Mufananidzo weYouVersion
Mucherechedzo Wekutsvaka

ಯೊವಾನ್ನ 9

9
ಹುಟ್ಟು ಕುರುಡನಿಗೆ ದೃಷ್ಟಿದಾನ
1ಯೇಸು ಸ್ವಾಮಿ ನಡೆದುಹೋಗುತ್ತಿದ್ದಾಗ ಒಬ್ಬ ಹುಟ್ಟು ಕುರುಡನನ್ನು ಕಂಡರು. 2ಶಿಷ್ಯರು, “ಗುರುದೇವಾ, ಇವನು ಕುರುಡನಾಗಿ ಹುಟ್ಟಬೇಕಾದರೆ ಅದಕ್ಕೆ ಯಾರ ಪಾಪ ಕಾರಣ? ಇವನದೋ ಅಥವಾ ಇವನನ್ನು ಹೆತ್ತವರದೋ?” ಎಂದು ಕೇಳಿದರು. 3ಅದಕ್ಕೆ ಉತ್ತರವಾಗಿ ಯೇಸು, “ಇವನ ಪಾಪವಾಗಲಿ, ಇವನನ್ನು ಹೆತ್ತವರ ಪಾಪವಾಗಲಿ ಇದಕ್ಕೆ ಕಾರಣವಲ್ಲ, ದೇವರ ಕಾರ್ಯ ಇವನಲ್ಲಿ ವ್ಯಕ್ತವಾಗುವಂತೆ ಹೀಗಾಗಿದೆ. 4ಹಗಲಿರುವಾಗಲೇ ನನ್ನನ್ನು ಕಳುಹಿಸಿದಾತನ ಕೆಲಸವನ್ನು ನಾನು ಮಾಡುತ್ತಿರಬೇಕು. ರಾತ್ರಿ ಆದಮೇಲೆ ಯಾರೂ ಕೆಲಸ ಮಾಡಲಾಗದು. 5ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ,” ಎಂದು ನುಡಿದರು. 6ತರುವಾಯ ನೆಲದಲ್ಲಿ ಉಗುಳಿ, ಮಣ್ಣಿನ ಲೇಪಮಾಡಿ, ಅದನ್ನು ಕುರುಡನ ಕಣ್ಣಿಗೆ ಲೇಪಿಸಿ, “ನೀನು ಶಿಲೋವಾಮಿನ ಕೊಳಕ್ಕೆ ಹೋಗಿ ತೊಳೆದುಕೋ,” ಎಂದು ಹೇಳಿದರು. 7(’ಶಿಲೋವಾಮ್’ ಎಂದರೆ ಕಳುಹಿಸಲಾದವನು ಎಂದರ್ಥ). ಅದರಂತೆಯೇ ಆ ಕುರುಡನು ಹೋಗಿ ಕಣ್ಣುಗಳನ್ನು ತೊಳೆದುಕೊಂಡನು; ಹಿಂದಿರುಗಿದಾಗ ಅವನಿಗೆ ಕಣ್ಣು ಬಂದಿತ್ತು.
8ಅವನ ನೆರೆಯವರು ಮತ್ತು ಹಿಂದೆ ಅವನು ಭಿಕ್ಷೆಬೇಡುತ್ತಿದ್ದಾಗ ಅವನನ್ನು ನೋಡಿದ್ದವರು, “ಭಿಕ್ಷೆಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೆ?” ಎಂದು ವಿಚಾರಿಸಿದರು. 9“ಹೌದು ಅವನೇ,” ಎಂದರು ಕೆಲವರು. “ಇಲ್ಲ, ಇವನು ಅವನಂತೆ ಕಾಣುತ್ತಾನೆ, ಅಷ್ಟೆ,” ಎಂದರು ಇತರರು. ಆ ಕುರುಡನು “ನಾನೇ ಅವನು” ಎಂದು ತಿಳಿಸಿದನು. 10ಆಗ ಅವರು, “ಹಾಗಾದರೆ ನಿನಗೆ ಕಣ್ಣು ಹೇಗೆ ಬಂತು?” ಎಂದು ಕೇಳಿದರು. 11ಅದಕ್ಕೆ ಅವನು, “ಯೇಸು ಎಂಬುವರು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿದರು, ‘ಶಿಲೋವಾಮಿಗೆ ಹೋಗಿ ತೊಳೆದುಕೊ,’ ಎಂದು ಹೇಳಿದರು; ನಾನು ಹೋಗಿ ತೊಳೆದುಕೊಂಡೆ; ನನಗೆ ಕಣ್ಣು ಬಂತು,” ಎಂದು ಹೇಳಿದನು. 12ಅದಕ್ಕೆ ಅವರು, “ಆತ ಎಲ್ಲಿದ್ದಾನೆ?” ಎಂದು ವಿಚಾರಿಸಿದರು. ಅವನು, ಉತ್ತರವಾಗಿ “ನಾನರಿಯೆ,” ಎಂದನು.
