ಯೋಹಾನ 3
3
1ಫರಿಸಾಯರಲ್ಲಿ ಯೆಹೂದ್ಯರ ಹಿರೀಸಭೆಯವನಾದ ನಿಕೊದೇಮನೆಂಬ ಒಬ್ಬ ಮನುಷ್ಯನಿದ್ದನು. 2ಅವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ - ಗುರುವೇ, ನೀನು ದೇವರ ಕಡೆಯಿಂದ ಬಂದ ಬೋಧಕನೆಂದು ಬಲ್ಲೆವು. ನೀನು ಮಾಡುವಂಥ ಈ ಸೂಚಕಕಾರ್ಯಗಳನ್ನು ದೇವರ ಸಹಾಯವಿಲ್ಲದೆ ಮಾಡುವದು ಯಾರಿಂದಲೂ ಆಗದು ಎಂದು ಹೇಳಿದನು. 3ಅದಕ್ಕೆ ಯೇಸು - ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ#3.3 ಅಥವಾ, ಮೇಲಿನಿಂದ. ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು ಅಂದನು. 4ನಿಕೊದೇಮನು ಆತನನ್ನು - ಮನುಷ್ಯನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ತಿರಿಗಿ ಸೇರಿ ಹುಟ್ಟುವದಾದೀತೇ? ಎಂದು ಕೇಳಿದನು. 5ಅದಕ್ಕೆ ಯೇಸು - ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟದಿದ್ದರೆ ದೇವರ ರಾಜ್ಯಕ್ಕೆ ಸೇರಲಾರನು. 6ದೇಹದಿಂದ ಹುಟ್ಟಿದ್ದು ದೇಹವೇ; ಆತ್ಮನಿಂದ ಹುಟ್ಟಿದ್ದು ಆತ್ಮವೇ. 7ನೀವು ಹೊಸದಾಗಿ#3.7 ಅಥವಾ, ಮೇಲಿನಿಂದ. ಹುಟ್ಟಬೇಕು ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ. 8ಗಾಳಿಯು ಮನಸ್ಸು ಬಂದ ಕಡೆ ಬೀಸುತ್ತದೆ; ಅದರ ಸಪ್ಪಳವನ್ನು ಕೇಳುತ್ತೀ; ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು; ಆತ್ಮನಿಂದ ಹುಟ್ಟಿದವರೆಲ್ಲರು ಅದರಂತೆಯೇ ಅಂದನು. 9ಅದಕ್ಕೆ ನಿಕೊದೇಮನು - ಇದು ಆಗುವದು ಹೇಗೆ? ಅಂದಾಗ 10ಯೇಸು ಅವನಿಗೆ ಹೇಳಿದ್ದೇನಂದರೆ - ಇಸ್ರಾಯೇಲ್ ಜನಕ್ಕೆ ಬೋಧಕನಾಗಿರುವ ನಿನಗೆ ಇದು ತಿಳಿಯುವದಿಲ್ಲವೋ? 11ನಿನಗೆ ನಿಜನಿಜವಾಗಿ ಹೇಳುತ್ತೇನೆ, ತಿಳಿದದ್ದನ್ನು ಹೇಳುತ್ತೇವೆ, ನೋಡಿದ್ದಕ್ಕೆ ಸಾಕ್ಷಿಕೊಡುತ್ತೇವೆ; ನೀವು ನಮ್ಮ ಸಾಕ್ಷಿಯನ್ನು ಒಪ್ಪುವದಿಲ್ಲ. 12ನಾನು ಭೂಲೋಕದಲ್ಲಿ ನಡೆಯುವ ಕಾರ್ಯಗಳನ್ನು ಕುರಿತು ನಿಮಗೆ ಹೇಳುವಾಗ ನೀವು ನಂಬದೆಹೋದರೆ ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬೀರಿ? 13ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ#3.13 ಕೆಲವು ಪ್ರತಿಗಳಲ್ಲಿ - ಪರಲೋಕದಲ್ಲಿರುವ ಮನುಷ್ಯಕುಮಾರನೇ ಎಂದು ಬರೆದದೆ. ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ. 14ಇದಲ್ಲದೆ [ಜನರು ನೋಡಿ ಜೀವದಿಂದುಳಿಯಬೇಕೆಂದು] ಮೋಶೆಯು ಅಡವಿಯಲ್ಲಿ ಆ ಸರ್ಪವನ್ನು ಎತ್ತರದಲ್ಲಿಟ್ಟ ಹಾಗೆಯೇ 15ಮನುಷ್ಯಕುಮಾರನು ತನ್ನನ್ನು ನಂಬುವವರೆಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಎತ್ತರದಲ್ಲಿಡಲ್ಪಡಬೇಕು.
16ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. 17ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ. 18ಆತನನ್ನು ನಂಬುವವನಿಗೆ ತೀರ್ಪು ಆಗುವದಿಲ್ಲ; ಆದರೆ ನಂಬದವನಿಗೆ ದೇವರ ಒಬ್ಬನೇ ಮಗನ ಹೆಸರನ್ನು ನಂಬದೆಹೋದದರಿಂದ ಆಗಲೇ ತೀರ್ಪು ಆಗಿಹೋಯಿತು. 19ಆ ತೀರ್ಪು ಏನಂದರೆ - ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು. 20ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ; 21ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.
ಸ್ನಾನಿಕನಾದ ಯೋಹಾನನು ಯೇಸುವಿನ ವಿಷಯವಾಗಿ ತಿರಿಗಿ ಸಾಕ್ಷಿಹೇಳಿದ್ದು
22ಆಮೇಲೆ ಯೇಸು ತನ್ನ ಶಿಷ್ಯರೊಡನೆ ಯೂದಾಯ ದೇಶಕ್ಕೆ ಬಂದು ಅಲ್ಲಿ ಅವರ ಕೂಡ ಇದ್ದು ದೀಕ್ಷಾಸ್ನಾನಮಾಡಿಸುತ್ತಿದ್ದನು. 23ಯೋಹಾನನೂ ಸಲೀಮೂರಿನ ಹತ್ತಿರವಿರುವ ಐನೋನೆಂಬ ಸ್ಥಳದಲ್ಲಿದ್ದು ದೀಕ್ಷಾಸ್ನಾನಮಾಡಿಸುತ್ತಿದ್ದನು; ಅಲ್ಲಿ ಬಹಳ ನೀರಿತ್ತು; ಜನರು ಬಂದು ಸ್ನಾನಮಾಡಿಸಿಕೊಳ್ಳುತ್ತಾ ಇದ್ದರು; 24ಆ ಕಾಲದಲ್ಲಿ ಯೋಹಾನನು ಇನ್ನೂ ಸೆರೆಯಲ್ಲಿ ಹಾಕಲ್ಪಟ್ಟಿರಲಿಲ್ಲ. 25ಹೀಗಿರಲಾಗಿ ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧಾಚಾರವನ್ನು ಕುರಿತು ವಿಚಾರ ನಡೆಯಿತು. 26ಆಗ ಅವರು ಯೋಹಾನನ ಬಳಿಗೆ ಬಂದು ಅವನಿಗೆ - ಗುರುವೇ, ಯೊರ್ದನ್‍ಹೊಳೆಯ ಆಚೆ ನಿನ್ನ ಬಳಿಯಲ್ಲಿದ್ದ ಒಬ್ಬನ ವಿಷಯದಲ್ಲಿ ನೀನು ಸಾಕ್ಷಿಕೊಟ್ಟಿಯಲ್ಲಾ; ಅವನೂ ಸ್ನಾನ ಮಾಡಿಸುತ್ತಾನೆ, ಅವನ ಬಳಿಗೆ ಎಲ್ಲರು ಹೋಗುತ್ತಾರೆ ಎಂದು ಹೇಳಲು 27ಯೋಹಾನನು - ಪರಲೋಕದಿಂದ ಅನುಗ್ರಹಿಸೋಣವಾದದ್ದನ್ನೇ ಹೊರತು ಮನುಷ್ಯನು ಹೆಚ್ಚೇನು ಹೊಂದಲಾರನು. 