ಮಾರ್ಕ 15
15
ರಾಜ್ಯಪಾಲ ಪಿಲಾತನ ಸಮ್ಮುಖದಲ್ಲಿ ಯೇಸು
(ಮತ್ತಾ. 27:1-2,11-14; ಲೂಕ. 23:1-5; ಯೊವಾ. 18:28-38)
1ಬೆಳಗಾದ ಕೂಡಲೆ, ಮುಖ್ಯಯಾಜಕರೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಹಾಗು ನ್ಯಾಯಸಭೆಯ ಇತರ ಸದಸ್ಯರೂ ಒಟ್ಟುಗೂಡಿ ಸಮಾಲೋಚನೆ ನಡೆಸಿದರು. ಯೇಸುಸ್ವಾಮಿಗೆ ಬೇಡಿಹಾಕಿ ಪಿಲಾತನ ಬಳಿಗೆ ಕರೆದೊಯ್ದು ಆತನ ವಶಕ್ಕೊಪ್ಪಿಸಿದರು. 2ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಪ್ರಶ್ನಿಸಿದನು. “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಯೇಸು ಮರುನುಡಿದರು. 3ಮುಖ್ಯಯಾಜಕರು ಯೇಸುವಿನ ಮೇಲೆ ಅನೇಕ ಆಪಾದನೆಗಳನ್ನು ಹೊರಿಸುತ್ತಿದ್ದರು. 4ಆದುದರಿಂದ ಪಿಲಾತನು ಪುನಃ ಯೇಸುವನ್ನು, “ಇವರು ಇಷ್ಟೊಂದು ಆಪಾದನೆಗಳನ್ನು ನಿನ್ನ ಮೇಲೆ ಹೊರಿಸುತ್ತಿರುವಾಗ ನೀನು ಯಾವ ಉತ್ತರವನ್ನೂ ಕೊಡುವುದಿಲ್ಲವೆ?” ಎಂದು ಕೇಳಿದನು. 5ಆದರೆ ಯೇಸು ಇನ್ನೊಂದು ಮಾತನ್ನೂ ಆಡದೆ ಮೌನವಾಗಿದ್ದರು. ಇದನ್ನು ಕಂಡು ಪಿಲಾತನು ಆಶ್ಚರ್ಯಪಟ್ಟನು.
ನಿರಪರಾಧಿಗೆ ಮರಣದಂಡನೆ
(ಮತ್ತಾ. 27:15-26; ಲೂಕ. 23:13-25; ಯೊವಾ. 18:39—19:16)
6ಪ್ರತಿ ಪಾಸ್ಕಹಬ್ಬದ ಸಂದರ್ಭದಲ್ಲಿ, ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಪದ್ಧತಿಯಾಗಿತ್ತು. 7ದಂಗೆಯೊಂದರಲ್ಲಿ ಕೊಲೆ ಮಾಡಿದ್ದ ಕೆಲವರು ಈ ಸಮಯದಲ್ಲಿ ಸೆರೆಮನೆಯಲ್ಲಿ ಇದ್ದರು. ಇವರೊಡನೆ ಬರಬ್ಬ ಎಂಬವನೂ ಸೆರೆಯಲ್ಲಿದ್ದನು. 8ಜನರ ಗುಂಪು ಪಿಲಾತನ ಬಳಿಗೆ ಹೋಗಿ, ಪದ್ಧತಿಯಂತೆ ಈ ವರ್ಷವೂ ಒಬ್ಬ ಕೈದಿಯನ್ನು ತಮಗೆ ಬಿಟ್ಟುಕೊಡಬೇಕೆಂದು ಕೇಳಿದಾಗ ಪಿಲಾತನು, 9“ಯೆಹೂದ್ಯರ ಅರಸನನ್ನು ನಾನು ನಿಮಗೆ ಬಿಟ್ಟುಕೊಡಬಹುದೋ?" ಎಂದು ಅವರನ್ನು ಕೇಳಿದನು. 10ಏಕೆಂದರೆ, ಮುಖ್ಯಯಾಜಕರು ಅಸೂಯೆಯಿಂದಲೇ ಯೇಸುವನ್ನು ತನಗೆ ಒಪ್ಪಿಸಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು. 11ಆದರೆ ಬರಬ್ಬನನ್ನೇ ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮುಖ್ಯಯಾಜಕರು ಜನರನ್ನು ಪ್ರಚೋದಿಸಿದರು. 12ಆಗ ಪಿಲಾತನು ಪುನಃ, “ಹಾಗಾದರೆ ಯೆಹೂದ್ಯರ ಅರಸನೆಂದು ನೀವು ಕರೆಯುವ ಈತನನ್ನು ನಾನೇನು ಮಾಡಲಿ?” ಎಂದು ಜನರನ್ನು ಕೇಳಿದನು. 13ಅದಕ್ಕೆ ಅವರು, “ಅವನನ್ನು ಶಿಲುಬೆಗೇರಿಸಿ,” ಎಂದು ಬೊಬ್ಬೆಹಾಕಿದರು. 14“ಏಕೆ ಇವನೇನು ಮಾಡಿದ್ದಾನೆ?” ಎಂದು ಪಿಲಾತನು ಮತ್ತೆ ಅವರನ್ನು ಪ್ರಶ್ನಿಸಲು ಅವರು, “ಅವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿದರು. 15ಪಿಲಾತನು ಜನಸಮೂಹವನ್ನು ಮೆಚ್ಚಿಸುವ ಸಲುವಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ, ಶಿಲುಬೆಗೇರಿಸುವುದಕ್ಕೆ ಒಪ್ಪಿಸಿಬಿಟ್ಟನು.
