YouVersion
Pictograma căutare

ಮಾರ್ಕ 14

14
ಯೇಸುವನ್ನು ಕೊಲ್ಲಲು ಒಳಸಂಚು
(ಮತ್ತಾ. 26:1-5; ಲೂಕ. 22:1-2; ಯೊವಾ. 11:45-53)
1ಪಾಸ್ಕಹಬ್ಬವು, ಅಂದರೆ ಹುಳಿರಹಿತ ರೊಟ್ಟಿಯ ಹಬ್ಬವು ಬರುವುದಕ್ಕೆ ಇನ್ನು ಎರಡು ದಿನಗಳು ಮಾತ್ರ ಇದ್ದವು. ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯನ್ನು ಉಪಾಯದಿಂದ ಹಿಡಿದು ಕೊಲ್ಲಿಸುವುದಕ್ಕೆ ಹವಣಿಸುತ್ತಿದ್ದರು. 2‘ಹಬ್ಬದ ಸಂದರ್ಭದಲ್ಲಿ ನಾವು ಈ ಕಾರ್ಯವನ್ನು ಮಾಡಬಾರದು; ಮಾಡಿದರೆ, ಜನರು ದಂಗೆ ಎದ್ದಾರು,’ ಎಂದು ಮಾತನಾಡಿಕೊಂಡರು.
ಸುಗಂಧ ತೈಲಾಭಿಷೇಕ
(ಮತ್ತಾ. 26:6-13; ಯೊವಾ. 12:1-8)
3ಯೇಸುಸ್ವಾಮಿ ಬೆಥಾನಿಯದಲ್ಲಿ, ಕುಷ್ಠರೋಗಿ ಸಿಮೋನನ ಮನೆಯಲ್ಲಿ ಇದ್ದರು. ಅಲ್ಲಿ ಊಟಕ್ಕೆ ಕುಳಿತಿದ್ದಾಗ, ಮಹಿಳೆಯೊಬ್ಬಳು ಅಮೃತಶಿಲೆಯ ಭರಣಿಯ ತುಂಬ ಅತ್ಯಮೂಲ್ಯವಾದ ಜಟಮಾಂಸಿ ಸುಗಂಧತೈಲವನ್ನು ತೆಗೆದುಕೊಂಡು ಬಂದು, ಭರಣಿಯನ್ನು ಒಡೆದು, ತೈಲವನ್ನು ಯೇಸುವಿನ ತಲೆಯ ಮೇಲೆ ಸುರಿದಳು. 4ಅಲ್ಲಿದ್ದ ಕೆಲವರು ಇದನ್ನು ಕಂಡು ಸಿಟ್ಟಿನಿಂದ, “ಈ ತೈಲವನ್ನು ಹೀಗೆ ವ್ಯರ್ಥಮಾಡಿದ್ದೇಕೆ? 5ಇದನ್ನು ಮುನ್ನೂರು ಬೆಳ್ಳಿ ನಾಣ್ಯಗಳಿಗಿಂತ ಹೆಚ್ಚು ಬೆಲೆಗೆ ಮಾರಿ, ಆ ಹಣವನ್ನು ಬಡವರಿಗೆ ಕೊಡಬಹುದಾಗಿತ್ತಲ್ಲವೆ?” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು, ಆಕೆಯನ್ನು ನಿಂದಿಸಿದರು. 6ಅದಕ್ಕೆ ಯೇಸು, “ಈಕೆಯನ್ನು ಸುಮ್ಮನೆ ಬಿಡಿ, ಕಿರುಕುಳ ಕೊಡಬೇಡಿ; ಈಕೆ ನನಗೊಂದು ಸತ್ಕಾರ್ಯವನ್ನೇ ಮಾಡಿದ್ದಾಳೆ; 7ಬಡಬಗ್ಗರು ನಿಮ್ಮ ಸಂಗಡ ಯಾವಾಗಲೂ ಇರುತ್ತಾರೆ. ಅವರಿಗೆ ಯಾವಾಗ ಬೇಕಾದರೂ ನೀವು ಸಹಾಯ ಮಾಡಬಹುದು. ಆದರೆ ನಾನು ನಿಮ್ಮ ಸಂಗಡ ಯಾವಾಗಲೂ ಇರುವುದಿಲ್ಲ. 8ತನ್ನಿಂದ ಏನು ಸಾಧ್ಯವೋ ಅದನ್ನು ಈಕೆ ಮಾಡಿದ್ದಾಳೆ; ನನ್ನ ದೇಹವನ್ನು ಮುಂಚಿತವಾಗಿಯೇ ಸುಗಂಧ ತೈಲದಿಂದ ಲೇಪಿಸಿ ಅದನ್ನು ಶವಸಂಸ್ಕಾರಕ್ಕಾಗಿ ಸಿದ್ಧಪಡಿಸಿದ್ದಾಳೆ. 9ಜಗತ್ತಿನಾದ್ಯಂತ ಎಲ್ಲೆಲ್ಲಿ ಶುಭಸಂದೇಶವನ್ನು ಪ್ರಕಟಿಸಲಾಗುವುದೋ ಅಲ್ಲೆಲ್ಲಾ ಈ ಸತ್ಕಾರ್ಯವನ್ನು ಈಕೆಯ ಸವಿನೆನಪಿಗಾಗಿ ಸಾರಲಾಗುವುದು, ಇದು ನಿಶ್ಚಯ,” ಎಂದರು.
