ್ಲ, ನೋಡಿರಿ; ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು.
ಯೇಸು ತಾನು ಸಾಯುವದರಿಂದ ಎಲ್ಲರನ್ನು ತನ್ನ ಕಡೆಗೆ ಎಳಕೊಳ್ಳುವೆನೆಂದು ಹೇಳಿದ್ದು
20ಇದಲ್ಲದೆ ದೇವಾರಾಧನೆ ಮಾಡಬೇಕೆಂದು ಜಾತ್ರೆಗೆ ಬಂದವರಲ್ಲಿ ಕೆಲವು ಮಂದಿ ಗ್ರೀಕರಿದ್ದರು. 21ಇವರು ಗಲಿಲಾಯದಲ್ಲಿರುವ ಬೇತ್ಸಾಯಿದ ಊರಿನ ಫಿಲಿಪ್ಪನ ಬಳಿಗೆ ಬಂದು - ಅಯ್ಯಾ, ಯೇಸುವನ್ನು ನೋಡಬೇಕೆಂದಿದ್ದೇವೆಂದು ಅವನನ್ನು ಬೇಡಿಕೊಂಡರು. 22ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು; ಅಂದ್ರೆಯನೂ ಫಿಲಿಪ್ಪನೂ ಯೇಸುವಿಗೆ ಹೇಳಿದರು. 23ಆಗ ಯೇಸು ಅವರಿಗೆ ಉತ್ತರಕೊಟ್ಟು ಹೇಳಿದ್ದೇನಂದರೆ - ಮನುಷ್ಯಕುಮಾರನು ತನ್ನ ಮಹಿಮೆಯ ಪದವಿಯನ್ನು ಹೊಂದುವ ಸಮಯ ಬಂದದೆ. 24ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂವಿುಯಲ್ಲಿ ಬಿದ್ದು ಸಾಯದಿದ್ದರೆ ಒಂದೇಯಾಗಿ ಉಳಿಯುವದು; ಸತ್ತರೆ ಬಹಳ ಫಲಕೊಡುವದು. 25ತನ್ನ ಪ್ರಾಣದ ಮೇಲೆ ಮಮತೆಯಿಡುವವನು ಅದನ್ನು ಕಳಕೊಳ್ಳುವನು, ಇಹಲೋಕದಲ್ಲಿ ತನ್ನ ಪ್ರಾಣವನ್ನು ಹಗೆಮಾಡುವವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು. 26ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ಹಿಂದೆ ಬರಲಿ; ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನು ಸಹ ಇರುವನು. ಯಾವನಾದರೂ ನನ್ನ ಸೇವೆಯನ್ನು ಮಾಡುವವನಾದರೆ ತಂದೆಯು ಅವನಿಗೆ ಬಹುಮಾನ ಮಾಡುವನು. 27ಈಗ ನನ್ನ ಪ್ರಾಣವು ತತ್ತರಿಸುತ್ತದೆ; ಮತ್ತು ನಾನೇನು ಹೇಳಲಿ? ತಂದೆಯೇ, ಈ ಕಾಲದೊಳಗಿಂದ ನನ್ನನ್ನು ತಪ್ಪಿಸು. ಆದರೆ ಇದಕ್ಕಾಗಿಯೇ ಈ ಕಾಲ ಸೇರಿದೆನು. 28ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ ಅಂದನು. ಅದಕ್ಕೆ - ಮಹಿಮೆಪಡಿಸಿದ್ದೇನೆ, ತಿರಿಗಿ ಮಹಿಮೆಪಡಿಸುವೆನು ಎಂದು ಆಕಾಶವಾಣಿಯಾಯಿತು. 29ಅಲ್ಲಿ ನಿಂತುಕೊಂಡಿದ್ದ ಜನರು ಅದನ್ನು ಕೇಳಿ - ಗುಡುಗಿತು ಅಂದರು. ಇನ್ನು ಕೆಲವರು - ದೇವದೂತನು ಈತನ ಸಂಗಡ ಮಾತಾಡಿದನು ಅಂದರು. 