ಯೋಹಾನನ ಸುವಾರ್ತೆ 14
14
ಶಿಷ್ಯರಿಗೆ ಯೇಸುವಿನ ಆದರಣೆ ಮಾತುಗಳು
1ಯೇಸು, “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ದೇವರಲ್ಲಿ ವಿಶ್ವಾಸವಿಡಿರಿ. ನನ್ನಲ್ಲಿಯೂ ವಿಶ್ವಾಸವಿಡಿರಿ. 2ನನ್ನ ತಂದೆಯ ಮನೆಯಲ್ಲಿ ಅನೇಕ ಕೋಣೆಗಳಿವೆ. ಅದು ಸತ್ಯವಲ್ಲದಿದ್ದರೆ, ನಾನು ನಿಮಗೆ ಹೇಳುತ್ತಿರಲಿಲ್ಲ. ನಾನು ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಲು ಅಲ್ಲಿಗೆ ಹೋಗುತ್ತಿದ್ದೇನೆ. 3ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಿದ ಮೇಲೆ ಹಿಂತಿರುಗಿ ಬಂದು, ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆನು. ಏಕೆಂದರೆ ನಾನಿರುವಲ್ಲಿ ನೀವೂ ಇರಬೇಕು. 4ನಾನು ಹೋಗಲಿರುವ ಸ್ಥಳದ ದಾರಿಯು ನಿಮಗೆ ತಿಳಿದಿದೆ” ಎಂದು ಹೇಳಿದನು.
5ತೋಮನು ಯೇಸುವಿಗೆ, “ಪ್ರಭುವೇ, ನೀನು ಹೋಗುತ್ತಿರುವುದು ಎಲ್ಲಿಗೆಂಬುದೇ ನಮಗೆ ಗೊತ್ತಿಲ್ಲ. ಹೀಗಿರಲು, ಆ ದಾರಿಯನ್ನು ನಾವು ಹೇಗೆ ತಿಳಿದುಕೊಳ್ಳಲಾದೀತು?” ಎಂದನು.
6ಯೇಸು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ತಂದೆಯ ಬಳಿಗೆ ಹೋಗಲು ನಾನೇ ಏಕೈಕ ಮಾರ್ಗ. 7ನೀವು ನನ್ನನ್ನು ನಿಜವಾಗಿಯೂ ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದುಕೊಳ್ಳುತ್ತಿದ್ದಿರಿ. ಆದರೆ ಈಗ ನೀವು ತಂದೆಯನ್ನು ತಿಳಿದಿದ್ದೀರಿ. ನೀವು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.
8ಫಿಲಿಪ್ಪನು ಯೇಸುವಿಗೆ, “ಪ್ರಭುವೇ, ನಮಗೆ ತಂದೆಯನ್ನು ತೋರಿಸು. ನಮಗೆ ಅಷ್ಟೇ ಸಾಕು” ಎಂದು ಹೇಳಿದನು.
9ಯೇಸು, “ಫಿಲಿಪ್ಪನೇ, ನಾನು ಇಷ್ಟು ಕಾಲದಿಂದ ನಿನ್ನೊಂದಿಗಿದ್ದರೂ ನೀನು ನನ್ನನ್ನು ತಿಳಿದುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ಸಹ ನೋಡಿದವನಾಗಿದ್ದಾನೆ. ಆದ್ದರಿಂದ, ‘ತಂದೆಯನ್ನು ನಮಗೆ ತೋರಿಸು’ ಎಂದು ಏಕೆ ಕೇಳುವಿರಿ? 10ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂದು ನೀವು ನಿಜವಾಗಿಯೂ ನಂಬುವಿರಾ? ನಾನು ನಿಮಗೆ ಹೇಳುವ ಸಂಗತಿಗಳು ನನ್ನಿಂದಲೇ ಬಂದಂಥವುಗಳಲ್ಲ. ತಂದೆಯು ನನ್ನಲ್ಲಿ ವಾಸವಾಗಿದ್ದಾನೆ ಮತ್ತು ಆತನು ತನ್ನ ಕಾರ್ಯವನ್ನು ಮಾಡುತ್ತಿದ್ದಾನೆ. 11ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂಬ ನನ್ನ ಮಾತನ್ನು ನಂಬಿರಿ. ಇಲ್ಲದಿದ್ದರೆ ನಾನು ಮಾಡಿದ ಅದ್ಭುತಕಾರ್ಯಗಳ ನಿಮಿತ್ತವಾದರೂ ನಂಬಿರಿ.
