ಪ್ರೇಷಿತರ ಕಾರ್ಯಕಲಾಪಗಳು 5
5
ಅನನೀಯ ಮತ್ತು ಸಫೈರ
1ಅನನೀಯ ಮತ್ತು ಸಫೈರ ಎಂಬ ದಂಪತಿಗಳಿದ್ದರು. ಇವರು ತಮ್ಮ ಆಸ್ತಿಯೊಂದನ್ನು ಮಾರಿದರು. 2ಬಂದ ಹಣದಲ್ಲಿ ಒಂದು ಭಾಗವನ್ನು ಅನನೀಯನು, ತನ್ನ ಪತ್ನಿಯ ಸಮ್ಮತಿ ಪಡೆದು, ಬಚ್ಚಿಟ್ಟುಕೊಂಡನು. ಉಳಿದುದನ್ನು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸಿದನು. 3ಆಗ ಪೇತ್ರನು, “ಅನನೀಯಾ, ನಿನ್ನ ಆಸ್ತಿಯ ವಿಕ್ರಯದಿಂದ ಬಂದ ಹಣದ ಒಂದು ಭಾಗವನ್ನು ಬಚ್ಚಿಟ್ಟುಕೊಂಡು, ನೀನು ಪವಿತ್ರಾತ್ಮ ಅವರಿಗೆ ಏಕೆ ವಂಚನೆಮಾಡಿದೆ? ನಿನ್ನ ಹೃದಯದಲ್ಲಿ ಪಿಶಾಚಿಗೇಕೆ ಎಡೆಮಾಡಿಕೊಟ್ಟೆ? 4ಮಾರುವುದಕ್ಕೆ ಮೊದಲು ಆಸ್ತಿ ನಿನಗೇ ಸೇರಿತ್ತು; ಮಾರಿದ ನಂತರವೂ ಅದರ ಹಣ ನಿನ್ನದೇ ಆಗಿತ್ತು. ಹೀಗಿರುವಲ್ಲಿ ಇಂಥಾ ದುಷ್ಟಯೋಚನೆ ಮಾಡಲು ನೀನೇಕೆ ಮನಸ್ಸುಮಾಡಿದೆ? ನೀನು ಸುಳ್ಳಾಡಿರುವುದು ಮನುಷ್ಯರಿಗಲ್ಲ, ದೇವರಿಗೆ,” ಎಂದನು. 5ಈ ಮಾತುಗಳನ್ನು ಕೇಳಿದಾಕ್ಷಣವೇ ಅನನೀಯನು ಸತ್ತುಬಿದ್ದನು. 6ಆಗ ಕೆಲವು ಯುವಕರು ಬಂದು ಅವನ ಶವವನ್ನು ಬಟ್ಟೆಯಲ್ಲಿ ಸುತ್ತಿ ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು.
