YouVersion
Pictograma căutare

ಮಾರ್ಕ 13

13
ದೇವಾಲಯದ ವಿನಾಶದ ಮುನ್ಸೂಚನೆ
(ಮತ್ತಾ. 24:1-2; ಲೂಕ. 21:5-6)
1ಯೇಸುಸ್ವಾಮಿ ದೇವಾಲಯದಿಂದ ಹೊರಗೆ ಬರುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು, “ಗುರುವೇ, ಅತ್ತ ನೋಡಿ; ಎಂಥ ಬಾರಿ ಕಲ್ಲುಗಳು! ಎಷ್ಟು ರಮ್ಯವಾದ ಕಟ್ಟಡಗಳು!” ಎಂದು ವರ್ಣಿಸತೊಡಗಿದನು. 2ಅದಕ್ಕೆ ಯೇಸು, “ಈ ಮಹಾಕಟ್ಟಡಗಳನ್ನು ನೀನು ನೋಡುತ್ತಿರುವೆಯಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವನ್ನೂ ಕೆಡವಿಹಾಕುವರು,” ಎಂದರು.
ಸೈರಣೆಯಿಂದ ರಕ್ಷಣೆ
(ಮತ್ತಾ. 24:3-14; ಲೂಕ. 21:7-19)
3ಯೇಸುಸ್ವಾಮಿ ದೇವಾಲಯಕ್ಕೆ ಎದುರಾಗಿ ಓಲಿವ್ ಗುಡ್ಡದ ಮೇಲೆ ಕುಳಿತಿದ್ದಾಗ ಪೇತ್ರ, ಯಕೋಬ, ಯೊವಾನ್ನ ಹಾಗೂ ಅಂದ್ರೆಯ ಪ್ರತ್ಯೇಕವಾಗಿ ಅವರ ಬಳಿಗೆ ಬಂದು, 4“ಇವೆಲ್ಲವೂ ಸಂಭವಿಸುವುದು ಯಾವಾಗ? ಇವೆಲ್ಲವೂ ಸಂಭವಿಸುವ ಸಮಯ ಬಂತೆಂಬುದನ್ನು ನಾವು ತಿಳಿಯಲು ಪೂರ್ವಸೂಚನೆ ಏನು? ನಮಗೆ ತಿಳಿಸಿ,” ಎಂದು ಕೇಳಿಕೊಂಡರು. 5ಅದಕ್ಕೆ ಯೇಸು ಹೀಗೆಂದರು: “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ. 6ಅನೇಕರು ನನ್ನ ಹೆಸರನ್ನು ಇಟ್ಟುಕೊಂಡು ಬಂದು, ‘ನಾನೇ ಕ್ರಿಸ್ತ’, ‘ನಾನೇ ಕ್ರಿಸ್ತ’ ಎನ್ನುತ್ತಾ ಎಷ್ಟೋ ಜನರನ್ನು ತಪ್ಪುದಾರಿಗೆ ಎಳೆಯುವರು. 7ಇದಲ್ಲದೆ, ರಣಕಹಳೆಗಳನ್ನೂ ಸಮರಸುದ್ದಿಗಳನ್ನೂ ಕೇಳುವಿರಿ. ಆಗ ನೀವು ಕಳವಳಪಡಬೇಡಿ. ಇವೆಲ್ಲವೂ ಸಂಭವಿಸಲೇಬೇಕು. ಆದರೂ ಇದಿನ್ನೂ ಅಂತ್ಯಕಾಲವಲ್ಲ; 8ಜನಾಂಗಕ್ಕೆ ವಿರುದ್ಧ ಜನಾಂಗ, ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರ ಯುದ್ಧಕ್ಕೆ ಇಳಿಯುವುವು. ಅಲ್ಲಲ್ಲಿ ಭೂಕಂಪಗಳು ಆಗುವುವು. ಕ್ಷಾಮ-ಡಾಮರಗಳು ತಲೆದೋರುವುವು. ಇವೆಲ್ಲವೂ ಪ್ರಸವವೇದನೆಯ ಪ್ರಾರಂಭ ಮಾತ್ರ.
9“ನಿಮ್ಮ ವಿಷಯದಲ್ಲೂ ಎಚ್ಚರಿಕೆಯಿಂದಿರಿ. ನಿಮ್ಮನ್ನು ನ್ಯಾಯಸ್ಥಾನಗಳಿಗೆ ಎಳೆಯುವರು; ಪ್ರಾರ್ಥನಾಮಂದಿರಗಳಲ್ಲಿ ಹೊಡೆಯುವರು. ನನ್ನ ನಿಮಿತ್ತ ನೀವು ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಬೇಕಾಗುವುದು. ಅವರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ. 10ಈ ಮೊದಲು ಎಲ್ಲಾ ಜನಾಂಗಗಳಿಗೆ ಶುಭಸಂದೇಶವನ್ನು ಪ್ರಕಟಿಸಬೇಕಾಗಿದೆ. 