30ಆದರೆ ಯೇಸು ಅವರಿಗೆ - ಈ ಆಕಾಶವಾಣಿ ನನಗಾಗಿ ಆಗಲಿಲ್ಲ; ನಿಮಗಾಗಿ ಆಯಿತು. 31ಈಗ ಈ ಲೋಕಕ್ಕೆ ತೀರ್ಪು ಆಗುತ್ತದೆ; ಈಗ ಇಹಲೋಕಾಧಿಪತಿಯು ಹೊರಗೆ ನೂಕಲ್ಪಡುವನು. 32ಆದರೆ ನಾನು ಭೂವಿುಯಲ್ಲಿಂದ ಮೇಲಕ್ಕೆ ಎತ್ತಲ್ಪಟ್ಟಾಗ ಎಲ್ಲರನ್ನೂ ನನ್ನ ಬಳಿಗೆ ಎಳಕೊಳ್ಳುವೆನು ಎಂದು ಹೇಳಿದನು. 33ಈ ಮಾತಿನಿಂದ ತಾನು ಇಂಥ ಸಾವು ಸಾಯತಕ್ಕವನೆಂದು ಸೂಚಿಸಿದನು. 34ಅದಕ್ಕೆ ಆ ಜನರು - ಕ್ರಿಸ್ತನು ಸದಾಕಾಲವೂ ಇರುತ್ತಾನೆಂದು ಧರ್ಮಶಾಸ್ತ್ರದಲ್ಲಿ ಕೇಳಿದ್ದೇವೆ; ಹಾಗಾದರೆ ಮನುಷ್ಯಕುಮಾರನು ಮೇಲಕ್ಕೆ ಎತ್ತಲ್ಪಡಬೇಕೆಂದು ನೀನು ಹೇಳುವದು ಹೇಗೆ? ಆ ಮನುಷ್ಯಕುಮಾರನು ಯಾರು? ಅಂದರು. 35ಯೇಸು ಅವರಿಗೆ - ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮಲ್ಲಿ ಇರುತ್ತದೆ; ಕತ್ತಲೆಯು ನಿಮ್ಮನ್ನು ಮುಸುಕಿಕೊಳ್ಳದಂತೆ ಬೆಳಕು ನಿಮಗೆ ಇರುವಾಗಲೇ ಸಂಚಾರಮಾಡಿರಿ. ಕತ್ತಲೆಯಲ್ಲಿ ಸಂಚಾರಮಾಡುವವನಿಗೆ ತಾನು ಎಲ್ಲಿ ಹೋಗುತ್ತೇನೆಂದು ತಿಳಿಯದು. 36ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ; ನಂಬಿದರೆ ನೀವು ಬೆಳಕಿನವರಾಗುವಿರಿ ಎಂದು ಹೇಳಿದನು. ಇದನ್ನು ಯೇಸು ಹೇಳಿದ ಮೇಲೆ ಅವರನ್ನು ಬಿಟ್ಟುಹೋಗಿ ಅಡಗಿಕೊಂಡನು.
ಯೇಸು ಯೆಹೂದ್ಯರೊಳಗೆ ನಡಿಸಿದ ಕೆಲಸದ ಫಲ.
37ಆತನು ಅವರ ಮುಂದೆ ಅಷ್ಟು ಸೂಚಕಕಾರ್ಯಗಳನ್ನು ಮಾಡಿದರೂ ಅವರು ಆತನನ್ನು ನಂಬಲಿಲ್ಲ. 38ಇದರಿಂದ ಪ್ರವಾದಿಯಾದ ಯೆಶಾಯನು ನುಡಿದ ಮಾತು ನೆರವೇರಿತು; ಅದೇನಂದರೆ -
ಕರ್ತನೇ, ನಮ್ಮ ಉಪದೇಶವನ್ನು ಯಾರು ನಂಬಿದರು?
ಕರ್ತನ ಬಾಹುವು ಯಾರಿಗೆ ಗೋಚರವಾಯಿತು? ಎಂಬದು.
39ಅವರು ನಂಬಲಾರದೆ ಹೋದದ್ದಕ್ಕೆ ಯೆಶಾಯನು ಮತ್ತೊಂದು ಮಾತಿನಲ್ಲಿ ಕಾರಣವನ್ನು ಸೂಚಿಸಿದ್ದಾನೆ; ಅದೇನಂದರೆ -
40ಅವರು ಕಣ್ಣಿನಿಂದ ಕಾಣದೆ ಹೃದಯದಿಂದ ಗ್ರಹಿಸದೆ
ತಿರುಗಿಕೊಳ್ಳದೆ ತನ್ನಿಂದ ಸ್ವಸ್ಥತೆಯನ್ನು ಹೊಂದದೆ ಇರುವಂತೆ
ಆತನು ಅವರ ಕಣ್ಣುಗಳನ್ನು ಕುರುಡುಮಾಡಿ
ಅವರ ಹೃದಯವನ್ನು ಕಠಿನಮಾಡಿದನು ಎಂಬದೇ.