28ನಾನು ಕ್ರಿಸ್ತನಲ್ಲ. ಆತನ ಮುಂದೆ ಕಳುಹಿಸಲ್ಪಟ್ಟವನಾಗಿದ್ದೇನೆ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿ. 29ಮದಲಗಿತ್ತಿಯುಳ್ಳವನೇ ಮದಲಿಂಗನು; ಆದರೂ ಮದಲಿಂಗನ ಗೆಳೆಯನು ಅವನ ಹತ್ತರ ನಿಂತುಕೊಂಡು ಅವನ ಮಾತುಗಳನ್ನು ಕೇಳಿ ಮದಲಿಂಗನ ಧ್ವನಿಗೆ ಬಹು ಸಂತೋಷಪಡುತ್ತಾನಲ್ಲವೇ. ಇದರಂತೆ ನನಗಿರುವ ಸಂತೋಷ; ಅದು ನೆರವೇರಿತು. 30ಆತನು ವೃದ್ಧಿಯಾಗಬೇಕು; ನಾನು ಕಡಿಮೆಯಾಗಬೇಕು ಅಂದನು.
31ಮೇಲಣಿಂದ ಬರುವವನು ಎಲ್ಲರ ಮೇಲೆ ಇದ್ದಾನೆ; ಭೂಲೋಕದಿಂದ ಹುಟ್ಟಿದವನು ಭೂಲೋಕದವನಾಗಿದ್ದು ಭೂಲೋಕದ ಮಾತನ್ನು ಆಡುತ್ತಾನೆ; ಪರಲೋಕದಿಂದ ಬರುವವನು ಎಲ್ಲರ ಮೇಲೆ ಇದ್ದಾನೆ. 32ತಾನು ನೋಡಿ ಕೇಳಿದ್ದಕ್ಕೆ ಸಾಕ್ಷಿಕೊಡುತ್ತಾನೆ; ಆದರೆ ಆತನ ಸಾಕ್ಷಿಯನ್ನು ಯಾರೂ ಒಪ್ಪುವದಿಲ್ಲ. 33ಆತನ ಸಾಕ್ಷಿಯನ್ನು ಒಪ್ಪಿದವನು ದೇವರು ಸತ್ಯವಂತನೆಂಬ ಮಾತಿಗೆ ಮುದ್ರೆ ಹಾಕಿದವನಾಗಿದ್ದಾನೆ. 34ಹೇಗಂದರೆ ದೇವರು ಯಾರನ್ನು ಕಳುಹಿಸಿದ್ದಾನೋ ಆತನಿಗೆ ಆತ್ಮವರವನ್ನು ಅಳತೆಮಾಡದೆ ಅನುಗ್ರಹಿಸುವದರಿಂದ ಆತನು ದೇವರ ಮಾತುಗಳನ್ನೇ ಆಡುತ್ತಾನೆ. 35ತಂದೆಯಾದ ದೇವರು ತನ್ನ ಮಗನನ್ನು ಪ್ರೀತಿಸಿ ಎಲ್ಲವನ್ನೂ ಆತನ ಕೈಯಲ್ಲಿ ಕೊಟ್ಟಿದ್ದಾನೆ. 36ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು ಜೀವವನ್ನು ಕಾಣುವದೇ ಇಲ್ಲ; ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವದು.
தற்சமயம் தேர்ந்தெடுக்கப்பட்டது:
ಯೋಹಾನ 3: KANJV-BSI
சிறப்புக்கூறு
பகிர்
நகல்
உங்கள் எல்லா சாதனங்களிலும் உங்கள் சிறப்பம்சங்கள் சேமிக்கப்பட வேண்டுமா? பதிவு செய்யவும் அல்லது உள்நுழையவும்
Kannada J.V. Bible © The Bible Society of India, 2016.
Used by permission. All rights reserved worldwide.