Akara Njirimara YouVersion
Akara Eji Eme Ọchịchọ

ಆದಿಕಾಂಡ 14

14
ಅಬ್ರಾಮನಿಂದ ಲೋಟನ ಬಿಡುಗಡೆ
1ಆ ದಿನಗಳಲ್ಲಿ ಬಾಬೆಲೋನಿನ ಅರಸ ಅಮ್ರಾಫೆಲನು, ಎಲ್ಲಸಾರಿನ ಅರಸ ಅರಿಯೋಕನು, ಎಲಾಮಿನ ಅರಸ ಕೆದೊರ್ಲಗೋಮರನು ಮತ್ತು ಗೋಯಿಮದ ಅರಸ ತಿದ್ಗಾಲನು - ಈ ನಾಲ್ವರು 2-3ಈಗ ಲವಣ ಸಮುದ್ರ#14:2-3 ಅಥವಾ: ಮೃತ್ಯುಸಾಗರ. ಎನಿಸಿಕೊಳ್ಳುವ ಸಿದ್ದೀಮ್ ತಗ್ಗುಪ್ರದೇಶದಲ್ಲಿ ಒಂದುಗೂಡಿದ್ದ ಸೊದೋಮಿನ ಅರಸ ಬೆರಗ, ಗೊಮೋರದ ಅರಸ ಬಿರ್ಶಗ, ಅದ್ಮಾಹದ ಅರಸ ಶಿನಾಬ, ಚೆಬೋಯಿಮನ ಅರಸ ಶೆಮೇಬರ, ಬೆಲಗಿನ (ಅಂದರೆ ಚೋಗರದ) ಅರಸ - ಈ ಐವರೊಡನೆ ಯುದ್ಧಮಾಡಿದರು. 4ಬೆರಗ ಮೊದಲಾದ ಈ ಐದು ಅರಸರು ಹನ್ನೆರಡು ವರ್ಷಕಾಲ ಕೆದೊರ್ಲಗೋಮರನಿಗೆ ಅಧೀನರಾಗಿ ಇದ್ದರು. ಹದಿಮೂರನೆಯ ವರ್ಷದಲ್ಲಿ ತಿರುಗಿಬಿದ್ದರು. 5ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಮತ್ತು ಅವನಿಗೆ ಸೇರಿದ ರಾಜರೂ ಬಂದು ಅಷ್ಟರೋತ್ ಕರ್ನಯಿಮ್ ಎಂಬಲ್ಲಿ ರೆಫಾಯರನ್ನೂ ಹಾಮ್ ಎಂಬಲ್ಲಿ ಏಮಿಯರನ್ನೂ ಸೋಲಿಸಿದರು. 6ಇದಲ್ಲದೆ ಎದೋಮ್#14:6 ಅಥವಾ: ಸೇಯಿರ್. ಗುಡ್ಡ ಪ್ರಾಂತ್ಯದಲ್ಲಿ ವಾಸವಾಗಿದ್ದ ಹೋರಿಯರನ್ನು ಅಲ್ಲೇ ಸೋಲಿಸಿ, ಮರಳುಗಾಡಿಗೆ ಹತ್ತಿರವಿರುವ ಏಲ್ಪಾರಾನಿನವರೆಗೂ ಹಿಂದಟ್ಟಿದರು. 7ಅನಂತರ ಎನ್ಮಿಷ್ಪಾಟ್ ಎನ್ನಲ್ಪಟ್ಟ ಕಾದೇಶ್‍ಗೆ ಹಿಂದಿರುಗಿ ಬಂದು ಅಮಾಲೇಕ್ಯರ ಸಮಸ್ತ ನಾಡನ್ನು ಮತ್ತು ಹಚಚೋನ್ ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನು ಜಯಿಸಿದರು.
8ಆಗ ಸೊದೋಮ್, ಗೊಮೋರ, ಅದ್ಮಾಹ, ಚೆಬೋಯಿಮ್, ಚೋಗರ್ ಎಂಬ ಬೇಲಗ್ ಈ ಪಟ್ಟಣಗಳ ರಾಜರು ಹೊರಟು ಅವರಿಗೆದುರಾಗಿ, ಅಂದರೆ 9ಏಲಾಮನ ಅರಸ ಕೆದೊರ್ಲಗೋಮರ್, ಗೋಯಿಮದ ಅರಸ ತಿದ್ಗಾಲ, ಬಾಬಿಲೋನಿನ ಅರಸ ಅಮ್ರಾಫೆಲ, ಎಲ್ಲಸಾರಿನ ಅರಸ ಅರಿಯೋಕ ಇವರಿಗೆ ವಿರೋಧವಾಗಿ ಸಿದ್ದೀಮ್ ತಗ್ಗುಪ್ರದೇಶದಲ್ಲಿ ತಮ್ಮ ದಂಡನ್ನು ನಿಲ್ಲಿಸಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರನ್ನು ಎದುರಿಸಿದರು. 