ಆದಿಕಾಂಡ 9

9
1ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಅವರಿಗೆ - ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಲೋಕದಲ್ಲೆಲ್ಲಾ ತುಂಬಿಕೊಳ್ಳಿರಿ. 2ಭೂವಿುಯ ಮೇಲಿರುವ ಎಲ್ಲಾ ಮೃಗಗಳೂ ಆಕಾಶದ ಎಲ್ಲಾ ಪಕ್ಷಿಗಳೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿವಿುಗಳೂ ಸಮುದ್ರದ ಮೀನುಗಳೂ ನಿಮಗೆ ಬೆದರಿ ಅಂಜಿಕೊಳ್ಳುವವು; ನಾನು ಅವುಗಳನ್ನೆಲ್ಲಾ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. 3ಭೂವಿುಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳೂ ನಿಮಗೆ ಆಹಾರವಾಗಿರುವವು. ನಾನು ನಿಮ್ಮ ಆಹಾರಕ್ಕೆ ಪೈರುಗಳನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. 4ಆದರೆ ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ.
5ಇದಲ್ಲದೆ ನಿಮ್ಮ ರಕ್ತವನ್ನು ಸುರಿಸಿ ಜೀವತೆಗೆಯುವವರಿಗೆ ಮುಯ್ಯಿತೀರಿಸುವೆನು. ಮೃಗವಾಗಿದ್ದರೆ ಅದಕ್ಕೂ ಮನುಷ್ಯನಾಗಿದ್ದರೆ, ಹತವಾದವನು ಅವನ ಸಹೋದರನಾಗಿರುವದರಿಂದ, ಅವನಿಗೂ ಮುಯ್ಯಿ ತೀರಿಸುವೆನೆಂದು ತಿಳಿದುಕೊಳ್ಳಿರಿ. 6ನರಹತ್ಯವು ಸಹೋದರ ಹತ್ಯವಲ್ಲವೇ. ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿಯೇ ಉಂಟುಮಾಡಿದನಾದ್ದರಿಂದ ಯಾರು ಮನುಷ್ಯನ ರಕ್ತವನ್ನು ಸುರಿಸುತ್ತಾರೋ ಅವರ ರಕ್ತವನ್ನು ಮನುಷ್ಯರೇ ಸುರಿಸುವರು.
7ನೀವು ಅಭಿವೃದ್ಧಿಯಾಗಿ ಹೆಚ್ಚಿರಿ; ಭೂವಿುಯ ಮೇಲೆ ನಿಮಗೆ ಬಹು ಸಂತಾನವಾಗಲಿ ಎಂದು ಹೇಳಿದನು.
8ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ - 9ಕೇಳಿರಿ, ನಾನು ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ 10ನಿಮ್ಮ ಕೂಡ ನಾವೆಯಿಂದ ಹೊರಟುಬಂದ ಪಶುಪಕ್ಷಿಮೃಗಾದಿ ಸಕಲ ಭೂಜಂತುಗಳನ್ನೂ ಕುರಿತು ಸ್ಥಿರಪ್ರತಿಜ್ಞೆ ಮಾಡುತ್ತೇನೆ; 11ಆ ಪ್ರತಿಜ್ಞೆ ಯಾವದೆಂದರೆ - ಇನ್ನು ಮೇಲೆ ಎಲ್ಲಾ ಪ್ರಾಣಿಗಳು ಪ್ರಳಯದಿಂದ ನಾಶವಾಗುವದಿಲ್ಲ; ಇನ್ನು ಮುಂದೆ ಭೂವಿುಯನ್ನು ಹಾಳು ಮಾಡುವ ಪ್ರಳಯವು ಬರುವದೇ ಇಲ್ಲ ಎಂದು ಹೇಳಿದನು. 12ದೇವರು ಮತ್ತೂ ಹೇಳಿದ್ದೇನಂದರೆ - ನಾನು ನಿಮ್ಮನ್ನೂ ನಿಮ್ಮ ಸಂಗಡ ಇರುವ ಸಮಸ್ತ ಜೀವರಾಶಿಗಳನ್ನೂ ಕುರಿತು ಎಲ್ಲಾ ತಲತಲಾಂತರಗಳಲ್ಲಿಯೂ ಮಾಡುವ ಈ ಪ್ರತಿಜ್ಞೆಗೆ 13ಮೇಘಗಳಲ್ಲಿ ನಾನಿಟ್ಟಿರುವ ಮುಗಿಲುಬಿಲ್ಲೇ ಗುರುತಾಗಿರುವದು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತಾಗಿರಲಿ. 14ನಾನು ಭೂಲೋಕದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕಂಡು ಬರುವದು. 