ಯೋಹಾನ 6
6
ಯೇಸು ಐದು ಸಾವಿರ ಜನರಿಗೆ ಆಶ್ಚರ್ಯವಾಗಿ ಊಟ ಮಾಡಿಸಿದ್ದು; ಸಮುದ್ರದ ಮೇಲೆ ನಡೆದದ್ದು
(ಮತ್ತಾ. 14.13-33; ಮಾರ್ಕ. 6.32-51; ಲೂಕ. 9.10-17)
1ತರುವಾಯ ಯೇಸು ಗಲಿಲಾಯದ ಸಮುದ್ರದ ಆಚೆಗೆ ಹೋದನು; ಅದಕ್ಕೆ ತಿಬೇರಿಯದ ಸಮುದ್ರವೆಂತಲೂ ಹೇಳುತ್ತಾರೆ. 2ಬಹು ಜನರ ಗುಂಪು ರೋಗಿಗಳಲ್ಲಿ ಆತನು ನಡಿಸಿದ ಸೂಚಕಕಾರ್ಯಗಳನ್ನು ನೋಡಿದ್ದರಿಂದ ಆತನ ಹಿಂದೆ ಹೋಗುತ್ತಿತ್ತು. 3ಆದರೆ ಯೇಸು ಬೆಟ್ಟವನ್ನೇರಿ ಅಲ್ಲಿ ತನ್ನ ಶಿಷ್ಯರ ಸಂಗಡ ಕೂತುಕೊಂಡನು. 4ಆ ಕಾಲದಲ್ಲಿ ಯೆಹೂದ್ಯರ ಪಸ್ಕ ಹಬ್ಬವು ಹತ್ತಿರವಾಗಿತ್ತು. 5ಹೀಗಿರಲಾಗಿ ಯೇಸು ಕಣ್ಣೆತ್ತಿ ನೋಡಿದಾಗ ಬಹು ಜನರ ಗುಂಪು ತನ್ನ ಬಳಿಗೆ ಬರುವದನ್ನು ಕಂಡು - ಇವರ ಊಟಕ್ಕೆ ನಾವು ಎಲ್ಲಿಂದ ರೊಟ್ಟಿ ಕೊಂಡುತರೋಣ? ಎಂದು ಫಿಲಿಪ್ಪನನ್ನು ಕೇಳಿದನು. 6ತಾನು ಮಾಡಬೇಕೆಂದಿದ್ದದ್ದು ತನಗೆ ತಿಳಿದಿದ್ದರೂ ಅವನನ್ನು ಪರೀಕ್ಷಿಸುವದಕ್ಕೆ ಈ ಮಾತನ್ನು ಹೇಳಿದನು. 7ಅದಕ್ಕೆ ಫಿಲಿಪ್ಪನು - ಒಬ್ಬೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೆ ಇನ್ನೂರು ಹಣದ ರೊಟ್ಟಿಯಾದರೂ ಸಾಲದು ಅಂದನು. 8ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್‍ಪೇತ್ರನ ತಮ್ಮನಾದ ಅಂದ್ರೆಯನು ಆತನಿಗೆ - 9ಇಲ್ಲಿರುವ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಮೀನುಗಳೂ ಅವೆ; ಆದರೆ ಇಷ್ಟು ಜನರಿಗೆ ಅವು ಯಾತಕ್ಕಾದಾವು? 10ಎಂದು ಹೇಳಲಾಗಿ ಯೇಸು - ಆ ಜನರನ್ನು ಊಟಕ್ಕೆ ಕೂಡ್ರಿಸಿರಿ ಅಂದನು. ಆ ಸ್ಥಳದಲ್ಲಿ ಬಹಳ ಹುಲ್ಲು ಬೆಳೆದಿತ್ತು; ಜನರು ಕೂತುಕೊಂಡರು. ಗಂಡಸರ ಸಂಖ್ಯೆ ಹೆಚ್ಚುಕಡಿಮೆ ಐದು ಸಾವಿರವಿತ್ತು. 