ಆದಿಕಾಂಡ 8

8
ಜಲಪ್ರಳಯದ ಮುಕ್ತಾಯ
1ಆದರೆ ದೇವರು ನೋಹನನ್ನು ಮರೆಯಲಿಲ್ಲ. ದೇವರು ನೋಹನನ್ನು ಮತ್ತು ನಾವೆಯಲ್ಲಿದ್ದ ಎಲ್ಲಾ ಪ್ರಾಣಿಗಳನ್ನು ನೆನಪುಮಾಡಿಕೊಂಡನು. ದೇವರು ಭೂಮಿಯ ಮೇಲೆ ಗಾಳಿಯನ್ನು ಬರಮಾಡಿದನು. ನೀರು ಕಡಿಮೆಯಾಗಲು ಪ್ರಾರಂಭಿಸಿತು.
2ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತುಹೋಯಿತು. ಆಕಾಶದ ತೂಬುಗಳು ಮುಚ್ಚಿಹೋದವು. ಭೂಸೆಲೆಗಳಿಂದ ಉಕ್ಕುತ್ತಿದ್ದ ನೀರು ಸಹ ನಿಂತುಹೋಯಿತು. 3-4ಭೂಮಿಯನ್ನು ಆವರಿಸಿಕೊಂಡಿದ್ದ ನೀರು ನೂರೈವತ್ತು ದಿನಗಳಾದ ಮೇಲೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು. ಏಳನೆಯ ತಿಂಗಳ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ನಾಡಿನಲ್ಲಿದ್ದ ಒಂದು ಬೆಟ್ಟದ ಮೇಲೆ ನಿಂತುಕೊಂಡಿತು. 5ನೀರು ಕಡಿಮೆಯಾಗತೊಡಗಿದ್ದರಿಂದ ಹತ್ತನೆಯ ತಿಂಗಳ ಮೊದಲನೆಯ ದಿನದಲ್ಲಿ ಬೆಟ್ಟದ ತುದಿಗಳು ಕಾಣತೊಡಗಿದವು.
6ನಲವತ್ತು ದಿನಗಳಾದ ಮೇಲೆ, ನೋಹನು ತಾನು ಮಾಡಿದ್ದ ನಾವೆಯ ಕಿಟಕಿಯನ್ನು ತೆರೆದು ನೋಡಿದನು. 7ನೋಹನು ಒಂದು ಕಾಗೆಯನ್ನು ಹೊರಕ್ಕೆ ಬಿಟ್ಟನು. ಭೂಮಿಯ ಮೇಲಿನ ನೀರು ಒಣಗುವ ವರೆಗೆ ಆ ಕಾಗೆಯು ಸ್ಥಳದಿಂದ ಸ್ಥಳಕ್ಕೆ ಹಾರಾಡುತ್ತಿತ್ತು. 8ನೆಲ ಒಣಗಿದೆಯೇ, ತೇವವಾಗಿದೆಯೇ ಎಂದು ತಿಳಿದುಕೊಳ್ಳುವುದಕ್ಕಾಗಿ ನೋಹನು ಒಂದು ಪಾರಿವಾಳವನ್ನು ಸಹ ಹೊರಕ್ಕೆ ಬಿಟ್ಟನು.
9ನೀರು ಇನ್ನೂ ಇದ್ದಕಾರಣ, ಆ ಪಾರಿವಾಳ ಹಿಂತಿರುಗಿ ಬಂತು. ನೋಹನು ಕೈಚಾಚಿ ಅದನ್ನು ಹಿಡಿದುಕೊಂಡು ನಾವೆಯೊಳಗೆ ಸೇರಿಸಿಕೊಂಡನು.
10ಏಳು ದಿನಗಳವರೆಗೆ ನೋಹನು ಕಾದುಕೊಂಡಿದ್ದು ಮತ್ತೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. 11ಆ ಸಾಯಂಕಾಲವೂ ಪಾರಿವಾಳ ನೋಹನ ಬಳಿಗೆ ಹಿಂತಿರುಗಿ ಬಂತು. ಅದರ ಕೊಕ್ಕಿನಲ್ಲಿ ಆಲೀವ್ ಮರದ ಎಲೆಯಿತ್ತು. ಇದರಿಂದ, ಭೂಮಿಯಲ್ಲಿ ಒಣನೆಲವಿದೆಯೆಂದು ನೋಹನು ತಿಳಿದುಕೊಂಡನು. 12ಏಳು ದಿನಗಳ ನಂತರ ನೋಹನು ಮತ್ತೆ ಪಾರಿವಾಳವನ್ನು ಹೊರಕ್ಕೆ ಬಿಟ್ಟನು. ಆದರೆ ಅದು ಈ ಸಲ ಹಿಂತಿರುಗಿ ಬರಲಿಲ್ಲ.
