ಆದಿಕಾಂಡ 2

2
1ಪರಲೋಕ - ಭೂಲೋಕಗಳೂ ಅವುಗಳಲ್ಲಿ ಇರುವ ಸಮಸ್ತವೂ ಹೀಗೆ ನಿರ್ಮಿತವಾದವು. 2ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು. 3ಆ ಏಳನೆಯ ದಿನವು ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದರು. ತಮ್ಮ ಸೃಷ್ಟಿಕಾರ್ಯವನ್ನೆಲ್ಲ ಮುಗಿಸಿ ಆ ದಿನದಂದು ವಿಶ್ರಮಿಸಿಕೊಂಡ ಕಾರಣ ಹಾಗೆ ಮಾಡಿದರು.
4ಇತಿ, ಪರಲೋಕ - ಭೂಲೋಕಗಳ ನಿರ್ಮಾಣ ಚರಿತ್ರೆ.
ಏದೆನ್ ಉದ್ಯಾನವನ
5ದೇವರಾದ ಸರ್ವೇಶ್ವರ#2:5 ‘ಸರ್ವೇಶ್ವರ’ ಎಂಬ ಪದ ಅಧ್ಯಾಯದ ಅಥವಾ ಶಿರೋನಾಮೆಯ ಅಡಿಯಲ್ಲಿ ಮೊದಲಬಾರಿಗೆ ಬಂದಾಗ “ಸ್ವಾಮಿ” ಎಂಬ ಪ್ರತ್ಯಯವನ್ನು ಗೌರವಾರ್ಥ ಕೂಡಿಸಲಾಗಿದೆ. ಸ್ವಾಮಿ ಪರಲೋಕ - ಭೂಲೋಕಗಳನ್ನು ಸೃಷ್ಟಿಮಾಡಿದಾಗ ಯಾವ ಗಿಡಗಳೂ ಭೂಮಿಯಲ್ಲಿ ಇರಲಿಲ್ಲ. ಯಾವ ಬೀಜವೂ ಮೊಳೆತಿರಲಿಲ್ಲ. ಏಕೆಂದರೆ ದೇವರಾದ ಸರ್ವೇಶ್ವರ ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡಲು ಮನುಷ್ಯನೂ ಇರಲಿಲ್ಲ. 6ಆದರೂ ಭೂಮಿಯಿಂದ ನೀರು ಉಕ್ಕಿಬಂದು ನೆಲಕ್ಕೆ ನೀರೆರೆಯುತ್ತಿತ್ತು.
7ಹೀಗಿರಲು ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು.
8ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು. 9“ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗು ಒಳಿತು - ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು.
10ಏದೆನ್ ಪ್ರದೇಶದಲ್ಲಿ ಒಂದು ನದಿ ಹುಟ್ಟಿ ಆ ವನಕ್ಕೆ ನೀರೆರೆಯುತ್ತಿತ್ತು. ಅದು ಅಲ್ಲಿಂದ ಹರಿದು ಆಚೆಕಡೆ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು. 11ಮೊದಲನೆಯದರ ಹೆಸರು ಪೀಶೋನ್. ಇದು ಬಂಗಾರ ದೊರಕುವ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ. ಆ ದೇಶದ ಬಂಗಾರ ಅಪ್ಪಟವಾದುದು. 12‘ಬದೋಲಖ’ ಎಂಬ ವಿಶೇಷ ಸಾಂಬ್ರಾಣಿ, ‘ಗೋಮೇಧಿಕ’ ಎಂಬ ರತ್ನವೂ ಅಲ್ಲಿ ದೊರಕುತ್ತವೆ. 13ಎರಡನೆ ನದಿಯ ಹೆಸರು ಗೀಹೋನ್, ಇದು ಕೂಷ್#2:13 ಕೂಷ್ - (ಮೆಸೊಪೊಟೇಮಿಯದ) ಅಥವಾ ಸುಡಾನ್. ದೇಶವನ್ನೆಲ್ಲಾ ಸುತ್ತುತ್ತದೆ. 14ಮೂರನೇ ನದಿಯ ಹೆಸರು ಟೈಗ್ರಿಸ್. ಇದು ಅಸ್ಸೀರಿಯಾ ದೇಶದ ಪೂರ್ವಕ್ಕೆ ಹರಿಯುತ್ತದೆ. ನಾಲ್ಕನೆಯದು ಯೂಫ್ರೆಟಿಸ್ ನದಿ.
15ದೇವರಾದ ಸರ್ವೇಶ್ವರ ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ವನವನ್ನು ಕೃಷಿಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಬಿಟ್ಟರು.