11ತರುವಾಯ ಯೇಸು ಆ ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಕೂತುಕೊಂಡವರಿಗೆ ಹಂಚಿ ಕೊಟ್ಟನು; ಅದರಂತೆ ಮೀನುಗಳಲ್ಲಿಯೂ ಅವರಿಗೆ ಬೇಕಾದಷ್ಟು ಹಂಚಿಕೊಟ್ಟನು. 12ಅವರಿಗೆ ತೃಪ್ತಿಯಾದ ಮೇಲೆ ಯೇಸು ತನ್ನ ಶಿಷ್ಯರಿಗೆ - ವಿುಕ್ಕತುಂಡುಗಳನ್ನು ಕೂಡಿಸಿರಿ; ಇದರಲ್ಲಿ ಯಾವದೂ ವ್ಯರ್ಥವಾಗಬಾರದು ಎಂದು ಹೇಳಿದನು. 13ಅವರು ಕೂಡಿಸಲಾಗಿ ಆ ಐದು ಜವೆಗೋದಿಯ ರೊಟ್ಟಿಗಳಲ್ಲಿ ಜನರು ತಿಂದು ವಿುಕ್ಕತುಂಡುಗಳಿಂದ ಹನ್ನೆರಡು ಪುಟ್ಟಿ ತುಂಬಿದವು. 14ಆತನು ಮಾಡಿದ ಈ ಸೂಚಕಕಾರ್ಯವನ್ನು ಆ ಜನರು ನೋಡಿ - ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ ಎಂದು ಹೇಳಿಕೊಂಡರು.
15ಆಗ ಯೇಸು - ಅವರು ಬಂದು ತನ್ನನ್ನು ಹಿಡುಕೊಂಡುಹೋಗಿ ಅರಸನನ್ನಾಗಿ ಮಾಡಬೇಕೆಂಬ ಯೋಚನೆಯಲ್ಲಿದ್ದಾರೆಂದು ತಿಳಿದುಕೊಂಡು ತಿರಿಗಿ ತಾನೊಬ್ಬನೇ ಒಂಟಿಗನಾಗಿ ಬೆಟ್ಟಕ್ಕೆ ಹೋಗಿಬಿಟ್ಟನು. 16ಸಂಜೆಯಾದಾಗ ಆತನ ಶಿಷ್ಯರು ಸಮುದ್ರಕ್ಕೆ ಇಳಿದು ದೋಣಿಯನ್ನು ಹತ್ತಿ 17ಸಮುದ್ರಮಾರ್ಗವಾಗಿ ಕಪೆರ್ನೌವಿುನ ಕಡೆಗೆ ಹೊರಟರು. ಆಗಲೇ ಕತ್ತಲಾಗಿತ್ತು ಮತ್ತು ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. 18ಇದಲ್ಲದೆ ಬಿರುಗಾಳಿ ಬೀಸುವದರಿಂದ ಸಮುದ್ರವು ಅಲ್ಲಕಲ್ಲೋಲವಾಗಿತ್ತು. 19ಹೀಗಿರಲಾಗಿ ಅವರು ಹುಟ್ಟುಹಾಕುತ್ತಾ ಹೆಚ್ಚು ಕಡಿಮೆ ಒಂದು#6.19 ಮೂಲ: ಇಪ್ಪತ್ತೈದು ಮೂವತ್ತು ಸ್ತಾದ್ಯಗಳು. ಹರದಾರಿ ದೂರ ಹೋದ ಬಳಿಕ ಯೇಸು ಸಮುದ್ರದ ಮೇಲೆ ನಡೆಯುತ್ತಾ ದೋಣಿಯ ಸಮೀಪಕ್ಕೆ ಬರುವದನ್ನು ನೋಡಿ ಅಂಜಿದರು. 20ಆದರೆ ಆತನು - ಅಂಜಬೇಡಿರಿ, ನಾನು, ಅಂದನು. 21ಆಗ ಆತನನ್ನು ದೋಣಿಯೊಳಗೆ ಕರಕೊಳ್ಳುವದಕ್ಕೆ ಮನಸ್ಸಾಗಿದ್ದರು; ಮತ್ತು ಆ ಕ್ಷಣವೇ ಆ ದೋಣಿಯು ಅವರು ಹೋಗಬೇಕೆಂದಿದ್ದ ಭೂವಿುಗೆ ಮುಟ್ಟಿತು.