12“ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನಲ್ಲಿ ನಂಬಿಕೆ ಇಡುವ ವ್ಯಕ್ತಿಯು ನಾನು ಮಾಡಿದ ಕಾರ್ಯಗಳನ್ನೇ ಮಾಡುವನು. ಹೌದು ನಾನು ಮಾಡುವ ಕಾರ್ಯಗಳಿಗಿಂತಲೂ ದೊಡ್ಡಕಾರ್ಯಗಳನ್ನು ಅವನು ಮಾಡುವನು. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ. 13ಮತ್ತು ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ನಿಮಗೋಸ್ಕರ ಅದನ್ನು ನೆರವೇರಿಸುವೆನು. ಆಗ ಮಗನ ಮೂಲಕವಾಗಿ ತಂದೆಗೆ ಮಹಿಮೆ ಆಗುವುದು. 14ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ಅದನ್ನು ನೆರವೇರಿಸುವೆನು.
ಪವಿತ್ರಾತ್ಮನನ್ನು ಕೊಡುವುದಾಗಿ ವಾಗ್ದಾನ
15“ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ಆಜ್ಞಾಪಿಸುವವುಗಳನ್ನು ಮಾಡುವಿರಿ. 16ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ಆತನು ಬೇರೊಬ್ಬ ಸಹಾಯಕನನ್ನು ನಿಮಗೆ ಕೊಡುವನು. ಆ ಸಹಾಯಕನು ಸದಾಕಾಲ ನಿಮ್ಮೊಂದಿಗಿರುವನು. 17ಸತ್ಯದ ಆತ್ಮನೇ ಈ ಸಹಾಯಕನು. ಈ ಲೋಕವು ಆತನನ್ನು ಸ್ವೀಕರಿಸಿಕೊಳ್ಳಲಾರದು. ಏಕೆಂದರೆ ಲೋಕವು ಆತನನ್ನು ಕಾಣುವುದೂ ಇಲ್ಲ, ತಿಳಿದುಕೊಳ್ಳುವುದೂ ಇಲ್ಲ. ಆದರೆ ನೀವು ಆತನನ್ನು ಬಲ್ಲಿರಿ. ಆತನು ನಿಮ್ಮೊಂದಿಗೆ ಮತ್ತು ನಿಮ್ಮೊಳಗೆ ವಾಸಿಸುವವನಾಗಿದ್ದಾನೆ.
18“ನಾನು ನಿಮ್ಮನ್ನು ತಂದೆತಾಯಿಗಳಿಲ್ಲದ ಮಕ್ಕಳಂತೆ ಒಬ್ಬಂಟಿಗರನ್ನಾಗಿ ಬಿಟ್ಟುಹೋಗುವುದಿಲ್ಲ. ನಾನು ನಿಮ್ಮ ಬಳಿಗೆ ಬರುತ್ತೇನೆ. 19ಇನ್ನು ಸ್ವಲ್ಪ ಕಾಲವಾದ ಮೇಲೆ ಈ ಲೋಕದ ಜನರು ನನ್ನನ್ನು ಇನ್ನೆಂದಿಗೂ ಕಾಣುವುದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವೂ ಜೀವಿಸುವಿರಿ. 20ನಾನು ನನ್ನ ತಂದೆಯಲ್ಲಿರುವುದನ್ನು ನೀವು ಆ ದಿನದಂದು ತಿಳಿದುಕೊಳ್ಳುವಿರಿ. ನೀವು ನನ್ನಲ್ಲಿರುವುದನ್ನೂ ನಾನು ನಿಮ್ಮಲ್ಲಿರುವುದನ್ನೂ ತಿಳಿದುಕೊಳ್ಳುವಿರಿ. 21ಒಬ್ಬನು ನನ್ನ ಆಜ್ಞೆಗಳನ್ನು ಸ್ವೀಕರಿಸಿಕೊಂಡು ಅವುಗಳಿಗೆ ವಿಧೇಯನಾದರೆ ಅವನು ನನ್ನನ್ನು ನಿಜವಾಗಿಯೂ ಪ್ರೀತಿಸುವವನಾಗಿದ್ದಾನೆ. ಅಲ್ಲದೆ ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು ಮತ್ತು ನಾನೂ ಅವನನ್ನು ಪ್ರೀತಿಸುವೆನು. ನಾನು ಅವನಿಗೆ ನನ್ನನ್ನೇ ತೋರ್ಪಡಿಸಿಕೊಳ್ಳುವೆನು” ಎಂದು ಉತ್ತರಕೊಟ್ಟನು.
22ಆಗ ಯೂದನು (ಇಸ್ಕರಿಯೋತ ಯೂದನಲ್ಲ), “ಪ್ರಭುವೇ, ನೀನು ನಿನ್ನನ್ನು ಈ ಲೋಕಕ್ಕೆ ತೋರ್ಪಡಿಸಿಕೊಳ್ಳದೆ ನಮಗೆ ಮಾತ್ರ ತೋರ್ಪಡಿಸಿಕೊಳ್ಳಬೇಕೆಂದಿರುವುದೇಕೆ?” ಎಂದು ಕೇಳಿದನು.
