ಆದಿಕಾಂಡ 27
27
ಯಕೋಬನಿಗೆ ಇಸಾಕನ ಆಶೀರ್ವಾದ
1ಇಸಾಕನಿಗೆ ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮಬ್ಬಾಯಿತು. ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು, "ಮಗನೇ,” ಎನ್ನಲು ಏಸಾವನು, “ಇಗೋ, ಇಲ್ಲೇ ಇದ್ದೇನೆ,” ಎಂದನು.
2ಇಸಾಕನು ಅವನಿಗೆ, “ನೋಡು, ನಾನು ಮುದುಕನಾಗಿಬಿಟ್ಟೆ. ಯಾವಾಗ ಸಾಯುತ್ತೇನೋ ಗೊತ್ತಿಲ್ಲ; 3ಆದುದರಿಂದ ನಿನ್ನ ಆಯುಧಗಳನ್ನೂ ಬಿಲ್ಲುಬತ್ತಳಿಕೆಗಳನ್ನೂ ತೆಗೆದುಕೊಂಡು ಕಾಡಿಗೆ ಹೋಗು; ಬೇಟೆಯಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ; 4ಅದರಿಂದ ನನಗಿಷ್ಟವಾಗಿರುವ ಸವಿಯೂಟವನ್ನೂ ಅಣಿಮಾಡಿ ಬಡಿಸು. ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಮನಸಾರೆ ಆಶೀರ್ವದಿಸುತ್ತೇನೆ,” ಎಂದು ಹೇಳಿದನು.
5ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿದ್ದಿತು. ಏಸಾವನು ಬೇಟೆಯಾಡಲು ಕಾಡಿಗೆ ಹೋಗಿದ್ದಾಗ, 6ಆಕೆ ತನ್ನ ಮಗ ಯಕೋಬನಿಗೆ, “ನಿನ್ನ ತಂದೆ ನಿನ್ನಣ್ಣ ಏಸಾವನ ಸಂಗಡ ಮಾತನಾಡುತ್ತಾ, 7ನೀನು ಹೋಗಿ ಬೇಟೆಯಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ, ಅದರಿಂದ ನನಗೆ ಸವಿ ಊಟವನ್ನು ಅಣಿಮಾಡಿ ಬಡಿಸು; ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಸರ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮನಸಾರೆ ಆಶೀರ್ವದಿಸುತ್ತೇನೆ,’ ಎಂದು ಹೇಳಿದ್ದನ್ನು ಕೇಳಿದ್ದೇನೆ. 8ಆದುದರಿಂದ ಮಗನೇ, ನೀನು ನನ್ನ ಮಾತಿಗೆ ಕಿವಿಗೊಟ್ಟು ನಾನು ಹೇಳುವಂತೆ ಮಾಡು: 9ಮೇಕೆ ಮಂದೆಯ ಬಳಿಗೆ ಹೋಗಿ ಎರಡು ಒಳ್ಳೆಯ ಮೇಕೆಮರಿಗಳನ್ನು ಬೇಗನೆ ತೆಗೆದುಕೊಂಡು ಬಾ; ಅವುಗಳಿಂದ ನಿನ್ನ ತಂದೆಗೆ ಇಷ್ಟವಾಗಿರುವ ಸವಿಯೂಟವನ್ನು ನಾನೇ ಅಣಿಮಾಡುತ್ತೇನೆ. 10ನೀನು ಅದನ್ನು ಅವರ ಬಳಿಗೆ ತೆಗೆದುಕೊಂಡು ಹೋಗಿ ಬಡಿಸಬೇಕು; ಹಾಗೆ ಮಾಡಿದರೆ ಅವರು ಸಾಯುವುದಕ್ಕೆ ಮುಂಚೆ ನಿನ್ನನ್ನೇ ಮನಸಾರೆ ಆಶೀರ್ವದಿಸುವರು,” ಎಂದಳು.
11ಅದಕ್ಕೆ ಯಕೋಬನು, “ನನ್ನ ಅಣ್ಣನ ಮೈ ತುಂಬ ರೋಮಗಳಿವೆ. ನನ್ನ ಮೈ ಆದರೋ ನುಣ್ಣಗಿದೆ; 12ಒಂದು ವೇಳೆ ತಂದೆ ನನ್ನನ್ನು ಮುಟ್ಟಿನೋಡಿಯಾರು; ನಾನು ಅವರಿಗೆ ವಂಚಕನಾಗಿ ತೋರಿಬಂದರೆ ಆಶೀರ್ವಾದಕ್ಕೆ ಬದಲಾಗಿ ಶಾಪ ಬರಮಾಡಿಕೊಳ್ಳುತ್ತೇನೆ,” ಎಂದನು.
