13
ಶಿಷ್ಯರಿಗೆ ಪಾದಸ್ನಾನ
1ಅಂದು ಪಾಸ್ಕಹಬ್ಬದ ಹಿಂದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನ ಬಳಿಗೆ ಹೋಗಬೇಕಾದ ಗಳಿಗೆ ಬಂದಿರುವುದು ಎಂದು ಯೇಸು ಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪರಮಾವಧಿಯನ್ನು ಈಗ ತೋರಿಸಲಿದ್ದರು. 2(ಯೇಸುವನ್ನು ಗುರುದ್ರೋಹದಿಂದ ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಸೈತಾನನು ಸಿಮೋನನ ಮಗ ಇಸ್ಕರಿಯೋತಿನ ಯೂದನಲ್ಲಿ ಈಗಾಗಲೇ ಹುಟ್ಟಿಸಿದ್ದನು). 3ಊಟಕ್ಕೆ ಎಲ್ಲರೂ ಕುಳಿತಿದ್ದರು. ಪಿತನು ಎಲ್ಲವನ್ನೂ ತಮ್ಮ ಕೈಗೆ ಒಪ್ಪಿಸಿರುವರೆಂದೂ ತಾವು ದೇವರ ಬಳಿಯಿಂದ ಬಂದಿದ್ದು, ಈಗ ದೇವರ ಬಳಿಗೇ ಮರಳುತ್ತಿದ್ದೆನೆಂದೂ ಯೇಸುವಿಗೆ ತಿಳಿದಿತ್ತು. 4ಅವರು ಊಟದಿಂದ ಎದ್ದು, ತಮ್ಮ ಮೇಲುಹೊದಿಕೆಯನ್ನು ತೆಗೆದಿಟ್ಟರು. ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡರು. 5ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಒರಸತೊಡಗಿದರು. 6ಹೀಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬಂದಾಗ ಆತ, “ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?” ಎಂದನು. 7ಯೇಸು, “ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮುಂದೆ ಅರ್ಥವಾಗುತ್ತದೆ,” ಎಂದು ಉತ್ತರಿಸಿದರು. 8“ನೀವು ನನ್ನ ಕಾಲುಗಳನ್ನು ತೊಳೆಯುವುದು ಎಂದಿಗೂ ಕೂಡದು,” ಎಂದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, “ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ,” ಎಂದು ನುಡಿದರು. 9ಆಗ ಪೇತ್ರನು, “ಹಾಗಾದರೆ ಪ್ರಭೂ, ನನ್ನ ಕಾಲುಗಳನ್ನು ಮಾತ್ರವಲ್ಲ, ನನ್ನ ಕೈಗಳನ್ನೂ ತಲೆಯನ್ನೂ ತೊಳೆಯಿರಿ, ಎಂದನು. 10ಯೇಸು, “ಸ್ನಾನಮಾಡಿಕೊಂಡವನು ಕಾಲುಗಳನ್ನು ತೊಳೆದುಕೊಂಡರೆ ಸಾಕು, ಅವನ ಮೈಯೆಲ್ಲಾ ಶುದ್ಧವಾಗಿರುತ್ತದೆ. ನೀವೂ ಕೂಡ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು. 11ತಮ್ಮನ್ನು ಗುರುದ್ರೋಹದಿಂದ ಹಿಡಿದುಕೊಡುವವನು ಯಾರೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು, ‘ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,’ ಎಂದು ಹೇಳಿದರು. 12ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲುಹೊದಿಕೆಯನ್ನು ಹಾಕಿಕೊಂಡು ಕುಳಿತುಕೊಂಡರು. ತಮ್ಮ ಶಿಷ್ಯರಿಗೆ, “ನಿಮಗೆ, ನಾನು ಮಾಡಿರುವುದು ಏನೆಂದು ಅರ್ಥವಾಯಿತೇ? 13‘ಬೋಧಕರೇ, ಪ್ರಭುವೇ’ ಎಂದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೆ. ನಾನು ಬೋಧಕನೂ ಹೌದು, ಪ್ರಭುವೂ ಹೌದು. 14ನಿಮಗೆ ಪ್ರಭೂವೂ ಬೋಧಕನೂ ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹಂಗಿನಲ್ಲಿದ್ದೀರಿ. 15ನಾನು ನಿಮಗೆ ಒಂದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದಂತೆಯೇ ನೀವೂ ಇತರರಿಗೆ ಮಾಡಿರಿ. 16ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಧಣಿಗಿಂತ ದಾಸನು ದೊಡ್ಡವನಲ್ಲ. ಅಂತೆಯೇ ಕಳುಹಿಸಲಾದವನು ಕಳುಹಿಸುವವನಿಗಿಂತ ಶ್ರೇಷ್ಠನಲ್ಲ. 17ಇದನ್ನೆಲ್ಲಾ ಅರ್ಥಮಾಡಿಕೊಂಡು ಅದರಂತೆ ನಡೆದರೆ, ನೀವು ಧನ್ಯರು !