ಸ್ವಾಮಿದ್ರೋಹಕ್ಕೆ ಸಜ್ಜು
(ಮತ್ತಾ. 26:14-16; ಲೂಕ. 22:3-6)
10ಇದಾದಮೇಲೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದನು ಯೇಸುಸ್ವಾಮಿಯನ್ನು ಹಿಡಿದುಕೊಡುವ ದುರುದ್ದೇಶದಿಂದ ಮುಖ್ಯಯಾಜಕರ ಬಳಿಗೆ ಹೋದನು. 11ಇದರಿಂದ ಆ ಯಾಜಕರಿಗೆ ಅತ್ಯಾನಂದವಾಯಿತು. ಅವನಿಗೆ ಹಣಕೊಡುವುದಾಗಿ ಅವರು ಮಾತುಕೊಟ್ಟರು. ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯತೊಡಗಿದನು.
ಗುರು-ಶಿಷ್ಯರ ಹಬ್ಬದೂಟ
(ಮತ್ತಾ. 26:17-25; ಲೂಕ. 22:7-14,21-23; ಯೊವಾ. 13:21-30)
12ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಅಂದರೆ, ಪಾಸ್ಕಹಬ್ಬದ ಕುರಿಮರಿಯನ್ನು ಕೊಯ್ಯುವ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು. 13ಯೇಸು ಅವರಲ್ಲಿ ಇಬ್ಬರಿಗೆ, “ನೀವು ಪಟ್ಟಣಕ್ಕೆ ಹೋಗಿರಿ. ಅಲ್ಲಿ ನೀರಿನ ಕೊಡವನ್ನು ಹೊತ್ತವನೊಬ್ಬನು ನಿಮ್ಮನ್ನು ಎದುರುಗೊಳ್ಳುವನು. 14ಅವನ ಹಿಂದೆಯೇ ಹೋಗಿ, ಅವನು ಯಾವ ಮನೆಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ, “ನಮ್ಮ ಗುರು, ‘ನನ್ನ ಶಿಷ್ಯರ ಜೊತೆಯಲ್ಲಿ ಪಾಸ್ಕಭೋಜನ ಮಾಡಲು ನನಗೆ ಕೊಠಡಿ ಎಲ್ಲಿ?’ ಎಂದು ಕೇಳುತ್ತಾರೆ,” ಎಂದು ವಿಚಾರಿಸಿರಿ. 15ಅವನು ಮೇಲುಪ್ಪರಿಗೆಯಲ್ಲಿ ಸಿದ್ಧವಾಗಿರುವ ಹಾಗೂ ಸುಸಜ್ಜಿತವಾದ ದೊಡ್ಡ ಕೊಠಡಿಯನ್ನು ತೋರಿಸುವನು. ಅಲ್ಲಿ ನಮಗೆ ಊಟ ಸಿದ್ಧಮಾಡಿರಿ,” ಎಂದು ಹೇಳಿಕಳುಹಿಸಿದರು. 16ಅವರು ಪಟ್ಟಣಕ್ಕೆ ಹೋಗಿ, ಯೇಸು ತಮಗೆ ಹೇಳಿದ ಪ್ರಕಾರ ಎಲ್ಲಾ ವ್ಯವಸ್ಥಿತವಾಗಿರುವುದನ್ನು ಕಂಡು, ಪಾಸ್ಕಭೋಜನವನ್ನು ತಯಾರಿಸಿದರು.
17ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರೊಡನೆ ಅಲ್ಲಿಗೆ ಬಂದರು. 18ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸುಸ್ವಾಮಿ, “ನನ್ನ ಸಂಗಡ ಊಟಮಾಡುವ ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುವನು, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು. 19ಆಗ ಶಿಷ್ಯರು ಕಳವಳಗೊಂಡು, ‘ಅಂಥವನು ನಾನೋ? ನಾನೋ?’ ಎಂದು ಒಬ್ಬರಾದ ಮೇಲೇ ಒಬ್ಬರು ಕೇಳತೊಡಗಿದರು. 20ಅದಕ್ಕೆ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ರೊಟ್ಟಿಯನ್ನು ಅದ್ದುತ್ತಿರುವ ಇದೇ ಹನ್ನೆರಡುಮಂದಿಯಲ್ಲಿ ಒಬ್ಬನು ಅವನು. 21ನರಪುತ್ರನೇನೋ ಪವಿತ್ರಗ್ರಂಥದಲ್ಲಿ ಬರೆದಿರುವಂತೆ ಹೊರಟುಹೋಗುತ್ತಾನೆ, ನಿಜ. ಆದರೆ ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ? ಅವನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು!” ಎಂದರು.
ಪ್ರಭುವಿನ ಪವಿತ್ರ ಭೋಜನ
(ಮತ್ತಾ. 26:26-30; ಲೂಕ. 22:15-20; ೧ ಕೊರಿಂಥ. 11:23-25)
22ಅವರೆಲ್ಲರೂ ಊಟಮಾಡುತ್ತಿರುವಾಗ, ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತುತಿಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ಸ್ವೀಕರಿಸಿರಿ, ಇದು ನನ್ನ ಶರೀರ,” ಎಂದರು. 23ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟರು. ಅವರೆಲ್ಲರೂ ಅದರಿಂದ ಕುಡಿದರು. 24ಯೇಸು ಅವರಿಗೆ, “ಇದು ನನ್ನ ರಕ್ತ, ಸಮಸ್ತ ಜನರಿಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ#14:24 ಕೆಲವು ಪ್ರತಿಗಳಲ್ಲಿ : ‘ಹೊಸ ಒಡಂಬಡಿಕೆಯ ರಕ್ತ’ ಎಂದು ಬರೆದಿದೆ. 25ನಾನು ದೇವರ ಸಾಮ್ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. 26ಬಳಿಕ ಅವರೆಲ್ಲರೂ ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು.
ಪೇತ್ರನ ನಿರಾಕರಣೆಯ ಮುನ್ಸೂಚನೆ
(ಮತ್ತಾ. 26:31-35; ಲೂಕ. 22:31-34; ಯೊವಾ. 13:36-38)
27ಅನಂತರ ಯೇಸುಸ್ವಾಮಿ ಶಿಷ್ಯರಿಗೆ,
“ ‘ಕುರುಬನನ್ನು ಕೊಲ್ಲುವೆನು
ಕುರಿಗಳು ಚದರಿಹೋಗುವುವು’
ಎಂದು ಪವಿತ್ರಗ್ರಂಥದಲ್ಲಿ ಬರೆದಿರುವಂತೆ ನೀವು ಎಲ್ಲರೂ ನನ್ನಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟುವಿರಿ. 28ನಾನಾದರೋ, ಪುನರುತ್ಥಾನಹೊಂದಿ ನಿಮಗಿಂತ ಮುಂದಾಗಿ ಗಲಿಲೇಯಕ್ಕೆ ಹೋಗುವೆನು,” ಎಂದರು. 29ಇದನ್ನು ಕೇಳಿದ ಪೇತ್ರನು, “ಎಲ್ಲರೂ ತಮ್ಮಲ್ಲಿ ವಿಶ್ವಾಸ ಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಹಾಗೆ ಮಾಡೆನು,” ಎಂದನು. 30ಅದಕ್ಕೆ ಯೇಸು, “ಇದೇ ರಾತ್ರಿ ಕೋಳಿ ಎರಡು ಸಾರಿ ಕೂಗುವ ಮೊದಲೇ, ‘ಆತನನ್ನು ನಾನರಿಯೆ’ ಎಂದು ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ, ಇದು ಖಂಡಿತ,” ಎಂದರು. 31ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ಆವೇಶಪೂರಿತನಾಗಿ ನುಡಿದನು. ಹಾಗೆಯೇ ಉಳಿದವರೂ ಹೇಳಿದರು.