41ಯೆಶಾಯನು ಆತನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯದಲ್ಲಿ ಮಾತಾಡುತ್ತಿರುವಾಗ ಆ ಮಾತನ್ನು ನುಡಿದನು. 42ಆದರೂ ಹಿರೀಸಭೆಯವರಲ್ಲಿಯೂ ಅನೇಕರು ಆತನನ್ನು ನಂಬಿದರು. ಆದರೆ ತಮಗೆ ಸಭೆಯಿಂದ ಬಹಿಷ್ಕಾರವಾದೀತೆಂದು ಫರಿಸಾಯರಿಗೆ ಅಂಜಿಕೊಂಡು ಅದನ್ನು ಜನರ ಮುಂದೆ ಹೇಳಲಿಲ್ಲ. 43ಯಾಕಂದರೆ ದೇವರಿಂದ ಬರುವ ಮಾನಕ್ಕಿಂತ ಮನುಷ್ಯರಿಂದ ಬರುವ ಮಾನವೇ ಅವರಿಗೆ ಇಷ್ಟವಾಗಿತ್ತು.
44ಯೇಸು ಕೂಗಿ ಹೇಳಿದ ಮಾತು ಏನಂದರೆ - ನನ್ನನ್ನು ನಂಬಿದವನು ನನ್ನನ್ನೇ ನಂಬುವವನಲ್ಲ; ನನ್ನನ್ನು ಕಳುಹಿಸಿಕೊಟ್ಟಾತನನ್ನು ನಂಬುವವನಾಗಿದ್ದಾನೆ. 45ಮತ್ತು ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ನೋಡುವವನಾಗಿದ್ದಾನೆ. 46ನನ್ನನ್ನು ನಂಬುವ ಒಬ್ಬನಾದರೂ ಕತ್ತಲೆಯಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ. 47ಯಾವನಾದರೂ ನನ್ನ ಮಾತುಗಳನ್ನು ಕೇಳಿದರೂ ಕೈಕೊಂಡು ನಡೆಯದೆ ಹೋದರೆ ನಾನೇ ಅವನಿಗೆ ತೀರ್ಪುಮಾಡುವದಿಲ್ಲ; ಲೋಕಕ್ಕೆ ತೀರ್ಪುಮಾಡುವದಕ್ಕಾಗಿ ನಾನು ಬಂದಿಲ್ಲ; ಲೋಕವನ್ನು ರಕ್ಷಿಸುವದಕ್ಕಾಗಿ ಬಂದಿದ್ದೇನೆ. 48ನನ್ನನ್ನು ಲಕ್ಷ್ಯಮಾಡದೆ ನನ್ನ ಮಾತುಗಳನ್ನು ಅಂಗೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದು ಒಂದು ಇದೆ, ಅದು ಯಾವದಂದರೆ, ನಾನು ಆಡಿದ ಮಾತು; ಅದೇ ಅವನಿಗೆ ಕಡೇ ದಿನದಲ್ಲಿ ತೀರ್ಪುಮಾಡುವದು. 49ಯಾಕಂದರೆ ನನ್ನಷ್ಟಕ್ಕೆ ನಾನೇ ಮಾತಾಡಿದವನಲ್ಲ; ನನ್ನನ್ನು ಕಳುಹಿಸಿಕೊಟ್ಟ ತಂದೆಯೇ - ನೀನು ಇಂಥಿಂಥದನ್ನು ಹೇಳಬೇಕು, ಹೀಗೆ ಹೀಗೆ ಮಾತಾಡಬೇಕು ಎಂಬದಾಗಿ ನನಗೆ ಆಜ್ಞೆಕೊಟ್ಟಿದ್ದಾನೆ. 50ಆತನ ಆಜ್ಞೆ ನಿತ್ಯಜೀವವಾಗಿದೆ ಎಂದು ಬಲ್ಲೆನು. ಆದದರಿಂದ ನಾನು ಮಾತಾಡುವದನ್ನೆಲ್ಲಾ ತಂದೆ ನನಗೆ ಹೇಳಿದ ಮೇರೆಗೆ ಮಾತಾಡುತ್ತೇನೆ ಅಂದನು.
Právě zvoleno:
ಯೋಹಾನ 12: KANJV-BSI
Zvýraznění
Sdílet
Kopírovat
Chceš mít své zvýrazněné verše uložené na všech zařízeních? Zaregistruj se nebo se přihlas
Kannada J.V. Bible © The Bible Society of India, 2016.
Used by permission. All rights reserved worldwide.