ಫರಿಸಾಯರಿಂದ ವಿಚಾರಣೆ
13ಆಗ ಆ ಜನರು ಅವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಹೋದರು. 14ಏಕೆಂದರೆ ಯೇಸು ಸ್ವಾಮಿ ಮಣ್ಣಿನ ಲೇಪವನ್ನು ಮಾಡಿ ಅವನಿಗೆ ಕಣ್ಣುಕೊಟ್ಟ ದಿನ ಸಬ್ಬತ್ ದಿನವಾಗಿತ್ತು. 15ಕಣ್ಣು ಬಂದುದು ಹೇಗೆಂದು ಫರಿಸಾಯರು ಅವನನ್ನು ಮತ್ತೆ ಕೇಳಿದರು. “ಯೇಸು ನನ್ನ ಕಣ್ಣುಗಳಿಗೆ ಮಣ್ಣಿನ ಲೇಪವನ್ನು ಹಚ್ಚಿದರು; ನಾನು ಹೋಗಿ ಕಣ್ಣುಗಳನ್ನು ತೊಳೆದುಕೊಳ್ಳುತ್ತಲೇ ನನಗೆ ದೃಷ್ಟಿ ಬಂತು,” ಎಂದನು ಅವನು. 16ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ, ಅವನು ಸಬ್ಬತ್ ನಿಯಮವನ್ನು ಪಾಲಿಸುವುದಿಲ್ಲ,” ಎಂದರು. ಇತರರು, “ಪಾಪಿಯಾದವನು ಇಂಥ ಸೂಚಕಕಾರ್ಯಗಳನ್ನು ಮಾಡಲು ಸಾಧ್ಯವೆ?” ಎಂದರು. ಹೀಗೆ ಅವರಲ್ಲೇ ಭಿನ್ನಬೇಧವುಂಟಾಯಿತು. 17ಆದ್ದರಿಂದ ಫರಿಸಾಯರು ಆ ಕುರುಡನನ್ನು ಕುರಿತು, “ಅವನೇ ನಿನಗೆ ಕಣ್ಣುಕೊಟ್ಟನೆಂದು ಹೇಳುತ್ತೀಯಲ್ಲಾ. ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ವಿಚಾರಿಸಿದರು. ಅದಕ್ಕೆ ಅವನು, “ಅವರೊಬ್ಬ ಪ್ರವಾದಿಯೇ ಸರಿ,” ಎಂದನು. 18ಆ ಕುರುಡನು ಹಿಂದೆ ನಿಜವಾಗಿಯೂ ಕುರುಡನಾಗಿದ್ದು ಈಗ ದೃಷ್ಟಿಪಡೆದಿದ್ದಾನೆ ಎಂದು ಯೆಹೂದ್ಯ ಅಧಿಕಾರಿಗಳು ನಂಬಲು ಒಪ್ಪಲಿಲ್ಲ. 19ಈ ಕಾರಣ ಅವನ ಹೆತ್ತವರನ್ನು ಕರೆಯಿಸಿ, “ಇವನು ನಿಮ್ಮ ಮಗನೋ? ಇವನು ಹುಟ್ಟುಕುರುಡನೋ? ಹಾಗಾದರೆ ಇವನಿಗೆ ಈಗ ಕಣ್ಣು ಬಂದದ್ದು ಹೇಗೆ?” ಎಂದು ಕೇಳಿದರು. 20ಅದಕ್ಕೆ ಅವನ ತಂದೆತಾಯಿಗಳು, “ಇವನಿಗೆ ದೃಷ್ಟಿ ಬಂದದ್ದು ಹೇಗೆ ಎಂದು ನಮಗೆ ಗೊತ್ತಿಲ್ಲ; ಇವನಿಗೆ ಕಣ್ಣು ಕೊಟ್ಟವರು ಯಾರೆಂದೂ ನಮಗೆ ತಿಳಿಯದು. 