ಆದಿಕಾಂಡ 1

1
ಭೂಮ್ಯಾಕಾಶಗಳ ಉಗಮ
1ಆದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು. 2ಭೂಮಿ ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕಗ್ಗತ್ತಲು ಕವಿದಿತ್ತು. ದೇವರಾತ್ಮ#1:2 ಅಥವಾ ದೇವರ ಶಕ್ತಿ, ಉಸಿರು, ಮಾರುತ. ಜಲರಾಶಿಯ ಮೇಲೆ ಚಲಿಸುತ್ತಿತ್ತು.
3ಆಗ ದೇವರು, “ಬೆಳಕಾಗಲಿ” ಎನ್ನಲು ಬೆಳಕಾಯಿತು. 4ದೇವರ ಕಣ್ಣಿಗೆ ಅದು ಚೆನ್ನಾಗಿ ಕಂಡಿತು. #1:4 ಅಥವಾ ಚೆನ್ನಾಗಿತ್ತು. ಅವರು ಬೆಳಕನ್ನೂ ಕತ್ತಲೆಯನ್ನೂ ಬೇರೆಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟರು. 5ಹೀಗೆ ಬೈಗೂ ಬೆಳಗೂ ಆಗಿ ಮೊದಲನೆಯ ದಿನವಾಯಿತು.
6ಬಳಿಕ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಒಂದು ಗುಮ್ಮಟವು ಉಂಟಾಗಲಿ, ಅದು ಕೆಳಗಿನ ನೀರನ್ನೂ ಮೇಲಿನ ನೀರನ್ನೂ ಬೇರೆಬೇರೆ ಮಾಡಲಿ,” ಎಂದರು. ಹಾಗೆಯೇ ಆಯಿತು. 7ಹೀಗೆ ದೇವರು ವಿಸ್ತಾರವಾದ ಗುಮ್ಮಟವೊಂದನ್ನು ಮಾಡಿ ಕೆಳಗಿದ್ದ ನೀರನ್ನು ಮೇಲಿದ್ದ ನೀರಿನಿಂದ ವಿಂಗಡಿಸಿದರು. 8ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೆಯ ದಿನ ಆಯಿತು.
9ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ; ಒಣನೆಲವು ಕಾಣಿಸಿಕೊಳ್ಳಲಿ,” ಎಂದರು. ಹಾಗೆಯೇ ಆಯಿತು. 10ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು.
11ತರುವಾಯ ದೇವರು, “ಭೂಮಿಯಲ್ಲಿ ಸಸ್ಯಗಳನ್ನೂ - ಎಲ್ಲ ತರದ ದವಸಧಾನ್ಯ, ಹಣ್ಣು ಹಂಪಲು ಇವುಗಳನ್ನು ಬಿಡುವ ಗಿಡಮರಬಳ್ಳಿಗಳನ್ನೂ ಬೆಳೆಯಿಸಲಿ,” ಎಂದರು. ಅದು ಹಾಗೆಯೇ ಆಯಿತು. 12ಭೂಮಿಯಲ್ಲಿ ಸಸ್ಯಗಳು ಬೆಳೆದವು; ಎಲ್ಲ ತರದ ದವಸಧಾನ್ಯಗಳನ್ನೂ ಹಣ್ಣುಹಂಪಲುಗಳನ್ನೂ ಬಿಡುವ ಗಿಡಮರಬಳ್ಳಿಗಳು ಕಾಣಿಸಿಕೊಂಡವು. ದೇವರ ಕಣ್ಣಿಗೆ ಅವು ಚೆನ್ನಾಗಿ ಕಂಡವು. 13ಹೀಗೆ ಬೈಗೂ ಬೆಳಗೂ ಆಗಿ ಮೂರನೆಯ ದಿನವಾಯಿತು.
14ಅದಾದನಂತರ ದೇವರು,“ಹಗಲು ಇರುಳುಗಳನ್ನು ಬೇರೆಬೇರೆ ಮಾಡಲು ಋತುಕಾಲಗಳನ್ನೂ ದಿನಸಂವತ್ಸರಗಳನ್ನೂ ಸೂಚಿಸಲು, ಹಾಗು 15ಭೂಮಿಗೆ ಬೆಳಕನ್ನೀಯಲು, ಆಕಾಶ ದೀಪಗಳು ಉಂಟಾಗಲಿ,” ಎಂದರು. ಹಾಗೆಯೇ ಆಯಿತು. 16ಹಗಲನ್ನಾಳುವುದಕ್ಕೆ ಸೂರ್ಯನನ್ನೂ ಇರುಳನ್ನಾಳುವುದಕ್ಕೆ ಚಂದ್ರನನ್ನೂ, ಹೀಗೆ ಎರಡು ದೀವಿಗೆಗಳನ್ನು ಸೃಷ್ಟಿ ಮಾಡಿದರು. ಅದು ಮಾತ್ರವಲ್ಲ, ನಕ್ಷತ್ರಗಳನ್ನೂ ಅವರು ಸೃಷ್ಟಿಮಾಡಿದರು. 17ಆ ದೀವಿಗೆಗಳನ್ನು ಆಕಾಶದಲ್ಲಿ ಇಟ್ಟು ಭೂಮಿಗೆ ಬೆಳಕನ್ನೀಯುವಂತೆ ಮಾಡಿದರು. ಹಾಗೂ 18ಹಗಲಿರುಳುಗಳನ್ನು ಆಳುವುದಕ್ಕೂ, ಬೆಳಕನ್ನೂ ಕತ್ತಲನ್ನೂ ಬೇರೆಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು. 19ಹೀಗೆ ಬೈಗೂ ಬೆಳಗೂ ಆಗಿ ನಾಲ್ಕನೆಯ ದಿನ ಆಯಿತು.