ಗೆತ್ಸೆಮನೆ ತೋಪಿನಲ್ಲಿ ಮನೋವೇದನೆ
(ಮತ್ತಾ. 26:36-46; ಲೂಕ. 22:39-46)
32ತರುವಾಯ ಅವರೆಲ್ಲರೂ ಗೆತ್ಸೆಮನೆ ಎಂಬ ತೋಪಿಗೆ ಬಂದರು. 33ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, “ನಾನು ಪ್ರಾರ್ಥನೆಮಾಡಿ ಬರುವವರೆಗೂ ನೀವು ಇಲ್ಲೇ ಕುಳಿತಿರಿ,” ಎಂದು ಹೇಳಿ ಪೇತ್ರ ಯಕೋಬ ಮತ್ತು ಯೊವಾನ್ನರನ್ನು ಮಾತ್ರ ತಮ್ಮ ಜೊತೆಯಲ್ಲಿ ಕರೆದುಕೊಂಡು ಮುಂದಕ್ಕೆ ಹೋದರು. 34ಅಲ್ಲಿ ಅತೀವ ದುಃಖದಿಂದ ಚಿಂತಾಕ್ರಾಂತರಾಗಿ, “ನನ್ನ ಮನೋವೇದನೆ ಪ್ರಾಣಹಿಂಡುವಷ್ಟು ತೀವ್ರವಾಗಿದೆ; ನೀವು ಇಲ್ಲೇ ಇದ್ದು ಎಚ್ಚರವಾಗಿರಿ,” ಎಂದರು. 35ಅನಂತರ ಅಲ್ಲಿಂದ ಇನ್ನೂ ಸ್ವಲ್ಪ ಮುಂದಕ್ಕೆ ಹೋಗಿ, ನೆಲಕ್ಕೆ ಕುಸಿದು, ಪ್ರಾರ್ಥಿಸುತ್ತಾ, “ಸಾಧ್ಯವಾದರೆ, ಈ ವಿಷಮ ಗಳಿಗೆಯು ನನ್ನಿಂದ ದೂರವಾಗಲಿ,” ಎಂದು ದೇವರನ್ನು ಬಿನ್ನವಿಸಿದರು. 36ಅನಂತರ, “ಅಪ್ಪಾ, ಪಿತನೇ, ನಿಮಗೆ ಎಲ್ಲವೂ ಸಾಧ್ಯ. ಈ ಕಷ್ಟದ ಕೊಡವನ್ನು ನನ್ನಿಂದ ತೆಗೆದುಬಿಡಿ. ಆದರೂ ನನ್ನ ಚಿತ್ತದಂತೆ ಅಲ್ಲ, ನಿಮ್ಮ ಚಿತ್ತವಿದ್ದಂತೆಯೇ ಆಗಲಿ,” ಎಂದರು. 37ಅನಂತರ ಹಿಂದಿರುಗಿ ಬಂದು, ಆ ಮೂವರು ಶಿಷ್ಯರು ನಿದ್ರಿಸುತ್ತಿದ್ದುದನ್ನು ಕಂಡು, ಪೇತ್ರನಿಗೆ, “ಸಿಮೋನನೇ, ನಿದ್ದೆಮಾಡುತ್ತಿರುವಿಯೋ! ಒಂದು ಗಂಟೆಯಾದರೂ ಎಚ್ಚರವಾಗಿರಲು ನಿನಗೆ ಸಾಧ್ಯವಾಗದೆ ಹೋಯಿತೋ! 38ಪ್ರಲೋಭನೆಗೆ ಒಳಗಾಗದಂತೆ ಎಚ್ಚರದಿಂದ ಇದ್ದು ಪ್ರಾರ್ಥನೆಮಾಡಿ, ಆತ್ಮಕ್ಕೇನೋ ಆಸಕ್ತಿ ಇದೆ; ಆದರೆ ದೇಹಕ್ಕೆ ಶಕ್ತಿ ಸಾಲದು,” ಎಂದರು. 39ಮರಳಿ ಹಿಂದಕ್ಕೆ ಹೋಗಿ, ಮೊದಲು ಪ್ರಾರ್ಥನೆ ಮಾಡಿದಂತೆಯೇ ಮಾಡಿದರು. 40ಪುನಃ ಶಿಷ್ಯರ ಬಳಿಗೆ ಬಂದಾಗ, ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು; ಅವರ ಕಣ್ಣುಗಳು ಬಹುಭಾರವಾಗಿದ್ದವು. ಯೇಸುವಿಗೆ ಏನು ಉತ್ತರಕೊಡಬೇಕೆಂದು ಅವರಿಗೆ ತಿಳಿಯದೆಹೋಯಿತು. 