Logótipo YouVersion
Ícone de pesquisa

ಆದಿಕಾಂಡ 26

26
ಇಸಾಕ ಮತ್ತು ಅಬೀಮೆಲೆಕ
1ಹಿಂದೆ ಅಬ್ರಹಾಮನ ಕಾಲದಲ್ಲಿ ಬಂದಿದ್ದ ಬರಗಾಲವು ಮತ್ತೊಮ್ಮೆ ಕಾನಾನ್ ನಾಡಿಗೆ ಬಂದಿತು. ಇಸಾಕನು ಫಿಲಿಷ್ಟಿಯರ ಅರಸ ಅಬೀಮೆಲೆಕನನ್ನು ಕಾಣಲು ಗೆರಾರಿಗೆ ಹೋದನು. 2ಅಲ್ಲಿ ಸರ್ವೇಶ್ವರ ಸ್ವಾಮಿ ಇಸಾಕನಿಗೆ ದರ್ಶನ ಕೊಟ್ಟು ಇಂತೆಂದರು: “ನೀನು ಈಜಿಪ್ಟಿಗೆ ಹೋಗಬೇಡ; 3ನಾನು ಹೇಳುವ ನಾಡಿನಲ್ಲಿ ಇದ್ದು ಪ್ರವಾಸ ಮಾಡುತ್ತಿರು. ನಾನು ನಿನ್ನ ಸಂಗಡವಿದ್ದು ನೀನು ಏಳಿಗೆಯಾಗುವಂತೆ ಮಾಡುತ್ತೇನೆ; ಈ ನಾಡೆಲ್ಲವನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ. 4ನಿನ್ನ ತಂದೆ ಅಬ್ರಹಾಮನು ನನ್ನ ಮಾತನ್ನು ಕೇಳಿ ನಾನು ಹೇಳಿದಂತೆ ಮಾಡಿದನು; ನನ್ನ ಆಜ್ಞಾವಿಧಿಗಳನ್ನೂ ನೇಮನಿಯಮಗಳನ್ನೂ ಕೈಗೊಂಡು ನಡೆದನು. ಆದುದರಿಂದ ನಾನು ಅವನಿಗೆ ಮಾಡಿದ ಪ್ರಮಾಣವನ್ನು ನೆರವೇರಿಸುತ್ತೇನೆ. 5ನಿನ್ನ ಸಂತತಿಯನ್ನು ಆಕಾಶದಲ್ಲಿರುವ ನಕ್ಷತ್ರಗಳಂತೆ ಅಸಂಖ್ಯಾತವಾಗಿಸುತ್ತೇನೆ; ಅವರಿಗೆ ಈ ನಾಡೆಲ್ಲವನ್ನು ಕೊಡುತ್ತೇನೆ. ಜಗದ ಜನಾಂಗಗಳಿಗೆಲ್ಲ ನಿನ್ನ ಸಂತತಿಯ ಮುಖಾಂತರ ಆಶೀರ್ವಾದ ದೊರಕುವುದು.”
6ಅಂತೆಯೇ ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು. 7ಅಲ್ಲಿಯ ಜನರು ಅವನ ಹೆಂಡತಿಯ ವಿಷಯವಾಗಿ ವಿಚಾರಿಸಿದರು. “ಅವಳು ನನ್ನ ತಂಗಿ”, ಎಂದು ಇಸಾಕನು ಹೇಳಿದನು. ರೆಬೆಕ್ಕಳು ಬಲು ಚೆಲುವೆಯಾಗಿದ್ದರಿಂದ ಆಕೆಯ ನಿಮಿತ್ತ ತನ್ನನ್ನು ಕೊಂದಾರು ಎಂದು ಹೆದರಿ ಹಾಗೆ ಹೇಳಿದನು. 8ಅವನು, ಆ ಸ್ಥಳದಲ್ಲಿ ಬಹಳ ದಿವಸ ತಂಗಿದ್ದನು. ಒಂದು ದಿನ ಫಿಲಿಷ್ಟಿಯ ಅರಸನಾದ ಅಬೀಮೆಲೆಕನು ಕಿಟಕಿಯಿಂದ ನೋಡಿದಾಗ ಇಸಾಕನು ತನ್ನ ಹೆಂಡತಿ ರೆಬೆಕ್ಕಳ ಸಂಗಡ ಸರಸವಾಡುವುದನ್ನು ಕಂಡನು. 