21ಇವನನ್ನೇ ಕೇಳಿ, ಹೇಗೂ ಪ್ರಾಯದವನಾಗಿದ್ದಾನಲ್ಲವೆ? ತನ್ನ ವಿಷಯವಾಗಿ ತಾನೇ ಮಾತನಾಡಬಲ್ಲ,” ಎಂದು ಉತ್ತರಿಸಿದರು. 22ಅವರು ಹೀಗೆ ಹೇಳಿದ್ದು ಯೆಹೂದ್ಯ ಅಧಿಕಾರಿಗಳ ಅಂಜಿಕೆಯಿಂದ. ಏಕೆಂದರೆ, ಯಾರಾದರೂ ಯೇಸುವನ್ನು ಲೋಕೋದ್ಧಾರಕ ಎಂದು ಒಪ್ಪಿಕೊಂಡರೆ ಅಂಥವರಿಗೆ ಪ್ರಾರ್ಥನಾಮಂದಿರದಿಂದ ಬಹಿಷ್ಕಾರ ಹಾಕಬೇಕೆಂದು ಅಧಿಕಾರಿಗಳು ಈ ಮೊದಲೇ ಗೊತ್ತುಮಾಡಿದ್ದರು. 23ಆದುದರಿಂದಲೇ, “ಅವನು‍ ಪ್ರಾಯದವನು, ಅವನನ್ನೇ ಕೇಳಿ,” ಎಂದು ಅವನ ತಂದೆತಾಯಿಗಳು ಹೇಳಿದ್ದು. 24ಅಧಿಕಾರಿಗಳು ಆ ಹುಟ್ಟು ಕುರುಡನನ್ನು ಮತ್ತೆ ಕರೆಯಿಸಿ, “ನೀನು ದೇವರ ಮುಂದೆ ಪ್ರಮಾಣಮಾಡಿ ಹೇಳು. ಆ ಮನುಷ್ಯ ಪಾಪಿಯೆಂದು ನಮಗೆ ಗೊತ್ತು,” ಎಂದು ಕೇಳಿದರು. 25ಉತ್ತರವಾಗಿ ಅವನು, “ಅವರು ಪಾಪಿಯೋ, ಅಲ್ಲವೋ ನಾನರಿಯೆ; ಆದರೆ ನಾನೊಮ್ಮೆ ಕುರುಡನಾಗಿದ್ದೆ; ಈಗಲಾದರೋ ಕಣ್ಣು ಕಾಣಿಸುತ್ತದೆ, ಇಷ್ಟುಮಾತ್ರ ಬಲ್ಲೆ, ಎಂದು ಹೇಳಿದನು. 26“ಅವನು ನಿನಗೇನು ಮಾಡಿದ? ನಿನಗೆ ಹೇಗೆ ಕಣ್ಣುಬರಿಸಿದ?” ಎಂದು ಅವರು ಮತ್ತೆ ಪ್ರಶ್ನಿಸಿದರು. 27ಅವನು, “ನಿಮಗೆ ಆಗಲೇ ಹೇಳಿದ್ದೇನೆ. ಆದರೆ ನೀವು ನಂಬುವುದಿಲ್ಲ. ಅದನ್ನೇ ಏಕೆ ಮತ್ತೆ ಮತ್ತೆ ಕೇಳುತ್ತೀರಿ? ಅವನ ಶಿಷ್ಯರಾಗಲು ನಿಮಗೂ ಮನಸ್ಸಿದೆಯೇ” ಎಂದನು. 28ಆಗ ಅಧಿಕಾರಿಗಳು ಅವನನ್ನು ಶಪಿಸಿದರು. “ನೀನೇ ಅವನ ಶಿಷ್ಯ, ನಾವು ಮೋಶೆಯ ಶಿಷ್ಯರು. 29ಮೋಶೆಯೊಡನೆ ದೇವರು ಮಾತನಾಡಿದರು ಎಂಬುದನ್ನು ನಾವು ಬಲ್ಲೆವು. ಆದರೆ ಇವನು ಎಲ್ಲಿಯವನೋ ನಾವು ಅರಿಯೆವು,” ಎಂದರು. 30ಅದಕ್ಕೆ ಆ ಕುರುಡ, “ಏನಾಶ್ಚರ್ಯ! ನನಗೆ ಕಣ್ಣು ಬರಿಸಿದ್ದಾರೆ. ಆದರೂ ‘ಅವನು ಎಲ್ಲಿಯವನೋ ನಾವರಿಯೆವು’ ಎನ್ನುತ್ತೀರಿ. 31ದೇವರು ಪಾಪಿಗಳಿಗೆ ಓಗೊಡುವುದಿಲ್ಲ. ಯಾರು ಭಕ್ತಿಯಿಂದ ಅವರ ಚಿತ್ತದಂತೆ ನಡೆಯುತ್ತಾರೋ ಅವರಿಗೆ ಓಗೊಡುತ್ತಾರೆಂದು ನಮಗೆಲ್ಲಾ ಚೆನ್ನಾಗಿ ತಿಳಿದಿದೆ. 