Logo YouVersion
Ikona vyhledávání

ಯೋಹಾನ 13

13
ಯೇಸು ತನ್ನ ಶಿಷ್ಯರ ಕಾಲುಗಳನ್ನು ತೊಳೆದದ್ದು; ತನಗೆ ದ್ರೋಹಮಾಡುವವನನ್ನು ಕುರಿತು ಸೂಚಿಸಿದ್ದು.
1ಪಸ್ಕಹಬ್ಬದ ಮುಂದೆ ಯೇಸು ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ಕಾಲ ಬಂತೆಂದು ತಿಳುಕೊಂಡು ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ ಅವರನ್ನು ಪ್ರೀತಿಸುತ್ತಾ ಬಂದನು. 2ಅವರು ಊಟಕ್ಕೆ ಕೂತುಕೊಂಡಿದ್ದರು; ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಮನಸ್ಸಿನಲ್ಲಿ ಯೇಸುವನ್ನು ಹಿಡುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದ್ದನು. 3ಯೇಸು ತನ್ನ ಕೈಯಲ್ಲಿ ತಂದೆ ಎಲ್ಲವನ್ನು ಕೊಟ್ಟಿದ್ದಾನೆಂತಲೂ ತಾನು ದೇವರ ಬಳಿಯಿಂದ ಹೊರಟುಬಂದಿದ್ದು ಮತ್ತೆ ದೇವರ ಬಳಿಗೆ ಹೋಗುತ್ತೇನೆಂತಲೂ ತಿಳುಕೊಂಡವನಾಗಿ ಊಟವನ್ನು ಬಿಟ್ಟು ಎದ್ದು 4ಹೊದ್ದಿದ್ದ ಮೇಲ್ಹೊದಿಕೆಯನ್ನು ತೆಗೆದಿಟ್ಟು ಕೈಪಾವುಡವನ್ನು ತಕ್ಕೊಂಡು ನಡುವಿಗೆ ಕಟ್ಟಿಕೊಂಡನು. 5ಆಗ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಕಾಲುಗಳನ್ನು ತೊಳೆಯುವದಕ್ಕೂ ನಡುವಿಗೆ ಕಟ್ಟಿಕೊಂಡಿದ್ದ ಕೈಪಾವುಡದಿಂದ ಒರಸುವದಕ್ಕೂ ಪ್ರಾರಂಭಿಸಿದನು. 6ಹೀಗೆ ಸೀಮೋನ ಪೇತ್ರನ ಬಳಿಗೆ ಬರಲು ಇವನು ಆತನಿಗೆ - ಸ್ವಾಮೀ, ನೀನು ನನ್ನ ಕಾಲುಗಳನ್ನು ತೊಳೆಯಬೇಕೇ? ಎಂದು ಹೇಳಿದನು. 7ಅದಕ್ಕೆ ಯೇಸು - ನಾನು ಮಾಡುವದು ಈಗ ನಿನಗೆ ತಿಳಿಯುವದಿಲ್ಲ, ಇನ್ನು ಮೇಲೆ ನಿನಗೆ ತಿಳಿಯುವದು ಅಂದನು. 8ಪೇತ್ರನು - ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು ಎಂದು ಹೇಳಿದ್ದಕ್ಕೆ ಯೇಸು - ನಾನು ನಿನ್ನನ್ನು ತೊಳೆಯದಿದ್ದರೆ ನನ್ನ ಸಂಗಡ ನಿನಗೆ ಪಾಲಿಲ್ಲ ಅಂದನು. 9ಸೀಮೋನ ಪೇತ್ರನು - ಸ್ವಾಮೀ, ನನ್ನ ಕಾಲುಗಳನ್ನು ಮಾತ್ರವಲ್ಲದೆ ಕೈಗಳನ್ನೂ ತಲೆಯನ್ನೂ ಸಹ ತೊಳೆಯಬೇಕು ಅಂದನು. 10ಯೇಸು ಅವನಿಗೆ - ಸ್ನಾನಮಾಡಿಕೊಂಡವನ ಕಾಲುಗಳನ್ನು ತೊಳೆಯುವದಲ್ಲದೆ ಬೇರೇನೂ ತೊಳೆಯಬೇಕಾಗಿರುವದಿಲ್ಲ, ಅವನ ಮೈಯೆಲ್ಲಾ ಶುದ್ಧವಾಗಿದೆ. ನೀವೂ ಶುದ್ಧರಾಗಿದ್ದೀರಿ; ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲವೆಂದು ಹೇಳಿದನು. 11ಯೇಸು ತನ್ನನ್ನು ಹಿಡುಕೊಡುವವನು ಇಂಥವನೇ ಎಂದು ತಿಳಿದಿದ್ದದರಿಂದ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲವೆಂದನು.