41ಯೇಸು ಮೂರನೆಯ ಸಾರಿ ಅವರ ಬಳಿಗೆ ಬಂದು, “ನೀವು ಇನ್ನೂ ನಿದ್ರಿಸಿ ವಿಶ್ರಮಿಸುತ್ತಿರುವಿರಾ? ಸಾಕು, ಸಮಯವು ಸಮೀಪಿಸಿತು; 42ನರಪುತ್ರನು ದುರ್ಜನರ ಕೈವಶ ಆಗಲಿದ್ದಾನೆ. ಎದ್ದೇಳಿ, ಹೋಗೋಣ. ಇಗೋ, ನೋಡಿ, ನನಗೆ ದ್ರೋಹ ಬಗೆಯುವವನು ಹತ್ತಿರವೇ ಇದ್ದಾನೆ,” ಎಂದರು.
ಯೂದನ ಗುರುದ್ರೋಹ
(ಮತ್ತಾ. 26:47-56; ಲೂಕ. 22:47-53; ಯೊವಾ. 18:3-12)
43ಯೇಸುಸ್ವಾಮಿ ಇನ್ನೂ ಮಾತನಾಡುತ್ತ ಇರುವಾಗಲೇ, ಹನ್ನೆರಡುಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದಿದ್ದ ಒಂದು ಗುಂಪು ಅವನೊಂದಿಗಿತ್ತು. ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಮುಖರೂ ಅವರನ್ನು ಕಳುಹಿಸಿದ್ದರು. 44ಗುರುದ್ರೋಹಿಯಾದ ಯೂದನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ, ಆತನೇ ಆ ವ್ಯಕ್ತಿ, ಆತನನ್ನು ಬಂಧಿಸಿ, ಭದ್ರವಾಗಿ ಕರೆದೊಯ್ಯಿರಿ,” ಎಂದು ಮೊದಲೇ ಸೂಚನೆಕೊಟ್ಟಿದ್ದನು. 45ಅದರಂತೆಯೇ ಅವನು ಅಲ್ಲಿಗೆ ಬಂದಕೂಡಲೆ ಯೇಸುವಿನ ಹತ್ತಿರಕ್ಕೆ ನೇರವಾಗಿ ಹೋಗಿ, ‘ಗುರುದೇವಾ’, ಎಂದು ಹೇಳುತ್ತಾ ಅವರಿಗೆ ಮುದ್ದಿಟ್ಟನು. 46ತಕ್ಷಣ ಆ ಜನರು ಯೇಸುವನ್ನು ಹಿಡಿದು ಬಂಧಿಸಿದರು. 47ಆಗ ಸಮೀಪದಲ್ಲಿದ್ದವರಲ್ಲಿ ಒಬ್ಬನು, ತನ್ನ ಖಡ್ಗವನ್ನು ಹಿರಿದು, ಪ್ರಧಾನಯಾಜಕನ ಆಳನ್ನು ಹೊಡೆದು, ಅವನ ಕಿವಿಯನ್ನು ಕತ್ತರಿಸಿಬಿಟ್ಟನು. 48ಯೇಸುಸ್ವಾಮಿ ಆ ಗುಂಪಿಗೆ, “ದರೋಡೆಗಾರರನ್ನು ಹಿಡಿಯುವುದಕ್ಕೋ ಎಂಬಂತೆ ನನ್ನನ್ನು ಬಂಧಿಸಲು ಖಡ್ಗಗಳನ್ನೂ ಲಾಠಿಗಳನ್ನೂ ಹಿಡಿದುಕೊಂಡು ಬರಬೇಕಾಗಿತ್ತೇ? ನಾನು ಪ್ರತೀದಿನ ಮಹಾದೇವಾಲಯದಲ್ಲಿ ನಿಮ್ಮ ನಡುವೆಯೇ ಬೋಧನೆಮಾಡುತ್ತಾ ಇದ್ದೆ; ಆಗ ನೀವು ನನ್ನನ್ನು ಬಂಧಿಸಲಿಲ್ಲ. 49ಆದರೆ ಪವಿತ್ರಗ್ರಂಥದಲ್ಲಿ ಬರೆದಿರುವುದು ನೆರವೇರುವಂತೆ ಇದೆಲ್ಲಾ ಸಂಭವಿಸಿದೆ,” ಎಂದರು. 50ಆಗ ಶಿಷ್ಯರೆಲ್ಲರೂ ಯೇಸುವನ್ನು ತೊರೆದು ಪಲಾಯನ ಮಾಡಿದರು.
