ಲೂಕ. 18
18
ನಿರಂತರ ಪ್ರಾರ್ಥನೆಗೆ ಒಂದು ಉಪಮೆ
1ನಿರಾಶರಾಗದೆ ನಿರಂತರವಾಗಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ಕಲಿಸಲು, ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: 2“ಒಂದು ನಗರದಲ್ಲಿ ಒಬ್ಬ ನ್ಯಾಯಾಧೀಶನಿದ್ದ. ಅವನು ದೇವರಿಗೂ ಭಯಪಡುತ್ತಿರಲಿಲ್ಲ; ಮಾನವರಿಗೂ ಲಕ್ಷ್ಯಕೊಡುತ್ತಿರಲಿಲ್ಲ. 3ಅದೇ ಊರಿನಲ್ಲಿ ಒಬ್ಬ ವಿಧವೆಯಿದ್ದಳು. ಅವಳು ಪದೇಪದೇ ಅವನ ಬಳಿಗೆ ಬಂದು, ‘ನನ್ನ ವಿರೋಧಿ ಅನ್ಯಾಯಮಾಡಿದ್ದಾನೆ; ನನಗೆ ನ್ಯಾಯ ದೊರಕಿಸಿಕೊಡಿ,’ ಎಂದು ಕೇಳಿಕೊಳ್ಳುತ್ತಿದ್ದಳು. 4ಬಹುಕಾಲ ನ್ಯಾಯಾಧೀಶನು ಅವಳಿಗೆ ಕಿವಿಗೊಡಲೇ ಇಲ್ಲ. ಕೊನೆಗೆ ಅವನು, ‘ನಾನು ದೇವರಿಗೆ ಹೆದರುವವನಲ್ಲ; ಮಾನವರಿಗೆ ಲಕ್ಷ್ಯಕೊಡುವವನೂ ಅಲ್ಲ; 5ಇಷ್ಟಾದರೂ ಈ ವಿಧವೆಯ ಕಾಟವನ್ನು ತಪ್ಪಿಸಿಕೊಳ್ಳಲು, ಈಕೆಯ ನ್ಯಾಯ ತೀರಿಸಿಬಿಡುತ್ತೇನೆ. ಇಲ್ಲವಾದರೆ, ಈಕೆ ಪದೇಪದೇ ಬಂದು ನನ್ನ ತಲೆಕೆಡಿಸಿಬಿಟ್ಟಾಳು,’ ಎಂದುಕೊಂಡ.”
6ಅನಂತರ ಪ್ರಭು ಯೇಸು, “ಈ ನೀತಿಕೆಟ್ಟ ನ್ಯಾಯಾದೀಶ ಹೇಳಿಕೊಂಡ ಮಾತುಗಳನ್ನು ಕೇಳಿದಿರಲ್ಲವೆ? 7ಹೀಗಿರುವಲ್ಲಿ ದೇವರು, ತಾವಾಗಿ ಆಯ್ಕೆಮಾಡಿಕೊಂಡ ಜನರು ಹಗಲುರಾತ್ರಿ ತಮಗೆ ಮೊರೆಯಿಡುವಾಗ ನ್ಯಾಯ ತೀರಿಸದೆ ಹೋಗುವರೆ? ತಡಮಾಡಿಯಾರೆ? 8ಶೀಘ್ರವಾಗಿ ಅವರಿಗೆ ನ್ಯಾಯ ದೊರಕಿಸಿಕೊಡುವರೆಂದು ನಿಮಗೆ ಹೇಳುತ್ತೇನೆ. ಇಷ್ಟಾದರೂ ನರಪುತ್ರನು ಬರುವಾಗ ಜಗತ್ತಿನಲ್ಲಿ ವಿಶ್ವಾಸ ಇರುವುದನ್ನು ಕಾಣುವನೋ?’ ಎಂದರು.
ಫರಿಸಾಯನು ಮತ್ತು ಸುಂಕದವನು
9ಕೆಲವರು ತಾವೇ ಸತ್ಪುರುಷರು ಎಂದುಕೊಂಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅಂಥವರನ್ನು ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: 10“ಒಮ್ಮೆ, ಇಬ್ಬರು ಪ್ರಾರ್ಥನೆಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕವಸೂಲಿಯವನು. 11ಫರಿಸಾಯನು ಮುಂದೆ ನಿಂತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆಮಾಡಿದ: ‘ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು, ವ್ಯಭಿಚಾರಿಗಳು. ನಾನು ಈ ಸುಂಕದವನಂತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. 12ನಾನಾದರೋ ವಾರಕ್ಕೆ ಎರಡು ದಿನ ಉಪವಾಸವ್ರತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒಂದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ.’