23ಯೇಸು ಹೀಗೆ ಉತ್ತರಕೊಟ್ಟನು: “ನನ್ನನ್ನು ಪ್ರೀತಿಸುವವನು ನನ್ನ ಉಪದೇಶಕ್ಕೆ ವಿಧೇಯನಾಗುವನು. ನನ್ನ ತಂದೆಯು ಅವನನ್ನು ಪ್ರೀತಿಸುವನು. ನನ್ನ ತಂದೆ ಮತ್ತು ನಾನು ಅವನ ಬಳಿಗೆ ಬಂದು ಅವನೊಂದಿಗೆ ವಾಸಿಸುವೆವು. 24ಆದರೆ ನನ್ನನ್ನು ಪ್ರೀತಿಸದವನು, ನನ್ನ ಉಪದೇಶಕ್ಕೆ ವಿಧೇಯನಾಗುವುದಿಲ್ಲ. ನೀವು ಕೇಳುತ್ತಿರುವ ಈ ಉಪದೇಶವು ನಿಜವಾಗಿಯೂ ನನ್ನದಲ್ಲ, ನನ್ನನ್ನು ಕಳುಹಿಸಿರುವ ನನ್ನ ತಂದೆಯದು.
25“ನಾನು ನಿಮ್ಮೊಂದಿಗೆ ಇರುವಾಗಲೇ ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 26ಆದರೆ ಆ ಸಹಾಯಕನು ನಿಮಗೆ ಪ್ರತಿಯೊಂದನ್ನೂ ಉಪದೇಶಿಸುವನು. ನಾನು ನಿಮಗೆ ಹೇಳಿದ ಸಂಗತಿಗಳನ್ನೆಲ್ಲಾ ಆ ಸಹಾಯಕನು ನಿಮ್ಮ ನೆನಪಿಗೆ ತರುವನು. ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪವಿತ್ರಾತ್ಮನೇ ಆ ಸಹಾಯಕನು.
27“ನಾನು ನಿಮಗೆ ಶಾಂತಿಯನ್ನು ನೀಡುತ್ತೇನೆ. ಈ ಲೋಕವು ಕೊಡುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ನಾನು ನಿಮಗೆ ಶಾಂತಿಯನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ಭಯಪಡಬೇಡಿರಿ. 28‘ನಾನು ಹೊರಟುಹೋಗುತ್ತೇನೆ. ಆದರೆ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇನೆ’ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ತಂದೆಯ ಬಳಿಗೆ ಮರಳಿಹೋಗುವುದರ ಬಗ್ಗೆ ಸಂತೋಷಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು. 29ಇದು ಸಂಭವಿಸುವುದಕ್ಕಿಂತ ಮೊದಲೇ ನಾನು ನಿಮಗೆ ಇದನ್ನು ಈಗಲೇ ತಿಳಿಸಿದ್ದೇನೆ. ಹೀಗಿರಲು, ಇದು ಸಂಭವಿಸುವಾಗ ನೀವು ನಂಬುವಿರಿ.
30“ನಾನು ನಿಮ್ಮೊಂದಿಗೆ ಇನ್ನು ಬಹಳ ಹೊತ್ತು ಮಾತಾಡುವುದಿಲ್ಲ. ಈ ಲೋಕದ ಅಧಿಪತಿಯು (ಸೈತಾನನು) ಬರುತ್ತಿದ್ದಾನೆ. ಅವನಿಗೆ ನನ್ನ ಮೇಲೆ ಯಾವ ಅಧಿಕಾರವೂ ಇಲ್ಲ. 31ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಈ ಲೋಕವು ತಿಳಿದುಕೊಳ್ಳಬೇಕು. ಆದ್ದರಿಂದ ತಂದೆಯು ನನಗೆ ಹೇಳಿರುವುದನ್ನೇ ನಾನು ಮಾಡುತ್ತೇನೆ.
“ಬನ್ನಿ, ನಾವು ಇಲ್ಲಿಂದ ಹೋಗೋಣ.”
Voafantina amin'izao fotoana izao:
ಯೋಹಾನನ ಸುವಾರ್ತೆ 14: KERV
Asongadina
Hizara
Dika mitovy

Tianao hovoatahiry amin'ireo fitaovana ampiasainao rehetra ve ireo nasongadina? Hisoratra na Hiditra
Kannada Holy Bible: Easy-to-Read Version
All rights reserved.
© 1997 Bible League International