51ಮೈಮೇಲೆ ಒಂದು ದುಪ್ಪಟಿಯನ್ನು ಮಾತ್ರ ಸುತ್ತಿಕೊಂಡಿದ್ದ ಯುವಕನೊಬ್ಬನು ಯೇಸುಸ್ವಾಮಿಯನ್ನು ಹಿಂಬಾಲಿಸುತ್ತಿದ್ದನು. 52ಅವನನ್ನು ಹಿಡಿಯಲು ಆ ಜನರು ಯತ್ನಿಸಿದಾಗ, ಅವನು ಆ ದುಪ್ಪಟಿಯನ್ನು ಅವರ ಕೈಯಲ್ಲೇ ಬಿಟ್ಟು, ಬೆತ್ತಲೆಯಾಗಿ ಓಡಿಹೋದನು.
ಯೆಹೂದ್ಯ ನ್ಯಾಯಸಭೆಯ ಮುಂದೆ ಯೇಸು
(ಮತ್ತಾ. 26:57-68; ಲೂಕ. 22:54-55,63-71; ಯೊವಾ. 18:13-14,19-34)
53ಅನಂತರ ಆ ಜನರು ಯೇಸುಸ್ವಾಮಿಯನ್ನು ಪ್ರಧಾನ ಯಾಜಕನ ಬಳಿಗೆ ಕರೆದೊಯ್ದರು. ಅಲ್ಲಿ ಎಲ್ಲಾ ಮುಖ್ಯಯಾಜಕರು, ಪ್ರಮುಖರು ಹಾಗು ಧರ್ಮಶಾಸ್ತ್ರಿಗಳು ಸಭೆ ಸೇರಿದ್ದರು. 54ಪೇತ್ರನಾದರೋ ದೂರದಿಂದ ಯೇಸುವನ್ನು ಹಿಂಬಾಲಿಸುತ್ತಿದ್ದನು. ಅವನು ಪ್ರಧಾನಯಾಜಕನ ಭವನದವರೆಗೂ ಬಂದು ಹೊರಾಂಗಣದಲ್ಲಿ, ಪಹರೆಯವರ ಜೊತೆಯಲ್ಲಿ ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದನು. 55ಇತ್ತ ಮುಖ್ಯಯಾಜಕರು ಮತ್ತು ಉಚ್ಛನ್ಯಾಯಸಭೆಯ ಸದಸ್ಯರೆಲ್ಲರೂ ಯೇಸುವನ್ನು ಮರಣದಂಡನೆಗೆ ಗುರಿಪಡಿಸುವ ಸಲುವಾಗಿ ಅವರ ವಿರುದ್ಧ ಸಾಕ್ಷಿ ಹುಡುಕುತ್ತಾ ಇದ್ದರು. ಆದರೆ ಅವರಿಗೆ ಸರಿಯಾದ ಒಂದು ಸಾಕ್ಷ್ಯವೂ ದೊರಕಲಿಲ್ಲ. 56ಅನೇಕರು ಮುಂದೆ ಬಂದು, ಅವರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದರಾದರೂ ಅವರ ಸಾಕ್ಷ್ಯ ಒಂದಕ್ಕೊಂದು ಸರಿಬೀಳಲಿಲ್ಲ. 57-58ಕೆಲವರು ಎದ್ದುನಿಂತು, “ ‘ಕೈಗಳಿಂದ ಕಟ್ಟಿರುವ ಈ ಮಹಾದೇವಾಲಯವನ್ನು ನಾನು ಕೆಡವಿ, ಕೈಗಳಿಂದ ಕಟ್ಟದ ಇನ್ನೊಂದನ್ನು ಮೂರು ದಿನಗಳಲ್ಲಿ ನಿರ್ಮಿಸುತ್ತೇನೆ,’ ಎಂದು ಇವನು ಹೇಳಿದ್ದನ್ನು ಕೇಳಿದ್ದೇವೆ,” ಎಂಬುದಾಗಿ ಸುಳ್ಳುಸಾಕ್ಷಿ ಹೇಳಿದರು. 59ಈ ಸಾಕ್ಷಿಗಳ ಮಾತುಗಳು ಒಂದಕ್ಕೊಂದು ಸರಿಬೀಳಲಿಲ್ಲ.