ಉಂಡವರ ಮನೆಗೆ ಎರಡು ಬಗೆ
18“ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ. ಯಾರನ್ನು ನಾನು ಆರಿಸಿಕೊಂಡಿದ್ದೇನೆಂಬುದು ನನಗೆ ಗೊತ್ತು. ಆದರೆ ‘ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು’ ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿದೆ. ಆ ಮಾತು ಈಡೇರಬೇಕಾಗಿದೆ. 19ಅದು ಈಡೇರುವಾಗ ‘ಇರುವಾತನು ನಾನೇ’ ಎಂದು ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ಹೇಳುತ್ತಿದ್ದೇನೆ. 20ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ. ನನ್ನನ್ನು ಬರಮಾಡಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
ಯೂದನ ಗುರುದ್ರೋಹ
21ಇದೆಲ್ಲವನ್ನೂ ಹೇಳಿಯಾದ ಮೇಲೆ ಯೇಸು ಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ನಿಮ್ಮಲ್ಲೊಬ್ಬನು ದ್ರೋಹ ಬಗೆದು ನನ್ನನ್ನು ಹಿಡಿದೊಪ್ಪಿಸುವನು,” ಎಂದು ಸ್ಪಷ್ಟವಾಗಿ ಹೇಳಿದರು. 22ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವವರಾದರು. 23ಯೇಸುವಿನ ಪಕ್ಕದಲ್ಲೇ ಒರಗಿಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, 24ಸಿಮೋನಪೇತ್ರನು, “ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆಂದು ಕೇಳು,” ಎಂದು ಸನ್ನೆಮಾಡಿದನು. 25ಆಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ ಸರಿದು, “ಅಂಥವನು ಯಾರು ಪ್ರಭೂ?’ ಎಂದು ಕೇಳಿದನು. 26ಯೇಸು, “ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆಕೊಡುತ್ತೇನೋ ಅವನೇ,” ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. 27ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು. 28ಆಗ ಯೇಸು, “ನೀನು ಮಾಡಬೇಕೆಂದಿರುವುದನ್ನು ಬೇಗನೆ ಮಾಡಿಮುಗಿಸು,” ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ. 29ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, ‘ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ,’ ಎಂದೋ, ‘ಬಡವರಿಗೆ ಏನಾದರೂ ಕೊಡು’ ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. 30ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು.
ಹೊಸ ಕಟ್ಟಳೆ
31ಯೂದನು ಹೊರಟುಹೋದಮೇಲೆ ಯೇಸು ಸ್ವಾಮಿ ಹೀಗೆಂದರು: “ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು. 32ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು. ತಕ್ಷಣವೇ ಪ್ರಕಟಪಡಿಸುವರು. 33ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ. 34ನಿಮಗೊಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಒಬ್ಬರನ್ನೊಬ್ಬರು ಪ್ರೀತಿಸಿರಿ. ನಾನು ನಿಮ್ಮನ್ನು ಪ್ರಿತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ. 35ನಿಮ್ಮ ಈ ಪರಸ್ಪರ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು ಜನರೆಲ್ಲರೂ ಅರಿತುಕೊಳ್ಳುವರು.
ಪೇತ್ರನ ಅಲ್ಲಗಳಿಕೆಯ ಮುನ್ಸೂಚನೆ
(ಮತ್ತಾ. 26:31-35; ಮಾರ್ಕ. 14:27-31; ಲೂಕ. 22:31-32)
36ಆಗ ಸಿಮೋನ ಪೇತ್ರನು, “ಪ್ರಭುವೇ, ನೀವು ಹೋಗುವುದಾದರೂ ಎಲ್ಲಿಗೆ?” ಎಂದು ಕೇಳಿದನು. “ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನಂತರ ಬರುವೆ,” ಎಂದು ಯೇಸು ಉತ್ತರಕೊಡಲು 37ಪೇತ್ರನು, “ಈಗಲೇ ನಿಮ್ಮ ಹಿಂದೆಬರಲು ಏಕಾಗದು? ಪ್ರಭೂ, ನಿಮಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿದ್ದೇನೆ,” ಎಂದನು. 38ಆಗ ಯೇಸು, “ನನಗಾಗಿ ಪ್ರಾಣವನ್ನುಕೊಡಲು ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆಂದು ಮೂರುಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗುವುದಿಲ್ಲ,” ಎಂದು ನುಡಿದರು.