ಯೋಹಾನ 2

2
ಯೇಸು ಮಾಡಿದ ಮೊದಲನೆಯ ಅದ್ಭುತಕಾರ್ಯ
1ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಊರಿನಲ್ಲಿ ಒಂದು ಮದುವೆ ಆಯಿತು; ಯೇಸುವಿನ ತಾಯಿ ಅಲ್ಲಿ ಇದ್ದಳು; 2ಯೇಸುವನ್ನೂ ಆತನ ಶಿಷ್ಯರನ್ನೂ ಮದುವೆಗೆ ಕರೆದರು. 3ದ್ರಾಕ್ಷಾರಸವು ಸಾಲದೆ ಹೋಗಲಾಗಿ ಯೇಸುವಿನ ತಾಯಿ ಆತನಿಗೆ - ಅವರಲ್ಲಿ ದ್ರಾಕ್ಷಾರಸವಿಲ್ಲ ಎಂದು ಹೇಳಿದಳು. 4ಯೇಸು ಆಕೆಗೆ - ಅಮ್ಮಾ, ನನ್ನ ಗೊಡವೆ ನಿನಗೇಕೆ? ನನ್ನ ಸಮಯವು ಇನ್ನೂ ಬಂದಿಲ್ಲ ಎಂದು ಹೇಳಲು 5ಆತನ ತಾಯಿಯು ಕೆಲಸದವರಿಗೆ - ಆತನು ನಿಮಗೆ ಏನು ಹೇಳುವನೋ ಅದನ್ನು ಮಾಡಿರಿ ಅಂದಳು. 6ಯೆಹೂದ್ಯರ ಶುದ್ಧಾಚಾರದ ಪದ್ಧತಿಯ ಪ್ರಕಾರ ಎರಡು ಮೂರು ಕೊಳಗ ನೀರು ಹಿಡಿಯುವ ಆರು ಕಲ್ಲಿನ ಬಾನೆಗಳು ಅಲ್ಲಿ ಇಟ್ಟಿದ್ದವು. 7ಯೇಸು ಅವರಿಗೆ - ಆ ಬಾನೆಗಳಲ್ಲಿ ನೀರು ತುಂಬಿರಿ ಅನ್ನಲು ಅವುಗಳನ್ನು ಕಂಠದ ಮಟ್ಟಿಗೆ ತುಂಬಿದರು. 8ಆಗ ಅವರಿಗೆ - ಈಗ ಅದನ್ನು ತೋಡಿಕೊಂಡು ಹೋಗಿ ಔತಣದ ಪಾರುಪತ್ಯಗಾರನಿಗೆ ಕೊಡಿರಿ ಎಂದು ಹೇಳಿದಾಗ ತಕ್ಕೊಂಡು ಹೋಗಿ ಕೊಟ್ಟರು. 9ಅದು ಎಲ್ಲಿಂದ ಬಂತೋ ನೀರನ್ನು ತೋಡಿದ ಕೆಲಸದವರಿಗೆ ತಿಳಿದಿತ್ತೇ ಹೊರತು ಔತಣದ ಪಾರುಪತ್ಯಗಾರನಿಗೆ ತಿಳಿಯದಿರಲಾಗಿ ಅವನು ಅಷ್ಟರೊಳಗೆ ದ್ರಾಕ್ಷಾರಸವಾದ ಆ ನೀರನ್ನು ರುಚಿನೋಡಿದಾಗ 10ಮದಲಿಂಗನನ್ನು ಕರೆದು - ಎಲ್ಲರು ಹಿರಿದಿನ ದ್ರಾಕ್ಷಾರಸವನ್ನು ಮೊದಲುಕೊಟ್ಟು ಅಮಲೇರಿದ ಮೇಲೆ ಕಿರಿದಿನ ದ್ರಾಕ್ಷಾರಸವನ್ನು ಕೊಡುತ್ತಾರೆ; ನೀನು ಹಿರಿದಿನ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿದ್ದೀ ಅಂದನು. 11ಯೇಸು ಈ ಮೊದಲನೆಯ ಸೂಚಕಕಾರ್ಯವನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ ತನ್ನ ಮಹಿಮೆಯನ್ನು ತೋರ್ಪಡಿಸಿದನು; ಮತ್ತು ಆತನ ಶಿಷ್ಯರು ಆತನಲ್ಲಿ ನಂಬಿಕೆಯಿಟ್ಟರು.
12ಇದಾದ ಮೇಲೆ ಆತನೂ ಆತನ ತಾಯಿಯೂ ತಮ್ಮಂದಿರೂ ಆತನ ಶಿಷ್ಯರೂ ಘಟ್ಟಾ ಇಳಿದು ಕಪೆರ್ನೌವಿುಗೆ ಹೋಗಿ ಅಲ್ಲಿ ಕೆಲವು ದಿವಸ ಇದ್ದರು.
ಯೇಸು ದೇವಾಲಯದಲ್ಲಿ ವ್ಯಾಪಾರವನ್ನು ನಿಲ್ಲಿಸಿದ್ದು
13ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತರ ಬಂದದರಿಂದ ಯೇಸು ಯೆರೂಸಲೇವಿುಗೆ ಹೋದನು. 14ಅಲ್ಲಿ ದೇವಾಲಯದೊಳಗೆ ದನ ಕುರಿ ಪಾರಿವಾಳ ಮಾರುವವರನ್ನೂ ಕೂತಿರುವ ಚಿನಿವಾರರನ್ನೂ ಕಂಡು ಹಗ್ಗದಿಂದ ಕೊರಡೆ ಮಾಡಿ 15ಅದರಿಂದ ಕುರಿ ದನ ಸಹಿತ ಎಲ್ಲರನ್ನು ದೇವಾಲಯದ ಹೊರಕ್ಕೆ ಅಟ್ಟಿ ಚಿನಿವಾರರ ರೊಕ್ಕವನ್ನು ಚೆಲ್ಲಿ ಮೇಜುಗಳನ್ನು ಕೆಡವಿದನು. 16ಪಾರಿವಾಳ ಮಾರುವವರಿಗೆ - ಇವುಗಳನ್ನು ಇಲ್ಲಿಂದ ತಕ್ಕೊಂಡು ಹೋಗಿರಿ; ನನ್ನ ತಂದೆಯ ಮನೆಯನ್ನು ಸಂತೆ ಮಾಡಬೇಡಿರಿ ಎಂದು ಹೇಳಿದನು. 17ಆಗ - ನಿನ್ನ ಆಲಯಾಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತದೆ ಎಂದು ಬರೆದ ಮಾತು ಶಿಷ್ಯರ ನೆನಪಿಗೆ ಬಂತು. 18ಯೆಹೂದ್ಯರು ಆತನನ್ನು - ನಿನಗೆ ಇದನ್ನೆಲ್ಲಾ ಮಾಡುವ ಅಧಿಕಾರ ಉಂಟೆಂಬದಕ್ಕೆ ಏನು ಸೂಚಕ ಕಾರ್ಯವನ್ನು ತೋರಿಸುತ್ತೀ? ಎಂದು ಕೇಳಿದ್ದಕ್ಕೆ 19ಯೇಸು - ಈ ದೇವಾಲಯವನ್ನು ಕೆಡವಿರಿ; ನಾನು ಮೂರು ದಿನದಲ್ಲಿ ಅದನ್ನು ಎಬ್ಬಿಸುವೆನು ಅಂದನು. 20ಅದಕ್ಕೆ ಯೆಹೂದ್ಯರು - ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷ ಹಿಡಿಯಿತು; ನೀನು ಮೂರು ದಿನದಲ್ಲಿ ಅದನ್ನು ಎಬ್ಬಿಸುವಿಯೋ? ಅಂದರು. 21ಆದರೆ ಆತನು ತನ್ನ ದೇಹವೆಂಬ ದೇವಾಲಯದ ವಿಷಯವಾಗಿ ಆ ಮಾತನ್ನು ಹೇಳಿದ್ದನು. 22ಆದದರಿಂದ ಆತನು ಸತ್ತು ಬದುಕಿ ಎದ್ದ ಮೇಲೆ ಈ ಮಾತು ಆತನ ಶಿಷ್ಯರ ನೆನಪಿಗೆ ಬಂದು ಶಾಸ್ತ್ರದಲ್ಲಿ ಬರೆದದ್ದನ್ನೂ ಆತನ ಮಾತನ್ನೂ ಅವರು ನಂಬುವವರಾದರು.
ಯೇಸು ಒಬ್ಬ ಶಾಸ್ತ್ರಿಗೆ ಪುನರ್ಜನ್ಮದ ವಿಷಯವಾಗಿ ಉಪದೇಶ ಮಾಡಿದ್ದು
23ಆತನು ಪಸ್ಕಹಬ್ಬದ ಜಾತ್ರೆಯಲ್ಲಿ ಯೆರೂಸಲೇವಿುನೊಳಗೆ ಇದ್ದಾಗ ಬಹು ಜನರು ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರು. 24ಆದರೆ ಯೇಸು ಎಲ್ಲರನ್ನೂ ಬಲ್ಲವನಾದ್ದರಿಂದ ಅವರಿಗೆ ವಶವಾಗಲಿಲ್ಲ. 25ಆತನು ಪ್ರತಿಮನುಷ್ಯನ ಆಂತರ್ಯವನ್ನು ತಿಳಿದವನಾದ ಕಾರಣ ಯಾವನೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿ ಕೊಡಬೇಕಾದ ಅವಶ್ಯವಿರಲಿಲ್ಲ.

தற்சமயம் தேர்ந்தெடுக்கப்பட்டது:

ಯೋಹಾನ 2: KANJV-BSI

சிறப்புக்கூறு

பகிர்

நகல்

None

உங்கள் எல்லா சாதனங்களிலும் உங்கள் சிறப்பம்சங்கள் சேமிக்கப்பட வேண்டுமா? பதிவு செய்யவும் அல்லது உள்நுழையவும்