ಯೇಸು ತಾನೇ ಜೀವಕರವಾದ ರೊಟ್ಟಿ ಎಂದು ಬೋಧಿಸಿದ್ದರಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂಜರಿದದ್ದು
22ಮರುದಿವಸ ಸಮುದ್ರದ ಆಚೇಕಡೆಯಲ್ಲಿ ನಿಂತುಕೊಂಡಿದ್ದ ಜನರು ಯೇಸುವನ್ನು ಹುಡುಕುತ್ತಿದ್ದರು; ಇಲ್ಲಿ ಒಂದೇ ಹಡಗು ಇದ್ದ ಹೊರತು ಬೇರೆ ದೋಣಿಯು ಇರಲಿಲ್ಲವೆಂದೂ ಶಿಷ್ಯರು ಮಾತ್ರ ಹೊರಟು ಹೋದದ್ದಲ್ಲದೆ ಯೇಸು ತನ್ನ ಶಿಷ್ಯರ ಸಂಗಡ ಆ ಹಡಗನ್ನು ಹತ್ತಲಿಲ್ಲವೆಂದೂ ಅವರಿಗೆ ತಿಳಿದಿತ್ತು. 23ಆದರೆ ಅಷ್ಟರೊಳಗೆ ಬೇರೆ ದೋಣಿಗಳು ತಿಬೇರಿಯದಿಂದ ಹೊರಟು ಸ್ವಾವಿುಯು ಸ್ತೋತ್ರಮಾಡಿ ಜನರಿಗೆ ರೊಟ್ಟೀ ಊಟಮಾಡಿಸಿದ ಸ್ಥಳದ ಸಮೀಪಕ್ಕೆ ಬಂದಿದ್ದವು. 24ಹೀಗಿರಲಾಗಿ ಯೇಸು ಇಲ್ಲಿ ಇಲ್ಲ, ಆತನ ಶಿಷ್ಯರೂ ಇಲ್ಲ ಎಂದು ಆ ಜನರು ನೋಡಿ ತಾವೇ ಆ ಸಣ್ಣ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಪೆರ್ನೌವಿುಗೆ ಬಂದರು. 25ಮತ್ತು ಸಮುದ್ರದ ಆಚೇಕಡೆಯಲ್ಲಿ ಆತನನ್ನು ಕಂಡುಕೊಂಡು - ಗುರುವೇ, ಯಾವಾಗ ಇಲ್ಲಿಗೆ ಬರೋಣವಾಯಿತು? ಎಂದು ಕೇಳಿದ್ದಕ್ಕೆ, 26ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ನನ್ನನ್ನು ಹುಡುಕುವದು ಸೂಚಕಕಾರ್ಯಗಳನ್ನು ನೋಡಿದ್ದರಿಂದಲ್ಲ, ಆ ರೊಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಿಂದಲೇ. 27ದುಡಿಯಿರಿ; ಕೆಟ್ಟುಹೋಗುವ ಆಹಾರಕ್ಕಾಗಿ ದುಡಿಯಬೇಡಿರಿ, ನಿತ್ಯಜೀವಕ್ಕೆ ಉಳಿಯುವ ಆಹಾರಕ್ಕಾಗಿ ದುಡಿಯಿರಿ; ಇಂಥ ಆಹಾರವನ್ನು ಮನುಷ್ಯಕುಮಾರನು ನಿಮಗೆ ಕೊಡುವನು; ಇದಕ್ಕಾಗಿ ತಂದೆಯಾದ ದೇವರು ಆತನನ್ನು ನೇವಿುಸಿ ಮುದ್ರೆಹಾಕಿದ್ದಾನೆ ಅಂದನು.