13ಆಗ ಅವನ ತಾಯಿ, “ಮಗನೇ, ಅವರು ನಿನಗೆ ಶಾಪ ಕೊಟ್ಟರೆ ಆ ಶಾಪ ನನಗಿರಲಿ; ನೀನು ನನ್ನ ಮಾತನ್ನು ಕೇಳಿ ಆ ಮರಿಗಳನ್ನು ತೆಗೆದುಕೊಂಡು ಬಾ,” ಎಂದಳು. 14ಅವನು ಹೋಗಿ ಅವುಗಳನ್ನು ತಂದು ತಾಯಿಗೆ ಕೊಟ್ಟನು. ರೆಬೆಕ್ಕಳು ಅವನ ತಂದೆಗೆ ಇಷ್ಟವಾದ ಸವಿ ಊಟವನ್ನು ಸಿದ್ಧಪಡಿಸಿದಳು. 15ತನ್ನ ಹಿರಿಯ ಮಗ ಏಸಾವನ ಬಟ್ಟೆಗಳಲ್ಲಿ ಶ್ರೇಷ್ಠವಾದವು ಮನೆಯಲ್ಲಿ ಆಕೆಯ ವಶದಲ್ಲಿದ್ದವು. ಅವುಗಳನ್ನು ತೆಗೆದು ಕಿರಿಯ ಮಗ ಯಕೋಬನಿಗೆ ತೊಡಿಸಿದಳು 16ಮೇಕೆಮರಿಗಳ ಚರ್ಮವನ್ನು ಅವನ ಕೈಗಳಿಗೂ ನುಣುಪಾದ ಕೊರಳಿಗೂ ಸುತ್ತಿದಳು. 17ತಾನು ಸಿದ್ಧಮಾಡಿದ್ದ ಸವಿಯೂಟವನ್ನೂ ಸುಟ್ಟಿದ್ದ ರೊಟ್ಟಿಯನ್ನೂ ತನ್ನ ಮಗ ಯಕೋಬನ ಕೈಗೆ ಕೊಟ್ಟಳು.
18ಯಕೋಬನು ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು. ತಂದೆಯು, “ಏನು ಮಗನೇ, ನೀನು ಯಾವ ಮಗನು?” ಎಂದು ಕೇಳಿದನು. 19ಯಕೋಬನು, “ನಾನೇ ನಿಮ್ಮ ಹಿರಿಯ ಮಗ ಏಸಾವನು; ನಿಮ್ಮ ಅಪ್ಪಣೆಯಂತೆ ಮಾಡಿಕೊಂಡು ಬಂದಿದ್ದೇನೆ. ಎದ್ದು ಕುಳಿತುಕೊಂಡು ನಾನು ತಂದಿರುವ ಬೇಟೆಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ,” ಎಂದು ಹೇಳಿದನು.
20ಇಸಾಕನು, “ಏನು ಮಗನೇ, ಇಷ್ಟು ಬೇಗನೆ ಬೇಟೆ ಹೇಗೆ ಸಿಕ್ಕಿತು?” ಎಂದು ಕೇಳಿದನು. ಯಕೋಬನು, “ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನನ್ನೆದುರಿಗೆ ಬರಮಾಡಿದರು,” ಎಂದನು.
21ಆಗ ಇಸಾಕನು ಅವನಿಗೆ, “ಮಗನೇ, ಹತ್ತಿರಕ್ಕೆ ಬಾ; ನೀನು ನನ್ನ ಮಗನೋ ಅಲ್ಲವೋ, ಎಂದು ಮುಟ್ಟಿ ತಿಳಿದುಕೊಳ್ಳಬೇಕು,” ಎಂದನು. 22ಯಕೋಬನು ಹತ್ತಿರಕ್ಕೆ ಬಂದಾಗ ತಂದೆ ಇಸಾಕನು ಅವನನ್ನು ಮುಟ್ಟಿ ನೋಡಿ, “ಸ್ವರವೇನೋ ಯಕೋಬನ ಸ್ವರ; ಆದರೆ ಕೈ ಏಸಾವನ ಕೈ,” ಎಂದುಕೊಂಡನು. 23ಯಕೋಬನ ಕೈಗಳು ಅವನ ಅಣ್ಣನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ ಇಸಾಕನು ಅವನ ಗುರುತನ್ನು ತಿಳಿಯಲಾರದೆ ಅವನನ್ನು ಆಶೀರ್ವದಿಸಿದನು. 24ಆದರೂ ಮರಳಿ, “ನೀನು ನಿಶ್ಚಯವಾಗಿ ನನ್ನ ಮಗ ಏಸಾವನೋ” ಎಂದು ಕೇಳಿದನು. ಯಕೋಬನು “ಹೌದು,” ಎಂದು ಉತ್ತರಕೊಟ್ಟನು.
