ಪ್ರೇಷಿತರ ಕಾರ್ಯಕಲಾಪಗಳು ಮುನ್ನುಡಿ

ಮುನ್ನುಡಿ
“ಪ್ರೇಷಿತರ ಕಾರ್ಯಕಲಾಪಗಳು” ಎಂಬ ಬೈಬಲ್ಲಿನ ಈ ಭಾಗ ಲೂಕನು ಬರೆದ ಶುಭಸಂದೇಶವನ್ನು ಮುಂದುವರಿಸುತ್ತದೆ. ಯೇಸುಸ್ವಾಮಿಯ ಆದಿಭಕ್ತಾದಿಗಳು ಪವಿತ್ರಾತ್ಮರನ್ನು ಪಡೆದು ಜೆರುಸಲೇಮ್, ಜುದೇಯ, ಸಮಾರಿಯ ಹಾಗೂ ಅಂದಿನ ಜಗತ್ತಿನ ಕಟ್ಟಕಡೆಗೂ ಹೋಗಿ ಶುಭಸಂದೇಶವನ್ನು ಸಾರಿದರು. ಈ ಧರ್ಮಪ್ರಚಾರದ ವಿವರಣೆಯೇ ಈ ಕೃತಿಯ ಧ್ಯೇಯ. ಕ್ರೈಸ್ತಧರ್ಮ ಮೊತ್ತಮೊದಲು ಯೆಹೂದ್ಯರಲ್ಲಿ ಕಾಣಿಸಿಕೊಂಡಿತು. ಕ್ರಮೇಣ ವಿಶ್ವಧರ್ಮವಾಗಿ ಮಾರ್ಪಟ್ಟಿತು. ಇದು ರೋಮ್ ಚಕ್ರಾಧಿಪತ್ಯಕ್ಕೆ ಆತಂಕವಾಗಿರಲಿಲ್ಲ, ಅಪಾಯಕರವಾಗಿರಲಿಲ್ಲ. ಸನಾತನ ಯೆಹೂದ್ಯ ಧರ್ಮಕ್ಕಾದರೋ ಅದು ಸಿದ್ಧಮುಡಿಯಾಗಿತ್ತು, ಮುಗ್ಧ ಮುಕುಟವಾಗಿತ್ತು. ಈ ವಿಷಯವನ್ನು ಓದುಗರಿಗೆ ಮನದಟ್ಟು ಮಾಡಿಕೊಡಲು ಲೇಖಕನು ಯತ್ನಿಸಿದ್ದಾನೆ.
ಯೇಸುಸ್ವಾಮಿಯನ್ನು ಕುರಿತಾದ ಶುಭಸಂದೇಶವು ಹಬ್ಬಿಹರಡಿದಂತೆಲ್ಲಾ ಅಲ್ಲಲ್ಲೇ ಕ್ರೈಸ್ತಸಭೆಗಳನ್ನು ಸ್ಥಾಪಿಸಲಾಯಿತು. ಈ ದಿಸೆಯಲ್ಲಿ ಪ್ರೇಷಿತರು ಕೈಗೊಂಡ ಕಾರ್ಯಕಲಾಪಗಳನ್ನು ಮೂರು ಭಾಗವಾಗಿ ವಿಂಗಡಿಸಬಹುದು: 1. ಯೇಸುಸ್ವಾಮಿ ಸ್ವರ್ಗಾರೋಹಣವಾದ ನಂತರ ಜೆರುಸಲೇಮಿನಲ್ಲಿ ಕ್ರೈಸ್ತಧರ್ಮ ಪ್ರಚಾರದ ಆರಂಭ. 2. ಪಾಲೆಸ್ಟೈನ್ ನಾಡಿನ ಇತರ ಭಾಗಗಳಿಗೆ ಅದರ ವಿಸ್ತರಣೆ. 3. ಭೂಮಧ್ಯ ಸಮುದ್ರದ ಜಗತ್ತಿಗೂ ರೋಮ್ ನಗರದವರೆಗೂ ಅದರ ಪ್ರಚಾರ.
