YouVersion
Pictograma căutare

ಲೂಕ. 11

11
ಸ್ವಾಮಿ ಕಲಿಸಿಕೊಟ್ಟ ಪ್ರಾರ್ಥನೆ
(ಮತ್ತಾ. 6:9-13; 7:7-11)
1ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು. “ಪ್ರಭುವೇ, ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ,” ಎಂದನು. ಅದಕ್ಕೆ ಯೇಸು ಇಂತೆಂದರು,
“ನೀವು ಹೀಗೆ ಪ್ರಾರ್ಥನೆಮಾಡಬೇಕು:
ತಂದೆಯೇ,
2ನಿಮ್ಮ ಪವಿತ್ರನಾಮ ಪೂಜಿತವಾಗಲಿ;
ನಿಮ್ಮ ಸಾಮ್ರಾಜ್ಯ ಬರಲಿ.
3ನಮಗೆ ಅಗತ್ಯವಾದ ಆಹಾರವನ್ನು
ಅನುದಿನವೂ ಕೊಡಿ.
4ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು
ನಾವು ಕ್ಷಮಿಸುವುದರಿಂದ,
ನಮ್ಮ ಪಾಪಗಳನ್ನು ಕ್ಷಮಿಸಿರಿ.
ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ’.”
ಪ್ರಾರ್ಥನೆಯ ಫಲ
5ಪುನಃ ಯೇಸುಸ್ವಾಮಿ ಶಿಷ್ಯರಿಗೆ, “ನಿಮ್ಮಲ್ಲಿ ಒಬ್ಬನು ತನ್ನ ಸ್ನೇಹಿತನ ಮನೆಗೆ ನಡುರಾತ್ರಿಯಲ್ಲಿ ಹೋಗುತ್ತಾನೆಂದು ಭಾವಿಸೋಣ: ಅವನು, ‘ಗೆಳೆಯಾ, ನನಗೆ ಮೂರು ರೊಟ್ಟಿಗಳನ್ನು ಸಾಲವಾಗಿ ಕೊಡು. 6ಪ್ರಯಾಣದಲ್ಲಿದ್ದ ನನ್ನ ಸ್ನೇಹಿತನೊಬ್ಬನು ಅನಿರೀಕ್ಷಿತವಾಗಿ ನನ್ನ ಮನೆಗೆ ಈಗತಾನೆ ಬಂದಿದ್ದಾನೆ. ಅವನಿಗೆ ಊಟಕ್ಕಿಡಲು ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು, 7ಈ ಸ್ನೇಹಿತ ಒಳಗಿನಿಂದಲೇ, ‘ನನಗೆ ತೊಂದರೆ ಕೊಡಬೇಡ; ಬಾಗಿಲು ಹಾಕಿ ಆಗಿದೆ; ನನ್ನ ಮಕ್ಕಳು ನನ್ನ ಕೂಡ ಮಲಗಿದ್ದಾರೆ; ನಾನು ಎದ್ದು ಬಂದು ಕೊಡುವುದಕ್ಕಾಗುವುದಿಲ್ಲ,’ ಎಂದು ಉತ್ತರ ಕೊಡುವುದು ಸಹಜವಲ್ಲವೇ? 8ಆದರೂ, ತನ್ನ ಗೆಳೆಯ ಇವನು ಎಂದು ಎದ್ದುಬಂದು ಕೊಡದೆ ಇದ್ದರೂ, ನಾಚಿಕೆಪಡದೆ ಕೇಳುತ್ತಲೇ ಇದ್ದಾನಲ್ಲಾ ಎಂಬ ಕಾರಣದಿಂದಾದರೂ ಅವನು ಎದ್ದುಬಂದು ಕೇಳಿದಷ್ಟನ್ನು ಕೊಡುತ್ತಾನೆಂಬುದು ನಿಜ. 9ಆದುದರಿಂದ: ‘ಕೇಳಿರಿ, ನಿಮಗೆ ದೊರಕುವುದು; ತಟ್ಟಿರಿ, ನಿಮಗೆ ಬಾಗಿಲು ತೆರೆಯಲಾಗುವುದು. 10ಏಕೆಂದರೆ, ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ದೊರಕುವುದು; ಹುಡುಕುವವನಿಗೆ ಸಿಗುವುದು; ತಟ್ಟುವವನಿಗೆ ಬಾಗಿಲು ತೆರೆಯಲಾಗುವುದು.’
11“ನಿಮ್ಮಲ್ಲಿ ಯಾವ ತಂದೆ ತಾನೇ ತನ್ನ ಮಗ ಮೀನನ್ನು ಕೇಳಿದರೆ ಹಾವನ್ನು ಕೊಡುತ್ತಾನೆ? 12ಅಥವಾ ಮೊಟ್ಟೆಯನ್ನು ಕೇಳಿದರೆ ಚೇಳನ್ನು ಕೊಡುತ್ತಾನೆ? 13ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಬಲ್ಲವರಾದರೆ, ಅವಕ್ಕಿಂತಲೂ ಹೆಚ್ಚಾಗಿ ಸ್ವರ್ಗದಲ್ಲಿರುವ ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು! ಎಂದು ನಾನು ನಿಮಗೆ ಹೇಳುತ್ತೇನೆ.”
