ಲೂಕ. 8

8
ಯೇಸುವಿನ ಭಕ್ತೆಯರು
1ತರುವಾಯ ಯೇಸುಸ್ವಾಮಿ ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಸಾರುತ್ತಾ ಪಟ್ಟಣಗಳಲ್ಲೂ ಹಳ್ಳಿಗಳಲ್ಲೂ ಸಂಚಾರಮಾಡಿದರು. ಹನ್ನೆರಡು ಮಂದಿ ಶಿಷ್ಯರೂ ಅವರೊಡನೆ ಇದ್ದರು. 2ದೆವ್ವಗಳ ಕಾಟದಿಂದಲೂ ರೋಗರುಜಿನಗಳಿಂದಲೂ ಬಿಡುಗಡೆ ಹೊಂದಿದ್ದ ಕೆಲವು ಮಹಿಳೆಯರು ಅವರ ಜೊತೆಯಲ್ಲಿದ್ದರು. ಅವರಾರೆಂದರೆ: ಏಳು ದೆವ್ವಗಳಿಂದ ವಿಮುಕ್ತಳಾಗಿದ್ದ ಮಗ್ದಲದ ಮರಿಯಳು, 3ಹೆರೋದನ ಅರಮನೆಯ ಮೇಲ್ವಿಚಾರಕನಾಗಿದ್ದ ಕೂಜನ ಪತ್ನಿ ಯೊವಾನ್ನಳು, ಅಲ್ಲದೆ ಸುಸಾನ್ನಳು, ಮತ್ತಿತರ ಅನೇಕರು. ಇವರು ತಮ್ಮ ಆಸ್ತಿಪಾಸ್ತಿಯನ್ನು ವೆಚ್ಚಮಾಡಿ ಯೇಸುವಿಗೂ ಅವರ ಶಿಷ್ಯರಿಗೂ ಉಪಚಾರ ಮಾಡುತ್ತಿದ್ದರು.
ಬಿತ್ತುವವನ ಸಾಮತಿ
(ಮತ್ತಾ. 13:1-9; ಮಾರ್ಕ. 4:1-9)
4ಜನರು ಊರೂರುಗಳಿಂದ ಹೊರಟು ಯೇಸುಸ್ವಾಮಿಯ ಬಳಿಗೆ ಬಂದರು. ಜನಸಮೂಹವು ಹೆಚ್ಚುತ್ತಿದ್ದಂತೆ ಯೇಸು ಈ ಸಾಮತಿಯನ್ನು ಹೇಳಿದರು: 5“ಒಬ್ಬ ರೈತನು ಬಿತ್ತುವುದಕ್ಕೆ ಹೋದನು. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಅವು ಕಾಲ್ತುಳಿತಕ್ಕೆ ಸಿಕ್ಕಿಹೋದವು. ಅವುಗಳನ್ನು ಆಕಾಶದ ಪಕ್ಷಿಗಳು ತಿಂದುಬಿಟ್ಟವು. 6ಮತ್ತೆ ಕೆಲವು ಬೀಜಗಳು ಕಲ್ಲುಭೂಮಿಯ ಮೇಲೆ ಬಿದ್ದವು. ಅವು ಮೊಳೆತಾಗಲೂ ತೇವವಿಲ್ಲದ ಕಾರಣ ಒಣಗಿಹೋದವು. 7ಇನ್ನೂ ಕೆಲವು ಮುಳ್ಳು ಪೊದೆಗಳ ನಡುವೆ ಬಿದ್ದವು. ಮುಳ್ಳುಪೊದೆಗಳು ಅವುಗಳೊಡನೆ ಬೆಳೆದು ಸಸಿಗಳನ್ನು ಅದುಮಿಬಿಟ್ಟವು. 8ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಬೆಳೆದು ನೂರ್ಮಡಿ ಫಸಲನ್ನು ಕೊಟ್ಟವು.” ಈ ಸಾಮತಿಯನ್ನು ಮುಗಿಸಿದ ಮೇಲೆ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದು ಒತ್ತಿ ಹೇಳಿದರು.