7ಸುಮಾರು ಮೂರು ಗಂಟೆಗಳ ನಂತರ ಅವನ ಪತ್ನಿ ಅಲ್ಲಿಗೆ ಬಂದಳು. ಅಲ್ಲಿ ಸಂಭವಿಸಿದ್ದೇನೂ ಆಕೆಗೆ ತಿಳಿದಿರಲಿಲ್ಲ. 8ಪೇತ್ರನು ಆಕೆಯನ್ನು ನೋಡಿ, “ನೀನು ಮತ್ತು ನಿನ್ನ ಪತಿ ಆಸ್ತಿಮಾರಿ ಪಡೆದ ಹಣದ ಮೊತ್ತ ಇಷ್ಟೇ ಏನು?” ಎಂದು ಕೇಳಿದನು. ಆಕೆ, “ಹೌದು, ಇಷ್ಟೇ,” ಎಂದು ಉತ್ತರಕೊಟ್ಟಳು. 9ಪೇತ್ರನು, “ನೀನೂ ನಿನ್ನ ಪತಿಯೂ ಸರ್ವೇಶ್ವರನ ಆತ್ಮವನ್ನು ಪರೀಕ್ಷಿಸಲು ಹವಣಿಸಿದಿರೋ? ಇಗೋ, ನಿನ್ನ ಪತಿಯನ್ನು ಸಮಾಧಿಮಾಡಿಬಂದವರ ಕಾಲಿನ ಸಪ್ಪಳ. ಅವರು ಬಾಗಿಲ ಬಳಿಯಲ್ಲೇ ಇದ್ದಾರೆ. ಅವರು ನಿನ್ನನ್ನೂ ಹೊತ್ತುಕೊಂಡು ಹೋಗುವರು,” ಎಂದನು. 10ಆಕ್ಷಣವೇ ಆಕೆಯೂ ಸತ್ತು ಅವನ ಕಾಲಬಳಿ ಬಿದ್ದಳು. ಒಳಗೆ ಬಂದ ಯುವಕರು ಆಕೆಯೂ ಸತ್ತುಬಿದ್ದಿರುವುದನ್ನು ಕಂಡು ಆಕೆಯನ್ನು ಹೊತ್ತುಕೊಂಡು ಹೋಗಿ ಪತಿಯ ಪಕ್ಕದಲ್ಲೇ ಸಮಾಧಿಮಾಡಿದರು. 11ಇಡೀ ಧರ್ಮಸಭೆಯೂ ಇದನ್ನು ಕೇಳಿದ ಎಲ್ಲರೂ ಭಯಭ್ರಾಂತರಾದರು.
ಅದ್ಭುತಕಾರ್ಯಗಳು
12ಜನರೆಲ್ಲರ ಕಣ್ಮುಂದೆ ಅನೇಕ ಅದ್ಭುತಕಾರ್ಯಗಳೂ ಸೂಚಕಕಾರ್ಯಗಳೂ ಪ್ರೇಷಿತರ ಮುಖಾಂತರ ನಡೆಯುತ್ತಿದ್ದವು. ಭಕ್ತವಿಶ್ವಾಸಿಗಳೆಲ್ಲರೂ ಸೊಲೊಮೋನನ ಮಂಟಪದಲ್ಲಿ ಸಭೆಸೇರುತ್ತಿದ್ದರು. 13ಹೊರಗಿನವರು ಅವರನ್ನು ಬಹಳವಾಗಿ ಹೊಗಳುತ್ತಿದ್ದರೂ ಅವರ ಸಂಗಡ ಸೇರಲು ಯಾರಿಗೂ ಧೈರ್ಯವಿರಲಿಲ್ಲ. 14ಆದರೂ ಪ್ರಭುವನ್ನು ವಿಶ್ವಾಸಿಸುತ್ತಿದ್ದ ಸ್ತ್ರೀಪುರುಷರ ಸಂಖ್ಯೆ ಅಧಿಕವಾಗುತ್ತಾ ಬಂದಿತು. 15ಪೇತ್ರನು ಹಾದುಹೋಗುವಾಗ ಆತನ ನೆರಳಾದರೂ ಕೆಲವರ ಮೇಲೆ ಬೀಳಲೆಂದು ಜನರು ರೋಗಿಗಳನ್ನು ಹಾಸಿಗೆ ಅಥವಾ ಡೋಲಿಗಳ ಸಮೇತ ಹೊತ್ತುತಂದು ಹಾದಿಗಳಲ್ಲಿ ಮಲಗಿಸುತ್ತಿದ್ದರು. 16ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದಲೂ ರೋಗಿಗಳನ್ನು ಮತ್ತು ಪಿಶಾಚಿಪೀಡಿತರನ್ನು ಜನರು ತರುತ್ತಿದ್ದರು; ಎಲ್ಲರೂ ಸ್ವಸ್ಥರಾಗುತ್ತಿದ್ದರು.