9ಕೂಡಲೆ ಅವನು ಇಸಾಕನನ್ನು ಕರೆಯಿಸಿ, “ಖಂಡಿತವಾಗಿ ಈಕೆ ನಿನ್ನ ಹೆಂಡತಿ; ಮತ್ತೆ ಆಕೆ ನಿನ್ನ ತಂಗಿ ಎಂದು ಏಕೆ ಹೇಳಿದೆ?” ಎಂದು ಕೇಳಿದನು. ಇಸಾಕನು, “ಈಕೆಯ ನಿಮಿತ್ತ ಜನರು ನನ್ನನ್ನು ಕೊಂದಾರೆಂದು ಹಾಗೆ ಹೇಳಿದೆ,” ಎಂದನು. 10ಅದಕ್ಕೆ ಅಬೀಮೆಲೆಕನು, “ನೀನು ನಮಗೆ ಹೀಗೆ ಮಾಡಬಹುದೆ? ನಮ್ಮಲ್ಲಿ ಯಾರಾದರೊಬ್ಬನು ನಿನ್ನ ಹೆಂಡತಿಯನ್ನು ಕೂಡಿರಬಹುದಿತ್ತಲ್ಲವೆ? ಆಗ ನಿನ್ನಿಂದ ನನಗೆ ದೋಷ ಪ್ರಾಪ್ತವಾಗುತ್ತಿತ್ತಲ್ಲವೆ?” ಎಂದು ಹೇಳಿದನು. 11ಬಳಿಕ ತನ್ನ ಪ್ರಜೆಗಳಿಗೆ ಈ ಆಜ್ಞೆಯನ್ನು ಹೊರಡಿಸಿದನು. “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಕೇಡುಮಾಡುವವನಿಗೆ ಮರಣದಂಡನೆ ತಪ್ಪದು.”
12ಇಸಾಕನು ಆ ನಾಡಿನಲ್ಲಿ ವ್ಯವಸಾಯ ಮಾಡಿ ಅದೇ ವರ್ಷದಲ್ಲಿ ನೂರ್ಮಡಿ ಬೆಳೆ ಎತ್ತಿದನು. ಸರ್ವೇಶ್ವರ ಸ್ವಾಮಿಯ ಆಶೀರ್ವಾದ ಅವನ ಮೇಲಿತ್ತು. 13ಅವನು ದಿನದಿಂದ ದಿನಕ್ಕೆ ಹೆಚ್ಚು ಆಸ್ತಿವಂತನಾಗಿ ದೊಡ್ಡ ಧನವಂತನಾದನು. 14ಅವನಿಗೆ ದನಕುರಿಗಳೂ ಆಳುಕಾಳುಗಳೂ ಹೇರಳವಾಗಿದ್ದುದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು. 15ಅವನ ತಂದೆ ಅಬ್ರಹಾಮನ ಕಾಲದಲ್ಲೇ ತೋಡಲಾಗಿದ್ದ ಬಾವಿಯನ್ನು ಮಣ್ಣುಹಾಕಿ ಮುಚ್ಚಿಬಿಟ್ಟರು.
16ಹೀಗಿರಲಾಗಿ ಅಬೀಮೆಲೆಕನು ಇಸಾಕನಿಗೆ, “ನೀನು ನಮಗಿಂತ ಅಧಿಕ ಬಲಿಷ್ಠನಾಗಿಬಿಟ್ಟೆ; ಆದುದರಿಂದ ನಮ್ಮನ್ನು ಬಿಟ್ಟು ಹೊರಟುಹೋಗಬೇಕು” ಎಂದು ಹೇಳಿದನು. 17ಅಂತೆಯೇ ಇಸಾಕನು ಅಲ್ಲಿಂದ ಹೊರಟು ಗೆರಾರ್ ತಗ್ಗಿನ ಬಯಲಿನಲ್ಲಿ ಗುಡಾರ ಹಾಕಿಕೊಂಡು ವಾಸಮಾಡಿದನು. 18ಅಬ್ರಹಾಮನು ತೋಡಿಸಿದ್ದ ಬಾವಿಗಳನ್ನು ಅವನು ಸತ್ತಮೇಲೆ ಫಿಲಿಷ್ಟಿಯರು ಮುಚ್ಚಿಹಾಕಿದ್ದರಿಂದ ಇಸಾಕನು ಅವುಗಳನ್ನು ಮರಳಿ ತೆಗೆಸಿ ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟನು.