9ಶಿಷ್ಯರು, ‘ಈ ಸಾಮತಿಯ ಅರ್ಥವೇನು?’ ಎಂದು ಕೇಳಿದಾಗ, ಯೇಸು ಇಂತೆಂದರು: 10ದೇವರ ಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶವನ್ನು ನಿಮಗೆ ಕೊಡಲಾಗಿದೆ. ಬೇರೆಯವರಿಗಾದರೋ ಅವು ಸಾಮತಿಗಳ ರೂಪದಲ್ಲಿ ಮರೆಯಾಗಿವೆ. ಅವರು ಕಣ್ಣಾರೆ ನೋಡಿದರೂ ಕಾಣರು, ಕಿವಿಯಾರೆ ಕೇಳಿದರೂ ಗ್ರಹಿಸರು.”
11“ಸಾಮತಿಯ ಅರ್ಥ ಹೀಗಿದೆ: ಬೀಜ ಎಂದರೆ ದೇವರ ವಾಕ್ಯ. 12ಕಾಲ್ದಾರಿಯಲ್ಲಿ ಬಿದ್ದ ಬೀಜಗಳು ಎಂದರೆ ಆ ವಾಕ್ಯವನ್ನು ಕೇಳಿದವರು. ಆದರೆ ಅವರು ವಿಶ್ವಾಸಿಸಿ ಜೀವೋದ್ಧಾರವನ್ನು ಪಡೆಯದಂತೆ ಪಿಶಾಚಿ ಬಂದು ಆ ವಾಕ್ಯವನ್ನು ಅವರ ಹೃದಯದಿಂದ ಕೂಡಲೇ ತೆಗೆದುಬಿಡುತ್ತದೆ. 13ಕಲ್ಲುಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಸಂತೋಷದಿಂದ ಸ್ವೀಕರಿಸಿದವರು; ಅದು ಅವರಲ್ಲಿ ಬೇರೂರದ ಕಾರಣ ಅವರು ಸ್ವಲ್ಪಕಾಲ ವಿಶ್ವಾಸಿಸುತ್ತಾರೆ; ಶೋಧನೆಯ ಸಮಯದಲ್ಲಿ ಅದನ್ನು ತೊರೆದುಬಿಡುತ್ತಾರೆ. 14ಮುಳ್ಳು ಪೊದೆಗಳ ನಡುವೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿದ ಇನ್ನಿತರರು. ಆದರೆ ಕಾಲಕ್ರಮೇಣ ಬಾಳಿನ ಬವಣೆಗಳು, ಐಶ್ವರ್ಯದ ವ್ಯಾಮೋಹಗಳು ಹಾಗೂ ಸುಖಭೋಗಗಳು ಇವರನ್ನು ಅದುಮಿಬಿಡುತ್ತವೆ; ಇವರ ಫಲ ಪಕ್ವವಾಗುವುದಿಲ್ಲ. 15ಹದವಾದ ಭೂಮಿಯ ಮೇಲೆ ಬಿದ್ದ ಬೀಜಗಳು ಎಂದರೆ ದೇವರ ವಾಕ್ಯವನ್ನು ಕೇಳಿ ಅದನ್ನು ಸದ್ಗುಣಶೀಲ ಹಾಗೂ ಸಾತ್ವಿಕವಾದ ಹೃದಯದಲ್ಲಿಟ್ಟು ಸಹನೆಯಿಂದ ಫಲ ತರುವವರು.”
ದೀಪದ ಸ್ಥಾನಮಾನ
(ಮತ್ತಾ. 4:21-25)
16“ದೀಪವನ್ನು ಹಚ್ಚಿ ಯಾರೂ ಅದನ್ನು ಪಾತ್ರೆಯಿಂದ ಮುಚ್ಚಿಡುವುದಿಲ್ಲ; ಮಂಚದ ಕೆಳಗೆ ಬಚ್ಚಿಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲಿಡುತ್ತಾರೆ. 17ಬಟ್ಟಬಯಲಾಗದ ಮುಚ್ಚುಮರೆಯಿಲ್ಲ; ಬೆಳಕಿಗೆ ಬಾರದ ಹಾಗೂ ರಟ್ಟಾಗದ ಗುಟ್ಟಿಲ್ಲ.
18“ಆದ್ದರಿಂದ ನೀವು ಕಿವಿಕೊಡುವಾಗ ಎಚ್ಚರಿಕೆಯಿಂದಿರಿ; ಏಕೆಂದರೆ, ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ, ಇಲ್ಲದವನಿಂದ ತನಗಿದೆ ಎಂದುಕೊಳ್ಳುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ,” ಎಂದರು.