13ಸುಂಕವಸೂಲಿಯವನಾದರೋ ದೂರದಲ್ಲೇ ನಿಂತು, ತಲೆಯನ್ನೂ ಮೇಲಕ್ಕೆ ಎತ್ತದೆ, ‘ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,’ ಎನ್ನುತ್ತಾ ಎದೆಬಡಿದುಕೊಂಡ.
14“ದೇವರ ದೃಷ್ಟಿಯಲ್ಲಿ ಪಾಪಮುಕ್ತನಾಗಿ ಮನೆಗೆ ತೆರಳಿದವನು ಈ ಸುಂಕವಸೂಲಿಯವನು, ಆ ಫರಿಸಾಯನಲ್ಲ, ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಏಕೆಂದರೆ, ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,” ಎಂದರು ಯೇಸು.
ಮಕ್ಕಳ ಮಿತ್ರ ಯೇಸು
(ಮತ್ತಾ. 19:13-15; ಮಾರ್ಕ. 10:13-16)
15ಕೆಲವರು ತಮ್ಮ ಹಸುಳೆಗಳನ್ನು ಯೇಸುಸ್ವಾಮಿ ಮುಟ್ಟಿ ಹರಸಬೇಕೆಂದು ಅಲ್ಲಿಗೆ ಕರೆತಂದರು. ಇದನ್ನು ಕಂಡ ಶಿಷ್ಯರು ಅವರನ್ನು ಗದರಿಸಿದರು. 16ಆಗ ಯೇಸು ಆ ಹಸುಳೆಗಳನ್ನು ತಮ್ಮ ಬಳಿಗೆ ಕರೆತರಿಸಿ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ; ಅವುಗಳನ್ನು ತಡೆಯಬೇಡಿ; ದೇವರ ಸಾಮ್ರಾಜ್ಯ ಇಂಥವರದೇ! 17ದೇವರ ಸಾಮ್ರಾಜ್ಯವನ್ನು ಶಿಶುಭಾವದಿಂದ ಅಂಗೀಕರಿಸದೆ ಇರುವವನು ಅದನ್ನು ಎಂದಿಗೂ ಸೇರಲಾರನು, ಇದು ನಿಶ್ಚಯ,” ಎಂದರು.
ಶ್ರೀಮಂತರಿಗೆ ಸವಾಲು
(ಮತ್ತಾ. 19:16-30; ಮಾರ್ಕ. 10:17-31)
18ಅಧಿಕಾರಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, “ಒಳ್ಳೆಯ ಗುರುವೇ, ಅಮರಜೀವ ನನಗೆ ಪ್ರಾಪ್ತಿಯಾಗಬೇಕಾದರೆ ನಾನೇನು ಮಾಡಬೇಕು?” ಎಂದು ಕೇಳಿದನು. 19“ನೀನು ನನ್ನನ್ನು ಒಳ್ಳೆಯವನೆಂದು ಕರೆದುದೇಕೆ? ದೇವರೊಬ್ಬರನ್ನು ಬಿಟ್ಟರೆ ಬೇರೆ ಯಾರೂ ಒಳ್ಳೆಯವರಲ್ಲ; 20ದೈವಾಜ್ಞೆಗಳು ನಿನಗೆ ತಿಳಿದೇ ಇವೆ; ‘ವ್ಯಭಿಚಾರ ಮಾಡಬೇಡ, ನರಹತ್ಯೆ ಮಾಡಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ನಿನ್ನ ತಂದೆತಾಯಿಗಳನ್ನು ಗೌರವಿಸು’,” ಎಂದು ಯೇಸು ಅವನಿಗೆ ಉತ್ತರವಿತ್ತರು. 21ಅದಕ್ಕೆ ಅವನು, “ನಾನು ಬಾಲ್ಯದಿಂದಲೇ ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ,” ಎಂದನು. 22ಇದನ್ನು ಕೇಳಿದ ಯೇಸು, “ನೀನು ಮಾಡಬೇಕಾದ ಕಾರ್ಯ ಇನ್ನೂ ಒಂದು ಉಳಿದಿದೆ; ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. 23ಈ ಮಾತುಗಳನ್ನು ಕೇಳಿದ್ದೇ ಅವನಿಗೆ ತುಂಬ ವ್ಯಥೆಯಾಯಿತು. ಏಕೆಂದರೆ, ಅವನು ಬಹಳ ಸಿರಿವಂತನಾಗಿದ್ದನು.