16ಇದಲ್ಲದೆ, ದೇವರಾದ ಸರ್ವೇಶ್ವರ ಆ ಮನುಷ್ಯನಿಗೆ, “ನೀನು ಈ ತೋಟದಲ್ಲಿರುವ ಎಲ್ಲ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು. 17ಆದರೆ ಒಳಿತು - ಕೆಡಕುಗಳ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದೆಯಾದರೆ, ಅದೇ ದಿನ ಸತ್ತುಹೋಗುವೆ,” ಎಂದು ವಿಧಿಸಿದರು.
18ಅನಂತರ ದೇವರಾದ ಸರ್ವೇಶ್ವರ, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ, ಅವನಿಗೆ ಸರಿಬೀಳುವ ಸಹಕಾರಿಯನ್ನು ಸೃಷ್ಟಿಮಾಡುವೆನು,” ಎಂದರು. 19ಎಲ್ಲ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ ಮಣ್ಣಿನಿಂದ ನಿರ್ಮಿಸಿದ ಅವರು, ಮನುಷ್ಯನು ಇವುಗಳಿಗೆ ಏನೇನು ಹೆಸರಿಡುವನೋ ನೋಡೋಣವೆಂದು ಅವನ ಬಳಿಗೆ ಅವುಗಳನ್ನು ಬರಮಾಡಿದರು. ಆ ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳಿಗೆ ಹೆಸರು ಆಯಿತು. 20ಹೀಗೆ ಮನುಷ್ಯನು ಎಲ್ಲ ಸಾಕುಪ್ರಾಣಿಗಳಿಗೂ ಆಕಾಶದ ಪಕ್ಷಿಗಳಿಗೂ ಕಾಡುಮೃಗಗಳಿಗೂ ಹೆಸರಿಟ್ಟನು; ಆದರೆ ಅವನಿಗೆ ಸರಿಬೀಳುವ ಜೊತೆಗಾತಿ ಅವುಗಳಲ್ಲಿ ಕಾಣಿಸಲಿಲ್ಲ.
21ಹೀಗಿರುವಲ್ಲಿ ದೇವರಾದ ಸರ್ವೇಶ್ವರ ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿದರು. ಅವನು ನಿದ್ರಿಸುತ್ತಿರುವಾಗ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ಮುಚ್ಚಿದರು. 22ಆ ಎಲುಬನ್ನು ಮಹಿಳೆಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಬರಮಾಡಿದರು. 23ಅವನು ಆಕೆಯನ್ನು ನೋಡಿ ಹೀಗೆಂದನು:
ಸರಿ, ನನಗೀಗ ಇವಳು
ನನ್ನೆಲುಬಿನ ಎಲುಬು ನನ್ನೊಡಲಿನ ಒಡಲು
# 2:23 ಹಿಬ್ರು ಭಾಷೆಯಲ್ಲಿ ‘ಇಷ್’ ಎಂದರೆ ಗಂಡು. ನರನಿಂದ ಉತ್ಪತ್ತಿಯಾದಿವಳನ್ನು
# 2:23 ಹಿಬ್ರು ಭಾಷೆಯಲ್ಲಿ ‘ಇಷಾ’ ಎಂದರೆ ಹೆಣ್ಣು. ನಾರಿಯೆಂದೇ ಕರೆವರು.
24ಈ ಕಾರಣ, ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಒಡಲಾಗಿ ಬಾಳುವರು.
25ಆ ಸ್ತ್ರೀಪುರುಷರಿಬ್ಬರೂ ಬೆತ್ತಲೆ ಆಗಿದ್ದರೂ ನಾಚಿಕೊಳ್ಳಲಿಲ್ಲ.

നിലവിൽ തിരഞ്ഞെടുത്തിരിക്കുന്നു:

ಆದಿಕಾಂಡ 2: KANCLBSI

ഹൈലൈറ്റ് ചെയ്യുക

പങ്ക് വെക്കു

പകർത്തുക

None

നിങ്ങളുടെ എല്ലാ ഉപകരണങ്ങളിലും ഹൈലൈറ്റുകൾ സംരക്ഷിക്കാൻ ആഗ്രഹിക്കുന്നുണ്ടോ? സൈൻ അപ്പ് ചെയ്യുക അല്ലെങ്കിൽ സൈൻ ഇൻ ചെയ്യുക