60ಆಗ ಪ್ರಧಾನಯಾಜಕನು ಸಭೆಯ ಮಧ್ಯೆ ಎದ್ದುನಿಂತು, ಯೇಸುವನ್ನು ನೋಡಿ, “ಈ ಜನರು ನಿನಗೆ ವಿರುದ್ಧವಾಗಿ ತಂದಿರುವ ಆರೋಪಣೆಗಳನ್ನು ಕೇಳುತ್ತಿರುವೆಯಾ? ಇವುಗಳಿಗೆ ನಿನ್ನ ಉತ್ತರವೇನು?” ಎಂದು ಪ್ರಶ್ನಿಸಿದನು. 61ಆದರೆ ಯೇಸು ಮೌನವಾಗಿದ್ದರು. ಯಾವ ಉತ್ತರವನ್ನೂ ಕೊಡಲಿಲ್ಲ. ಪ್ರಧಾನಯಾಜಕನು ಪುನಃ, “ಸ್ತುತ್ಯ ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕ ನೀನೋ?” ಎಂದು ಕೇಳಿದನು. 62ಅದಕ್ಕೆ ಯೇಸು, “ಹೌದು ನಾನೇ, ಸರ್ವಶಕ್ತ ದೇವರ ಬಲಗಡೆ ನರಪುತ್ರನು ಆಸೀನನಾಗಿ ಇರುವುದನ್ನೂ ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ಕಾಣುವಿರಿ,” ಎಂದರು. 63ಒಡನೆಯೇ, ಪ್ರಧಾನಯಾಜಕನು ಕೋಪದಿಂದ ತನ್ನ ಉಡುಪನ್ನೇ ಹರಿದುಕೊಂಡನು. “ಇನ್ನು ನಮಗೆ ಸಾಕ್ಷಿಗಳೇತಕ್ಕೆ? ಇವನಾಡಿದ ದೇವದೂಷಣೆಯನ್ನು ನೀವೇ ಕೇಳಿದ್ದೀರಿ! ನಿಮ್ಮ ಅಭಿಪ್ರಾಯ ಏನು?” ಎಂದು ಸಭೆಯನ್ನು ಕೇಳಿದನು. 64ಅವರೆಲ್ಲರೂ, “ಇವನಿಗೆ ಮರಣದಂಡನೆ ಆಗಬೇಕು,” ಎಂದು ತೀರ್ಮಾನವಿತ್ತರು. 65ಅನಂತರ, ಅವರಲ್ಲಿ ಕೆಲವರು ಯೇಸುವಿನ ಮೇಲೆ ಉಗುಳಿದರು. ಅವರ ಮುಖಕ್ಕೆ ಮುಸುಕುಹಾಕಿ, ಅವರನ್ನು ಗುದ್ದಿ, “ಗುದ್ದಿದವರು ಯಾರು? ಪ್ರವಾದಿಸು ನೋಡೋಣ,” ಎನ್ನುತ್ತಿದ್ದರು. ಇದಲ್ಲದೆ ಅಲ್ಲಿದ್ದ ಪಹರೆಯವರು ಅವರಿಗೆ ಏಟಿನ ಮೇಲೆ ಏಟು ಕೊಟ್ಟು ತಮ್ಮ ವಶಕ್ಕೆ ತೆಗೆದುಕೊಂಡರು.