19ಇಸಾಕನ ಕೆಲಸಗಾರರು ಆ ತಗ್ಗಿನಲ್ಲಿ ಅಗೆಯುತ್ತಿದ್ಪಾಗ ಅವರಿಗೆ ಸೆಲೆ ನೀರಿನ ಬಾವಿಯೊಂದು ಸಿಕ್ಕಿತು. 20ಗೆರಾರಿನ ದನಕಾಯುವವರು ಬಂದು ಆ ನೀರು ತಮ್ಮದು ಎಂದು ಹೇಳಿ ಇಸಾಕನ ದನಕಾಯುವವರ ಸಂಗಡ ಜಗಳವಾಡಿದರು. ಆದುದರಿಂದ ಇಸಾಕನು ಆ ಬಾವಿಗೆ “ಏಸೆಕ್"#26:20 ಅಂದರೆ: ಕಿತ್ತಲಾಟ. ಎಂದು ಹೆಸರಿಟ್ಟರು.
21ತರುವಾಯ ಅವನ ಜನರು ಬೇರೊಂದು ಬಾವಿಯನ್ನು ತೋಡಿದರು. ಆ ನಾಡಿಗರು ಅದಕ್ಕಾಗಿಯೂ ಜಗಳವಾಡಿದ್ದರಿಂದ ಅದಕ್ಕೆ ‘ಸಿಟ್ನಾ’#26:21 ಅಂದರೆ: ವೈರ್ಯ. ಎಂದು ಹೆಸರಿಟ್ಟನು. 22ಅವನು ಅಲ್ಲಿಂದ ಮುಂದಕ್ಕೆ ತೆರಳಿ ಮತ್ತೊಂದು ಬಾವಿಯನ್ನು ಅಗೆಸಿದನು. ಅದರ ಬಗ್ಗೆ ಯಾರೂ ಜಗಳಕ್ಕೆ ಬರಲಿಲ್ಲ. ಈ ಕಾರಣ ಅವನು, “ಸರ್ವೇಶ್ವರ ನಮಗೀಗ ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ; ನಾವು ಅಭಿವೃದ್ಧಿಯಾಗುತ್ತೇವೆ,” ಎಂದು ಹೇಳಿ ಆ ಬಾವಿಗೆ ‘ರೆಹೋಬೋತ್’#26:22 ಅಂರೆ: ಸ್ವಾತಂತ್ರ್ಯ. ಎಂದು ಹೆಸರಿಟ್ಟನು.
23ಇಸಾಕನು ಅಲ್ಲಿಂದ ಹೊರಟು ಬೇರ್ಷೆಬಕ್ಕೆ ಬಂದನು. 24ಆ ರಾತ್ರಿ ಸರ್ವೇಶ್ವರ ಅವನಿಗೆ ದರ್ಶನವಿತ್ತು,
“ನಿನ್ನ ತಂದೆ ಅಬ್ರಹಾಮನ ದೇವರು ನಾನೇ
ಅಂಜಬೇಡ, ನಿನ್ನ ಸಂಗಡ ನಾನಿರುವೆ.
ಆ ನನ್ನ ದಾಸ ಅಬ್ರಹಾಮನ ನಿಮಿತ್ತ
ನಿನ್ನ ಹರಸಿ ನಾ ಹೆಚ್ಚಿಸುವೆ ನಿನ್ನ
ಸಂತಾನವ” ಎಂದರು.
25ಇಸಾಕನು ಒಂದು ಬಲಿಪೀಠವನ್ನು ಕಟ್ಟಿಸಿ ಸರ್ವೇಶ್ವರ ಸ್ವಾಮಿಯ ನಾಮಸ್ಮರಣೆ ಮಾಡಿ ಆರಾಧಿಸಿ, ಅಲ್ಲಿ ಗುಡಾರ ಹಾಕಿಸಿಕೊಂಡನು. ಅವನ ಕೆಲಸಗಾರರು ಅಲ್ಲಿಯೂ ಒಂದು ಬಾವಿಯನ್ನು ತೋಡಿದರು.
ಇಸಾಕನಿಗೂ ಅಬೀಮೆಲೆಕನಿಗೂ ಆದ ಒಪ್ಪಂದ