ವಿಪರ್ಯಾಸಕ್ಕೆ ಗುರಿಯಾದ ಯೇಸು
(ಮತ್ತಾ. 27:27-31; ಯೊವಾ. 19:2-3)
16ಅನಂತರ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಅಂಗಣದೊಳಕ್ಕೆ ಕೊಂಡೊಯ್ದು, ತಮ್ಮ ಪಡೆಯೆಲ್ಲವನ್ನೂ ಒಟ್ಟಿಗೆ ಕರೆದರು. 17ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿದರು. ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. 18ತರುವಾಯ, “ಯೆಹೂದ್ಯರ ಅರಸನಿಗೆ ಜಯವಾಗಲಿ,” ಎಂದು ನಾಟಕೀಯವಾಗಿ ವಂದಿಸಿದರು. 19ಕೋಲಿನಿಂದ ಅವರ ತಲೆಯ ಮೇಲೆ ಹೊಡೆದು, ಉಗುಳಿ, ಮೊಣಕಾಲೂರಿ ಗೌರವಿಸುವಂತೆ ನಟಿಸಿದರು. 20ಹೀಗೆ ಯೇಸುವನ್ನು ಪರಿಹಾಸ್ಯಮಾಡಿದ ಬಳಿಕ, ಆ ನಸುಗೆಂಪು ಮೇಲಂಗಿಯನ್ನು ತೆಗೆದುಹಾಕಿ, ಅವರ ಬಟ್ಟೆಯನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೆ ಏರಿಸುವುದಕ್ಕಾಗಿ ಅವರನ್ನು ಕರೆದುಕೊಂಡುಹೋದರು.
ಗೊಲ್ಗೊಥದಲ್ಲಿ ಶಿಲುಬೆ
(ಮತ್ತಾ. 27:32-44; ಲೂಕ. 23:26-43; ಯೊವಾ. 19:17-27)
21ಆಗ ಸಿರೇನ್ ಪಟ್ಟಣದ ಸಿಮೋನ ಎಂಬವನು ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾಂಡರ್ ಹಾಗೂ ರೂಫ ಎಂಬವರ ತಂದೆ. ಯೇಸುಸ್ವಾಮಿಯ ಶಿಲುಬೆಯನ್ನು ಹೊರುವಂತೆ ಸೈನಿಕರು ಅವನನ್ನು ಬಲವಂತಮಾಡಿದರು. 22ಬಳಿಕ ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ. 23ಅಲ್ಲಿ ರಕ್ತಬೋಳ ಮಿಶ್ರಿತ ದ್ರಾಕ್ಷಾರಸವನ್ನು ಯೇಸುವಿಗೆ ಕೊಟ್ಟರು. ಆದರೆ ಅದನ್ನು ಅವರು ಕುಡಿಯಲಿಲ್ಲ. 24ಕೊನೆಗೆ ಅವರನ್ನು ಶಿಲುಬೆಗೆ ಏರಿಸಿದರು. ಅವರ ಬಟ್ಟೆಗಳನ್ನು ಯಾವುಯಾವುದು ಯಾರು ಯಾರಿಗೆ ಸಿಗಬೇಕೆಂದು ತಿಳಿಯಲು ಚೀಟುಹಾಕಿ ತಮ್ಮತಮ್ಮೊಳಗೆ ಹಂಚಿಕೊಂಡರು. 25ಯೇಸುವನ್ನು ಶಿಲುಬೆಗೇರಿಸಿದಾಗ, ಬೆಳಿಗ್ಗೆ ಸುಮಾರು ಒಂಭತ್ತು ಗಂಟೆಯಾಗಿತ್ತು. 26ಅವರ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ‘ಈತ ಯೆಹೂದ್ಯರ ಅರಸ’ ಎಂದು ಬರೆಯಲಾಗಿತ್ತು. 27ಅಲ್ಲದೆ ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು. 28(ಹೀಗೆ ‘ಅವರನ್ನು ದ್ರೋಹಿಗಳ ಸಾಲಿನಲ್ಲಿ ಸೇರಿಸಿದರು,’ ಎಂಬ ಪವಿತ್ರಗ್ರಂಥದ ವಾಕ್ಯವು ನೆರವೇರಿತು). 29ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, “ಆಹಾ, ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, 30ಶಿಲುಬೆಯಿಂದ ಇಳಿದುಬಂದು ನಿನ್ನನ್ನು ನೀನೇ ಈಗ ರಕ್ಷಿಸಿಕೋ!” ಎಂದು ಯೇಸುವನ್ನು ಮೂದಲಿಸಿದರು. 