ಹೊಸ ಬಂಧುಬಳಗ
(ಮತ್ತಾ. 12:46-50; ಮಾರ್ಕ. 3:31-35)
19ಯೇಸುಸ್ವಾಮಿಯ ತಾಯಿ ಹಾಗೂ ಸಹೋದರರು ಯೇಸು ಇದ್ದೆಡೆಗೆ ಬಂದರು. ಆದರೆ ಜನಸಂದಣಿಯ ನಿಮಿತ್ತ ಹತ್ತಿರಕ್ಕೆ ಬರಲಾಗಲಿಲ್ಲ. 20ಯೇಸುವಿಗೆ, “ನಿಮ್ಮ ತಾಯಿಯು ಮತ್ತು ಸಹೋದರರು ನಿಮ್ಮನ್ನು ಕಾಣಬೇಕೆಂದು ಹೊರಗೆ ನಿಂತಿದ್ದಾರೆ,” ಎಂದು ತಿಳಿಸಲಾಯಿತು. 21ಅದಕ್ಕೆ ಯೇಸು, “ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವವರೇ ನನಗೆ ತಾಯಿ ಮತ್ತು ಅಣ್ಣತಮ್ಮಂದಿರು,” ಎಂದರು.
ತುಫಾನಿಗೂ ತರಂಗಗಳಿಗೂ ಒಡೆಯ
(ಮತ್ತಾ. 8:23-27; ಮಾರ್ಕ. 4:35-41)
22ಒಂದು ದಿನ ಯೇಸುಸ್ವಾಮಿ ತಮ್ಮ ಶಿಷ್ಯರ ಸಂಗಡ ದೋಣಿಯನ್ನು ಹತ್ತಿ, “ಸರೋವರದ ಆಚೆಯ ದಡಕ್ಕೆ ಹೋಗೋಣ,” ಎಂದರು. ಅಂತೆಯೇ ಎಲ್ಲರೂ ಹೊರಟರು. 23ದೋಣಿ ಸಾಗುತ್ತಿದ್ದಾಗ, ಯೇಸು ನಿದ್ರಾವಶರಾದರು. ಅಷ್ಟರಲ್ಲಿ ಸರೋವರದ ಮೇಲೆ ಬಿರುಗಾಳಿ ಎದ್ದಿತು. ದೋಣಿ ನೀರಿನಿಂದ ತುಂಬಿ ಅವರೆಲ್ಲರೂ ಅಪಾಯಕ್ಕೆ ಒಳಗಾದರು. 24ಶಿಷ್ಯರು ಬಂದು ಯೇಸುವನ್ನು ಎಬ್ಬಿಸಿ, “ಸ್ವಾಮೀ, ಸ್ವಾಮೀ, ನಾವು ಸಾಯುತ್ತಿದ್ದೇವೆ,” ಎಂದರು. ಯೇಸು ಎಚ್ಚೆತ್ತು ಬಿರುಗಾಳಿಯನ್ನೂ ಭೋರ್ಗರೆಯುತ್ತಿದ್ದ ಅಲೆಗಳನ್ನೂ ಗದರಿಸಿದರು. ಅವು ಸ್ತಬ್ಧವಾದವು. ವಾತಾವರಣ ಶಾಂತವಾಯಿತು. 25ಆಗ ಯೇಸು ಶಿಷ್ಯರಿಗೆ, “ಎಲ್ಲಿ ಹೋಯಿತು ನಿಮ್ಮ ವಿಶ್ವಾಸ?” ಎಂದು ಪ್ರಶ್ನಿಸಿದರು. ಶಿಷ್ಯರು ಭಯಭೀತರಾಗಿ, ‘ಗಾಳಿಗೂ ನೀರಿಗೂ ಆಜ್ಞೆಕೊಡುವ ಇವರು ಯಾರಿರಬಹುದು! ಅವು ಇವರು ಹೇಳಿದ ಹಾಗೆ ಕೇಳುತ್ತವೆಯಲ್ಲಾ!’ ಎಂದು ಸೋಜಿಗದಿಂದ ತಮ್ಮತಮ್ಮೊಳಗೇ ಮಾತನಾಡಿಕೊಂಡರು.