26ಇದಾದ ಬಳಿಕ ಅಬೀಮೆಲೆಕನು ತನ್ನ ಮಂತ್ರಿ ಅಹುಜ್ಜತನನ್ನೂ ಸೇನಾಪತಿ ಫೀಕೋಲನನ್ನೂ ಕರೆದುಕೊಂಡು ಗೆರಾರಿನಿಂದ ಇಸಾಕನ ಬಳಿಗೆ ಬಂದನು. 27ಇಸಾಕನು, “ನೀವು ನನ್ನ ಮೇಲೆ ಹಗೆತನ ತಾಳಿ ನಿಮ್ಮ ಬಳಿಯಿಂದ ಕಳುಹಿಸಿಬಿಟ್ಟಿರಲ್ಲವೆ? ಈಗ ನನ್ನ ಬಳಿಗೆ ಏಕೆ ಬಂದಿರಿ?” ಎಂದು ಕೇಳಿದನು. 28ಅದಕ್ಕೆ ಅವರು, “ಸರ್ವೇಶ್ವರ ನಿನ್ನ ಸಂಗಡ ಇದ್ದಾರೆಂಬುದು ನಮಗೆ ಚೆನ್ನಾಗಿ ಕಂಡುಬಂದಿದೆ. ನೀನೂ ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾದ ಒಪ್ಪಂದ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೇವೆ. 29ನಾವು ನಿನಗೆ ಯಾವ ಕೇಡನ್ನು ಮಾಡದೆ ಒಳ್ಳೆಯದನ್ನೇ ಮಾಡಿ ಸಮಾಧಾನದಿಂದ ಕಳುಹಿಸಿಕೊಟ್ಟಿಲ್ಲವೆ? ಅದರಂತೆಯೆ ಸರ್ವೇಶ್ವರ ಸ್ವಾಮಿಯಿಂದ ಆಶೀರ್ವಾದ ಪಡೆದ ನೀನು ನಮಗೆ ಕೇಡುಮಾಡುವುದಿಲ್ಲವೆಂದು ಪ್ರಮಾಣ ಮಾಡಬೇಕು,” ಎಂದು ಹೇಳಿದರು. 30ಆಗ ಇಸಾಕನು ಅವರಿಗೆ ಔತಣವನ್ನು ಏರ್ಪಡಿಸಿದನು; ಅವರೆಲ್ಲರು ತಿಂದು ಕುಡಿದರು. 31ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡರು. ಇಸಾಕನು ಅವರನ್ನು ಬೀಳ್ಕೊಡಲು ಅವರು ಸಮಾಧಾನದಿಂದ ಹೊರಟುಹೋದರು.
32ಅದೇ ದಿನ ಇಸಾಕನ ಕೆಲಸಗಾರರು ತಾವು ತೋಡಿದ್ದ ಬಾವಿಯ ಸಮಾಚಾರದೊಂದಿಗೆ ಬಂದು, “ನಮಗೆ ನೀರು ಸಿಕ್ಕಿತು,” ಎಂದು ವರದಿಮಾಡಿದರು. 33ಇಸಾಕನು ಆ ಬಾವಿಗೆ, ‘ಷೆಬಾ’#26:33 ಅಂದರೆ: "ವ್ರತ". ಎಂದು ಹೆಸರಿಟ್ಟನು. ಈ ಕಾರಣ ಅಲ್ಲಿರುವ ಊರಿಗೆ ‘ಬೇರ್ಷೆಬ’ ಎಂದು ಹೆಸರಾಯಿತು. 34ಏಸಾವನು ನಲವತ್ತು ವರ್ಷದವನಾದಾಗ ಹಿತ್ತಿಯನಾದ ಬೇರಿಯನ ಮಗಳು ಯೆಹುದೀತಳನ್ನು ಮತ್ತು ಹಿತ್ತಿಯನಾದ ಎಲೋನನ ಮಗಳು ಬಾಸೆಮತಳನ್ನು ಮದುವೆಮಾಡಿಕೊಂಡನು. 35ಈ ಪತ್ನಿಗಳ ನಿಮಿತ್ತ ಇಸಾಕನು ಮತ್ತು ರೆಬೆಕ್ಕಳು ದುಃಖಪಡಬೇಕಾಯಿತು.

Atualmente selecionado:

ಆದಿಕಾಂಡ 26: KANCLBSI

Destaque

Partilhar

Copiar

None

Quer salvar os seus destaques em todos os seus dispositivos? Faça o seu registo ou inicie sessão