ಈ ಪುಸ್ತಕದಲ್ಲಿ ಗಮನಿಸಬಹುದಾದ ಒಂದು ಮುಖ್ಯಾಂಶವೆಂದರೆ, ಪವಿತ್ರಾತ್ಮ ಅವರ ಚೈತನ್ಯ. ‘ಪಂಚಾಶತ್ತಮ’ ಹಬ್ಬದ ದಿನ ಪವಿತ್ರಾತ್ಮ ಅವರು ಭಕ್ತಾದಿಗಳ ಮೇಲೆ ಪ್ರಬಲವಾಗಿ ಇಳಿದುಬರುತ್ತಾರೆ; ಪ್ರೇಷಿತರ ನಡೆನುಡಿಗಳಲ್ಲಿ ಅವರ ಪ್ರಭಾವವನ್ನು ಗುರುತಿಸಬಹುದಾಗಿದೆ; ಕ್ರೈಸ್ತ ಭಕ್ತಾದಿಗಳಿಗೂ ಅವರ ಮುಂದಾಳುಗಳಿಗೂ ಅವರೇ ಸ್ಪೂರ್ತಿದಾಯಕರು ಹಾಗೂ ಮಾರ್ಗದರ್ಶಕರು ಎಂಬುದು ಮನನವಾಗುತ್ತದೆ. ಇದರಲ್ಲಿ ಕೊಡಲಾಗಿರುವ ಹಲವಾರು ಉಪದೇಶ ಉಪನ್ಯಾಸಗಳಲ್ಲಿ ಆದಿಕ್ರೈಸ್ತ ಸಂದೇಶ ಸಂಕ್ಷಿಪ್ತವಾಗಿ ಅಡಗಿದೆ. ಅದು ಆದಿಭಕ್ತಾದಿಗಳಲ್ಲಿ ಹಾಗೂ ಅವರ ಅನ್ಯೋನ್ಯ ಜೀವನದಲ್ಲಿ ಎಂತಹ ಅಮೋಘ ಪರಿಣಾಮವನ್ನು ಬೀರಿತ್ತೆಂಬುದನ್ನು ಇದರಲ್ಲಿ ಬಣ್ಣಿಸಲಾಗಿರುವ ಐತಿಹಾಸಿಕ ಘಟನೆಗಳು ಎತ್ತಿತೋರಿಸುತ್ತವೆ.
ಪರಿವಿಡಿ
ಧರ್ಮಪ್ರಚಾರಕ್ಕೆ ಸಿದ್ಧತೆ 1:1-26
ಯೇಸುಸ್ವಾಮಿಯ ಅಂತಿಮ ಆಜ್ಞೆ ಹಾಗೂ ವಾಗ್ದಾನ 1:1-14
ಯೂದನ ಸ್ಥಾನಕ್ಕೆ ಮತ್ತೀಯನ ಆಯ್ಕೆ 1:15-26
ಜೆರುಸಲೇಮಿನಲ್ಲಿ ಶುಭಸಂದೇಶಕ್ಕೆ ಸಾಕ್ಷ್ಯ 2:1—8:3
ಜುದೇಯ ಹಾಗೂ ಸಮಾರಿಯದಲ್ಲಿ ಸಾಕ್ಷ್ಯ 8:4—12:25
ಪೌಲನ ಸೇವಾವೃತ್ತಿ 13:1—28:31
ಧರ್ಮಪ್ರಚಾರಕ್ಕಾಗಿ ಕೈಗೊಂಡ ಮೊದಲನೆಯ ಪ್ರಯಾಣ 13:1—14:28
ಜೆರುಸಲೇಮಿನಲ್ಲಿ ಸಮ್ಮೇಳನ 15:1-35
ಧರ್ಮಪ್ರಚಾರಕ್ಕಾಗಿ ಕೈಗೊಂಡ ಎರಡನೆಯ ಪ್ರಯಾಣ 15:36—18:22
ಧರ್ಮಪ್ರಚಾರಕ್ಕಾಗಿ ಕೈಗೊಂಡ ಮೂರನೆಯ ಪ್ರಯಾಣ 18:23—21:16
ಜೆರುಸಲೇಮಿನಲ್ಲಿ, ಸೆಜರೇಯದಲ್ಲಿ ಹಾಗೂ ರೋಮಿನಲ್ಲಿ ಪೌಲನ ಸೆರೆವಾಸ 21:17—28:31

Ìsàmì-sí

Pín

Daako

None

Ṣé o fẹ́ fi àwọn ohun pàtàkì pamọ́ sórí gbogbo àwọn ẹ̀rọ rẹ? Wọlé pẹ̀lú àkántì tuntun tàbí wọlé pẹ̀lú àkántì tí tẹ́lẹ̀