28ಅವರು - ದೇವರಿಗೆ ಮೆಚ್ಚಿಕೆಯಾದ ಕೆಲಸಗಳನ್ನು ನಾವು ನಡಿಸಬೇಕಾದರೆ ಏನು ಮಾಡಬೇಕೆಂದು ಆತನನ್ನು ಕೇಳಿದ್ದಕ್ಕೆ 29ಯೇಸು - ದೇವರು ಮೆಚ್ಚುವ ಕೆಲಸ ಯಾವದಂದರೆ ಆತನು ಕಳುಹಿಸಿಕೊಟ್ಟವನನ್ನು ನೀವು ನಂಬುವದೇ ಅಂದನು. 30ಅವರು ಆತನನ್ನು - ಹಾಗಾದರೆ ನಾವು ನೋಡಿ ನಿನ್ನ ಮಾತನ್ನು ನಂಬುವಂತೆ ಏನು ಸೂಚಕಕಾರ್ಯ ಮಾಡುತ್ತೀ? 31ನಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರು; ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವದಕ್ಕೆ ಕೊಟ್ಟನು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ, ನೀನು ಏನು ಕೆಲಸ ನಡಿಸುತ್ತೀ? ಎಂದು ಕೇಳಿದಾಗ 32ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಟ್ಟವನಲ್ಲ; ನನ್ನ ತಂದೆಯು ಪರಲೋಕದಿಂದ ಬರುವ ನಿಜವಾದ ರೊಟ್ಟಿಯನ್ನು ನಿಮಗೆ ಕೊಡುತ್ತಾನೆ. 33ದೇವರು ಕೊಡುವ ಆ ರೊಟ್ಟಿ ಯಾವದಂದರೆ ಪರಲೋಕದಿಂದ ಇಳಿದು ಬಂದು ಲೋಕಕ್ಕೆ ಜೀವವನ್ನು ಉಂಟುಮಾಡುವಂಥದೇ ಎಂದು ಹೇಳಿದನು. 34ಆಗ ಅವರು - ಸ್ವಾಮೀ, ಆ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು ಅನ್ನಲು ಯೇಸು 35ಅವರಿಗೆ - ಜೀವಕೊಡುವ ರೊಟ್ಟಿ ನಾನೇ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ, ನನ್ನನ್ನು ನಂಬುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ. 36ಆದರೆ ನೀವು ನನ್ನನ್ನು ನೋಡಿದ್ದರೂ ನಂಬದೆ ಇದ್ದೀರಿ ಎಂದು ನಿಮಗೆ ಹೇಳಿದೆನಲ್ಲವೇ. 37ತಂದೆಯು ನನಗೆ ಕೊಡುವಂಥವರೆಲ್ಲರು ನನ್ನ ಬಳಿಗೆ ಬರುವರು; ಮತ್ತು ನನ್ನ ಬಳಿಗೆ ಬರುವವನನ್ನು ನಾನು ತಳ್ಳಿಬಿಡುವದೇ ಇಲ್ಲ. 38ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು. ನನ್ನನ್ನು ಕಳುಹಿಸಿದಾತನ ಚಿತ್ತವು ಏನಂದರೆ ಆತನು 39ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ನಾನು ಕೆಡಗೊಡಿಸದೆ ಅವನನ್ನು ಕಡೇದಿನದಲ್ಲಿ ಎಬ್ಬಿಸಬೇಕೆಂಬದೇ. ಮಗನನ್ನು ನೋಡಿ ಆತನನ್ನು ನಂಬುವ ಪ್ರತಿಯೊಬ್ಬನಿಗೆ 40ನಿತ್ಯ ಜೀವವು ಸಿಕ್ಕಬೇಕೆಂಬದೇ ನನ್ನ ತಂದೆಯ ಚಿತ್ತವಾಗಿದೆ; ಮತ್ತು ನಾನು ಕಡೇದಿನದಲ್ಲಿ ಅವನನ್ನು ಎಬ್ಬಿಸುವೆನು ಎಂದು ಹೇಳಿದನು.