11ನಿಮ್ಮನ್ನು ಬಂಧಿಸಿ ನ್ಯಾಯವಿಚಾರಣೆಗೆ ಗುರಿಪಡಿಸಿದಾಗ ಏನು ಹೇಳುವುದು ಎಂದು ಮುಂಚಿತವಾಗಿಯೇ ಚಿಂತಾಕ್ರಾಂತರಾಗದಿರಿ. ಆ ಗಳಿಗೆಯಲ್ಲಿ ನಿಮಗೆ ಅನುಗ್ರಹಿಸಲಾಗುವ ಮಾತುಗಳನ್ನೇ ನುಡಿಯಿರಿ. ಏಕೆಂದರೆ, ಮಾತನಾಡುವವರು ನೀವಲ್ಲ, ಪವಿತ್ರಾತ್ಮ. 12ಸಹೋದರ ಸಹೋದರನನ್ನೇ, ತಂದೆ ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು, ಅವರನ್ನು ಕೊಲ್ಲಿಸುವರು. 13ನೀವು ನನ್ನವರು. ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು.
ಅಪೂರ್ವ ಸಂಕಷ್ಟಗಳು
(ಮತ್ತಾ. 24:15-28; ಲೂಕ. 21:20-24)
14“ವಿನಾಶಕಾರಿಯಾದ ವಿಕಟಮೂರ್ತಿಯು ಇರಬಾರದ ಸ್ಥಾನದಲ್ಲಿ ಇರುವುದನ್ನು ನೀವು ನೋಡುವಾಗ (ಇದನ್ನು ಓದುವವನು ಅರ್ಥಮಾಡಿಕೊಳ್ಳಲಿ) ಜುದೇಯದಲ್ಲಿರುವ ಜನರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ; 15ಮಾಳಿಗೆಯ ಮೇಲಿರುವವನು ಕೆಳಕ್ಕೆ ಇಳಿಯಲಿ; ಮನೆಯೊಳಗಿಂದ ಏನನ್ನೂ ತೆಗೆದುಕೊಳ್ಳಲು ಯತ್ನಿಸದೆ ಓಡಿಹೋಗಲಿ; 16ಹೊಲಗದ್ದೆಯಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೂ ಹಿಂದಿರುಗದಿರಲಿ. 17ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! 18ಈ ಸಂಕಷ್ಟಗಳೆಲ್ಲಾ ಚಳಿಗಾಲದಲ್ಲಿ ಸಂಭವಿಸದಂತೆ ಪ್ರಾರ್ಥಿಸಿರಿ. 19ಆಗ ಬರಲಿರುವ ಸಂಕಷ್ಟಗಳು ದೈವಸೃಷ್ಟಿಯ ಆದಿಯಿಂದ ಇರಲಿಲ್ಲ. ಇನ್ನು ಮುಂದಕ್ಕೂ ಇರುವುದಿಲ್ಲ. 20ಸರ್ವೇಶ್ವರ ಆ ದಿನಗಳ ಅವಧಿಯನ್ನು ಕಡಿಮೆಮಾಡದಿದ್ದರೆ ಯಾವ ಮಾನವನೂ ಉಳಿಯುವಂತಿಲ್ಲ. ಆದರೆ ತಾವು ಆರಿಸಿಕೊಂಡವರ ಪ್ರಯುಕ್ತ ಆ ದಿನಗಳ ಅವಧಿಯನ್ನು ಅವರು ಕಡಿಮೆಮಾಡಿದ್ದಾರೆ. 21ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತ ಇಲ್ಲಿ ಇದ್ದಾನೆ, ಅಗೋ ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿ. 22ಕಪಟ ಉದ್ಧಾರಕರೂ ವಂಚಕಪ್ರವಾದಿಗಳೂ ತಲೆಯೆತ್ತಿಕೊಳ್ಳುವರು. ಅವರು ಪವಾಡಗಳನ್ನು ಮಾಡಿತೋರಿಸಿ, ದೇವರು ಆರಿಸಿಕೊಂಡವರನ್ನೂ ಮೋಸಗೊಳಿಸುವರು. 23ನೀವು ಆದರೋ ಜಾಗರೂಕರಾಗಿರಿ. ನಾನು ನಿಮಗೆ ಎಲ್ಲವನ್ನೂ ಮುಂಚಿತವಾಗಿ ತಿಳಿಸಿದ್ದೇನೆ.
ನರಪುತ್ರನ ಪುನರಾಗಮನ
(ಮತ್ತಾ. 24:29-31; ಲೂಕ. 21:25-28)