ದೆವ್ವಪೀಡಿತನಿಗೆ ಬಿಡುಗಡೆ
(ಮತ್ತಾ. 8:28-34; ಮಾರ್ಕ. 5:1-20)
26ಯೇಸುಸ್ವಾಮಿ ಮತ್ತು ಶಿಷ್ಯರು ದೋಣಿಯಲ್ಲೇ ಮುಂದೆ ಸಾಗಿ ಗಲಿಲೇಯಕ್ಕೆ ಎದುರಾಗಿದ್ದ ಗೆರಸೇನರ ನಾಡಿಗೆ ಬಂದು ಸೇರಿದರು. 27ಯೇಸು ದಡದ ಮೇಲೆ ಕಾಲಿಟ್ಟದ್ದೇ ತಡ, ಆ ಊರಿನವನೊಬ್ಬನು ಬಂದು ಅವರನ್ನು ಎದುರುಗೊಂಡನು. ಅವನಿಗೆ ಪಿಶಾಚಿ ಹಿಡಿದಿತ್ತು. ಅವನು ಬಟ್ಟೆತೊಟ್ಟು ಬಹಳ ದಿನಗಳಾಗಿತ್ತು; ಮನೆ ಬಿಟ್ಟು ಸಮಾಧಿಗಳ ಗುಹೆಗಳಲ್ಲೇ ವಾಸಿಸುತ್ತಿದ್ದನು. 28ಯೇಸುವನ್ನು ಕಂಡೊಡನೆ ಗಟ್ಟಿಯಾಗಿ ಕೂಗುತ್ತಾ ಅವರ ಮುಂದೆ ಅಡ್ಡಬಿದ್ದು, “ಯೇಸುವೇ, ಪರಾತ್ಪರ ದೇವರ ಪುತ್ರರೇ, ನಿಮಗೇಕೆ ನನ್ನ ಗೊಡವೆ? ದಯವಿಟ್ಟು ನನ್ನನ್ನು ಪೀಡಿಸಬೇಡಿ,” ಎಂದು ದನಿಯೆತ್ತಿ ಬೇಡಿಕೊಂಡನು. 29ಕಾರಣ - ಅವನನ್ನು ಬಿಟ್ಟು ತೊಲಗಬೇಕೆಂದು ಯೇಸು ದೆವ್ವಕ್ಕೆ ಆಗಲೆ ಕಟ್ಟಪ್ಪಣೆ ಮಾಡಿದ್ದರು. ಎಷ್ಟೋ ಸಾರಿ ಅದು ಅವನ ಮೇಲೆ ಬಂದಿತ್ತು. ಜನರು ಅವನನ್ನು ಸರಪಳಿ ಸಂಕೋಲೆಗಳಿಂದ ಬಂಧಿಸಿ ಕಾವಲಿನಲ್ಲಿ ಇಟ್ಟಿದ್ದರೂ ಅವುಗಳನ್ನು ಅವನು ಮುರಿದುಹಾಕುತ್ತಿದ್ದನು; ದೆವ್ವ ಅವನನ್ನು ಬೆಂಗಾಡಿಗೆ ಅಟ್ಟುತ್ತಿತ್ತು. 30ಯೇಸು, “ನಿನ್ನ ಹೆಸರೇನು?” ಎಂದು ಕೇಳಲು, ಅವನು “ಗಣ", ಎಂದು ಉತ್ತರಕೊಟ್ಟನು; ಏಕೆಂದರೆ, ಅನೇಕ ಪಿಶಾಚಿಗಳು ಅವನನ್ನು ಹೊಕ್ಕಿದ್ದವು. 31ಆ ಪಿಶಾಚಿಗಳು, “ಪಾತಾಳಕ್ಕೆ ಹೋಗಿಬೀಳಿರೆಂದು ನಮಗೆ ಆಜ್ಞೆಮಾಡಬೇಡಿ,” ಎಂದು ಯೇಸುವನ್ನು ಬೇಡಿಕೊಂಡವು.