ದೆವ್ವಗಳ ಉಚ್ಛಾಟನೆ - ದೈವೀರಾಜ್ಯದ ಉದ್ಘಾಟನೆ
(ಮತ್ತಾ. 12:22-30; ಮಾರ್ಕ. 3:20-27)
14ಒಮ್ಮೆ ಯೇಸುಸ್ವಾಮಿ ಒಂದು ಮೂಕ ದೆವ್ವವನ್ನು ಬಿಡಿಸುತ್ತಿದ್ದರು. ಆ ದೆವ್ವ ಬಿಟ್ಟುಹೋದ ಮೇಲೆ ಮೂಕನು ಮಾತನಾಡಿದನು. ಜನರು ಆಶ್ಚರ್ಯಚಕಿತರಾದರು. 15ಆದರೆ ಅವರಲ್ಲಿ ಕೆಲವರು, “ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ,” ಎಂದರು. ಬೇರೆ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ 16ಸ್ವರ್ಗದಿಂದ ಒಂದು ಅದ್ಭುತಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು. 17ಅವರ ಆಲೋಚನೆಗಳನ್ನು ಅರಿತುಕೊಂಡು ಯೇಸು, “ಅಂತಃಕಲಹದಿಂದ ಒಡೆದು ಹೋಗಿರುವ ಪ್ರತಿಯೊಂದು ರಾಜ್ಯ ನಾಶವಾಗುವುದು; ಕುಟುಂಬ ಕುಟುಂಬಗಳು ಕಚ್ಚಾಡಿ ಹಾಳಾಗುವುವು. 18ಅಂತೆಯೇ ಸೈತಾನನ ಪಕ್ಷದವರು ಒಬ್ಬರ ವಿರುದ್ಧ ಒಬ್ಬರು ಜಗಳ ಆಡಿದರೆ ಅವನ ರಾಜ್ಯ ಹೇಗೆ ತಾನೆ ಉಳಿದೀತು? 19ನಾನು ಬೆಲ್ಜೆಬೂಲನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ನಿಮ್ಮವರು ಯಾರ ಶಕ್ತಿಯಿಂದ ಬಿಡಿಸುತ್ತಾರೆ? ಆದ್ದರಿಂದ ನೀವು ಹೇಳುವುದು ತಪ್ಪೆಂದು ನಿಮ್ಮವರೇ ತೀರ್ಪುಕೊಡುವರು. 20ನಾನು ದೇವರ ಶಕ್ತಿಯಿಂದ ದೆವ್ವಗಳನ್ನು ಬಿಡಿಸುವುದಾದರೆ ದೇವರ ಸಾಮ್ರಾಜ್ಯ ನಿಮ್ಮಲ್ಲಿಗೆ ಈಗಾಗಲೇ ಬಂದಿದೆ, ಎಂಬುದು ಸ್ಪಷ್ಟ.
21“ಬಲಿಷ್ಠನೊಬ್ಬನು ಸರ್ವಾಯುಧಗಳಿಂದ ಸಜ್ಜಿತನಾಗಿ ತನ್ನ ಮನೆಗೆ ಕಾವಲಿರುವಾಗ ಅವನ ಆಸ್ತಿಯೆಲ್ಲ ಸುರಕ್ಷಿತವಾಗಿರುತ್ತದೆ. 22ಆದರೆ ಇವನಿಗಿಂತಲೂ ಬಲಿಷ್ಠನು ಎದುರಿಸಿ ಬಂದು ಇವನನ್ನು ಗೆದ್ದಾಗ, ಇವನು ನೆಚ್ಚಿಕೊಂಡಿದ್ದ ಆಯುಧಗಳನ್ನೆಲ್ಲಾ ಅವನು ಕಿತ್ತುಕೊಂಡು, ಸುಲಿಗೆಯನ್ನು ಹಂಚಿಕೊಡುತ್ತಾನೆ.
23“ನನ್ನ ಪರವಾಗಿ ಇರದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ,” ಎಂದರು.
ಮರಳಿ ಮನೆಗೆ ಬಂದ ದೆವ್ವ
(ಮತ್ತಾ. ೧2:43-45)
24ಯೇಸುಸ್ವಾಮಿ ಬೋಧನೆಯನ್ನು ಮುಂದುವರಿಸುತ್ತಾ, “ದೆವ್ವವು ಒಬ್ಬ ಮನುಷ್ಯನನ್ನು ಬಿಟ್ಟು ತೊಲಗಿದ ಮೇಲೆ ನೆಲೆಯನ್ನು ಹುಡುಕುತ್ತಾ ಒಣಗಾಡಿನಲ್ಲಿ ಅಲೆದಾಡುತ್ತದೆ. ಅದಕ್ಕೆ ನೆಲೆ ಸಿಗದ ಕಾರಣ ಅದು, ‘ನಾನು ಬಿಟ್ಟುಬಂದ ನನ್ನ ಮನೆಗೇ ಹಿಂದಿರುಗುತ್ತೇನೆ’ ಎಂದುಕೊಳ್ಳುತ್ತದೆ. 25ಅದು ಮರಳಿ ಬಂದಾಗ, ಮನೆ ಗುಡಿಸಿರುವುದನ್ನೂ ಎಲ್ಲವೂ ಚೊಕ್ಕಟವಾಗಿರುವುದನ್ನೂ ಕಾಣುತ್ತದೆ. 26ಪುನಃ ಹೊರಟು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ಕರೆದುಕೊಂಡು ಬರುತ್ತದೆ. ಅವು ಆ ಮನುಷ್ಯನ ಒಳ ಹೊಕ್ಕು ನೆಲಸುತ್ತವೆ. ಕೊನೆಗೆ ಅವನ ಪರಿಸ್ಥಿತಿ ಪೂರ್ವಸ್ಥಿತಿಗಿಂತಲೂ ಅಧೋಗತಿಗೆ ಇಳಿಯುತ್ತದೆ,” ಎಂದರು.