25ಆಗ ಇಸಾಕನು, “ಊಟಮಾಡಲು ಆ ಬೇಟೆಮಾಂಸವನ್ನು ತಂದು ಬಡಿಸು, ಆಮೇಲೆ ನಿನ್ನನ್ನು ಆಶೀರ್ವದಿಸುತ್ತೇನೆ,” ಎಂದನು. ಅಂತೆಯೇ ಯಕೋಬನು ಹತ್ತಿರಕ್ಕೆ ತಂದು ಬಡಿಸಿದಾಗ ಇಸಾಕನು ಊಟಮಾಡಿದನು; ಕೊಟ್ಟ ದ್ರಾಕ್ಷಾರಸವನ್ನು ಕುಡಿದನು. 26ಬಳಿಕ ಅವನ ತಂದೆ ಇಸಾಕನು, “ಮಗನೇ, ಹತ್ತಿರ ಬಂದು ನನಗೆ ಮುತ್ತು ಕೊಡು,” ಎಂದನು. ಅವನು ಹತ್ತಿರ ಬಂದು ಮುದ್ದಿಟ್ಟಾಗ 27ಇಸಾಕನು ಅವನ ಉಡುಗೆತೊಡಿಗೆಗಳ ಸುವಾಸನೆಯನ್ನು ಮೂಸಿನೋಡಿ, ಅವನಿಗೆ ಹೀಗೆಂದು ಆಶೀರ್ವಾದ ಮಾಡಿದನು -
“ನನ್ನ ಸುಕುಮಾರನಿಂದೇಳುವ ಸುವಾಸನೆ
ಸರ್ವೇಶ್ವರನಾಶೀರ್ವದಿಸಿದ ಮೊಗೆನೆಲದ
ಸುವಾಸನೆಯಂತಿದೆ.
28ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು,
ಸಾರವುಳ್ಳ ಹೊಲವನು
ಅನುಗ್ರಹಿಸಲಿ ಹೇರಳ ದವಸ
ಧಾನ್ಯವನು, ದ್ರಾಕ್ಷಾರಸವನು.
29ಸೇವೆಗೈಯಲಿ ನಿನಗೆ ಹೊರನಾಡುಗಳು
ಅಡ್ಡಬೀಳಲಿ ನಿನಗೆ ಹೊರಜನಾಂಗಗಳು
ಒಡೆಯನಾಗು ಸೋದರರಿಗೆ
ಅಡ್ಡಬೀಳಲಿ ತಾಯಕುಡಿ ನಿನಗೆ
ಶಾಪವಿರಲಿ ನಿನ್ನನ್ನು ಶಪಿಸುವವರಿಗೆ
ಆಶೀರ್ವಾದವು ನಿನ್ನನ್ನು
ಹರಸುವವರಿಗೆ!”
ಇಸಾಕನಲ್ಲಿ ಏಸಾವನ ಮನವಿ
30ಯಕೋಬನು ತಂದೆ ಇಸಾಕನಿಂದ ಆಶೀರ್ವಾದ ಪಡೆದು ಹೊರಟುಹೋದನು. ಕೂಡಲೆ ಅವನ ಅಣ್ಣ ಏಸಾವನು ಬೇಟೆಯಿಂದ ಹಿಂದಿರುಗಿ ಬಂದನು. 31ಅವನು ಕೂಡ ಸವಿ ಊಟವನ್ನು ಅಣಿಮಾಡಿ ತಂದೆಯ ಬಳಿಗೆ ತಂದು, “ಅಪ್ಪಾ, ಏಳಿ; ನಿನ್ನ ಮಗನಾದ ನಾನು ತಂದಿರುವ ಬೇಟೆಯ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ,” ಎಂದು ಕೇಳಿಕೊಂಡನು.