32ಸಮೀಪದಲ್ಲೇ, ಹಂದಿಗಳ ದೊಡ್ಡ ಹಿಂಡೊಂದು ಬೆಟ್ಟದ ತಪ್ಪಲಿನಲ್ಲಿ ಮೇಯುತ್ತಿತ್ತು. ಆ ಹಂದಿಗಳೊಳಗೆ ಸೇರಿಕೊಳ್ಳಲು ತಮಗೆ ಅಪ್ಪಣೆಯಾಗಬೇಕೆಂದು ಆ ಪಿಶಾಚಿಗಳು ಯೇಸುವನ್ನು ಬೇಡಿಕೊಂಡವು. ಅವರು ಹಾಗೇ ಅಪ್ಪಣೆಮಾಡಿದರು. 33ಕೂಡಲೆ ಪಿಶಾಚಿಗಳು ಆ ವ್ಯಕ್ತಿಯಿಂದ ಹೊರಬಂದು ಹಂದಿಗಳೊಳಗೆ ಹೊಕ್ಕವು. ಇದರ ಪರಿಣಾಮವಾಗಿ ಆ ಹಂದಿಗಳ ಹಿಂಡು ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ ಸರೋವರಕ್ಕೆ ಬಿದ್ದು ನೀರುಪಾಲಾಯಿತು.
34ಇದನ್ನು ನೋಡಿದೊಡನೆಯೇ, ಹಂದಿ ಮೇಯಿಸುತ್ತಿದ್ದವರು ಓಡಿಹೋಗಿ ನಡೆದ ಈ ಘಟನೆಯನ್ನು ಪಟ್ಟಣದಲ್ಲೂ ಹಳ್ಳಿಯಲ್ಲೂ ತಿಳಿಸಿದರು. 35ಅದನ್ನು ನೋಡಲು ಜನರು ಹೊರಟು ಯೇಸುವಿನ ಬಳಿಗೆ ಬಂದರು. ಪಿಶಾಚಿಗಳಿಂದ ಬಿಡುಗಡೆಯಾಗಿದ್ದ ಆ ವ್ಯಕ್ತಿ ಬಟ್ಟೆಯನ್ನು ತೊಟ್ಟುಕೊಂಡು, ಸ್ವಸ್ಥಬುದ್ಧಿಯುಳ್ಳವನಾಗಿ, ಯೇಸುವಿನ ಪಾದಗಳ ಬಳಿ ಕುಳಿತಿದ್ದನ್ನು ಅವರೆಲ್ಲರೂ ಕಂಡು ಗಾಬರಿಗೊಂಡರು. 36ಆಗ, ನಡೆದುದ್ದನ್ನು ಕಣ್ಣಾರೆ ಕಂಡವರು ಪಿಶಾಚಿಗಳಿಂದ ಪೀಡಿತನಾಗಿದ್ದವನು ಬಿಡುಗಡೆಯಾದ ಬಗೆಯನ್ನು ವಿವರಿಸಿದರು. 37ಬಹಳವಾಗಿ ದಿಗಿಲುಗೊಂಡಿದ್ದ ಗೇರಸೇನಿನ ಹಾಗೂ ಸುತ್ತಮುತ್ತಲಿನ ಜನರೆಲ್ಲರೂ ತಮ್ಮನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಕೇಳಿಕೊಂಡರು. ಯೇಸು ದೋಣಿ ಹತ್ತಿ ಹಿಂದಿರುಗಿದರು. 38ಪಿಶಾಚಿಗಳಿಂದ ಬಿಡುಗಡೆ ಆಗಿದ್ದ ಆ ವ್ಯಕ್ತಿಯಾದರೋ, “ನನ್ನನ್ನು ನಿಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ,” ಎಂದು ಬಿನ್ನವಿಸಿಕೊಂಡನು. 39ಆದರೆ ಯೇಸು, “ನಿನ್ನ ಮನೆಗೆ ಹಿಂದಿರುಗಿಹೋಗು, ದೇವರು ನಿನಗೆ ಎಂಥಾ ಉಪಕಾರ ಮಾಡಿದ್ದಾರೆಂಬುದನ್ನು ಪ್ರಕಟಿಸು,” ಎಂದು ಅವನನ್ನು ಬೀಳ್ಕೊಟ್ಟರು. ಅವನು ಹೋಗಿ, ಯೇಸು ತನಗೆ ಮಾಡಿದ ಮಹದುಪಕಾರವನ್ನು ಊರಿನಲ್ಲೆಲ್ಲಾ ಪ್ರಚಾರಮಾಡಿದನು.