41ಆತನು - ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ - ಇವನು ಯೋಸೇಫನ ಮಗನಾದ ಯೇಸು ಅಲ್ಲವೇ. 42ಇವನ ತಂದೆತಾಯಿಗಳನ್ನು ನಾವು ಬಲ್ಲೆವಲ್ಲವೇ. ಈಗ ಇವನು ಪರಲೋಕದಿಂದ ಇಳಿದುಬಂದಿದ್ದೇನೆಂದು ಹೇಳುವದು ಹೇಗೆ? ಅಂದರು. 43ಅದಕ್ಕೆ ಯೇಸು ಅವರಿಗೆ - ನಿಮ್ಮ ನಿಮ್ಮೊಳಗೆ ಗುಣುಗುಟ್ಟಬೇಡಿರಿ. 44ನನ್ನನ್ನು ಕಳುಹಿಸಿಕೊಟ್ಟಂಥ ತಂದೆಯು ಎಳೆದ ಹೊರತು ಯಾವನೂ ನನ್ನ ಬಳಿಗೆ ಬರಲಾರನು; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು. 45ಅವರೆಲ್ಲರು ದೇವರಿಂದ ಶಿಕ್ಷಿತರಾಗಿರುವರು ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದದೆ; ತಂದೆಯಿಂದ ಕೇಳಿ ಕಲಿತವರೆಲ್ಲರು ನನ್ನ ಬಳಿಗೆ ಬರುತ್ತಾರೆ. 46ಯಾವನಾದರೂ ತಂದೆಯನ್ನು ನೋಡಿದ್ದಾನೆಂದು ತಿಳಿಯಬೇಡಿರಿ; ದೇವರ ಬಳಿಯಿಂದ ಬಂದವನೊಬ್ಬನೇ ತಂದೆಯನ್ನು ನೋಡಿದ್ದಾನೆ. 47ನಂಬಿರುವವನು ನಿತ್ಯಜೀವವನ್ನು ಹೊಂದಿದ್ದಾನೆಂದು ನಿಮಗೆ ನಿಜನಿಜವಾಗಿ ಹೇಳುತ್ತೇನೆ. 48ಜೀವ ಕೊಡುವ ರೊಟ್ಟಿ ನಾನೇ. 49ನಿಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತುಹೋದರು; 50ಪರಲೋಕದಿಂದ ಇಳಿದುಬರುವ ರೊಟ್ಟಿ ಎಂಥದಂದರೆ ಅದನ್ನು ತಿಂದವನು ಸಾಯುವದಿಲ್ಲ. 51ಪರಲೋಕದಿಂದ ಇಳಿದುಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು. ಮತ್ತು ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು ಎಂದು ಹೇಳಿದನು.
52ಆಗ ಯೆಹೂದ್ಯರು - ಇವನು ತನ್ನ ಮಾಂಸವನ್ನು ನಮಗೆ ಹೇಗೆ ತಿನ್ನುವದಕ್ಕೆ ಕೊಟ್ಟಾನು ಎಂದು ತಮ್ಮತಮ್ಮೊಳಗೆ ವಾಗ್ವಾದಮಾಡುತ್ತಿರಲು 53ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ; 54ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ; ಮತ್ತು ನಾನು ಅವನನ್ನು ಕಡೇದಿನದಲ್ಲಿ ಎಬ್ಬಿಸುವೆನು. 55ಯಾಕಂದರೆ ನನ್ನ ಮಾಂಸವೇ ನಿಜವಾದ ಆಹಾರ, ನನ್ನ ರಕ್ತವೇ ನಿಜವಾದ ಪಾನ; 56ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ಇರುತ್ತಾನೆ; ನಾನು ಅವನಲ್ಲಿ ಇರುತ್ತೇನೆ. 57ಜೀವ ಸ್ವರೂಪನಾದ ತಂದೆಯು ನನ್ನನ್ನು ಕಳುಹಿಸಿಕೊಟ್ಟಿರಲಾಗಿ ನಾನು ತಂದೆಯಿಂದ ಜೀವಿಸುತ್ತೇನೆ; ಅದರಂತೆ ನನ್ನನ್ನು ತಿನ್ನುವವನೇ ನನ್ನಿಂದ ಜೀವಿಸುವನು. 58ಪರಲೋಕದಿಂದ ಇಳಿದುಬಂದ ರೊಟ್ಟಿ ಇದೇ. ನಿಮ್ಮ ಹಿರಿಯರು ಮನ್ನಾ ತಿಂದರೂ ಸತ್ತರು; ಇದು ಹಾಗಲ್ಲ; ಈ ರೊಟ್ಟಿಯನ್ನು ತಿನ್ನುವವನು ಸದಾಕಾಲ ಜೀವಿಸುವನು ಎಂದು ಹೇಳಿದನು. 59ಕಪೆರ್ನೌವಿುನ ಸಭಾಮಂದಿರದಲ್ಲಿ ಉಪದೇಶ ಮಾಡುವಾಗ ಇದನ್ನು ಹೇಳಿದನು.
60ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ - ಇದು ಕಠಿನವಾದ ಮಾತು, ಇದನ್ನು ಯಾರು ಕೇಳಾರು? ಅಂದುಕೊಂಡರು. 61ಯೇಸು ತನ್ನ ಶಿಷ್ಯರು ಇದಕ್ಕೆ ಗುಣುಗುಟ್ಟುತ್ತಾರೆಂದು ತನ್ನಲ್ಲಿ ತಿಳುಕೊಂಡು ಅವರಿಗೆ - ಈ ಮಾತಿನಿಂದ ನಿಮಗೆ ಬೇಸರವಾಯಿತೋ? 62ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ? 63ಬದುಕಿಸುವಂಥದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ. ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಅವೆ. 64ಆದರೆ ನಿಮ್ಮಲ್ಲಿ ಕೆಲವರು ನಂಬದವರಾಗಿದ್ದಾರೆ ಅಂದನು. ನಂಬದವರು ಇಂಥವರು, ತನ್ನನ್ನು ಹಿಡುಕೊಡುವವನು ಇಂಥವನು ಎಂಬದು ಯೇಸುವಿಗೆ ಮೊದಲಿನಿಂದ ತಿಳಿದಿತ್ತು. 65ಮತ್ತು ಆತನು - ತಂದೆಯ ಅನುಗ್ರಹವಿಲ್ಲದೆ ಯಾರೂ ನನ್ನ ಬಳಿಗೆ ಬರಲಾರರು ಎಂಬದನ್ನು ನಾನು ನಿಮಗೆ ಅದರ ದೆಸೆಯಿಂದಲೇ ಹೇಳಿದೆನು ಅಂದನು.
66ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂಜರಿದು ಆತನ ಕೂಡ ಸಂಚಾರಮಾಡುವದನ್ನು ಬಿಟ್ಟರು. 67ಯೇಸು ಇದನ್ನು ನೋಡಿ ತನ್ನ ಹನ್ನೆರಡು ಮಂದಿಯನ್ನು - ನೀವು ಸಹ ಹೋಗಬೇಕೆಂದಿದ್ದೀರಾ? ಎಂದು ಕೇಳಿದ್ದಕ್ಕೆ ಸೀಮೋನ್‍ಪೇತ್ರನು - 68ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; 69ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ ಅಂದನು. 70ಅದಕ್ಕೆ ಯೇಸು - ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ತೆಗೆದುಕೊಂಡೆನಲ್ಲವೋ? ನಿಮ್ಮಲ್ಲಿಯೂ ಒಬ್ಬನು ಸೈತಾನನ ಮಗನಾಗಿದ್ದಾನೆ ಅಂದನು. 71ಈ ಮಾತಿನಿಂದ ಆತನು ಸೀಮೋನನ ಮಗನಾದ ಇಸ್ಕರಿಯೋತ ಯೂದನನ್ನು ಸೂಚಿಸಿದನು. ಇವನು ಆ ಹನ್ನೆರಡು ಮಂದಿಯಲ್ಲಿ ಒಬ್ಬನಾಗಿದ್ದು ಮುಂದೆ ಆತನನ್ನು ಹಿಡುಕೊಡುವವನಾದನು.
Dewis Presennol:
ಯೋಹಾನ 6: KANJV-BSI
Uwcholeuo
Rhanna
Copi
Eisiau i'th uchafbwyntiau gael eu cadw ar draws dy holl ddyfeisiau? Cofrestra neu mewngofnoda
Kannada J.V. Bible © The Bible Society of India, 2016.
Used by permission. All rights reserved worldwide.