32“ನೀನು ಯಾರು?” ಎಂದು ತಂದೆ ಇಸಾಕನು ವಿಚಾರಿಸಲು, “ನಾನೇ ನಿಮ್ಮ ಜ್ಯೇಷ್ಠಪುತ್ರ ಏಸಾವನು” ಎಂದು ಉತ್ತರಕೊಟ್ಟನು. 33ಆಗ ಇಸಾಕನು ಗಡಗಡನೆ ನಡುಗುತ್ತಾ, “ಹಾಗಾದರೆ ಬೇಟೆಯಾಡಿ ನನಗೆ ಊಟ ತಂದುಕೊಟ್ಟವನಾರು? ನೀನು ಬರುವುದಕ್ಕೆ ಮುಂಚೆ ಅವನು ತಂದುದನ್ನು ಊಟಮಾಡಿ ಅವನನ್ನೇ ಅಂತಿಮವಾಗಿ ಆಶೀರ್ವದಿಸಿಬಿಟ್ಟೆನು; ಅವನಿಗೆ ಮಾಡಿದ ಆಶೀರ್ವಾದ ಇನ್ನು ತಪ್ಪಲಾರದು,” ಎಂದನು.
34ತಂದೆಯ ಈ ಮಾತುಗಳನ್ನು ಕೇಳಿ ಏಸಾವನು ದುಃಖಕ್ರಾಂತನಾದನು. ಬಹಳವಾಗಿ ಅತ್ತನು. “ಅಪ್ಪಾ, ತಂದೆಯೇ ನನ್ನನ್ನು, ನನ್ನನ್ನು ಕೂಡ ಆಶೀರ್ವದಿಸು,” ಎಂದು ಬೇಡಿಕೊಂಡನು.
35ಇಸಾಕನು, “ನಿನ್ನ ತಮ್ಮ ಮೋಸದಿಂದ ಬಂದು ನಿನಗಾಗಬೇಕಿದ್ದ ಆಶೀರ್ವಾದವನ್ನು ಪಡೆದುಕೊಂಡು ಹೋದನು,” ಎಂದನು.
36ಅದಕ್ಕೆ ಏಸಾವನು, “ಯಕೋಬ’ ಎಂಬ ಹೆಸರು ಅವನಿಗೆ ತಕ್ಕುದಾಗಿದೆ; ಎರಡು ಸಾರಿ ಅವನು ನನ್ನನ್ನು ವಂಚಿಸಿದ್ದಾನೆ. ಹಿಂದೆ ನನ್ನ ಜ್ಯೇಷ್ಠತನದ ಹಕ್ಕನ್ನು ಅಪಹರಿಸಿದ; ಈಗ ನನಗೆ ಬರಬೇಕಾಗಿದ್ದ ಆಶೀರ್ವಾದವನ್ನು ಕಿತ್ತುಕೊಂಡಿದ್ದಾನೆ,” ಎಂದು ಹೇಳಿ ತನ್ನ ತಂದೆಯನ್ನು ನೋಡಿ, “ನನಗೆಂದೇ ನಿಮ್ಮಲ್ಲಿ ಯಾವ ಆಶೀರ್ವಾದವೂ ಉಳಿದಿಲ್ಲವೆ?” ಎಂದು ಕೇಳಿದನು.
37ಆಗ ಇಸಾಕನು, “ಅವನನ್ನು ನಿನಗೆ ಒಡೆಯನನ್ನಾಗಿ ನೇಮಿಸಿದ್ದೇನೆ; ಸಹೋದರರನ್ನೇ ಅವನಿಗೆ ಕೆಲಸಗಾರರನ್ನಾಗಿ ಕೊಟ್ಟಿದ್ದೇನೆ; ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನಿಗೆ ಬಿಟ್ಟಿದ್ದೇನೆ. ಹೀಗಿರಲು ಮಗನೇ, ನಾನು ನಿನಗೇನು ತಾನೆ ಮಾಡಲು ಸಾಧ್ಯ?” ಎಂದನು.
38“ಅಪ್ಪಾ, ನಿಮ್ಮಲ್ಲಿ ಒಂದೇ ಆಶೀರ್ವಾದ ಮಾತ್ರ ಇತ್ತೋ? ನನ್ನನ್ನು, ನನ್ನನ್ನು ಕೂಡ ಆಶೀರ್ವಾದ ಮಾಡಪ್ಪಾ,” ಎಂದು ಗೋಳಾಡುತ್ತಾ ಅತ್ತನು. 39ಆಗ ಇಸಾಕನು -
"ಸಾರವತ್ತಾದ ಭೂಮಿಗೆ ದೂರ
ಆಗಸದಿಂದೇಳುವ ಮಂಜಿಗೆ ದೂರ
ಇರುವುದು ನೀ ನೆಲೆಸುವ ಬಿಡಾರ.