ಯಾಯೀರನ ಮಗಳಿಗೆ ಜೀವದಾನ ರಕ್ತಸ್ರಾವದ ಸ್ತ್ರೀಗೆ ಆರೋಗ್ಯದಾನ
(ಮತ್ತಾ. 9:18-26; ಮಾರ್ಕ. 5:21-43)
40ಯೇಸುಸ್ವಾಮಿ ಹಿಂದಿರುಗಿ ಬಂದುದೇ, ದಡದಲ್ಲಿ ಎದುರುನೋಡುತ್ತಿದ್ದ ಜನಸಮೂಹವು ಅವರನ್ನು ಸ್ವಾಗತಿಸಿತು. 41ಅಷ್ಟರಲ್ಲಿ ಪ್ರಾರ್ಥನಾಮಂದಿರದ ಅಧಿಕಾರಿ ಯಾಯೀರನೆಂಬವನು ಅಲ್ಲಿಗೆ ಬಂದು, ಯೇಸುವಿನ ಪಾದಕ್ಕೆರಗಿ, ತನ್ನ ಮನೆಗೆ ಬರಬೇಕೆಂದು ವಿನಂತಿಸಿದನು 42ಕಾರಣ - ಸುಮಾರು ಹನ್ನೆರಡು ವರ್ಷ ವಯಸ್ಸಿನ ಅವನ ಏಕೈಕ ಪುತ್ರಿ ಮರಣಾವಸ್ಥೆಯಲ್ಲಿದ್ದಳು. ಯೇಸು ಹೊರಟುಬರುವಾಗ ಜನರ ಗುಂಪು ಅವರನ್ನು ಸುತ್ತಲೂ ಒತ್ತರಿಸುತ್ತಿತ್ತು. 43ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಾ ಇದ್ದ ಮಹಿಳೆಯೊಬ್ಬಳು ಆ ಗುಂಪಿನಲ್ಲಿ ಇದ್ದಳು. ಆಕೆ ತನ್ನ ಆಸ್ತಿಪಾಸ್ತಿಯನ್ನೆಲ್ಲಾ ವೈದ್ಯರಿಗೆ ವೆಚ್ಚಮಾಡಿದ್ದರೂ ಆಕೆಯನ್ನು ಗುಣಪಡಿಸಲು ಯಾರಿಂದಲೂ ಸಾಧ್ಯವಾಗಿರಲಿಲ್ಲ. 44ಆಕೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು. ಆ ಕ್ಷಣವೇ ಅವಳ ರಕ್ತಸ್ರಾವವು ನಿಂತುಹೋಯಿತು. 45ಆಗ ಯೇಸು, “ನನ್ನನ್ನು ಮುಟ್ಟಿದವರು ಯಾರು?” ಎಂದು ಕೇಳಿದರು. ಯಾರೂ ಮುಟ್ಟಲಿಲ್ಲವೆಂದು ಎಲ್ಲರು ಹೇಳುತ್ತಿರಲು ಪೇತ್ರನು, “ಪ್ರಭೂ, ಇಷ್ಟೊಂದು ಜನರು ಮೇಲೆ ಮೇಲೆ ಬೀಳುತ್ತಾ ನಿಮ್ಮನ್ನು ಒತ್ತರಿಸುತ್ತಿದ್ದಾರಲ್ಲಾ,” ಎಂದನು. 46ಅದಕ್ಕೆ ಯೇಸು, “ಯಾರೋ ನನ್ನನ್ನು ಮುಟ್ಟಿದ್ದಾರೆ. ಗುಣಪಡಿಸುವ ಶಕ್ತಿ ನನ್ನಿಂದ ಹೊರಹೊಮ್ಮಿದೆ ಎಂದು ನನಗೆ ಗೊತ್ತು,” ಎಂದರು. 47ಆಗ ಆ ಮಹಿಳೆ ತಾನು ಮಾಡಿದ್ದನ್ನು ಇನ್ನು ಮುಚ್ಚಿಡಲು ಸಾಧ್ಯವಿಲ್ಲವೆಂದು ಅರಿತು, ನಡುಗುತ್ತಾ ಬಂದು, ಯೇಸುವಿಗೆ ಅಡ್ಡಬಿದ್ದಳು. ತಾನು ಮುಟ್ಟಿದ್ದಕ್ಕೆಕಾರಣವನ್ನೂ ತಾನು ತಕ್ಷಣ ಗುಣಹೊಂದಿದ್ದನ್ನೂ ಎಲ್ಲರ ಮುಂದೆ ಬಹಿರಂಗಪಡಿಸಿದಳು. 48ಯೇಸು ಆಕೆಗೆ, “ಮಗಳೇ, ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ; ಸಮಾಧಾನದಿಂದ ಹೋಗು,” ಎಂದರು.