ಮಾತೆಗಿಂತಲೂ ಮಿಗಿಲಾದವರು!
27ಯೇಸುಸ್ವಾಮಿ ಹೀಗೆ ಮಾತನಾಡುತ್ತಿದ್ದಾಗ ಜನಸಮೂಹದಿಂದ ಮಹಿಳೆಯೊಬ್ಬಳು, “ನಿಮ್ಮನ್ನು ಉದರದಲ್ಲಿ ಹೊತ್ತು, ನಿಮಗೆ ಮೊಲೆಯೂಡಿಸಿದ ತಾಯಿ ಭಾಗ್ಯವಂತಳು!” ಎಂದು ಕೂಗಿ ಹೇಳಿದಳು. 28ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!” ಎಂದರು.
ಯೋನನ ಸಂಕೇತ
(ಮತ್ತಾ. 12:38-42)
29ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. 30ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು.
31“ದೈವತೀರ್ಪಿನ ದಿನ ದಕ್ಷಿಣದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. 32ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.
ನೇತ್ರಗಳೇ ದೇಹದ ದೀಪಗಳು
(ಮತ್ತಾ. 5:15; 6:22-23)
33“ಯಾರೂ ದೀಪವನ್ನು ಹಚ್ಚಿ ನೆಲಮಾಳಿಗೆಯಲ್ಲಾಗಲಿ, ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ.
34“ನಿನ್ನ ಕಣ್ಣೇ ದೇಹಕ್ಕೆ ದೀಪ; ನಿನ್ನ ಕಣ್ಣು ಸರಿಯಿದ್ದರೆ ನಿನ್ನ ದೇಹವೆಲ್ಲ ಕಾಂತಿಮಯವಾಗುವುದು. ಅದು ಕೆಟ್ಟಿದ್ದರೆ, ದೇಹವೆಲ್ಲಾ ಕತ್ತಲೆಮಯವಾಗುವುದು. 35ಆದುದರಿಂದ ನಿನ್ನೊಳಗಿರುವ ಬೆಳಕಿಗೆ ಕತ್ತಲೆ ಕವಿಯದಂತೆ ಎಚ್ಚರಿಕೆ ವಹಿಸು. 36ದೇಹದ ಯಾವುದೊಂದು ಭಾಗದಲ್ಲೂ ಕತ್ತಲೆಯಿಲ್ಲದೆ ದೇಹವೆಲ್ಲ ಕಾಂತಿಮಯವಾಗಿದ್ದರೆ, ದೀಪವು ತನ್ನ ಪ್ರಕಾಶದಿಂದ ನಿನ್ನನ್ನು ಬೆಳಗಿಸುವಂತೆ, ನಿನ್ನ ದೇಹದಾದ್ಯಂತವೂ ದೇದೀಪ್ಯಮಾನವಾಗಿರುವುದು,” ಎಂದರು.
ಒಳಗೆ ಕೊಳಕು ಹೊರಗೆ ಥಳಕು
(ಮತ್ತಾ. 23:1-36; ಮಾರ್ಕ. 12:38-40)
37ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. 38ಊಟಕ್ಕೆ ಮುಂಚೆ ಅವರು ಕೈ ತೊಳೆಯದೆಹೋದುದನ್ನು ಕಂಡು ಫರಿಸಾಯನು ಚಕಿತನಾದನು. 39ಆಗ ಯೇಸು, “ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. 40ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಲಿಲ್ಲವೇ? 41ನಿಮ್ಮ ತಟ್ಟೆ, ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವು ನಿಮಗೆ ಶುದ್ಧಿಯಾಗಿರುವುದು.
42“ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತ್ತು.