10ಆ ಸಿದ್ದೀಮ್ ತಗ್ಗಿನಲ್ಲಿ ಕಲ್ಲರಗಿನ ಕೆಸರುಗುಣಿಗಳು ಬಹಳವಿದ್ದವು. ಸೊದೋಮ್ ಗೊಮೋರದ ರಾಜರಕಡೆಯವರು ಹಿಮ್ಮೆಟ್ಟಿ ಓಡಿಹೋಗುವಾಗ ಆ ಗುಣಿಗಳಲ್ಲಿ ಬಿದ್ದು ಸತ್ತರು. ಉಳಿದವರು ಬೆಟ್ಟಗಳಿಗೆ ಓಡಿಹೋದರು. 11ಗೆದ್ದ ಆ ನಾಲ್ಕು ರಾಜರು ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ಸೂರೆಮಾಡಿದರು. ಅವುಗಳಲ್ಲಿದ್ದ ಆಸ್ತಿಪಾಸ್ತಿಯನ್ನೂ ದವಸಧಾನ್ಯಗಳನ್ನೂ ದೋಚಿಕೊಂಡು ಹೋದರು. 12ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ತಮ್ಮನ ಮಗ ಲೋಟನನ್ನು ಅವನ ಆಸ್ತಿಪಾಸ್ತಿ ಸಹಿತ ಹಿಡಿದುಕೊಂಡು ಹೋದರು.
13ತಪ್ಪಿಸಿಕೊಂಡು ಓಡಿಹೋದವರಲ್ಲಿ ಒಬ್ಬ ವ್ಯಕ್ತಿ ಹಿಬ್ರಿಯನಾದ ಅಬ್ರಾಮನ ಬಳಿಗೆ ಬಂದು ನಡೆದುದನ್ನು ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ತೋಪಿನ ಬಳಿ ವಾಸವಾಗಿದ್ದನು. ಮಮ್ರೆಯನಿಗೆ ಎಷ್ಕೋಲ ಮತ್ತು ಆನೇರ ಎಂಬ ಸಹೋದರರಿದ್ದರು. ಇವರಿಗೂ ಅಬ್ರಾಮನಿಗೂ ಒಪ್ಪಂದವಿತ್ತು. 14ಅಬ್ರಾಮನು ತನ್ನ ತಮ್ಮನ ಮಗ ಸೆರೆಗೆ ಸಿಕ್ಕಿರುವುದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದು ಸುಶಿಕ್ಷಿತರಾದ 318 ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟನು. ಈ ನಾಲ್ಕು ಮಂದಿ ರಾಜರನ್ನು ದಾನೂರಿನವರೆಗೆ ಹಿಂದಟ್ಟಿದನು. 15ಅಲ್ಲಿ ತನ್ನ ದಂಡನ್ನು ಇಬ್ಭಾಗವಾಗಿ ವಿಂಗಡಿಸಿ ರಾತ್ರಿವೇಳೆಯಲ್ಲಿ ಶತ್ರುಗಳ ಮೇಲೆ ಬಿದ್ದು ಸೋಲಿಸಿದನು. ಅಲ್ಲದೆ ದಮಸ್ಕಸ್ ಪಟ್ಟಣದ ಉತ್ತರಕ್ಕಿರುವ ಹೋಬಾ ಊರಿನತನಕ ಹಿಂದಟ್ಟಿದನು. 16ಆ ರಾಜರು ಅಪಹರಿಸಿದ್ದ ಎಲ್ಲ ವಸ್ತುಗಳನ್ನು ಕಿತ್ತುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನು ಬಿಡುಗಡೆಮಾಡಿದನು; ಅವನ ಆಸ್ತಿಪಾಸ್ತಿಯನ್ನು, ಸೆರೆಯಲ್ಲಿದ್ದ ಮಹಿಳೆಯರನ್ನು ಮತ್ತು ಇತರರನ್ನು ಬಿಡಿಸಿಕೊಂಡು ಹಿಂದಿರುಗಿದನು.