ಪ್ರೇಷಿತರಿಗೆ ಹಿಂಸೆ
17ಇಂತಿರಲು ಪ್ರಧಾನಯಾಜಕನೂ ಅವನ ಸಂಗಡವಿದ್ದ ಸ್ಥಳೀಯ ಸದ್ದುಕಾಯರೂ ಪ್ರೇಷಿತರ ಬಗ್ಗೆ ತೀವ್ರ ಅಸೂಯೆಪಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದರು. 18ಪ್ರೇಷಿತರನ್ನು ಬಂಧಿಸಿ ಊರ ಸೆರೆಯಲ್ಲಿಟ್ಟರು. 19ಆ ರಾತ್ರಿಯೇ ಪ್ರಭುವಿನ ದೂತನೊಬ್ಬನು ಸೆರೆಮನೆಯ ದ್ವಾರಗಳನ್ನು ತೆರೆದು ಪ್ರೇಷಿತರನ್ನು ಹೊರಕ್ಕೆ ತಂದನು. 20“ಹೋಗಿರಿ, ಮಹಾದೇವಾಲಯದಲ್ಲಿ ನಿಂತು ಈ ನವಜೀವದ ಬಗ್ಗೆ ಜನರಿಗೆ ಬೋಧಿಸಿರಿ,” ಎಂದನು. 21ಅದರಂತೆ ಪ್ರೇಷಿತರು ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಇತ್ತ ಪ್ರಧಾನಯಾಜಕನೂ ಅವನ ಸಂಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊಂಡ ಶ್ರೇಷ್ಠ ನ್ಯಾಯಸಭೆಯನ್ನು ಕರೆದರು. ಅನಂತರ ಪ್ರೇಷಿತರನ್ನು ಆ ಸಭೆಯ ಮುಂದೆ ಕರೆತರುವಂತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ಞೆಯಿತ್ತರು. 22ಈ ಅಧಿಕಾರಿಗಳು ಸೆರೆಮನೆಗೆ ಬಂದಾಗ ಅಲ್ಲಿ ಪ್ರೇಷಿತರನ್ನು ಕಾಣಲಿಲ್ಲ. ಹಿಂದಿರುಗಿ ಹೋಗಿ ನ್ಯಾಯಸಭೆಗೆ ಈ ವಿಷಯವನ್ನು ವರದಿಮಾಡಿದರು; 23“ನಾವು ಸೆರೆಮನೆಗೆ ಹೋದಾಗ ಅದಕ್ಕೆ ಹಾಕಿದ್ದ ಬೀಗ ಮುದ್ರೆಯೇನೋ ಭದ್ರವಾಗಿತ್ತು. ಪಹರೆಯವರು ದ್ವಾರದಲ್ಲಿ ಕಾವಲಿದ್ದರು. ಆದರೆ ದ್ವಾರವನ್ನು ತೆರೆದು ನೋಡಿದಾಗ ಒಳಗೆ ಯಾರನ್ನೂ ನಾವು ಕಾಣಲಿಲ್ಲ,” ಎಂದು ತಿಳಿಸಿದರು. 24ದೇವಾಲಯದ ದಳಪತಿ ಮತ್ತು ಮುಖ್ಯಯಾಜಕರು ಇದನ್ನು ಕೇಳಿ, ಇದರಿಂದೇನಾಗುವುದೋ ಎಂದು ಕಳವಳಗೊಂಡರು. 25ಅಷ್ಟರಲ್ಲಿ ಒಬ್ಬನು ಅಲ್ಲಿಗೆ ಬಂದು, “ಇಗೋ, ನೀವು ಸೆರೆಮನೆಯಲ್ಲಿಟ್ಟವರು ದೇವಾಲಯದಲ್ಲಿ ನಿಂತು ಜನರಿಗೆ ಬೋಧಿಸುತ್ತಿದ್ದಾರೆ,” ಎಂದನು. 26ಆಗ ಆ ದಳಪತಿ ಅಧಿಕಾರಿಗಳೊಡನೆ ಹೋಗಿ ಪ್ರೇಷಿತರನ್ನು ಕರೆದುಕೊಂಡು ಬಂದನು. ಜನರು ತಮ್ಮ ಮೇಲೆ ಕಲ್ಲು ತೂರಬಹುದೆಂಬ ಭಯದಿಂದ ಪ್ರೇಷಿತರ ಮೇಲೆ ಅವರು ಯಾವ ಬಲಪ್ರಯೋಗವನ್ನೂ ಮಾಡಲಿಲ್ಲ.
27ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನಯಾಜಕನು ಅವರನ್ನು ಉದ್ದೇಶಿಸಿ, 28“ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟುಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ,” ಎಂದು ಆಪಾದಿಸಿದನು.
29ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, “ನಾವು ವಿಧೇಯರಾಗಬೇಕಾದದ್ದು ದೇವರಿಗೆ, ಮಾನವರಿಗಲ್ಲ. 30ನೀವು ಶಿಲುಬೆಗೇರಿಸಿ ಕೊಂದುಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆ ಎಬ್ಬಿಸಿದ್ದಾರೆ. 31ದೇವರು ಅವರನ್ನು ತಮ್ಮ ಬಲಪಾರ್ಶ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. 32ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ,” ಎಂದನು.
ಗಮಲಿಯೇಲನ ಮಧ್ಯಸ್ಥಿಕೆ
33ಇದನ್ನು ಕೇಳಿದ ಸಭಾಸದಸ್ಯರು ಕ್ರೋಧಭರಿತರಾಗಿ ಪ್ರೇಷಿತರನ್ನು ಕೊಲ್ಲಬೇಕೆಂದಿದ್ದರು. 34ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎಂಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪಂಡಿತ. ಅವನು ಎದ್ದುನಿಂತು ಪ್ರೇಷಿತರನ್ನು ಸ್ವಲ್ಪಹೊತ್ತು ಸಭೆಯಿಂದ ಹೊರಗೆ ಕಳುಹಿಸುವಂತೆ ಹೇಳಿ 35ಸಭೆಯನ್ನುದ್ದೇಶಿಸಿ, “ಇಸ್ರಯೇಲ್ ಸಭಾಸದಸ್ಯರೇ, ಇವರ ವಿರುದ್ಧ ನೀವು ಕೈಗೊಳ್ಳಬೇಕೆಂದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿಂದಿರಿ. 36ಸ್ವಲ್ಪಕಾಲಕ್ಕೆ ಹಿಂದೆ ತೈದ ಎಂಬವನಿದ್ದ. ತಾನೊಬ್ಬ ಮಹಾಪುರುಷನು ಎಂದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮಂದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು. ಅವನ ಪಕ್ಷ ನಿರ್ನಾಮವಾಯಿತು. 37ಅನಂತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎಂಬವನು ಪ್ರಸಿದ್ಧಿಗೆ ಬಂದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊಂಡ. ಅವನೂ ಹತನಾದ. ಹಿಂಬಾಲಕರೆಲ್ಲರೂ ಚದರಿಹೋದರು. 38ಆದುದರಿಂದ ನಾನು ನಿಮಗೆ ಹೇಳುವುದೇನೆಂದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವ ಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು. 39ಇದು ದೈವಸಂಕಲ್ಪವಾಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿಂದಾಗದು. ನೀವು ದೇವರಿಗೆ ವಿರುದ್ಧ ಹೋರಾಡಿದಂತೆ ಆದೀತು,” ಎಂದು ಹೇಳಿದನು.
ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅಂಗೀಕರಿಸಿದರು. 40ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. 41ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು. 42ಯೇಸುವೇ ಲೋಕೋದ್ಧಾರಕನೆಂದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.
Ekhethiweyo ngoku:
ಪ್ರೇಷಿತರ ಕಾರ್ಯಕಲಾಪಗಳು 5: KANCLBSI
Qaqambisa
Yabelana
Kopa

Ufuna ukuba iimbalasane zakho zigcinwe kuzo zonke izixhobo zakho? Bhalisela okanye ngena
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.