24“ಆ ದಿನಗಳಲ್ಲಿ ಈ ಸಂಕಷ್ಟಗಳು ಮುಗಿದ ಬಳಿಕ ಸೂರ್ಯನು ಅಂಧಕಾರಮಯನಾಗುವನು; 25ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು. 26ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. 27ಆತನು ದೇವದೂತರನ್ನು ಜಗತ್ತಿನ ನಾಲ್ಕು ದಿಕ್ಕುಗಳಿಗೂ ಕಳುಹಿಸಿ, ತಾನು ಆರಿಸಿಕೊಂಡವರನ್ನು ವಿಶ್ವದ ಅಷ್ಟದಿಕ್ಕುಗಳಿಂದಲೂ ಒಟ್ಟುಗೂಡಿಸುವನು.
ಅಂಜೂರ ಮರದಿಂದ ಪಾಠ
(ಮತ್ತಾ. 24:32-35; ಲೂಕ. 21:29-33)
28“ಅಂಜೂರದ ಮರದಿಂದ ಒಂದು ಪಾಠವನ್ನು ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸಮೀಪಿಸಿತು ಎಂದು ಅರಿತುಕೊಳ್ಳುತ್ತೀರಿ. 29ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ನರಪುತ್ರನು ಸಮೀಪಿಸಿದ್ದಾನೆ, ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ. 30ಇವೆಲ್ಲವು ಸಂಭವಿಸುವುದಕ್ಕೆ ಮುಂಚೆ ಈ ಪೀಳಿಗೆ ಗತಿಸಿಹೋಗದೆಂದು ಒತ್ತಿಹೇಳುತ್ತೇನೆ. 31ಭೂಮ್ಯಾಕಾಶಗಳು ಗತಿಸಿಹೋಗುವುವು, ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುವುವು.
ಅನಿರೀಕ್ಷಿತ ಆಗಮನಕ್ಕೆ ಅಣಿಯಾಗಿರಿ
(ಮತ್ತಾ. 24:36-44)
32“ಆ ದಿನವಾಗಲಿ, ಆ ಗಳಿಗೆಯಾಗಲಿ, ಯಾವಾಗ ಬರುವುದೆಂದು ಪಿತನ ಹೊರತು ಮತ್ತಾರೂ ಅರಿಯರು. ಸ್ವರ್ಗದಲ್ಲಿರುವ ದೂತರೇ ಆಗಲಿ, ಪುತ್ರನೇ ಆಗಲಿ, ಅದನ್ನು ಅರಿಯರು. 33ಆ ಕಾಲ ಯಾವಾಗ ಬರುವುದು ಎಂದು ನಿಮಗೆ ತಿಳಿಯದ್ದರಿಂದ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ. 34ಪ್ರವಾಸಕ್ಕೆಂದು ಯಜಮಾನನೊಬ್ಬನು ಮನೆಬಿಟ್ಟು ಹೋಗುವಾಗ ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜವಾಬ್ದಾರಿಕೆಯನ್ನು ವಹಿಸಿ, ದ್ವಾರಪಾಲಕನಿಗೆ ‘ನೀನು ಎಚ್ಚರವಾಗಿರಬೇಕು,’ ಎಂದು ಅಪ್ಪಣೆಕೊಡುವ ರೀತಿಯಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ. ಎಚ್ಚರವಾಗಿರಿ; 35ಯಜಮಾನನು ಸಂಜೆಯಲ್ಲೋ ಮಧ್ಯರಾತ್ರಿಯಲ್ಲೋ ಕೋಳಿ ಕೂಗುವಾಗಲೋ ಬೆಳಕು ಹರಿಯುವಾಗಲೋ, ಯಾವಾಗ ಬರುವನೆಂಬುದು ನಿಮಗೆ ತಿಳಿಯದು. 36ಅನಿರೀಕ್ಷಿತವಾಗಿ ಅವನು ಬಂದಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು! 37ನಿಮಗೆ ಹೇಳುವುದನ್ನೇ ಸರ್ವರಿಗೂ ಹೇಳುತ್ತೇನೆ; ಎಚ್ಚರಿಕೆಯಿಂದಿರಿ!” ಎಂದರು.

Evidențiere

Partajează

Copiază

None

Dorești să ai evidențierile salvate pe toate dispozitivele? Înscrie-te sau conectează-te