32ಹುಟ್ಟುಕುರುಡನಿಗೆ ಯಾರಾದರೂ ಕಣ್ಣುಕೊಟ್ಟ ಸುದ್ದಿಯನ್ನು ಲೋಕಸೃಷ್ಟಿಯಾದಾಗಿನಿಂದ ಒಬ್ಬರೂ ಕೇಳಿಲ್ಲ. 33ಇವರು ದೇವರಿಂದ ಬಂದವರು ಅಲ್ಲದಿದ್ದರೆ ಇಂಥದ್ದೇನನ್ನೂ ಮಾಡಲಾಗುತ್ತಿರಲಿಲ್ಲ,” ಎಂದನು. 34ಆಗ ಫರಿಸಾಯರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು, ನಮಗೇ ಬುದ್ಧಿಹೇಳಹೊರಟೆಯಾ?” ಎಂದು ಹೇಳಿ ಅವನನ್ನು ತಳ್ಳಿಬಿಟ್ಟರು.
ಆತ್ಮದ ಅಂಧತ್ವ
35ಹುಟ್ಟುಕುರುಡನನ್ನು ಹೊರಗೆ ತಳ್ಳಿದ ವಾರ್ತೆ ಯೇಸು ಸ್ವಾಮಿಯ ಕಿವಿಗೆ ಮುಟ್ಟಿತು. ಯೇಸು ಅವನನ್ನು ಕಂಡು, “ನರಪುತ್ರನಲ್ಲಿ ನಿನಗೆ ವಿಶ್ವಾಸವಿದೆಯೇ?’ ಎಂದು ಕೇಳಿದರು. 36ಅವನು, “ಅವರು ಯಾರೆಂದು ತಿಳಿಸಿ ಸ್ವಾಮೀ, ನಾನು ವಿಶ್ವಾಸಿಸುತ್ತೇನೆ,” ಎಂದನು. 37ಯೇಸು, “ನೀನು ಆತನನ್ನು ಕಂಡಿದ್ದೀಯೆ, ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದರು. 38“ಸ್ವಾಮೀ, ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳುತ್ತಾ ಅವನು ಯೇಸುವಿಗೆ ಅಡ್ಡಬಿದ್ದನು. 39ಆಗ ಯೇಸು, “ಕುರುಡರು ಕಾಣುವಂತೆಯೂ ಕಾಣುವವರು ಕುರುಡರಾಗುವಂತೆಯೂ ತೀರ್ಪುಕೊಡಲೆಂದೇ ನಾನು ಈ ಲೋಕಕ್ಕೆ ಬಂದುದು,” ಎಂದು ನುಡಿದರು. 40ಅಲ್ಲಿ ನಿಂತಿದ್ದ ಫರಿಸಾಯರು ಈ ಮಾತನ್ನು ಕೇಳಿ, “ಹಾಗಾದರೆ ನಾವು ಕೂಡ ಕುರುಡರೋ?’ ಎಂದು ಪ್ರಶ್ನಿಸಿದರು. 41ಯೇಸು, “ನೀವು ಕುರುಡರೇ ಆಗಿದ್ದರೆ ಪಾಪಿಗಳಾಗುತ್ತಿರಲಿಲ್ಲ. ಆದರೆ, ‘ನಮಗೆ ಕಣ್ಣು ಕಾಣುತ್ತದೆ,’ ಎಂದು ಹೇಳಿಕೊಳ್ಳುತ್ತೀರಿ; ಆದ್ದರಿಂದ ನೀವು ಪಾಪಿಗಳಾಗಿದ್ದೀರಿ,” ಎಂದರು.

Sarudza vhesi

Pakurirana nevamwe

Sarudza zvinyorwa izvi

None

Unoda kuti zviratidziro zvako zvichengetedzwe pamidziyo yako yose? Nyoresa kana kuti pinda