12ಆತನು ಅವರ ಕಾಲುಗಳನ್ನು ತೊಳೆದ ಮೇಲೆ ತನ್ನ ಮೇಲ್ಹೊದಿಕೆಯನ್ನು ಹಾಕಿಕೊಂಡು ತಿರಿಗಿ ಕೂತುಕೊಂಡು ಅವರಿಗೆ ಹೇಳಿದ್ದೇನಂದರೆ - ನಾನು ನಿಮಗೆ ಮಾಡಿದ್ದು ಏನೆಂದು ಗೊತ್ತಾಯಿತೋ? 13ನೀವು ನನ್ನನ್ನು ಗುರುವೆಂದೂ ಕರ್ತನೆಂದೂ ಕರೆಯುತ್ತೀರಿ; ನೀವು ಕರೆಯುವದು ಸರಿ; ನಾನು ಅಂಥವನೇ ಹೌದು. 14ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ. 15ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ. 16ನಿಮಗೆ ನಿಜನಿಜವಾಗಿ ಹೇಳುತ್ತೇನೆ, ದಣಿಗಿಂತ ಆಳು ದೊಡ್ಡವನಲ್ಲ, ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು. 18ನಾನು ನಿಮ್ಮೆಲ್ಲರನ್ನು ಕುರಿತು ಈ ಮಾತನ್ನು ಹೇಳಲಿಲ್ಲ; ನಾನು ಆದುಕೊಂಡವರನ್ನು ನಾನು ಬಲ್ಲೆನು; ಆದರೆ - ನನ್ನ ಕೂಡ ಊಟಮಾಡುವವನೇ ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ ಎಂಬ ಶಾಸ್ತ್ರದ ಮಾತು ನೆರವೇರಬೇಕಾಗಿದೆ. 19ಅದು ನಡೆಯುವಾಗ ನನ್ನನ್ನೇ ಆತನೆಂದು ನೀವು ನಂಬುವಂತೆ ಅದು ನಡೆಯುವದಕ್ಕಿಂತ ಮುಂಚೆ ಅದನ್ನು ಇಂದಿನಿಂದ ನಿಮಗೆ ಹೇಳುತ್ತೇನೆ. 20ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಾನು ಕಳುಹಿಸಿಕೊಟ್ಟವನನ್ನು ಅಂಗೀಕರಿಸುವವನು ನನ್ನನ್ನು ಅಂಗೀಕರಿಸುವವನಾಗಿದ್ದಾನೆ; ನನ್ನನ್ನು ಅಂಗೀಕರಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ಅಂಗೀಕರಿಸುವವನಾಗಿದ್ದಾನೆ.
21ಇದನ್ನು ಹೇಳಿ ಯೇಸು ಆತ್ಮದಲ್ಲಿ ತತ್ತರಗೊಂಡು - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನೆಂದು ಸ್ಪಷ್ಟವಾಗಿ ಹೇಳಿದನು. 22ಈತನು ಯಾರ ವಿಷಯವಾಗಿ ಈ ಮಾತನ್ನು ಹೇಳುತ್ತಾನೆಂದು ಶಿಷ್ಯರು ಅನುಮಾನಪಟ್ಟು ಒಬ್ಬರನ್ನೊಬ್ಬರು ನೋಡುವವರಾದರು. 23ಶಿಷ್ಯರೊಳಗೆ ಯೇಸುವಿಗೆ ಪ್ರಿಯನಾಗಿದ್ದ ಒಬ್ಬನು ಆತನ ಎದೆಯ ಹತ್ತರ ಒರಗಿಕೊಂಡಿದ್ದನು; 24ಇವನಿಗೆ ಸೀಮೋನ ಪೇತ್ರನು ಸನ್ನೆಮಾಡಿ - ಯಾರನ್ನು ಕುರಿತು ಮಾತಾಡಿದನು, ತಿಳಿಸು ಎಂದು ಹೇಳಿದನು. 25ಅವನು ಹಾಗೆಯೇ ಯೇಸುವಿನ ಎದೆಯ ಕಡೆಗೆ ಬಾಗಿ - ಸ್ವಾಮೀ, ಅವನು ಯಾರು? ಅಂತ ಕೇಳಿದನು. 26ಅದಕ್ಕೆ ಯೇಸು - ನಾನು ಈ ತುತ್ತನ್ನು ಅದ್ದಿ ಯಾರಿಗೆ ಕೊಡುತ್ತೇನೋ ಅವನೇ ಎಂದು ಹೇಳಿ ಆ ತುತ್ತನ್ನು ಅದ್ದಿ ತೆಗೆದು ಸೀಮೋನನ ಮಗನಾದ ಇಸ್ಕರಿಯೋತ ಯೂದನಿಗೆ ಕೊಟ್ಟನು. 27ಅವನು ಆ ತುತ್ತನ್ನು ತೆಗೆದುಕೊಂಡ ಕೂಡಲೆ ಸೈತಾನನು ಅವನೊಳಗೆ ಹೊಕ್ಕನು. ಆಗ ಯೇಸು ಅವನಿಗೆ - ನೀನು ಮಾಡುವದನ್ನು ಬೇಗನೆ ಮಾಡಿಬಿಡು ಎಂದು ಹೇಳಿದನು. 