‘ಅವನಾರೋ ನಾನರಿಯೆ’
(ಮತ್ತಾ. 26:69-75; ಲೂಕ. 22:56-62; ಯೊವಾ. 18:15-18,25-27)
66ಪೇತ್ರನು ಹೊರಾಂಗಣದಲ್ಲಿ ಇದ್ದನು. ಆಗ ಪ್ರಧಾನಯಾಜಕನ ಸೇವಕಿಯೊಬ್ಬಳು ಅಲ್ಲಿಗೆ ಬಂದಳು. 67ಚಳಿಕಾಯಿಸಿಕೊಳ್ಳುತ್ತಿದ್ದ ಪೇತ್ರನನ್ನು ಆಕೆ ದಿಟ್ಟಿಸಿ ನೋಡಿ, “ನೀನು ಸಹ ಆ ನಜರೇತಿನ ಯೇಸುವಿನ ಸಂಗಡ ಇದ್ದವನು,” ಎಂದಳು. 68ಪೇತ್ರನು ಆಕೆ ಹೇಳಿದ್ದನ್ನು ನಿರಾಕರಿಸಿದನು. “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ; ನನಗೇನೂ ತಿಳಿಯದು,” ಎಂದುಬಿಟ್ಟನು. ಅಲ್ಲಿಂದ ಎದ್ದು ದ್ವಾರಮಂಟಪಕ್ಕೆ ಹೋದನು (ಆಗ ಕೋಳಿ ಕೂಗಿತು). 69ಅಲ್ಲಿಯೂ ಆಕೆ ಅವನನ್ನು ಕಂಡು ಹತ್ತಿರವಿದ್ದವರಿಗೆ, “ಇವನು ಸಹ ಅವರಲ್ಲಿ ಒಬ್ಬನು,” ಎಂದು ತಿಳಿಸಿದಳು. ಪೇತ್ರನು ಪುನಃ ಆಕೆ ಹೇಳಿದ್ದನ್ನು ನಿರಾಕರಿಸಿದನು. 70ಸ್ವಲ್ಪ ಹೊತ್ತಾದ ಮೇಲೆ ಅಲ್ಲಿದ್ದವರು ಪೇತ್ರನಿಗೆ, “ಖಂಡಿತವಾಗಿ ನೀನು ಅವರಲ್ಲಿ ಒಬ್ಬನು. ಏಕೆಂದರೆ, ನೀನೂ ಗಲಿಲೇಯದವನೇ,” ಎಂದರು. 71ಆಗ ಪೇತ್ರನು, “ನೀವು ಹೇಳುವ ಆ ಮನುಷ್ಯ ಯಾರೆಂದು ನಾನರಿಯೆ,” ಎಂದು ಹೇಳಿ ಆಣೆಯಿಡುವುದಕ್ಕೂ ಶಪಿಸಿಕೊಳ್ಳುವುದಕ್ಕೂ ತೊಡಗಿದನು. ಕೂಡಲೇ ಕೋಳಿ ಎರಡನೆಯ ಸಾರಿ ಕೂಗಿತು. 72“ಕೋಳಿ ಎರಡು ಸಾರಿ ಕೂಗುವ ಮೊದಲೇ ‘ಆತನನ್ನು ನಾನರಿಯೆ’ ಎಂದು ಮೂರು ಬಾರಿ ನನ್ನನ್ನು ನಿರಾಕರಿಸುವೆ” ಎಂದು ಯೇಸು ಹೇಳಿದ್ದ ಮಾತು ಪೇತ್ರನ ನೆನಪಿಗೆ ಬಂದಿತು. ದುಃಖದ ಕಟ್ಟೆಯೊಡೆದು ಆತನು ಬಿಕ್ಕಿಬಿಕ್ಕಿ ಅತ್ತನು.

Evidențiere

Partajează

Copiază

None

Dorești să ai evidențierile salvate pe toate dispozitivele? Înscrie-te sau conectează-te