24ಅವನು ವ್ಯಥೆಗೀಡಾದುದನ್ನು ಕಂಡ ಯೇಸು, “ಸಿರಿವಂತರಿಗೆ ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟೊಂದು ಕಷ್ಟ! 25ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತ ಒಂಟೆ ಸೂಜಿಗಣ್ಣಿನಲ್ಲಿ ನುಸುಳುವುದು ಸುಲಭ!” ಎಂದರು. 26ಇದನ್ನು ಕೇಳಿದವರು, “ಹಾಗಾದರೆ ಯಾರು ತಾನೇ ಜೀವೋದ್ಧಾರ ಹೊಂದಲು ಸಾಧ್ಯ?” ಎನ್ನಲು 27ಯೇಸು, “ಮಾನವರಿಗೆ ಅಸಾಧ್ಯವಾದುದು ದೇವರಿಗೆ ಸಾಧ್ಯ,” ಎಂದು ಹೇಳಿದರು.
28ಆಗ ಪೇತ್ರನು, “ನೋಡಿ, ನಾವು ನಮ್ಮ ಮನೆಮಾರುಗಳನ್ನು ಬಿಟ್ಟುಬಿಟ್ಟು ನಿಮ್ಮನ್ನು ಹಿಂಬಾಲಿಸಿದ್ದೇವಲ್ಲಾ,” ಎಂದನು. 29ಅದಕ್ಕೆ ಯೇಸು, “ನಿಮಗೆ ಖಂಡಿತವಾಗಿ ಹೇಳುತ್ತೇನೆ: ಯಾವನು ದೇವರ ಸಾಮ್ರಾಜ್ಯದ ನಿಮಿತ್ತ ಮನೆಯನ್ನಾಗಲಿ, ಮಡದಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಯರನ್ನಾಗಲಿ, ಮಕ್ಕಳು ಮರಿಯನ್ನಾಗಲಿ ತ್ಯಜಿಸುತ್ತಾನೋ 30ಅವನು ಈ ಕಾಲದಲ್ಲಿ ಅದಕ್ಕಿಂತಲೂ ಮಿಗಿಲಾದುದನ್ನೂ ಮುಂದಿನ ಲೋಕದಲ್ಲಿ ಅಮರಜೀವವನ್ನೂ ಪಡೆಯುವನು,” ಎಂದರು.
ಮರಣ - ಪುನರುತ್ಥಾನದ ಮೂರನೆಯ ಪ್ರಕಟಣೆ
(ಮತ್ತಾ. 20:17-19; ಮಾರ್ಕ. 10:32-34)
31ಯೇಸುಸ್ವಾಮಿ ಹನ್ನೆರಡುಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ನರಪುತ್ರನ ವಿಷಯವಾಗಿ ಪ್ರವಾದಿಗಳು ಬರೆದಿರುವುದೆಲ್ಲವೂ ನೆರವೇರುವುದು. 32ಆತನನ್ನು ಪರಕೀಯರ ಕೈಗೊಪ್ಪಿಸಲಾಗುವುದು; ಅವರು, ಅವನನ್ನು ಪರಿಹಾಸ್ಯ ಮಾಡುವರು, ಅಪಮಾನಪಡಿಸುವರು, ಉಗಿಯುವರು. 33ಕೊರಡೆಗಳಿಂದ ಹೊಡೆಯುವರು ಮತ್ತು ಕೊಂದುಹಾಕುವರು. ಆತನಾದರೋ ಮೂರನೆಯ ದಿನ ಪುನರುತ್ಥಾನ ಹೊಂದುವನು,” ಎಂದರು.
34ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಿಕೊಳ್ಳಲಿಲ್ಲ. ಈ ಹೇಳಿಕೆ ಅವರಿಗೆ ಒಗಟಾಗಿತ್ತು. ಎಂದೇ ಯೇಸುವಿನ ಮಾತುಗಳು ಅವರಿಗೆ ಅರ್ಥವಾಗಲಿಲ್ಲ.
ಅಂಧ ಭಿಕ್ಷುಕನಿಗೆ ದೃಷ್ಟಿದಾನ
(ಮತ್ತಾ. 20:29-34; ಮಾರ್ಕ. 10:46-52)
35ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. 36ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. 37“ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ,” ಎಂದು ಅವನಿಗೆ ತಿಳಿಸಲಾಯಿತು. 38ಕೂಡಲೇ ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. 39ಮುಂದೆ ಹೋಗುತ್ತಿದ್ದವರು, “ಸುಮ್ಮನಿರು” ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. 40ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆ ಮಾಡಿದರು. 41ಅವನು ಹತ್ತಿರಕ್ಕೆ ಬಂದಾಗ, “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಲು ಅವನು, “ಸ್ವಾಮೀ, ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. 42ಯೇಸು ಅವನಿಗೆ, “ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು. 43ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.
Selectat acum:
ಲೂಕ. 18: KANCLBSI
Evidențiere
Partajează
Copiază
Dorești să ai evidențierile salvate pe toate dispozitivele? Înscrie-te sau conectează-te
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.