20ಆಮೇಲೆ ದೇವರು, “ಹಲವಾರು ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಭೂಮಿ ಆಕಾಶಗಳ ನಡುವೆ ಪಕ್ಷಿಗಳು ಹಾರಾಡಲಿ,” ಎಂದರು. 21ಈ ಪ್ರಕಾರ ದೇವರು ದೊಡ್ಡ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ನಾನಾ ವಿಧವಾದ ಜೀವಜಂತುಗಳನ್ನೂ ರೆಕ್ಕೆಗಳುಳ್ಳ ಸಕಲ ವಿಧವಾದ ಪಕ್ಷಿಗಳನ್ನೂ ಸೃಷ್ಟಿಮಾಡಿದರು. ದೇವರ ದೃಷ್ಟಿಗೆ ಅದೂ ಚೆನ್ನಾಗಿ ಕಂಡಿತು. 22ಅವುಗಳಿಗೆ ದೇವರು, “ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ,” ಎಂದು ಹೇಳಿ ಆಶೀರ್ವದಿಸಿದರು. 23ಹೀಗೆ ಬೈಗೂ ಬೆಳಗೂ ಆಗಿ ಐದನೆಯ ದಿನ ಆಯಿತು.
24ಆ ಬಳಿಕ ದೇವರು, “ಭೂಮಿಯಿಂದ ಎಲ್ಲ ತರದ ಜೀವಜಂತುಗಳು ಸೃಷ್ಟಿಯಾಗಲಿ. ದೊಡ್ಡ - ಚಿಕ್ಕ ಸಾಕುಪ್ರಾಣಿಗಳೂ ಕಾಡುಮೃಗಗಳೂ ಹುಟ್ಟಲಿ,“ ಎಂದರು. ಅಂತೆಯೇ ಆಯಿತು. 25ಎಲ್ಲ ತರದ ದೊಡ್ಡ - ಚಿಕ್ಕ ಕಾಡುಮೃಗಗಳನ್ನೂ ಸಾಕುಪ್ರಾಣಿಗಳನ್ನೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನು ದೇವರು ಸೃಷ್ಟಿಮಾಡಿದರು. ಅವರ ನೋಟಕ್ಕೆ ಅದು ಚೆನ್ನಾಗಿ ಕಂಡಿತು.
26ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು#1:26 ಹೀಬ್ರೂ ಭಾಷೆಯಲ್ಲಿ ‘ಆದಾಮಾ’ ಎಂದರೆ ಮಣ್ಣಿನಿಂದ ಆದವನು. ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು:
27ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ
ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ
ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ.
28ಅವರನ್ನು ದೇವರು ಆಶೀರ್ವದಿಸಿ, “ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿಕೊಳ್ಳಿರಿ; ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. 29ಇನ್ನೂ, ಭೂಮಿಯಲ್ಲಿರುವ ಎಲ್ಲ ತರದ ದವಸಧಾನ್ಯಗಳನ್ನೂ ಹಣ್ಣುಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. 30ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ,” ಎಂದು ಹೇಳಿದರು. ಹಾಗೆಯೇ ಆಯಿತು. 31ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು.

اکنون انتخاب شده:

ಆದಿಕಾಂಡ 1: KANCLBSI

های‌لایت

به اشتراک گذاشتن

کپی

None

می خواهید نکات برجسته خود را در همه دستگاه های خود ذخیره کنید؟ برای ورودثبت نام کنید یا اگر ثبت نام کرده اید وارد شوید