13ಆದ್ದರಿಂದ ನೋಹನು ನಾವೆಯ ಬಾಗಿಲನ್ನು ತೆರೆದು ಸುತ್ತಲೂ ನೋಡಿದನು. ನೆಲವೆಲ್ಲಾ ಒಣಗಿತ್ತು. ಅಂದು ಮೊದಲನೆಯ ವರ್ಷದ ಮೊದಲನೆಯ ತಿಂಗಳ ಮೊದಲನೆಯ ದಿನವಾಗಿತ್ತು. ಆಗ ನೋಹನಿಗೆ ಆರುನೂರ ಒಂದು ವರ್ಷವಾಗಿತ್ತು. 14ಎರಡನೆಯ ತಿಂಗಳ ಇಪ್ಪತ್ತೇಳನೆಯ ದಿನದೊಳಗೆ ನೆಲವೆಲ್ಲಾ ಸಂಪೂರ್ಣವಾಗಿ ಒಣಗಿಹೋಯಿತು.
15-16ಆಮೇಲೆ ದೇವರು ನೋಹನಿಗೆ, “ನೀನು, ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ನಿನ್ನ ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬನ್ನಿ. 17ನಿಮ್ಮೊಡನೆ ನಾವೆಯೊಳಗಿದ್ದ ಎಲ್ಲಾ ಜೀವಿಗಳು ಅಂದರೆ ಎಲ್ಲಾ ಪಕ್ಷಿಗಳು, ಪ್ರಾಣಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ ಹೊರಗೆ ಬರಲಿ. ಅವುಗಳ ಸಂತಾನವು ಹೆಚ್ಚೆಚ್ಚಾಗಲಿ; ಭೂಮಿಯ ಮೇಲೆಲ್ಲಾ ಅವು ತುಂಬಿಕೊಳ್ಳಲಿ” ಅಂದನು.
18ಆದ್ದರಿಂದ ನೋಹನು ತನ್ನ ಹೆಂಡತಿ, ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯಿಂದ ಹೊರಗೆ ಬಂದನು. 19ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಹರಿದಾಡುವ ಜೀವಿಗಳು ನಾವೆಯಿಂದ ಹೊರಬಂದವು.
20ಆಮೇಲೆ ನೋಹನು ಯೆಹೋವನಿಗಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಿ ಶುದ್ಧವಾದ ಕೆಲವು ಪಶುಪಕ್ಷಿಗಳನ್ನು ತೆಗೆದುಕೊಂಡು ಅವುಗಳನ್ನು ದೇವರಿಗೆ ಯಜ್ಞವೇದಿಕೆಯ ಮೇಲೆ ಸರ್ವಾಂಗಹೋಮ ಮಾಡಿದನು.
21ಈ ಯಜ್ಞಗಳ ಸುವಾಸನೆಯು ಯೆಹೋವನಿಗೆ ಮೆಚ್ಚಿಕೆಯಾಯಿತು. ಆಗ ಯೆಹೋವನು ತನ್ನೊಳಗೆ, “ಜನರನ್ನು ದಂಡಿಸುವುದಕ್ಕಾಗಿ ನಾನು ಇನ್ನೆಂದೂ ಭೂಮಿಯನ್ನು ಶಪಿಸುವುದಿಲ್ಲ. ಜನರು ಚಿಕ್ಕಂದಿನಿಂದಲೇ ಕೆಟ್ಟವರು. ಆದ್ದರಿಂದ ನಾನು ಇನ್ನೆಂದೂ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯನ್ನು ನಾಶಮಾಡುವುದಿಲ್ಲ; ಮತ್ತೆಂದೂ ನಾನು ಹೀಗೆ ಮಾಡುವುದಿಲ್ಲ. 22ಭೂಮಿ ಇರುವವರೆಗೆ ಬಿತ್ತನೆಕಾಲ, ಸುಗ್ಗಿಕಾಲ ಯಾವಾಗಲೂ ಇರುತ್ತವೆ. ಹಿಮಕಾಲ, ಬೇಸಿಗೆಕಾಲ, ಚಳಿಗಾಲ, ಹಗಲು ಮತ್ತು ರಾತ್ರಿ ಯಾವಾಗಲೂ ಇದ್ದೇ ಇರುತ್ತವೆ” ಎಂದು ಅಂದುಕೊಂಡನು.

موجودہ انتخاب:

ಆದಿಕಾಂಡ 8: KERV

سرخی

شئیر

کاپی

None

کیا آپ جاہتے ہیں کہ آپ کی سرکیاں آپ کی devices پر محفوظ ہوں؟ Sign up or sign in