31ಅದೇ ಪ್ರಕಾರ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸೇರಿ ಅವರನ್ನು ಅಪಹಾಸ್ಯಮಾಡುತ್ತಾ, “ಇವನು ಇತರರನ್ನು ರಕ್ಷಿಸಿದ, ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು; 32ಇಸ್ರಯೇಲರ ಅರಸನಾದ ಈ ಕ್ರಿಸ್ತನು ಶಿಲುಬೆಯಿಂದ ಇಳಿದುಬರಲಿ; ಆಗ ನೋಡಿ ನಂಬುತ್ತೇವೆ,” ಎಂದು ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದವರು ಸಹ ಅವರನ್ನು ಹಂಗಿಸುತ್ತಿದ್ದರು.
ಪ್ರಾಣಾರ್ಪಣೆ
(ಮತ್ತಾ. 27:45-56; ಲೂಕ. 23:44-49; ಯೊವಾ. 19:28-30)
33ಆಗ ನಡುಮಧ್ಯಾಹ್ನ. ಆ ಹೊತ್ತಿನಿಂದ ಮೂರು ಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. 34ಮೂರನೆಯ ಗಂಟೆಯ ಸಮಯದಲ್ಲಿ, ಯೇಸುಸ್ವಾಮಿ: “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿದ್ದೀರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು. 35ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇಗೋ, ಇವನು ಎಲೀಯನನ್ನು ಕರೆಯುತ್ತಿದ್ದಾನೆ!” ಎಂದರು. 36ಆಗ ಅವರಲ್ಲೊಬ್ಬನು ಓಡಿಹೋಗಿ, ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ, ಅದನ್ನು ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಡುತ್ತಾ, “ತಾಳಿ, ಇವನನ್ನು ಶಿಲುಬೆಯಿಂದ ಬಿಡುಗಡೆಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ನೋಡೋಣ,” ಎಂದನು. 37ಯೇಸುವಾದರೋ ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು. 38ಆಗ ಮಹಾದೇವಾಲಯದ ತೆರೆ ಮೇಲಿನಿಂದ ಕೆಳಗಿನವರೆಗೂ ಇಬ್ಭಾಗವಾಗಿ ಸೀಳಿಹೋಯಿತು. 39ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರುನಿಂತು ನೋಡುತ್ತಿದ್ದ ಶತಾಧಿಪತಿ, “ಸತ್ಯವಾಗಿಯೂ ಈ ಮನುಷ್ಯ ದೇವರ ಪುತ್ರ!” ಎಂದನು. 40ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಕೆಲವು ಮಹಿಳೆಯರಲ್ಲಿ ಮಗ್ದಲದ ಮರಿಯಳು, ಚಿಕ್ಕ ಯಕೋಬ ಮತ್ತು ಯೋಸೆಯ ತಾಯಿ ಮರಿಯಳು ಹಾಗೂ ಸಲೋಮೆ ಇದ್ದರು. 41ಇವರು, ಯೇಸು ಗಲಿಲೇಯದಲ್ಲಿ ಇದ್ದಾಗ ಅವರನ್ನು ಹಿಂಬಾಲಿಸಿ, ಉಪಚಾರ ಮಾಡಿದ್ದರು. ಯೇಸುವಿನ ಸಂಗಡ ಜೆರುಸಲೇಮಿಗೆ ಬಂದಿದ್ದ ಇನ್ನೂ ಅನೇಕ ಮಹಿಳೆಯರು ಅಲ್ಲಿದ್ದರು.