49ಯೇಸುಸ್ವಾಮಿ ಇನ್ನೂ ಮಾತನಾಡುತ್ತಾ ಇರುವಾಗಲೇ ಒಬ್ಬನು ಯಾಯೀರನ ಮನೆಯಿಂದ ಬಂದು ಆ ಯಾಯಿರನಿಗೆ, “ನಿಮ್ಮ ಮಗಳು ತೀರಿಹೋದಳು. ಇನ್ನು ಗುರುವಿಗೆ ತೊಂದರೆಕೊಡಬೇಡಿ,” ಎಂದನು. 50ಇದನ್ನು ಕೇಳಿದ ಯೇಸು ಯಾಯೀರನಿಗೆ, “ಭಯಪಡಬೇಡ, ನಿನ್ನಲ್ಲಿ ವಿಶ್ವಾಸವೊಂದಿದ್ದರೆ ಸಾಕು, ನಿನ್ನ ಮಗಳು ಬದುಕುವಳು,” ಎಂದರು. 51ಯೇಸು ಅವನ ಮನೆಯನ್ನು ಸೇರಿದುದೇ, ಪೇತ್ರ, ಯೊವಾನ್ನ ಹಾಗೂ ಯಕೋಬ ಮತ್ತು ಆ ಬಾಲಕಿಯ ತಂದೆತಾಯಿ ಇವರ ಹೊರತು ಯಾರನ್ನೂ ತನ್ನೊಡನೆ ಒಳಕ್ಕೆ ಬರಗೊಡಲಿಲ್ಲ. 52ಇತ್ತ, ಸತ್ತ ಬಾಲಕಿಗಾಗಿ ಎಲ್ಲರೂ ಅತ್ತು ಗೋಳಾಡುತ್ತಾ ಇದ್ದರು. ಯೇಸುವಾದರೋ, “ಅಳಬೇಡಿ, ಅವಳು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. 53ಬಾಲಕಿ ಸತ್ತುಹೋಗಿರುವುದನ್ನು ಅರಿತಿದ್ದ ಜನರು ಯೇಸುವನ್ನು ಪರಿಹಾಸ್ಯ ಮಾಡತೊಡಗಿದರು. 54ಯೇಸು ಅವಳ ಕೈಹಿಡಿದು, “ಮಗೂ, ಎದ್ದೇಳು,” ಎಂದು ಕೂಗಿ ಹೇಳಿದರು. 55ಬಾಲಕಿಗೆ ಜೀವ ಮರಳಿಬಂತು. ತಕ್ಷಣವೇ ಅವಳು ಎದ್ದಳು. ತಿನ್ನಲು ಏನನ್ನಾದರೂ ಅವಳಿಗೆ ಕೊಡಬೇಕೆಂದು ಯೇಸು ಸೂಚಿಸಿದರು. 56ಬಾಲಕಿಯ ತಂದೆತಾಯಿಗಳು ಆಶ್ಚರ್ಯಚಕಿತರಾದರು. ಆಗ ಯೇಸು ನಡೆದ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಅವರಿಗೆ ಆಜ್ಞಾಪಿಸಿದರು.

Àwon tá yàn lọ́wọ́lọ́wọ́ báyìí:

ಲೂಕ. 8: KANCLBSI

Ìsàmì-sí

Pín

Daako

None

Ṣé o fẹ́ fi àwọn ohun pàtàkì pamọ́ sórí gbogbo àwọn ẹ̀rọ rẹ? Wọlé pẹ̀lú àkántì tuntun tàbí wọlé pẹ̀lú àkántì tí tẹ́lẹ̀