15ಆಗ ನಾನು ನಿಮ್ಮನ್ನೂ ಎಲ್ಲಾ ಜೀವರಾಶಿಗಳನ್ನೂ ಕುರಿತು ಮಾಡಿದ ಪ್ರತಿಜ್ಞೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಭೂಪ್ರಾಣಿಗಳನ್ನು ಹಾಳುಮಾಡುವ ಪ್ರಳಯವಾಗುವದಿಲ್ಲ. 16ಆ ಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂವಿುಯ ಮೇಲಿರುವ ಎಲ್ಲಾ ಜೀವಜಂತುಗಳಿಗೂ ಆದ ಶಾಶ್ವತವಾದ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು ಅಂದನು. 17ಮತ್ತು ದೇವರು ನೋಹನಿಗೆ - ನನಗೂ ಎಲ್ಲಾ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು ಎಂದು ಹೇಳಿದನು.
ಕಾನಾನ್ಯರಿಗೆ ಶಾಪವೂ ಶೇಮ್ ಯೆಫೆತರಿಗೆ ಆಶೀರ್ವಾದವೂ ಬಂದದ್ದು
18ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಶೇಮ್ ಹಾಮ್ ಯೆಫೆತ್ ಎಂಬವರೇ (ಹಾಮನು ಕಾನಾನನ ತಂದೆಯು). 19ಈ ಮೂವರು ನೋಹನ ಮಕ್ಕಳು; ಇವರಿಂದಲೇ ಭೂವಿುಯಲ್ಲೆಲ್ಲಾ ಹರಡಿಕೊಂಡಿರುವ ಜನರು ಉತ್ಪತ್ತಿಯಾದರು.
20ನೋಹನು ವ್ಯವಸಾಯಗಾರನಾಗಿದ್ದನು; ಅವನೇ ದ್ರಾಕ್ಷೇತೋಟವನ್ನು ಪ್ರಾರಂಭಿಸಿದನು. 21ಅವನು ದ್ರಾಕ್ಷಾರಸವನ್ನು ಕುಡಿಯಲು ಅಮಲೇರಿದ್ದರಿಂದ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು. 22ಕಾನಾನನ ತಂದೆಯಾದ ಹಾಮನು ತಂದೆಯು ಬೆತ್ತಲೆಯಾಗಿರುವದನ್ನು ಕಂಡು ಹೊರಗಿದ್ದ ಅಣ್ಣತಮ್ಮಂದಿರಾದ ಶೇಮ್ ಯೆಫೆತರಿಗೆ ತಿಳಿಸಿದನು. 23ಇವರಿಬ್ಬರು ಕಂಬಳಿಯನ್ನು ತೆಗೆದುಕೊಂಡು ತಮ್ಮಿಬ್ಬರ ಬೆನ್ನಿನ ಮೇಲೆ ಹಾಕಿಕೊಂಡು ಹಿಂದ್ಹಿಂದಕ್ಕೆ ನಡೆದು ತಂದೆಗೆ ಹೊದಿಸಿ ಅವನ ಮಾನವನ್ನು ಕಾಪಾಡಿದರು; ಅವರು ಹಿಮ್ಮುಖರಾಗಿದ್ದದರಿಂದ ತಂದೆಯು ಬೆತ್ತಲೆಯಾಗಿದ್ದದ್ದನ್ನು ನೋಡಲಿಲ್ಲ. 24ನೋಹನು ಅಮಲಿಳಿದೆದ್ದು ಕಿರೀಮಗನು ಮಾಡಿದ್ದನ್ನು ತಿಳಿದು -
25ಕಾನಾನನು ಶಾಪಗ್ರಸ್ತನಾಗಲಿ. ಅವನು ತನ್ನ ಅಣ್ಣತಮ್ಮಂದಿರಿಗೆ ದಾಸಾನುದಾಸನಾಗಲಿ
ಅಂದನು. 26ಅವನು ಇನ್ನೂ ನುಡಿದದ್ದೇನಂದರೆ -
ಶೇಮನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ಕಾನಾನನು ಅವರಿಗೆ ದಾಸನಾಗಲಿ.
27ಯೆಫೆತನನ್ನು#9.27 ಯೆಫೆತ್ ಅಂದರೆ ವಿಸ್ತೀರ್ಣ. ದೇವರು ವಿಸ್ತರಿಸಲಿ. ಅವನು ಶೇಮನ ಗುಡಾರಗಳಲ್ಲಿ ವಾಸವಾಗಿರಲಿ. ಕಾನಾನನು ಅವರಿಗೆ ದಾಸನಾಗಿರಲಿ ಎಂಬದು.
28ಪ್ರಳಯವಾದ ಮೇಲೆ ನೋಹನು ಮುನ್ನೂರೈವತ್ತು ವರುಷ ಬದುಕಿದನು. 29ಅವನು ಒಟ್ಟು ಒಂಭೈನೂರೈವತ್ತು ವರುಷ ಬದುಕಿ ಸತ್ತನು.

ప్రస్తుతం ఎంపిక చేయబడింది:

ಆದಿಕಾಂಡ 9: KANJV-BSI

హైలైట్

షేర్ చేయి

కాపీ

None

మీ పరికరాలన్నింటి వ్యాప్తంగా మీ హైలైట్స్ సేవ్ చేయబడాలనుకుంటున్నారా? సైన్ అప్ చేయండి లేదా సైన్ ఇన్ చేయండి