ಯೇಸುವಿನ ಶವಸಂಸ್ಕಾರ
(ಮತ್ತಾ. 27:57-61; ಲೂಕ. 23:50-56; ಯೊವಾ. 19:38-42)
42ಅಷ್ಟರಲ್ಲೇ ಸಂಜೆಯಾಗಿತ್ತು. ಸಬ್ಬತ್ತಿನ ಹಿಂದಿನ ದಿನವಾಗಿದ್ದ ಅಂದು ‘ಸಿದ್ಧತೆ’ಯ ದಿನ ಆಗಿತ್ತು. ಆದುದರಿಂದ ಅರಿಮತಾಯ ಊರಿನ ಜೋಸೆಫ್ ಎಂಬಾತನು ಧೈರ್ಯತಂದುಕೊಂಡು, ಪಿಲಾತನ ಸಾನ್ನಿಧ್ಯಕ್ಕೆ ಹೋಗಿ, ಯೇಸುಸ್ವಾಮಿಯ ಪಾರ್ಥಿವ ಶರೀರವನ್ನು 43ತನಗೆ ಕೊಡಿಸಬೇಕೆಂದು ಪಿಲಾತನನ್ನು ಕೇಳಿಕೊಂಡನು. ದೇವರ ಸಾಮ್ರಾಜ್ಯದ ಆಗಮನವನ್ನು ನಿರೀಕ್ಷಿಸುತ್ತಿದ್ದ ಈತನು ಯೆಹೂದ್ಯರ ನ್ಯಾಯಸಭೆಯ ಸನ್ಮಾನಿತ ಸದಸ್ಯನಾಗಿದ್ದನು. 44ಯೇಸು ಇಷ್ಟುಬೇಗನೆ ಸತ್ತಿದ್ದಾರೆಂದು ಕೇಳಿ ಪಿಲಾತನಿಗೆ ಆಶ್ಚರ್ಯವಾಯಿತು. ಅವನು ಶತಾಧಿಪತಿಯನ್ನು ಕರೆಯಿಸಿ, “ಯೇಸು ಈಗಾಗಲೇ ಮೃತನಾದನೋ?” ಎಂದು ವಿಚಾರಿಸಿದನು. 45ಯೇಸು ಸತ್ತಿದ್ದಾರೆಂದು ಅವನಿಂದ ತಿಳಿದುಕೊಂಡು ಪಾರ್ಥಿವ ಶರೀರವನ್ನು ಜೋಸೆಫನಿಗೆ ಕೊಡಿಸಿದನು. 46ಜೋಸೆಫನು ನಾರುಮಡಿ ವಸ್ತ್ರವನ್ನು ಕೊಂಡುಕೊಂಡು ಬಂದು, ಯೇಸುವನ್ನು ಶಿಲುಬೆಯಿಂದ ಇಳಿಸಿ, ಆ ವಸ್ತ್ರದಿಂದ ಸುತ್ತಿದನು. ಅನಂತರ ಬಂಡೆಯಲ್ಲಿ ಕೊರೆದಿದ್ದ ಸಮಾಧಿಯಲ್ಲಿ ಅದನ್ನಿರಿಸಿ, ಸಮಾಧಿಯ ದ್ವಾರಕ್ಕೆ ದೊಡ್ಡ ಕಲ್ಲನ್ನು ಉರುಳಿಸಿ ಮುಚ್ಚಿದನು. 47ಮಗ್ದಲದ ಮರಿಯಳು ಮತ್ತು ಯೋಸೆಯ ತಾಯಿ ಮರಿಯಳು ಯೇಸುವಿನ ಪಾರ್ಥಿವ ಶರೀರವನ್ನು ಸಮಾಧಿಮಾಡಿದ್ದ ಸ್ಥಳವನ್ನು ಗುರುತಿಸಿಕೊಂಡರು.
Selectat acum:
ಮಾರ್ಕ 15: KANCLBSI
Evidențiere
Partajează
Copiază
Dorești să ai evidențierile salvate pe toate dispozitivele? Înscrie-te sau conectează-te
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.