ಅಬ್ರಾಮನಿಗೆ ಮೆಲ್ಕಿಸದೇಕನಿಂದ ಆಶೀರ್ವಾದ
17ಅಬ್ರಾಮನು ಕೆದೊರ್ಲಗೋಮರನನ್ನೂ ಅವನೊಂದಿಗಿದ್ದ ರಾಜರನ್ನೂ ಸೋಲಿಸಿ ಬಂದಾಗ ಸೊದೋಮಿನ ಅರಸನು ಅವನನ್ನು ಶಾವೆ ತಗ್ಗಿನಲ್ಲಿ (ಅದಕ್ಕೆ ಅರಸನ ತಗ್ಗು ಎಂಬ ಹೆಸರೂ ಉಂಟು) ಭೇಟಿಯಾಗಲು ಬಂದನು. 18ಸಾಲೇಮಿನ ಅರಸನೂ ಪರಾತ್ಪರ ದೇವರ ಯಾಜಕನೂ ಆಗಿದ್ದ ಮೆಲ್ಕಿಸದೇಕನು ಸಹ ಅಲ್ಲಿಗೆ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಅರ್ಪಿಸಿ ಅಬ್ರಾಮನಿಗೆ ಇಂತೆಂದು ಆಶೀರ್ವಾದ ಮಾಡಿದನು:
19“ಭೂಮ್ಯಾಕಾಶಗಳನ್ನು ಉಂಟುಮಾಡಿದ
ಪರಾತ್ಪರ ದೇವರ
ಆಶೀರ್ವಾದ ಅಬ್ರಾಮನಿಗಿರಲಿ;
ನಿನ್ನ ಶತ್ರುಗಳನ್ನು ನಿನ್ನ ಕೈವಶಮಾಡಿದ ಆ ಪರಾತ್ಪರ
ದೇವರಿಗೆ ಸ್ತೋತ್ರವಾಗಲಿ!”
20ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕಿಸದೇಕನಿಗೆ ಕೊಟ್ಟನು.
21ಸೊದೋಮಿನ ಅರಸನು ಅಬ್ರಾಮನಿಗೆ, “ನೀನು ಬಿಡಿಸಿ ತಂದ ಜನರನ್ನು ನನಗೆ ಕೊಡು; ಆಸ್ತಿಯನ್ನು ನೀನೇ ಇಟ್ಟುಕೊ,” ಎಂದನು. 22ಅದಕ್ಕೆ ಅಬ್ರಾಮನು, “ಭೂಮ್ಯಾಕಾಶಗಳನ್ನು ಉಂಟುಮಾಡಿದ ಪರಾತ್ಪರ ದೇವರ ಕಡೆಗೆ ಕೈಯೆತ್ತಿ ಪ್ರಮಾಣ ಮಾಡುತ್ತೇನೆ: 23ನಿನಗೆ ಸೇರಿದವುಗಳಲ್ಲಿ ಯಾವುದನ್ನೂ, ಒಂದು ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಾನು ತೆಗೆದುಕೊಳ್ಳುವುದಿಲ್ಲ. ‘ನನ್ನಿಂದ ಅಬ್ರಾಮನು ಐಶ್ವರ್ಯವಂತನಾದ’ ಎಂದು ಹೇಳಿಕೊಳ್ಳುವುದಕ್ಕೂ ನಿನಗೆ ಆಸ್ಪದ ಇರಬಾರದು. 24ನನಗೆ ಏನೂ ಬೇಡ. ಆಳುಗಳು ತಿಂದದ್ದು ಸಾಕು. ನನ್ನ ಜೊತೆಗರರಾದ ಅನೇರ, ಎಷ್ಕೋಲ ಮತ್ತು ಮಮ್ರೆ ಅವರಿಗೆ ಬರತಕ್ಕ ಪಾಲು ಮಾತ್ರ ಅವರಿಗೆ ಸೇರಲಿ,” ಎಂದು ಹೇಳಿದನು.

Nke Ahọpụtara Ugbu A:

ಆದಿಕಾಂಡ 14: KANCLBSI

Mee ka ọ bụrụ isi

Kesaa

Mapịa

None

Ịchọrọ ka echekwaara gị ihe ndị gasị ị mere ka ha pụta ìhè ná ngwaọrụ gị niile? Debanye aha gị ma ọ bụ mee mbanye