28ಆತನು ಅವನಿಗೆ ಇದನ್ನು ಯಾತಕ್ಕಾಗಿ ಹೇಳಿದನೆಂಬದು ಊಟಕ್ಕೆ ಕೂತವರಲ್ಲಿ ಯಾರಿಗೂ ಗೊತ್ತಾಗಲಿಲ್ಲ; 29ಅವರಲ್ಲಿ ಕೆಲವರು - ಯೂದನ ವಶದಲ್ಲಿ ಹಣದ ಚೀಲವಿದ್ದದರಿಂದ ಹಬ್ಬಕ್ಕಾಗಿ ನಮಗೆ ಬೇಕಾದದ್ದನ್ನು ಕೊಂಡುಕೋ ಎಂಬದಾಗಿಯೋ ಬಡವರಿಗೆ ಏನಾದರೂ ಕೊಡು ಎಂಬದಾಗಿಯೋ ಯೇಸು ಅವನಿಗೆ ಹೇಳುತ್ತಾನೆ ಎಂದು ನೆನಸಿದರು. 30ಅವನು ಆ ತುತ್ತನ್ನು ತೆಗೆದುಕೊಂಡ ಕೂಡಲೇ ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.
ಯೇಸು ತಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ಶಿಷ್ಯರಿಗೆ ಹೇಳಿದ ಕಡೇ ಮಾತುಗಳು
31ಅವನು ಹೊರಗೆ ಹೋದ ಮೇಲೆ ಯೇಸು - ಈಗ ಮನುಷ್ಯಕುಮಾರನು ಮಹಿಮೆಪಟ್ಟಿದ್ದಾನೆ, ಮತ್ತು ದೇವರು ಆತನಲ್ಲಿ ಮಹಿಮೆಪಟ್ಟಿದ್ದಾನೆ. 32ದೇವರು ಆತನಲ್ಲಿ ಮಹಿಮೆಪಟ್ಟಿರಲಾಗಿ ತನ್ನಲ್ಲಿ ದೇವರು ಆತನನ್ನೂ ಮಹಿಮೆಪಡಿಸುವನು, ಕೂಡಲೇ ಮಹಿಮೆಪಡಿಸುವನು. 33ಪ್ರಿಯ ಮಕ್ಕಳೇ, ಇನ್ನು ಸ್ವಲ್ಪಕಾಲವೇ ನಿಮ್ಮ ಸಂಗಡ ಇರುತ್ತೇನೆ. ನನ್ನನ್ನು ಹುಡುಕುವಿರಿ, ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆ ಈಗ ನಿಮಗೂ ಹೇಳುತ್ತೇನೆ. 34ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಏನಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು; ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂಬದೇ. 35ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು ಅಂದನು.
36ಸೀಮೋನ ಪೇತ್ರನು ಆತನನ್ನು - ಸ್ವಾಮೀ, ಎಲ್ಲಿಗೆ ಹೋಗುತ್ತೀ? ಎಂದು ಕೇಳಿದ್ದಕ್ಕೆ ಯೇಸು - ನಾನು ಹೋಗುವಲ್ಲಿಗೆ ನೀನು ಈಗ ನನ್ನ ಹಿಂದೆ ಬರಲಾರಿ, ತರುವಾಯ ನನ್ನ ಹಿಂದೆ ಬರುವಿ ಅಂದನು. 37ಪೇತ್ರನು ಆತನಿಗೆ - ಸ್ವಾಮೀ, ನಾನು ಯಾಕೆ ಈಗ ನಿನ್ನ ಹಿಂದೆ ಬರಲಾರೆನು? ನಿನಗಾಗಿ ನನ್ನ ಪ್ರಾಣವನ್ನಾದರೂ ಕೊಟ್ಟೇನು ಎಂದು ಹೇಳಲು 38ಯೇಸು - ನನಗಾಗಿ ಪ್ರಾಣ ಕೊಟ್ಟೀಯಾ? ನಿನಗೆ ನಿಜನಿಜವಾಗಿ ಹೇಳುತ್ತೇನೆ, ನೀನು ನನ್ನ ವಿಷಯದಲ್ಲಿ ಅವನನ್ನು ಅರಿಯೆನೆಂದು ಮೂರು ಸಾರಿ ಹೇಳುವ ತನಕ ಕೋಳಿ ಕೂಗುವದೇ ಇಲ್ಲ ಅಂದನು.

Zvýraznění

Sdílet

Kopírovat

None

Chceš mít své zvýrazněné verše uložené na všech zařízeních? Zaregistruj se nebo se přihlas