40ಬಾಳ ನಡೆಸುವೆ ಕತ್ತಿಕಠಾರಿಯಿಂದಲೇ
ಕೂಲಿಯಾಳಾಗುವೆ ಸೋದರನಿಗೆ
ಮುರಿಯುವೆ ಅವ ಹೊರಿಸಿದ ನೊಗವ
ಸ್ವಾತಂತ್ರ್ಯಕ್ಕಾಗಿ ನೀ ಬಂಡಾಯ ಹೂಡಿದಾಗ,”
41ತಂದೆಯಿಂದ ಯಕೋಬನು ಪಡೆದುಕೊಂಡ ಆಶೀರ್ವಾದದ ನಿಮಿತ್ತ ಏಸಾವನು ಯಕೋಬನ ಮೇಲೆ ಹಗೆಗೊಂಡನು. “ತಂದೆಯ ಮರಣಕ್ಕಾಗಿ ದುಃಖಿಸುವ ಕಾಲ ಸಮೀಪಿಸಿತು. ಆ ಬಳಿಕ ನನ್ನ ತಮ್ಮ ಯಕೋಬನನ್ನು ಕೊಂದುಹಾಕುತ್ತೇನೆ,” ಎಂದು ತನ್ನೊಳಗೇ ನೆನಸಿಕೊಂಡನು.
42ತನ್ನ ಹಿರಿಯ ಮಗ ಏಸಾವನ ಅನಿಸಿಕೆಯು ರೆಬೆಕ್ಕಳಿಗೆ ತಿಳಿದು ಬಂದಾಗ ಆಕೆ ತನ್ನ ಕಿರಿಯ ಮಗ ಯಕೋಬನನ್ನು ಕರೆದು ಹೀಗೆಂದಳು: “ನೋಡು, ನಿನ್ನ ಅಣ್ಣ ಏಸಾವನು ನಿನ್ನನ್ನು ಕೊಂದು ಸೇಡು ತೀರಿಸಿಕೊಳ್ಳಬೇಕೆಂದಿದ್ದಾನೆ. 43ಆದುದರಿಂದ ಮಗನೇ, ನನ್ನ ಮಾತನ್ನು ಕೇಳು; ನೀನು ಎದ್ದು ಖಾರಾನ್ ಊರಿನಲ್ಲಿರುವ ನನ್ನ ಅಣ್ಣ ಲಾಬಾನನ ಬಳಿಗೆ ಓಡಿಹೋಗು. 44ಕೆಲವು ಕಾಲ, ಅಂದರೆ ನಿನ್ನಣ್ಣನ ಕೋಪ ಶಮನ ಆಗುವವರೆಗೂ, ಅವನ ಬಳಿಯಲ್ಲೇ ಇರು. 45ನಿನ್ನ ಅಣ್ಣನು ನೀನು ಮಾಡಿರುವುದನ್ನು ಮರೆತು ತನ್ನ ಕೋಪವನ್ನು ಬಿಟ್ಟಾಗ ನಾನು ನಿನ್ನನ್ನು ಅಲ್ಲಿಂದ ಕರೆಸಿಕೊಳ್ಳುತ್ತೇನೆ. ನಾನೇತಕ್ಕೆ ನಿಮ್ಮಿಬ್ಬರನ್ನೂ ಒಂದೇ ದಿನದಲ್ಲಿ ಕಳೆದುಕೊಳ್ಳಬೇಕು?” ಎಂದು ಹೇಳಿದಳು.
ಲಾಬಾನನ ಬಳಿಗೆ ಯಕೋಬನು
46ಅನಂತರ ರೆಬೆಕ್ಕಳು ಇಸಾಕನಿಗೆ, “ಹಿತ್ತಿಯರಾದ ಈ ಹೆಣ್ಣುಗಳ ದೆಸೆಯಿಂದ ನನ್ನ ಬಾಳು ಬೇಸರವಾಗಿದೆ. ಯಕೋಬನು ಕೂಡ ಈ ನಾಡಿನ ಹೆಣ್ಣನ್ನು ಆರಿಸಿಕೊಂಡು ಇಂಥ ಹಿತ್ತಿಯ ಹುಡುಗಿಯನ್ನೇ ಮದುವೆಮಾಡಿಕೊಂಡರೆ ನಾನು ಇನ್ನು ಬದುಕಿ ಪ್ರಯೋಜನ ಇಲ್ಲ,” ಎಂದು ಹೇಳಿದಳು.
Atualmente selecionado:
ಆದಿಕಾಂಡ 27: KANCLBSI
Destaque
Partilhar
Copiar
Quer salvar os seus destaques em todos os seus dispositivos? Faça o seu registo ou inicie sessão
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.