43“ಫರಿಸಾಯರೇ ನಿಮಗೆ ಧಿಕ್ಕಾರ! ಪ್ರಾರ್ಥನಾ ಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ. 44ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ,” ಎಂದರು.
45ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, “ಬೋಧಕರೇ, ನೀವು ಹೀಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು,” ಎಂದನು. 46ಅದಕ್ಕೆ ಯೇಸು, “ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರುಬೆರಳಿನಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ. 47ನಿಮಗೆ ಧಿಕ್ಕಾರ! ನಿಮ್ಮ ಪಿತೃಗಳು ಕೊಂದುಹಾಕಿದ ಪ್ರವಾದಿಗಳಿಗೆ ನೀವು ಅಂದದ ಗೋರಿಗಳನ್ನು ನಿರ್ಮಿಸುತ್ತೀರಿ. 48ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಅನುಮೋದಿಸುತ್ತೀರಿ ಎಂಬುದಕ್ಕೆ ಇದೇ ಸಾಕ್ಷಿ. ಏಕೆಂದರೆ, ಪ್ರವಾದಿಗಳನ್ನು ಕೊಂದವರು ಅವರಾದರೆ, ಗೋರಿ ನಿರ್ಮಿಸುತ್ತಿರುವವರು ನೀವು. 49ಈ ಕಾರಣದಿಂದಲೇ ‘ದೇವರ ಜ್ಞಾನವು’ ಹೇಳಿರುವುದೇನೆಂದರೆ - ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಪ್ರೇಷಿತರನ್ನೂ ಕಳುಹಿಸುವೆನು; ಅವರಲ್ಲಿ ಕೆಲವರನ್ನು ಕೊಲೆಮಾಡುವರು; ಕೆಲವರನ್ನು ಚಿತ್ರಹಿಂಸೆಪಡಿಸುವರು. 50-51ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಅಂದರೆ, ಹೇಬೆಲನ ರಕ್ತ ಮೊದಲ್ಗೊಂಡು, ಬಲಿಪೀಠಕ್ಕೂ ದೇವಾಲಯಕ್ಕೂ ನಡುವೆ ಹತನಾದ ಜಕರೀಯನ ರಕ್ತದವರೆಗೂ ಈ ಪೀಳಿಗೆಯವರು ಲೆಕ್ಕಕೊಡಬೇಕಾಗುವುದು.’ ಹೌದು, ಈ ಪೀಳಿಗೆಯವರೇ ಲೆಕ್ಕಕೊಡಬೇಕಾಗುವುದೆಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. 52ಧರ್ಮಶಾಸ್ತ್ರಜ್ಞರೇ, ನಿಮಗೆ ಧಿಕ್ಕಾರ! ಜ್ಞಾನವೆಂಬ ಮಂದಿರದ ಬೀಗದ ಕೈಯನ್ನು ನಿಮ್ಮಲ್ಲೇ ಇಟ್ಟುಕೊಂಡಿದ್ದೀರಿ. ನೀವು ಒಳಕ್ಕೆ ಪ್ರವೇಶಿಸುವುದಿಲ್ಲ; ಪ್ರವೇಶಿಸಲು ಯತ್ನಿಸುವವರನ್ನೂ ತಡೆಗಟ್ಟುತ್ತೀರಿ,” ಎಂದರು.
53ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಅವರನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದರು. ಹಲವಾರು ವಿಷಯಗಳನ್ನು ಕುರಿತು ಮಾತಾಡುವಂತೆ ಕೆಣಕಿ, 54ಅವರ ಮಾತಿನಲ್ಲಿ ಏನಾದರೂ ತಪ್ಪು ಕಂಡು ಹಿಡಿಯಲೇಬೇಕೆಂದು ಹೊಂಚುಹಾಕುತ್ತಿದ್ದರು.

Evidențiere

Partajează

Copiază

None

Dorești să ai evidențierile salvate pe toate dispozitivele? Înscrie-te sau conectează-te